ಬೆಂಗಳೂರು: ಕರ್ನಾಟಕ ಸಂಘ ಖತರ್(ಕೆಎಸ್‌ಕ್ಯೂ) ಇತ್ತೀಚೆಗೆ ಬೆಂಗಳೂರಿನ ಬಸವೇಶ್ವರ ನಗರದ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿಯಲ್ಲಿ “ಸಂಸ್ಥಾಪಕರಿಗೆ, ರಜತಪಥದ ಹರಿಕಾರರಿಗೆ ಅಭಿವಂದನಾ” ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ತನ್ನ ಬೆಳ್ಳಿಹಬ್ಬದ ಸಂಭ್ರಮವನ್ನು ತವರು ನೆಲಕ್ಕೆ ತರುವುದರ ಜೊತೆಗೆ ರಜತ ವರ್ಷಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ.


ಉದ್ಘಾಟನೆ: ಕಾರ್ಯಕ್ರಮಕ್ಕೆ ಪದ್ಮಶ್ರೀ ಡಾ.ಕೆ.ಎಸ್.ರಾಜಣ್ಣ, ಅಧ್ಯಕ್ಷ ರವಿ ಶೆಟ್ಟಿ, ಸಲಹಾ ಸಮಿತಿಯ ಅಧ್ಯಕ್ಷ ಮಹೇಶ್ ಗೌಡ, ಮಾಜಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು. ತಮ್ಮ ಸ್ವಾಗತ ಭಾಷಣದಲ್ಲಿ ರವಿ ಶೆಟ್ಟಿ ಅವರು, ಅನುಭವಿ ಮನಸ್ಸುಗಳು ಮತ್ತು ಯುವ ಪ್ರತಿಭೆಗಳು ನಿಸ್ವಾರ್ಥವಾಗಿ ಕೆಲಸ ಮಾಡಿದಾಗ ಸಂಘದ ಪ್ರತಿಷ್ಠೆಯು ಹೆಚ್ಚುತ್ತದೆ ಎಂದು ಹೇಳಿ, ಕೆಎಸ್‌ಕ್ಯೂನ 25 ವರ್ಷಗಳ ಪಯಣದಲ್ಲಿ ಅಮೂಲ್ಯ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಅವರು “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು” ಎಂಬ ಡಿವಿಜಿ ಅವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ, ಕೃತಜ್ಞತೆಯ ಮನೋಭಾವವನ್ನು ಮೂಡಿಸಿದರು.





ಕಾರ್ಯಕ್ರಮ ನಿರೂಪಕರಾಗಿದ್ದ ಮಾಜಿ ಅಧ್ಯಕ್ಷ ಎಚ್.ಕೆ. ಮಧು ಅವರು, ಈ ಮಹತ್ವದ ಮೈಲಿಗಲ್ಲನ್ನು ಅಧ್ಯಕ್ಷ ರವಿ ಶೆಟ್ಟಿಯವರ ನಾಯಕತ್ವ ಮತ್ತು ಅವರ ಉತ್ಸಾಹಿ ತಂಡಕ್ಕೆ ಸಮರ್ಪಿಸಿದರು. ಅವರು ಡಿವಿಜಿ ಅವರ ಮತ್ತೊಂದು ಕಗ್ಗದ “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂಬ ಸಾಲನ್ನು ಉಲ್ಲೇಖಿಸಿ, ಸಂಪ್ರದಾಯ ಮತ್ತು ಹೊಸ ಶಕ್ತಿಯ ಮಹತ್ವವನ್ನು ಸಾರಿದರು.
ಸಮಾಜ ಸೇವಕರಿಗೆ ಸನ್ಮಾನ
ಪ್ರಥಮ ಹಂತದಲ್ಲಿ, ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕೆಎಸ್‌ಕ್ಯೂ ಕೋಶಾಧಿಕಾರಿ ಪ್ರದೀಪ್ ದಿಲೀಪ್ ಅವರು ನಿರ್ವಹಿಸಿದರು. ಸದಸ್ಯರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ನಿಧಿಯ ಮೂಲಕ ಸಮಾಜ ಸೇವಕರಿಗೆ ಬೆಳ್ಳಿಹಬ್ಬದ ವಿಶೇಷ ಶಾಲು, ಬಿರುದಿನೊಂದಿಗೆ ಸ್ಮರಣಿಕೆ ಮತ್ತು ಗೌರವಧನ ನೀಡಿ ಗೌರವಿಸಲಾಯಿತು.
