ಕುವೈತ್: ಕುವೈತ್ ಕನ್ನಡ ಕೂಟ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ, 41 ವರ್ಷಗಳಿಂದ ಕುವೈತ್‌ನಲ್ಲಿ ನೆಲೆಸಿರುವ ಕನ್ನಡಿಗರ ಗರಿಮೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ “ಕಲಾದರ್ಪಣ” ಎಂಬ ಶೀರ್ಷಿಕೆಯಡಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ‘ಆಯೋಜಿಸಿತು.





ಕರ್ನಾಟಕದ ಶ್ರೀಮಂತ ಕಲಾ ಪರಂಪರೆ, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ವೈವಿಧ್ಯಮಯ ಕಲಾ ಪ್ರಾಕಾರಗಳನ್ನು ಪ್ರಸ್ತುತಪಡಿಸುವುದರ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಇದು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಗೌರವವನ್ನು ಸಾರುವ ಅದ್ಭುತ ಉತ್ಸವವಾಗಿ ಸದಾಕಾಲ ನೆನಪಿನಲ್ಲಿ ಉಳಿಯುವದಂತೂ ಖಚಿತ.
2025ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ತಾರೆಂದ್ರ ಶೆಟ್ಟಿಗಾರ್, ಉಪಾಧ್ಯಕ್ಷೆ ಡಾ.ಪ್ರೀತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ಗುರುಪ್ರಸಾದ್ ಸುಬ್ಬರಾವ್ ಹಾಗೂ ಖಜಾಂಚಿ ಮಂಜುನಾಥ ಜೋಗಿ ಅವರ ಕುಟುಂಬ ಹಾಗೂ ಅಥಿತಿಗಳೊಂದಿಗೆ ಜ್ಯೋತಿ ಬೆಳಗಿಸುವದರ ಮೂಲಕ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಪ್ರೀತಿ ಶೆಟ್ಟಿ ಗಣ್ಯರು, ಸದಸ್ಯರು ಮತ್ತು ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು.





ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಸಿದ್ಧ ಕನ್ನಡ ಚಲನ ಚಿತ್ರ ನಟ ಹಾಗೂ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ವಿಜಯ ರಾಘವೇಂದ್ರ ಅವರ ಉಪಸ್ಥಿತಿ ಕಾರ್ಯಕ್ರಮದ ವರ್ಚಸ್ಸನ್ನು ದ್ವಿಗುಣ ಗೊಳಿಸಿದ್ದಲ್ಲದೆ ಸದಸ್ಯರಿಗೆ ಅವರನ್ನು ಹತ್ತಿರದಿಂದ ನೋಡುವ ಕಾತುರವನ್ನು ಇಮ್ಮಡಿಗೊಳಿಸಿತು. ಅವರೊಂದಿಗೆ ಭಾರತ ರಾಯಭಾರ ಕಚೇರಿಯ ಹರಿತ್ ಕೇತನ ಶೆಲಟ್ ಗೌರವ ಅತಿಥಿಯಾಗಿ ಹಾಗೂ ಎಸ್.ಎನ್. ರಾಮಚಂದ್ರನ್ ಅವರು ಪ್ರಾಯೋಜಕ ಅತಿಥಿಯಾಗಿ ಭಾಗವಹಿಸಿದ್ದರು.
ರೇವಣಸಿದ್ದಪ್ಪ ಹೊಂಬಾಳಿ ಮತ್ತು ರಾಮಚಂದ್ರನ್ ಅವರು “ಚಿಗುರು ಬಳ್ಳಿ” ಕಾರ್ಯಕ್ರಮದ ವಿವರಗಳನ್ನು ನೀಡಿದರು. ಈ ವೇದಿಕೆ ಕನ್ನಡ ಕಲಿಯಲು ಆಸಕ್ತಿ ಹೊಂದಿರುವ ಮಕ್ಕಳಿಗೆ ಮತ್ತು ಆಸಕ್ತ ಸದಸ್ಯರಿಗೆ ಅಧಿಕೃತ ಪಠ್ಯಕ್ರಮದ ಮೂಲಕ ಕನ್ನಡ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳುವ ಮೂಲಕ ಕನ್ನಡ ಕಲಿಯುವ ಮಹತ್ವ ಮತ್ತು ಕುವೈತ್‌ನಲ್ಲಿರುವ ಮಕ್ಕಳಿಗೆ ಅದರ ಅವಶ್ಯಕತೆ ಬಗ್ಗೆ ಒತ್ತಿ ಹೇಳಿದರು.





