ದುಬೈ: ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ರವಿವಾರ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ನಡೆದ ಬ್ಯಾರಿ ಮೇಳ ಯಶಸ್ವಿಯಾಗಿ ನಡೆಯಿತು.














ಮಧ್ಯಾಹ್ನದಿಂದ ಆರಂಭಗೊಂಡ ಬ್ಯಾರಿ ಮೇಳವು ರಾತ್ರಿ ವರೆಗೂ ಅದ್ದೂರಿಯಾಗಿ ನಡೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು. ಬ್ಯಾರಿ ಸಮುದಾಯದವರಲ್ಲದೆ ಇನ್ನಿತರ ಹಿಂದೂ, ಕ್ರಿಶ್ಚಿಯನ್ ಸಮುದಾಯದವರೂ ಕೂಡ ಈ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ಈ ಕಾರ್ಯಕ್ರಮದಲ್ಲಿ ಜನರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

►ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಮೇಳದ ಮುಖ್ಯ ವೇದಿಕೆಯಲ್ಲಿ ಬ್ಯಾರಿ ಜಾನಪದ ಕಲೆಗಳಾದ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕವಾಲಿ, ‘ಪೋಕರಾಕ BA -LLB’ ಹಾಸ್ಯಮಯ ನಾಟಕ, ಮಕ್ಕಳ ಫ್ಯಾಶನ್ ಷೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಈ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರ ಮನಸೂರೆಗೊಳಿಸಿತು. ಜೊತೆಗೆ ವೇದಿಕೆಯ ಮುಂದೆ ಸಂದಲ್ (ಮೆರವಣಿಗೆ) ಕಾರ್ಯಕ್ರಮವು ನಡೆಯಿತು.









►ಕೈಬೀಸಿ ಕರೆಯುತ್ತಿದ್ದ ವಿವಿಧ ಬಗೆಯ ತಿಂಡಿ-ತಿನಸುಗಳ ಮಳಿಗೆಗಳು
ಬ್ಯಾರಿ ಮೇಳದಲ್ಲಿ ತಿಂಡಿ-ತಿನಸುಗಳ ಮಳಿಗೆಗಳು ಸೇರಿದ್ದ ಜನರನ್ನು ಕೈಬೀಸಿ ಕರೆಯುತ್ತಿತ್ತು. ಬಿರಿಯಾನಿ, ಘೀರೈಸ್, ಕಬಾಬ್ ಜೊತೆ ಕರಾವಳಿಯ ವಿವಿಧ ಬಗೆಯ ತಿಂಡಿ ತಿನಸುಗಳನ್ನು ಸವಿದು ಜನ ಖುಷಿಪಟ್ಟರು. ಇದಲ್ಲದೆ ಇನ್ನಿತರ ವಸ್ತುಗಳ ಮಳಿಗೆಗಳು ಕೂಡ ಈ ಮೇಳದಲ್ಲಿ ಗಮನ ಸೆಳೆದವು. ತಿಂಡಿ-ತಿನಸುಗಳ ಮಳಿಗೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು.
►’ಬ್ಯಾರಿ ಶಾರ್ಕ್ ಥಿಂಕ್’
ಇತಿಸಲಾತ್ ಅಕಾಡೆಮಿಯ ಸಭಾಂಗಣ 2ರಲ್ಲಿ ಬ್ಯಾರಿ ಯುವ ಉದಯೋನ್ಮುಖ ಉದ್ಯಮಿಗಳಿಗೆ ಆಯೋಜಿಸಿದ್ದ “ಬ್ಯಾರಿ ಶಾರ್ಕ್ ಥಿಂಕ್” ಕಾರ್ಯಕ್ರಮದಲ್ಲಿ ಹೊಸ ಬ್ಯೂಸಿನೆಸ್ ಯೋಜನೆಯನ್ನಿಟ್ಟುಕೊಂಡ 7 ಮಂದಿ ಪಾಲ್ಗೊಂಡಿದ್ದು, ಅವರು ತಮ್ಮ ಹೊಸ ಬಗೆಯ ಬ್ಯೂಸಿನೆಸ್ ಯೋಜನೆಯನ್ನು 3 ಮಂದಿ ತೀರ್ಪುಗಾರರ ತಂಡದ ಮುಂದೆ ಇಟ್ಟರು. ಈ ಕಾರ್ಯಕ್ರಮದಲ್ಲಿ ಹೂಡಿಕೆದಾರರು ಕೂಡ ಭಾಗವಹಿಸಿದ್ದು, ಹೊಸ ಹೊಸ ಬ್ಯೂಸಿನೆಸ್ ಯೋಜನೆಗಳನ್ನು ಆಲಿಸಿದರು.








►ಬ್ಯೂಸಿನೆಸ್ ಸೆಮಿನಾರ್
ಇತಿಸಲಾತ್ ಅಕಾಡೆಮಿಯ ಪ್ರಮುಖ ವೇದಿಕೆಯಲ್ಲಿ ನಡೆದ ‘NRI ತೆರಿಗೆ – ಅಪಾಯ ಮತ್ತು ಪ್ರತಿಫಲಗಳು'(NRI taxation-risk & rewards) ಎಂಬ ವಿಷಯದ ಕುರಿತು ನೌಫಾಲ್ ಎಂ. & ಕಂಪನಿಯ ಆಡಳಿತ ಪಾಲುದಾರ ಸಿಎ ನೌಫಾಲ್ ಮೊಹಮ್ಮದ್ ಅವರು ಸವಿವರವಾದ ಮಾಹಿತಿಯನ್ನು ಹಂಚಿಕೊಂಡರು.

‘ವ್ಯವಹಾರಕ್ಕಾಗಿ ಕೃತಕ ಬುದ್ಧಿಮತ್ತೆ'(Artificial Intelligence for Business) ಕುರಿತು ಟೆಕ್ ಪ್ರೊಕ್ಸಿಮ ಸ್ಥಾಪಕ ಹಾಗು ಸಿಇಒ ಶೇಖ್ ಸಲೀಂ ಅವರು ಮಾತನಾಡಿದರು.
‘ದುಬೈಯ ರಿಯಲ್ ಎಸ್ಟೇಟ್ ಹೂಡಿಕೆ’ ಕುರಿತ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಮಂಗಳೂರಿನ ನೌಶಾದ್, ಸಾದಿಕ್ ಹಾಗು ಶುಐಬ್ ಪಾಲ್ಗೊಂಡು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮುಂದಿಟ್ಟರು. ರಬಿಯತ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ‘ಬ್ಯಾರಿ ಶಾರ್ಕ್ ಥಿಂಕ್’ ಹಾಗು ಬ್ಯೂಸಿನೆಸ್ ಸೆಮಿನಾರ್ ಕಾರ್ಯಕ್ರಮ ನಿರ್ದೇಶಕರಾಗಿ ಬಿಸಿಸಿ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್ ಸಹಕರಿಸಿದರು.




