ಮನಾಮಾ/ ಬಹರೈನ್: ಮೀನುಗಾರಿಕೆ ವೇಳೆ ಬಹರೈನ್ ಸರಕಾರದಿಂದ ಬಂಧಿಸಲ್ಪಟ್ಟ ತಮಿಳುನಾಡು ಮೂಲದ 28 ಭಾರತೀಯ ಮೀನುಗಾರರನ್ನು ವಾಪಸ್ ಭಾರತಕ್ಕೆ ಕಳುಹಿಸುವುದಾಗಿ ಬಹರೈನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇರಾನ್‌ನಲ್ಲಿ ಮೀನುಗಾರಿಕೆ ವೇಳೆ ಅಚಾತುರ್ಯದಿಂದ ಗಡಿದಾಟಿದ್ದ ತಮಿಳುನಾಡಿನ ತಮಿಳುನಾಡಿನ ತಿರುನಲ್‌ವೇಲಿ ಜಿಲ್ಲೆಯ ಇಡಿಂತಕರೈ ಗ್ರಾಮದ 28 ಮೀನುಗಾರರನ್ನು ಸೆ.11ರಂದು ಬಹರೈನ್‌ನ ಕೋಸ್ಟ್‌ಗಾರ್ಡ್ ಪೊಲೀಸರು ಬಂಧಿಸಿದ್ದರು.
ಬಂಧಿಸಲ್ಪಟ್ಟಿದ್ದ 28 ಮೀನಗಾರರಿಗೆ 6 ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತಾದರೂ ಬಳಿಕ ಅದನ್ನು 3 ತಿಂಗಳಿಗೆ ಕಡಿತಗೊಳಿಸಲಾಗಿತ್ತು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಈ ಕುರಿತಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ, ‘ಮೀನುಗಾರಿಕೆ ವೇಳೆ ಬಂಧಿಸಲ್ಪಟ್ಟು ಇತ್ತೀಚೆಗೆ ಬಿಡುಗಡೆಗೊಂಡ 28 ಭಾರತೀಯ ಮೀನುಗಾರರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತಿದೆ. ಅವರಿಗೆ ಭಾರತೀಯ ರಾಯಭಾರ ಕಚೇರಿಯು ಕಾನೂನಿತ್ಮಕ ಸಹಕಾರ ನೀಡಿದ್ದು, ಪ್ರಯಾಣವೆಚ್ಚವನ್ನು ಭಾರತ ಸರಕಾರದ ಇಂಡಿಯನ್ ಕಮ್ಯೂನಿಟಿ ವೆಲ್‌ಫೇರ್ ಫಂಡ್‌ನಿಂದ ಭರಿಸಲಾಗಿದೆ. ಭಾರತೀಯರ ಕ್ಷೇಮವೇ ನಮ್ಮ ಆದ್ಯತೆ’ ಎಂದು ಬರೆದುಕೊಂಡಿದೆ.
ಬಹರೈನ್‌ನ ಸಂಬಂಧಪಟ್ಟ ಅಧಿಕಾರಿಗಳ ಶೀಘ್ರ ಸ್ಪಂದನೆಗೆ ಧನ್ಯವಾದ ತಿಳಿಸಿರುವ ಭಾರತೀಯ ರಾಯಭಾರ ಕಚೇರಿಯು, ‘ಮೀನುಗಾರರು ಆದಷ್ಟು ಶೀಘ್ರದಲ್ಲೇ ಸುರಕ್ಷಿತವಾಗಿ ತಮ್ಮ ಕುಟುಂಬವನ್ನು ಸೇರಿಕೊಳ್ಳಲಿ’ ಎಂದು ಎಕ್ಸ್‌ನಲ್ಲಿ ಹಾರೈಸಿದೆ.
ಈ ಕುರಿತಾಗಿ ಸೆ.26ರಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ಬರೆದಿದ್ದು, ಕೂಡಲೇ ಬಂಧಿತ ಮೀನುಗಾರರ ಬಿಡುಗಡೆಗೆ ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
‘ತಿರುನಲ್‌ವೇಲಿ ಜಿಲ್ಲೆಯ ಇಡಿಂತಕರೈ ಗ್ರಾಮದ 28 ಮೀನುಗಾರರು ಇರಾನ್ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸೆ.11ರಂದು ಬಹರೈನ್ ಕೋಸ್ಟ್‌ಗಾರ್ಡ್ ಪೊಲೀಸರಿಂದ ಬಂಧಿಸಲ್ಪಟ್ಟಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಅವರು ಅಚಾತುರ್ಯದಿಂದ ಗಡಿದಾಟಿದ್ದರು. ಅಲ್ಲದೇ ಅವರು ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಇರಾನ್ ಪ್ರಜೆಗೆ ಸೇರಿದ್ದಾಗಿದೆ. ಬಂಧಿಸ್ಪಟ್ಟ ಮೀನುಗಾರರ ಕುಟುಂಬಸ್ಥರು ಇವರನ್ನೇ ಆಶ್ರಯಿಸಿಕೊಂಡಿದ್ದು, ಅವರ ಬಂಧನದಿಂದ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.