ಕುವೈತ್ ಕನ್ನಡ ಕೂಟವು ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘ (ಕುಕಕೂಕ್ಷೇಸಂ) ಎಂಬ ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪಿಸಿ, ಈ ಸಂಸ್ಥೆಯ ಮೂಲಕ ಭಾರತದಲ್ಲಿ 26 ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆದು, 7000ಕ್ಕೂ ಹೆಚ್ಚು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದೆ. ಈ ಮೂಲಕ ಕೂಟದ ಸದಸ್ಯರ ಕೊಡುಗೆಯನ್ನು ನಮ್ಮ ರಾಜ್ಯದ ಸಂಪನ್ಮೂಲ ವಂಚಿತ ಭಾಗದ ಜನತೆಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ. ಡಾ.ದಿವಾಕರ್ ಚೆಲುವಯ್ಯ ಅವರು ಸಂಘದ ಪದಾಧಿಕಾರಿಯಾಗಿ ಸಂಘದ ಯೋಜನೆಗಳ ವಿವರ ಹಾಗೂ ಭವಿಷ್ಯದ ಉದ್ದೇಶಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಸಾಂಸ್ಕೃತಿಕ ಸಮಿತಿಯ ಸದಸ್ಯರು ಕಾರ್ಯಕ್ರಮದ ರೂಪು ರೇಷೆ ತಯಾರಿಸಿ ಕಾರ್ಯರೂಪಕ್ಕೆ ತರುವುದರಲ್ಲಿ ತೆಗೆದುಕೊಂಡ ಶೃದ್ಧೆ ಮತ್ತು ಶ್ರಮ ಶ್ಲಾಘನೀಯ. ಸಂಯೋಜಕಿ ಶಾಂತಲಾ ಸತೀಶ ಆಚಾರ್ಯ ಮತ್ತು ಸಹ-ಸಂಯೋಜಕಿ ಸೌರಭ ವಿಕ್ರಮ್ ಅವರ ನೇತೃತ್ವದಲ್ಲಿ, ‘ಕಲಾದರ್ಪಣ’ ವಿಷಯಾಧಾರಿತ ಪ್ರದರ್ಶನಗಳು ಕರ್ನಾಟಕದ ವೈವಿಧ್ಯಮಯ ಕಲಾ ಪ್ರಾಕಾರಗಳನ್ನು ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾದವು.







ಸಂಗೀತ, ನೃತ್ಯ ಮತ್ತು ಹಾಡುಗಳ ಅದ್ಭುತ ಸಂಯೋಜನೆಯೊಂದಿಗೆ ಕರ್ನಾಟಕದ ಜನಮಾನಸದಲ್ಲಿ ಪ್ರಚಲಿತವಿರುವ ಬಹಳಷ್ಟು ಕಲೆಗಳನ್ನು ಪ್ರದರ್ಶಿಸಿದರು. ಇಂತಹ ಕಲಾ ಪ್ರಕಾರಗಳಲ್ಲಿ ನೃತ್ಯ ಕಲೆ, ಸಂಗೀತ ಕಲೆ, ತಂತ್ರಜ್ಞಾನ, ಸಿನಿಮಾ, ಕರಕುಶಲ ಕಲೆ, ವಸ್ತ್ರ ವಿನ್ಯಾಸ, ಚಿತ್ರ ಕಲೆ, ಹಾಸ್ಯ ಕಲೆ, ಸಮರ ಕಲೆ, ಗ್ರಾಮೀಣ ಕಲೆ, ಸಾಹಿತ್ಯ, ಶಿಲ್ಪ ಕಲೆ, ಮತ್ತು ಜಾನಪದ ಕಲೆಗಳ ಮನಮೋಹಕ ಪ್ರದರ್ಶನಗಳಿಂದ ಪ್ರೇಕ್ಷಕರು ತಲೆದೂಗುವಂತಾಯಿತು. ಕಲಾವಿದರು ಮತ್ತು ನೃತ್ಯ ನಿರ್ದೇಶಕರ ಪರಿಶ್ರಮಕ್ಕೆ ಪ್ರೇಕ್ಷಕರೆಲ್ಲರ ನಿರಂತರ ಕರತಾಡನದ ಶಬ್ದ ಎಲ್ಲರ ಕಿವಿಗಡಚಿಕ್ಕುವಂತೆ ಆದದ್ದು ಉತ್ಪ್ರೇಕ್ಷೇಯೇನಲ್ಲ.