ಮಂಡ್ಯದ ಪದ್ಮಶ್ರೀ ಡಾ.ಕೆ.ಎಸ್. ರಾಜಣ್ಣ(ನಾಲ್ಕು ಅಂಗಗಳಲ್ಲಿ ತೀವ್ರ ವಿಕಲತೆ ಇದ್ದರೂ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ಇವರಿಗೆ “ಅದಮ್ಯ ದಿವ್ಯ ಚೇತನ”ಎಂಬ ಬಿರುದನ್ನು ನೀಡಲಾಯಿತು).
ಬೆಳಗಾವಿಯ ನಾಗರತ್ನ (25 ವರ್ಷಗಳ ಹಿಂದೆ ಏಡ್ಸ್ ರೋಗದಿಂದ ಬಳಲುತ್ತಿದ್ದ ಇವರು, ಈಗ ವಿಧವೆಯಾಗಿದ್ದರೂ ಏಡ್ಸ್ ರೋಗಿಗಳಿಗಾಗಿ ‘ಆಶ್ರಯ ಫೌಂಡೇಶನ್’ ಸ್ಥಾಪಿಸಿ ನಡೆಸುತ್ತಿರುವ ಇವರು “ಸ್ಪೂರ್ತಿಯ ಚಿಲುಮೆ” ಬಿರುದಿಗೆ ಪಾತ್ರರಾದರು).
ಮಂಗಳೂರಿನ ಗೀತಾ ಶೆಟ್ಟಿ (ದೇರಳಕಟ್ಟೆಯಲ್ಲಿ ವೃದ್ದಾಶ್ರಮವನ್ನು ನಡೆಸುತ್ತಿದ್ದು “ಸೇವಾ ಸಂಪದ” ಬಿರುದಿಗೆ ಭಾಜನರಾದರು).
ಮೂಡಬಿದ್ರಿಯ ಪ್ರಕಾಶ್ ಶೆಟ್ಟಿಗಾರ್ (ತಾನು ಮತ್ತು ಮಗ ವಿಕಲಾಂಗರಾಗಿದ್ದರೂ ವಿಶೇಷ ಮಕ್ಕಳಿಗಾಗಿ ‘ಸ್ಪೂರ್ತಿ ಶಾಲೆ’ ನಡೆಸುತ್ತಿರುವ ಇವರಿಗೆ “ಸ್ಪೂರ್ತಿ ಪ್ರಕಾಶ”ಬಿರುದನ್ನು ನೀಡಲಾಯಿತು).
ಮೇರೆಮಜಲಿನ ಇಂಜಿನಿಯರ್ ಹರೀಶ್ ಪೆರ್ಗಡೆ (ತಮ್ಮ ದಿವಂಗತ ತಾಯಿಯ ನೆನಪಿನಲ್ಲಿ ‘ಮಾತ ಲಕ್ಷಣಿ ವೃದ್ಧಾಶ್ರಮ’ ನಡೆಸುತ್ತಿದ್ದು “ಆಶ್ರಯದಾತ” ಬಿರುದಿಗೆ ಪಾತ್ರರಾದರು).
ಬಳ್ಳಾರಿಯ ದ್ರಷ್ಟಿಹೀನರಾದ ಅಶ್ವಿನ್ ಅಂಗಡಿ(ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಬೆಳಕು ಅಕಾಡೆಮಿ ಫಾರ್ ಬ್ಲೈಂಡ್ & ಡೆಫ್’ ಸಂಸ್ಥೆ ಸ್ಥಾಪಿಸಿದ ಇವರಿಗೆ “ಬೆಳಕಿನಂಗಡಿ” ಬಿರುದು ನೀಡಲಾಯಿತು).
ಬೆಂಗಳೂರಿನ ರಂಜಿತ್ ಶೆಟ್ಟಿ(ಕೆಂಗೇರಿಯಲ್ಲಿ ‘ಅರೈಕೆ ಟ್ರಸ್ಟ್’ ಸ್ಥಾಪಿಸಿ, 80 ನಿರ್ಗತಿಕರನ್ನು ನೋಡಿಕೊಳ್ಳುತ್ತಿರುವ ಇವರು “ಹೃದಯವಂತ” ಬಿರುದಿಗೆ ಪಾತ್ರರಾದರು).
