ಬಹರೈನ್ ನಲ್ಲಿರುವ ಕನ್ನಡಿಗರಿಗಾಗಿ ಸ್ಥಾಪಿಸಲಾಗಿರುವ, ಕರ್ನಾಟಕ ಸರಕಾರದಿಂದ ನೋಂದಾಯಿತ ಎನ್ ಆರ್ ಐ ಫಾರಂ ಕರ್ನಾಟಕ-ಬಹರೈನ್ (NFKB) ಜನವರಿ 10 ರಂದು ಮನಾಮದ ಇಂಡಿಯನ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ನೂತನ ಎನ್‌ಎಫ್‌ಕೆಬಿ ಸಮಿತಿಯ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ NFKB ಅಧ್ಯಕ್ಷ ರಾಜ್ ಕುಮಾರ್, ʼಕಾರ್ಯಕ್ರಮವು ಸಂಜೆ 5:30 ಕ್ಕೆ ಪ್ರಾರಂಭವಾಗುತ್ತದೆ, ನಂತರ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ ಎಂದರು. ಬಹರೈನ್ ನಲ್ಲಿ ನೆಲೆಸಿರುವ ಕನ್ನಡಿಗರ ಹಿತಾಸಕ್ತಿಗಳನ್ನು ರಕ್ಷಿಸುವುದು ಫಾರಂನ ಮೊದಲ ಉದ್ದೇಶವಾಗಿದೆ. ಕನ್ನಡ ಮಾತನಾಡುವ ಜನರ ನಡುವೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಪರ್ಕಗಳನ್ನು ಬಲಪಡಿಸುವ ಗುರಿಯೂ ನಮ್ಮದು. ಬಹರೈನ್ ನಲ್ಲಿ ಸುಮಾರು 25 ಸಾವಿರ ಜನರು ಕನ್ನಡಿಗರಿದ್ದಾರೆ. ಎನ್ ಆರ್ ಐ ಫಾರಂ ಕರ್ನಾಟಕ-ಬಹರೈನ್ ಕರ್ನಾಟಕ ಸರಕಾರ, ಭಾರತೀಯ ರಾಯಭಾರ ಕಚೇರಿ ಮತ್ತು ಇತರ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದು, ವಿದೇಶದಲ್ಲಿರುವ ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡಲು ಸಹಕರಿಸುತ್ತದೆʼ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ, ಮಂಗಳೂರು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ಡಾ.ಎಚ್.ಎಸ್.ಶೆಟ್ಟಿ, ಪ್ರಶಾಂತ್ ಪೂಜಾರಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ಹೇಳಿದ್ದಾರೆ.