ಯುಎಇಯುಎಇಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರ ನೆರವಿಗೆ ಮುಂದಾಗಿರುವ ಡಾ.ರೊನಾಲ್ಡ್...

ಯುಎಇಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರ ನೆರವಿಗೆ ಮುಂದಾಗಿರುವ ಡಾ.ರೊನಾಲ್ಡ್ ಕೊಲಾಸೋ ನೇತೃತ್ವದ ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡ: ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ

ದುಬೈ; ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಯುಎಇಯಲ್ಲಿ ಆತಂಕದ ಛಾಯೆ ಮೂಡಿದ್ದು, ಹಲವಾರು ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಅನಿವಾಸಿ ಕನ್ನಡಿಗರ ಪೋಷಕರಾದ ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ ಅವರ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಹಲವು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಝೂಮ್ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಯಾವ ರೀತಿ ಯುಎಇ ಸರಕಾರದೊಂದಿಗೆ ಸಹಕರಿಸಬೇಕು, ಇಲ್ಲಿ ಯಾರೆಲ್ಲ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ, ಈಗಾಗಲೇ ಸಿಲುಕಾಕಿಕೊಂಡಿರುವ ಪ್ರವಾಸಿ ಕನ್ನಡಿಗರನ್ನು ಯಾವ ರೀತಿ ರಕ್ಷಿಸಿ, ಅವರಿಗೆ ಸಹಾಯಹಸ್ತ ನೀಡಬೇಕು ಹಾಗು ಇಲ್ಲಿರುವ ಕನ್ನಡಿಗರ ಸಂಕಷ್ಟಕ್ಕೆ ಪಾವ ರೀತಿ ಸ್ಪಂದಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಗಿದೆ.

ಝೂಮ್ ಸಭೆಯಲ್ಲಿ ಯುಎಇ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾತನಾಡಿದ ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಇಲ್ಲಿನ ಸರಕಾರ ಎಲ್ಲ ಅನಿವಾಸಿಗಳ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ, ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಗಾಳಿಸುದ್ದಿ, ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು ಎಂದು ಯುಎಇಯ ಅನಿವಾಸಿ ಕನ್ನಡಿಗರಿಗೆ ಮನವಿ ಮಾಡಿದರು.

ಇದೇ ವೇಳೆ ಡಾ.ರೊನಾಲ್ಡ್ ಕೊಲಾಸೋ ಮಾತನಾಡಿ, ಈಗ ಸಂಕಷ್ಟದಲ್ಲಿರುವ ಪ್ರವಾಸಿಗರ ತುರ್ತು ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ವೆಚ್ಚವನ್ನು ಭರಿಸಲು ತಾನು ಸಿದ್ಧನಿದ್ದೇನೆ. ಜೊತೆಗೆ ಕರ್ನಾಟಕ ಸರಕಾರ ತುರ್ತು ಪರಿಹಾರ ಸಹಾಯಧನ ಘೋಷಣೆ ಮಾಡಲು ಒತ್ತಾಯಿಸುವುದಾಗಿ ಹೇಳಿದರು.

ಪ್ರಸಕ್ತ ದುಬೈನಲ್ಲಿ ಸಿಲುಕಿರುವ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೆಗೌಡರು ಮಾತನಾಡಿ, ಪರಿಸ್ಥಿತಿ ಬೇಗನೇ ತಿಳಿಯಾಗಲಿದೆ, ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರಿಗೆ ಸಹಾಯಹಸ್ತವಾಗಿ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ 2 ಕೋಟಿ ತುರ್ತು ಪರಿಹಾರ ಘೋಷಿಸಿ ಎಂದು ಒತ್ತಾಯಿಸಿದ್ದೇವೆ. ಅವರು ಮುಖ್ಯಮಂತ್ರಿ ಜೊತೆ ಕೂಡಲೇ ಮಾತನಾಡಿ ಪರಿಹಾರ ಘೋಷಿಸುವ ಭರವಸೆ ನೀಡಿದ್ದಾರೆ ಎಂದರು.

ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಎಲ್ಲಾ ದೂತಾವಾಸಗಳೊಂದಿಗೆ, ಅಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿ ಇದ್ದೇನೆ. ರಾಜ್ಯ ಸರಕಾರದೊಂದಿಗೂ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಕೆಎನ್ಆರೈ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.

ಯುಎಇಯಲ್ಲಿ ಸಂಕಷ್ಟದಲ್ಲಿರುವ ಹಲವಾರು ಪ್ರವಾಸಿ ಕನ್ನಡಿಗರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ತಾಯ್ನಾಡಿಗೆ ವಾಪಸ್ ತೆರಳದೇ ಸಿಲುಕಿರುವ ಕನ್ನಡಿಗರಿಗೆ ಯಾವುದೇ ರೀತಿಯ ವೈದ್ಯಕೀಯ ಸೇವೆ ಬೇಕಿದ್ದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನನ್ನು ಸಂಪರ್ಕಿಸಬಹುದು. ವೈದ್ಯಕೀಯ ಸೇವೆಯನ್ನು ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ಸಂಯೋಜಕರು, ಬಿಸಿಸಿಐ ಯುಎಇ ಅಧ್ಯಕ್ಷರಾದ ಹಿದಾಯತ್ ಅಡ್ಡೂರು ತಿಳಿಸಿದರು.

ಯುಎಇಯಲ್ಲಿ ಸಿಲುಕಿರುವ ಕನ್ನಡಿಗರು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವನ್ನು ಸಂಪರ್ಕಿಸಿ, ನೀವು ದುಬೈ, ಶಾರ್ಜ, ಅಬುಧಾಬಿ, ಅಜ್ಮಾನ್ ಎಲ್ಲೇ ಇದ್ದರೂ ನಮ್ಮ ತಂಡ ನಿಮ್ಮನ್ನು ಸಂಪರ್ಕಿಸಿ, ಸಹಕರಿಸಲಿದೆ, ಈಗಾಗಲೇ ಈ ಕೆಲಸದಲ್ಲಿ ನಿರತವಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದರು.

ಸಭೆಯಲ್ಲಿ ಹೆಲ್ಪ್ ಲೈನ್ ತಂಡದ ದಯಾ ಕಿರೋಡಿಯನ್, ಚಂದ್ರು ಲಿಂಗದಳ್ಳಿ, ಮಲ್ಲಿಕಾರ್ಜುನ ಗೌಡ, ಇಮ್ರಾನ್ ಖಾನ್, ಶ್ವೇತಾ ಜಾಧವ್, ಮನೋಹರ್ ಹೆಗ್ಡೆ, ನಾಗರಾಜ ರಾವ್, ಸಮದ್ ಬಿರಾಲಿ, ಸಲೀಂ ಮೂಡಬಿದ್ರೆ, ಸಂಶುದ್ದೀನ್ ಪಿಲಿಗೂಡು, ರಾಕ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ರಂಗಪ್ಪ, ಕನ್ನಡ ಪಾಠಶಾಲೆ ದುಬೈಯ ಗಿರೀಶ್ ವೊರಟೆ, ಗಿರೀಶ್ ಪಟ್ವಾರಿ, ಗವಾಸ್ಕರ್, ಸಿದ್ಧಲಿಂಗೇಶ್, ರೂಪ ಶಶಿಧರ್, ಫಿರೋಝ್ ಉಪಸ್ಥಿತರಿದ್ದರು.

Hot this week

ಜರ್ಮನಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಜಾನಪದ ವೈಭವ; ಸಂಸ್ಕೃತಿಯ ಗತ ವೈಭವ ಸೃಷ್ಟಿ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ...

ಕನ್ನಡ ಸಂಘ ಬಹರೈನ್‌ನಿಂದ ಆರೋಗ್ಯ ದಿನ; ಉಚಿತ ವೈದ್ಯಕೀಯ ಶಿಬಿರ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಅಲ್ ಹಿಲಾಲ್ ಹೆಲ್ತ್ ಕೇರ್...

ಕರ್ನಾಟಕ ಸಂಘ ಖತರ್‌ಗೆ ನೂತನ ಆಡಳಿತ ಸಮಿತಿ ಆಯ್ಕೆ; 2026–2028 ಅವಧಿಗೆ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ

ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ...

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

Related Articles

Popular Categories