ತೀರ್ಥಹಳ್ಳಿಯ ತರುಳ ತರುಣ್ (ಉಡುಪಿ ಜಿಲ್ಲೆಯ ಬೈಲೂರಿನಲ್ಲಿ ‘ಹೊಸಬೆಳಕು ಆಶ್ರಮ’ ಸ್ಥಾಪಿಸಿ, 180 ನಿರ್ಗತಿಕರನ್ನು ನೋಡಿಕೊಳ್ಳುತ್ತಿದ್ದು “ಅನಾಥರ ಹೊಸಬೆಳಕು” ಬಿರುದಿಗೆ ಪಾತ್ರರಾದರು).
ಖತರಿನಲ್ಲಿ ಬ್ಯಾಂಕರ್ ಆಗಿದ್ದ ಮಂಗಳೂರಿನ ಹೆರಾಲ್ಡ್ ಮೊರಾಸ್ (ನೂರಾರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುತ್ತಿರುವ ಇವರಿಗೆ “ಸೇವಾ ರತ್ನ” ಬಿರುದನ್ನು ನೀಡಲಾಯಿತು).
ಮಂಗಳೂರಿನ ವಸಂತ್ ಮಾಸ್ಟರ್ (‘ಸಾನಿಧ್ಯ ಸ್ಪೆಷಲ್ ಸ್ಕೂಲ್’ನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು “ವಿಕಲರ ಚೇತನ” ಬಿರುದಿಗೆ ಪಾತ್ರರಾದರು).
ಕೊಡಗಿನ ಅಣ್ಣಪ್ಪ (ಪುತ್ತೂರಿನಲ್ಲಿ ಮಾನಸಿಕವಾಗಿ ಅಸ್ವಸ್ಥರಾದವರಿಗಾಗಿ ‘ಪ್ರಜ್ಞಾಶ್ರಮ’ ಸ್ಥಾಪಿಸಿದ್ದಾರೆ. ಇವರಿಗೆ “ಅನಾಥ ಬಂಧು” ಬಿರುದು ನೀಡಲಾಯಿತು).
ಕುಂದಾಪುರದ ಜಯರಾಮ್ (34 ವರ್ಷಗಳಿಂದ ಹಾಸಿಗೆ ಹಿಡಿದಿದ್ದರೂ, ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಮಾದರಿಯಾಗಿದ್ದಾರೆ.ಇವರಿಗೆ “ಮನೋಬಲದ ಜಯವೀರ”ಬಿರುದನ್ನು ನೀಡಲಾಯಿತು).
ಇದರ ಜೊತೆಗೆ, ಕರ್ನಾಟಕದ ವಿವಿಧ ಜಿಲ್ಲೆಗಳ ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ “25 ವರ್ಷ 25 ನೊಂದ ಮುಖಗಳಲ್ಲಿ ಹರ್ಷ” ಎಂಬ ಯೋಜನೆಯ ಅಡಿಯಲ್ಲಿ ಸಹಾಯ ಹಸ್ತವನ್ನು ರಾಜ್ಯದ ಬೇರೆ ಬೇರೆ ಕಡೆಯವರಿಗೆ ನೀಡಲಾಯಿತು.





ಕರುಣಾಕರ್ ಪೂಜಾರಿ (ಬಂಟ್ವಾಳ), ಇಕ್ಬಾಲ್ ಅಬೂಬಕ್ಕರ್ (ಚಿಕ್ಕಮಗಳೂರು), ನಿಖಿಲ್ ರೈ (ಕಾಸರಗೋಡು), ಸತೀಶ್ ಪೂಜಾರಿ (ಪುತ್ತೂರು), ಮಿರ್ಜಾ ಮಾಯಿಝ(ಬೆಂಗಳೂರು), ರಾಬರ್ಟ್ & ರೆಮ್ಮಿ ಡಿ’ಸೋಜಾ (ಉಪ್ಪಿನಂಗಡಿ), ರೇಖಾ ಶೆಟ್ಟಿ (ವಾಮಂಜೂರು), ರಮ್ಯಾ (ಬೆಂಗಳೂರು), ವಿಜಯ್ (ಬೆಂಗಳೂರು), ನಾಗರಾಜ್ (ಯೆಲ್ಲಾಪುರ), ಭೀಮಕ್ಕ (ಹುಬ್ಬಳ್ಳಿ), ಸುಬ್ಬರಾವ್ (ಬಳ್ಳಾರಿ), ಸ್ಟಾಲಿನ್ (ಬೆಂಗಳೂರು), ಮೊಹಮ್ಮದ್(ಬಿಜಾಪುರ್), ಕಿರಣ್ ನಾಯಕ್ (ಉಡುಪಿ), ಮಲ್ಲಪ್ಪ (ಬೆಳಗಾವಿ), ಮಲ್ಲಿಕಾರ್ಜುನ್ (ಹಾವೇರಿ), ಯಮುನ (ರಾಯಚೂರ್), ನೀಲಕಾಂತ್ (ಸಕಲೇಶಪುರ), ಮಮ್ಮುನ್ಜಿ (ಕಾಸರಗೋಡು).