ಕಲಾದರ್ಪಣದ ಯಶಸ್ಸಿಗೆ ಬಹುತೇಕರು ಹಿನ್ನೆಲೆಯಲ್ಲಿ ಶ್ರಮಿಸಿದ್ದು ಯಶಸ್ಸಿನ ಶ್ರೇಯ ಅವರೆಲ್ಲರಿಗೂ ಸಲ್ಲಬೇಕಾದ್ದು ಅನಿವಾರ್ಯ. ಸಾರ್ವಜನಿಕ ಸಂಪರ್ಕ ಸಮಿತಿಯವರ ಅಲಂಕಾರಿಕ ಮಂಟಪ, ಕೂಟದ ಸದಸ್ಯರೆಲ್ಲರ ಹಾಗೂ ಅತಿಥಿಗಳ ಆಹ್ವಾನಕ್ಕಾಗಿ ಕಾತರಿಸಿ ಕಾಯುವಂತೆ ಕಾಣುತ್ತಿದ್ದು ಪ್ರಾಂಗಣದ ಅಂದವನ್ನು ಹೆಚ್ಚಿಸಿತ್ತು. ಕ್ರೀಡಾ ಸಮಿತಿಯಿಂದ ಕೈಗೊಂಡ ಶಿಸ್ತು ಮತ್ತು ಸ್ವಚ್ಚತಾ ಕಾರ್ಯಗಳು ಸಭಾಂಗಣದ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೆ ಅವರ ಊಟೋಪಚಾರದ ವ್ಯವಸ್ಥೆ ಹಾಗೂ ಸರಂಜಾಮುಗಳ ಸಾಗಣೆ ಬೆನ್ನು ತಟ್ಟುವಂತೆ ಮಾಡಿದ್ದಲ್ಲಿ ಎರಡು ಮಾತಿಲ್ಲ. ತಾಂತ್ರಿಕ ಸಮಿತಿಯವರ ದೃಶ್ಯ -ಶ್ರವಣ ಪರಿಕರಗಳ ಸಮಯೋಚಿತ ಬಳಕೆ, ಸುಶ್ರಾವ್ಯ ಸಂಗೀತ ಮತ್ತು ಹಾಡುಗಳ ಸಂದರ್ಭೋಚಿತ ಪ್ರಸ್ತುತಿ ಮತ್ತು ಕಲಶ ಪ್ರಾಯದಂತೆ ಪ್ರದರ್ಶಿಸಲ್ಪಟ್ಟ ಹಿನ್ನೆಲೆ ದೃಶ್ಯಗಳು ಕೃತಕ ಬುಧ್ಧಿಮತ್ತೆ ಯನ್ನು ಬಳಸಿದ್ದು ಪ್ರೇಕ್ಷಕರ ಹುಬ್ಬೇರಿಸುವಂತೆ ಆದದ್ದು ವಿಸ್ಮಯ. ತಾಂತ್ರಿಕ ಸಮಿತಿಯ ಕೊಡುಗೆಯಿಂದ ಕಲಾದರ್ಪಣ ಕಾರ್ಯಕ್ರಮವು ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ಹರಿದುಬಂದದ್ದಕ್ಕೆ ಸಾಕ್ಷಿ. ಸಮಿತಿಗಳ ಸದಸ್ಯರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಸೇವಕರು ಸಲ್ಲಿಸಿದ ಸೇವೆಗಳು ಅವಿಸ್ಮರಣೀಯ.





