ಭಾರತೀಯ ಪ್ರಜೆಗಳು ಕೆನಡಾದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕೆನಡಾದ ಗಂಭೀರ ಆರೋಪಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಆ ದೇಶ ನೀಡಿಲ್ಲ ಎಂದು ಕೇಂದ್ರ ಸರಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಲೋಕಸಭೆಯಲ್ಲಿ ಮಾತನಾಡಿ, ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯರು ಭಾಗಿಯಾಗಿದ್ದಾರೆ ಎನ್ನಲಾದ ಅಪರಾಧ ಕೃತ್ಯಗಳ ಚಟುವಟಿಕೆಗಳನ್ನು ಗಮನಿಸಿದ್ದೀರಿ ಎಂದು ಪ್ರಶ್ನಿಸಿದ್ದು, ಈ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಉತ್ತರಿಸಿದರು.
ಅಮೆರಿಕಾ ಮತ್ತು ಕೆನಡಾದಲ್ಲಿ ಭಾರತೀಯ ಪ್ರಜೆಗಳು ಭಾಗಿಯಾಗಿದ್ದಾರೆ ಎನ್ನಲಾದ ಅಪರಾಧ ಕೃತ್ಯ ಬೆಳವಣಿಗೆಗಳ ಬಗ್ಗೆ ತಿಳಿದಿದೆ.
“ಅಮೆರಿಕದ ಜೊತೆಗಿನ ಭದ್ರತಾ ಸಹಕಾರದ ಭಾಗವಾಗಿ, ಭಾರತದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವ ಸಂಘಟಿತ ಅಪರಾಧಿಗಳು, ಭಯೋತ್ಪಾದಕರು ಮತ್ತು ಇತರರ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ಅಮೆರಿಕ ನೀಡಿರುವ ಮಾಹಿತಿಗಳ ಕುರಿತು ಉನ್ನತ ಮಟ್ಟದ ಪರಿಶೀಲನೆ ನಡೆಯುತ್ತಿದೆ. ಈ ಉದ್ದೇಶಕ್ಕಾಗಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದವರು ಹೇಳಿದರು.
“ಇನ್ನು ಕೆನಡಾಗೆ ಸಂಬಂಧಿಸಿ ಹೇಳುವುದಾದರೆ ಮಾಡಿರುವಂತಹ ಗಂಭೀರ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಿಲ್ಲ” ಎಂದು ಸಿಂಗ್ ಹೇಳಿದರು.
ಈ ವಿಷಯದ ಬಗ್ಗೆ ಕೆನಡಾದ ಸಾರ್ವಜನಿಕ ಮನೋಭಾವ ಭಾರತ-ವಿರೋಧಿ ಪ್ರತ್ಯೇಕತಾವಾದಿ ಅಜೆಂಡಾದ ಪರ ಇದೆ. ಅಂತಹ ಮನೋಭಾವ ಮುಂದುವರಿಸುವುದು ಯಾವುದೇ ಸ್ಥಿರ ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಕಾರಕವಾಗಿದೆ. ಕೆನಡಾದ ಅಧಿಕಾರಿಗಳು ತಮ್ಮ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಾರತ ವಿರೋಧಿ ಅಂಶಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.