ಮೊದಲ ಹಂತವು ರಾಜ್ಯ ಪ್ರಶಸ್ತಿ ವಿಜೇತ ಗಾಯಕ ರಮೇಶ್ಚಂದ್ರ, ಡಾ.ಸುಶೀಲಾ ಮತ್ತು ಪ್ರಕಾಶ್ ಪಾವಂಜೆ ಅವರ ಗಾಯನಗಳೊಂದಿಗೆ ಮುಕ್ತಾಯಗೊಂಡಿತು.
ಸಂಸ್ಥಾಪಕರು ಮತ್ತು ಪ್ರವರ್ತಕರಿಗೆ ಗೌರವ
ಕಾರ್ಯಕ್ರಮದ ಎರಡನೇ ಹಂತವನ್ನು “ಕೆಎಸ್‌ಕ್ಯೂ ಇತಿಹಾಸದಲ್ಲಿ ಸುವರ್ಣ ಅಧ್ಯಾಯ” ಎಂದು ನಿರೂಪಕ ಎಚ್.ಕೆ. ಮಧು ಅವರು ಬಣ್ಣಿಸಿದರು. ಇದು ಸಂಸ್ಥೆಯ ಸ್ಥಾಪಕರಿಗೆ ಧನ್ಯವಾದಗಳನ್ನು ಹೇಳಲು ಒಂದು ಅಪರೂಪದ ಪುನರ್ಮಿಲನವಾಗಿತ್ತು. ಅಧ್ಯಕ್ಷ ರವಿ ಶೆಟ್ಟಿ ಅವರು ರಾಷ್ಟ್ರ ಕವಿಗಳಾದ ಜಿ.ಎಸ್. ಶಿವರುದ್ರಪ್ಪ ಮತ್ತು ಕುವೆಂಪು ಅವರ ಕವನಗಳನ್ನು ಮತ್ತು ಡಿವಿಜಿ ಅವರ “ಇರುವ ಕೆಲಸವ ಮಾಡು ಕಿರಿದೆನೆದೆ ಮನವಿಟ್ಟು” ಎಂಬ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ, ಕೆಎಸ್‌ಕ್ಯೂನ ಸ್ಥಾಪಕರು ಮತ್ತು ಮಾಜಿ ನಾಯಕರ ನಿಸ್ವಾರ್ಥ ಸೇವೆಗೆ ಅದನ್ನು ಸಮರ್ಪಿಸಿದರು.





ಸಂಸ್ಥಾಪಕ ಉಪಾಧ್ಯಕ್ಷ ಡಾ.ವಿ.ಸಿ.ಮೂರ್ತಿ, ಮಾಜಿ ಅಧ್ಯಕ್ಷರಾದ ಪ್ರಕಾಶ್ ಬಾಬು, ಪ್ರಭಾಕರ್, ಅರವಿಂದ್ ಪಾಟೀಲ್, ವೆಂಕಟ್ ರಾವ್ ಮತ್ತು ಅನುರಾಧ ನಾಗೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಸತೀಶ್ ದೇಶಪಾಂಡೆ ಮತ್ತು ಭುವನ ನಾಗರಾಜ್ ಅವರನ್ನು ಅವರ ಮನೆಗಳಲ್ಲಿ ಗೌರವಿಸಲಾಯಿತು.