ಮುಖ್ಯ ಅತಿಥಿ ವಿಜಯ ರಾಘವೇಂದ್ರ ಅವರ ಜೀವನಯಾನವನ್ನು ತೋರಿಸುವ ವಿಶೇಷ ವೀಡಿಯೊ ಪ್ರದರ್ಶಿಸಲಾಯಿತು. ಕಾರ್ಯಕಾರಿ ಸಮಿತಿಯವರು ವಿಜಯ ರಾಘವೇಂದ್ರ ಅವರ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಾಗಿ ಹಾಗೂ ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆಗಳನ್ನು ಪರಿಗಣಿಸಿ ಅವರನ್ನು ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷ ತಾರೇಂದ್ರ ಶೆಟ್ಟಿಗಾರ್ ಅವರು ಕನ್ನಡದಲ್ಲಿ ಮೋಹಕ ಭಾಷಣ ಮಾಡಿ, ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯ ಸರಳತೆ ಹಾಗೂ ಅವುಗಳ ಹಿರಿಮೆಯನ್ನು ವಿವರಿಸಿದರು. ಅಧ್ಯಕ್ಷರು ಯಶಸ್ವಿ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಪ್ರಾಯೋಜಕರು, ಸದಸ್ಯರು ಮತ್ತು ಸ್ವಯಂಸೇವಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ರಾಜ್ಯೋತ್ಸವದ ನೆನಪುಗಳನ್ನು ಮನದಣಿಯೆ ಸವಿಯುವ ಮತ್ತು ಮರುಕಳಿಸುವಂತೆ ಮಾಡಲು ಸ್ಮರಣಿಕೆ ಯೊಂದನ್ನು ಗಣ್ಯರು ಮತ್ತು ಕಾರ್ಯಕಾರಿ ಸಮಿತಿಯವರು ಅನಾವರಣಗೊಳಿಸಿದರು. ವಿನ್ಯಾಸ ಸಮಿತಿ ಹಾಗೂ ಮರಳ ಮಲ್ಲಿಗೆ ಸಮಿತಿ ಯವರ ಸಹಕಾರದಲ್ಲಿ ತಯಾರಾದ ಈ ಸ್ಮರಣಿಕೆಯಲ್ಲಿ ಸದಸ್ಯರು ಮತ್ತು ಮಕ್ಕಳ ಲೇಖನಗಳು ಪ್ರಮುಖ ಆಕರ್ಷಣೆಯಾಗಿದ್ದು, ಸದಸ್ಯರ ಮತ್ತು ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವನ್ನು ಪ್ರತಿಫಲಿಸುವಂತೆ ಮಾಡುವ ಒಂದು ಪ್ರಯತ್ನ ಇಲ್ಲಿ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಪ್ರಾಯೋಜಕರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಎಲ್ಲ ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ ಮತ್ತು ಕನ್ನಡ ಕೂಟದ ಶುಭ ಹಾರೈಸುವರೆಲ್ಲರಿಗೂ ಕಾರ್ಯಕಾರಿ ಸಮಿತಿಯವರು ಕೃತಜ್ಞತಾ ಭಾವದಿಂದ ಧನ್ಯವಾದಗಳನ್ನು ತಿಳಿಸಿದರು.










ಕಾರ್ಯಕ್ರಮದ ಕೊನೆಯಲ್ಲಿ ರುಚಿಕರ ಭೋಜನವನ್ನು ಅತಿಥಿಗಳು ಮತ್ತು ಸದಸ್ಯರು ಸವಿದರು. ನೆನಪಿನ ಕ್ಷಣಗಳಿಂದ ತುಂಬಿದ ಹೃದಯಗಳೊಂದಿಗೆ, ಈ ರಾಜ್ಯೋತ್ಸವವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುತ್ತಾ ಅಂತ್ಯಗೊಂಡಿತು.
ವರದಿ: ಸುರೇಶ್ ರಾವ್ ನಿರಂಬಳ್ಳಿ, ಕುವೈತ್

