ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KKIA)ದಲ್ಲಿ ಇಂದಿನಿಂದ(ಡಿ.30) ಟರ್ಮಿನಲ್ ಬದಲಾವಣೆ ಆಗಲಿದೆ.
ಈ ಹಿಂದೆ ಟರ್ಮಿನಲ್ 2 ರಿಂದ ಸಂಚರಿಸುತ್ತಿದ್ದ ವಿಮಾನಗಳು ಹೊಸದಾಗಿ ಗೊತ್ತುಪಡಿಸಿದ ಟರ್ಮಿನಲ್ 3ಗೆ ಸ್ಥಳಾಂತರವಾಗಲಿವೆ. ಇದರಿಂದ ಭಾರತಕ್ಕೆ ಆಗಮಿಸುವ ವಿಮಾನಗಳ ಮೇಲೆ ಪರಿಣಾಮ ಬೀರಲಿದ್ದು, ಇನ್ನು ಇಲ್ಲಿಗೆ ಆಗಮಿಸುವ ಹಾಗು ಹೊರಡುವ ಏರ್ ಇಂಡಿಯಾ, ಇಂಡಿಗೋ ವಿಮಾನಗಳು ಟರ್ಮಿನಲ್ 3ರಲ್ಲಿ ಕಾರ್ಯನಿರ್ವಹಿಸಲಿವೆ.
ಇನ್ನು ಮುಂದೆ ಎಮಿರೇಟ್ಸ್, ಬ್ರಿಟಿಷ್ ಏರ್‌ವೇಸ್, ಖತರ್ ಏರ್‌ವೇಸ್, ಗಲ್ಫ್ ಏರ್, ಈಜಿಪ್ಟ್ ಏರ್ ಮತ್ತು ಹೆಚ್ಚಿನ ಇತರ ಅಂತಾರಾಷ್ಟ್ರೀಯ ವಿಮಾನಗಳು ಕೂಡ ಈ ಹೊಸ ಟರ್ಮಿನಲ್‌ನಿಂದ ಸಂಚಾರ ನಡೆಸಲಿವೆ.
ಇಲ್ಲಿಯವರೆಗೆ ಈ ಏರ್‌ಲೈನ್‌ಗಳು ಟರ್ಮಿನಲ್ 2 ಮೂಲಕ ಸಂಚಾರ ನಡೆಸುತ್ತಿದ್ದವು.ಇಂದಿನಿಂದ ಟರ್ಮಿನಲ್ 3ರಲ್ಲಿ ಸಂಚಾರ ಕಾರ್ಯ ಆರಂಭಿಸಲಿವೆ.
ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಸ್ತುತ ಪ್ರಯಾಣಿಕರ ಅನುಕೂಲಕ್ಕಾಗಿ ವಿಸ್ತರಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರು ಗೊಂದಲಕ್ಕೀಡಾಗದೆ ಟರ್ಮಿನಲ್ ಬದಲಾವಣೆ ಬಗ್ಗೆ ಮಾಹಿತಿ ಪಡೆದು ಪ್ರಯಾಣಿಸಬೇಕಾಗಿದೆ.
(ಮಾಹಿತಿ: ಪಿ.ಎ.ಹಮೀದ್ ಪಡುಬಿದ್ರಿ, ರಿಯಾದ್)