ಅಲ್ಲದೆ, ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸೂರ್ಯನಾರಾಯಣ, ಆರ್. ರವಿ, ಶ್ಯಾಮ್ ಎನ್. ಸ್ವಾಮಿ, ವೀಣಾ ಸಂತೋಷ್ ಕುಲಕರ್ಣಿ, ರಾಜೇಂದ್ರ ಜ್ಯೋತಿ, ಶಾಲಿನಿ ಶರಣ್ ಆಲೂರು, ರೂಪಾ ಪ್ರಮೋದ್, ಅರುಣ್ ಕುಮಾರ್ ಎಂ.ಕೆ., ಸುಬ್ರಮಣ್ಯ ಇ., ಮಂಜುಳ ಮಂಜುನಾಥ ರಾವ್, ಅಶೋಕ್ ಉನಕಲ್, ಸಿ.ಆರ್. ಮಂಜುನಾಥ್, ಲಕ್ಕಪ್ಪ ಗೌಡ, ಸವಿತಾ ಅರುಣ್, ನಿಯಾಝ್ ಅಹಮದ್, ಹೇಮಾ ಲಕ್ಕಪ್ಪ, ಆಶಾ ನಂಜಪ್ಪ ಮತ್ತು ಸಂಜನಾ ಜೀವನ್ ಅವರಿಗೆ ಗೌರವ ಸಲ್ಲಿಸಲಾಯಿತು.
ಮೊಟ್ಟಮೊದಲ ಕನ್ನಡ ಶಿಕ್ಷಕಿ ಸುಧಾ ಪ್ರಭಾಕರ್, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತರಾದ ಸುಮ ಮಹೇಶ್ ಮತ್ತು ಅಶ್ವಿನ್ ಪಿ. ಕುಮಾರ್ ಹಾಗೂ ಬೆಳ್ಳಿಹಬ್ಬದ ಬೆಂಬಲಿಗರಾದ ಅರುಣ್ ಕುಮಾರ್ ಮತ್ತು ಸಂಜಯ್ ಚಪೋಲ್ಕರ್ ಅವರಿಗೆ ಸ್ಮರಣಿಕೆಯೊಂದಿಗೆ ಗೌರವ ನೀಡಲಾಯಿತು.
ಅಧ್ಯಕ್ಷ ರವಿ ಶೆಟ್ಟಿಯವರಿಗೆ ಹೂಗುಚ್ಛ ನೀಡಿ ಮಾಜಿ ಅಧ್ಯಕ್ಷರೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದಿಸಿದರು. ಮಾಜಿ ನಾಯಕರ ಪರವಾಗಿ ಮಾತನಾಡಿದ ಡಾ.ವಿ.ಸಿ.ಮೂರ್ತಿ ಅವರು, ಈ ಕಾರ್ಯಕ್ರಮವನ್ನು ಶ್ಲಾಘಿಸಿ, ಕೆಎಸ್‌ಕ್ಯೂನ ಆರಂಭಿಕ ವರ್ಷಗಳನ್ನು ನೆನಪಿಸಿಕೊಂಡರು. ಕನ್ನಡ ಅಭಿವೃದ್ಧಿ ಕಾರ್ಯದರ್ಶಿ ಭೀಮಪ್ಪ ಖೋತ್ ಅವರು ವಂದನಾರ್ಪಣೆ ಮಾಡಿದರು.
ಈ ಸಂಭ್ರಮಾಚರಣೆಯು ಗಾಯನ, ಪುನರ್ಮಿಲನಗಳು ಮತ್ತು ಸಾಂಪ್ರದಾಯಿಕ ಊಟದೊಂದಿಗೆ ಕೊನೆಗೊಂಡಿತು. ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಸ್ವಯಂಸೇವಕರು ಮತ್ತು ಮಾಜಿ ಅಧ್ಯಕ್ಷರಾದ ಪ್ರಭಾಕರ್ ಹಾಗೂ ವೆಂಕಟ್ ರಾವ್ ಅವರ ಸಹಕಾರದಿಂದ ಈ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿದೇಶದ ಕರ್ನಾಟಕ ಸಂಘವೊಂದು ತಾಯ್ನಾಡಿನಲ್ಲಿ ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವುದರ ಮೂಲಕ ಸಂಘದ ಪ್ರತಿಷ್ಠೆ ಮತ್ತು ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.











