ಯುಎಇಎಂದೆಂದಿಗೂ ಮರೆಯಲಾಗದ ಹೆಮ್ಮೆಯ ಕನ್ನಡಿಗ ಎಸ್.ಎಂ. ಸಯ್ಯದ್ ಖಲೀಲ್

ಎಂದೆಂದಿಗೂ ಮರೆಯಲಾಗದ ಹೆಮ್ಮೆಯ ಕನ್ನಡಿಗ ಎಸ್.ಎಂ. ಸಯ್ಯದ್ ಖಲೀಲ್

ಕಠಿಣ ಪರಿಶ್ರಮಿ, ಶಿಕ್ಷಣ ಪ್ರೇಮಿ, ಸಮಾಜ ಸೇವಕ, ಹೆಮ್ಮೆಯ ಕನ್ನಡಿಗ ಎಸ್.ಎಂ. ಖಲೀಲ್‌ ಎಂದರೆ ಅನಿವಾಸಿಗಳಿಗೆ ಮಾತ್ರವಲ್ಲ, ಭಟ್ಕಳದ ನವಾಯತರು, ಕನ್ನಡಿಗರು, ಹಾಗು ದುಬೈಯ ಭಾರತೀಯ ಸಮುದಾಯಕ್ಕೆ ಚಿರಪರಿಚಿತ, ಆಪ್ತ ಹೆಸರು. ಅನಿವಾಸಿ ಸಮುದಾಯಕ್ಕೆ ದುಬೈಯಲ್ಲಿ ಹೆಮ್ಮೆಯ ಸಂಕೇತವಾಗಿದ್ದವರು ಇವರು. ಎಪ್ಪತ್ತರ ದಶಕದಲ್ಲೇ ದುಬೈಗೆ ಹೋಗಿ ಅಲ್ಲಿನ ಉದ್ಯಮ, ಅಂತರ್ ರಾಷ್ಟ್ರೀಯ ವಾಣಿಜ್ಯ ಕ್ಷೇತ್ರ ಹಾಗು ಆಡಳಿತ ರಂಗದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ ಅನನ್ಯ ಸಾಧಕ.

ದಶಕಗಳ ಕಾಲ ವಿದೇಶದಲ್ಲಿದ್ದುಕೊಂಡು ತನ್ನೂರಿಗಾಗಿ, ಊರವರಿಗಾಗಿ, ಕನ್ನಡಿಗರಿಗಾಗಿ ದುಡಿದ, ಮಿಡಿದ ಎಸ್ ಎಂ ಸಯ್ಯದ್ ಖಲೀಲ್ ತಮ್ಮ 86ನೆ ವಯಸ್ಸಿನಲ್ಲಿ ದುಬೈಯಲ್ಲಿ ನಿಧನರಾದರು.

ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ ಅಕೌಂಟೆಂಟ್ ಗಳಲ್ಲಿ ಒಬ್ಬರಾದ ಸಯ್ಯದ್ ಖಲೀಲ್ ಅವರು ʼಸಿ ಎ ಖಲೀಲ್ʼ ಎಂದೇ ಚಿರಪರಿಚಿತರಾಗಿದ್ದ ಖ್ಯಾತ ಅನಿವಾಸಿ ಕನ್ನಡಿಗ. ದುಬೈ ಸಹಿತ ಗಲ್ಫ್ ದೇಶಗಳಲ್ಲಿ ಕನ್ನಡ, ಕೊಂಕಣಿ ಹಾಗು ನವಾಯತ್ ಭಾಷೆಗಳು ಹಾಗೂ ಸಂಸ್ಕೃತಿಯ ಕಂಪು ಹರಡುವಲ್ಲಿ ಮಹತ್ವದ ಕೊಡುಗೆ ನೀಡಿದವರು. ನೂರಾರು ಯುವಜನರಿಗೆ ಉದ್ಯೋಗ ಪಡೆಯಲು ನೆರವಾದವರು. ಭಟ್ಕಳ , ಮಂಗಳೂರು ಸಹಿತ ಹತ್ತಾರು ಕಡೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳನ್ನು ಪೋಷಕರಾಗಿ, ಪದಾಧಿಕಾರಿಯಾಗಿ ಮುನ್ನಡೆಸಿದವರು.

ಭಾರತದಲ್ಲಿದ್ದಾಗ ಕೆಲ ಸಮಯ ಮಹೀಂದ್ರ ಕಂಪೆನಿಯಲ್ಲಿ ಸೇವೆ ಸಲ್ಲಿಸಿ 1978ರಲ್ಲಿ ದುಬೈಗೆ ಹೋದ ಅವರು ಅಲ್ಲಿನ ಪ್ರತಿಷ್ಠಿತ ʼಗಲದಾರಿʼ ಸಮೂಹ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿದರು. ಆ ಸಮೂಹದ ಖಲೀಜ್ ಟೈಮ್ಸ್ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು. ಅಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಗೆ ತಲುಪಿ ಅದರ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ನೀಡಿದವರು. ದುಬೈನ ಇನ್ನೊಂದು ಪ್ರತಿಷ್ಠಿತ ಸಂಸ್ಥೆ ಜಶನ್ ಮಾಲ್ ನ ಉಪಾಧ್ಯಕ್ಷರಾಗಿ, ದುಬೈನ ದಿ ಇನ್ಸ್ ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ದುಬೈ ಘಟಕದ ಸ್ಥಾಪಕ ಸದಸ್ಯರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ನಂತರ ದುಬೈನಲ್ಲಿ ತಮ್ಮ ಸ್ವಂತ ಉದ್ಯಮ ಸಂಸ್ಥೆ ಕೆ ಎಂಡ್ ಕೆ ಎಂಟರ್ ಪ್ರೈಸಸ್ ಸ್ಥಾಪಿಸಿದ್ದರು.

ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್, ರಾಬಿತಾ ಸೊಸೈಟಿ ಸಹಿತ ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹತ್ತಾರು ಶೈಕ್ಷಣಿಕ , ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ದೇಶದ ಖ್ಯಾತ ರಾಜಕೀಯ, ಧಾರ್ಮಿಕ ನಾಯಕರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಇವರು, ಭಟ್ಕಳದಲ್ಲಿ ಹಿಂದೂ ಮುಸ್ಲಿಮರ ಐಕ್ಯತೆ ಹಾಗು ಸೌಹಾರ್ದ ಕಾಪಾಡಲು ಸದಾ ಶ್ರಮಿಸುತ್ತಿದ್ದವರು. ಭಟ್ಕಳದ ಸರ್ವಧರ್ಮೀಯರ ಅಪಾರ ಗೌರವಕ್ಕೆ ಪಾತ್ರರಾಗಿದ್ದ ಮೋಹತಿಶಾಮ್ ಅಬ್ದುಲ್ ಘನಿ ಸಾಹೇಬರ ಜೊತೆಗೆ ಸಾಕಷ್ಟು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ದುಡಿದು ಅವರ ಅಗಲಿಕೆಯ ಬಳಿಕ ಭಟ್ಕಳದ ಎಲ್ಲರಿಗೂ ಆಪ್ತ ಹಾಗು ಅತ್ಯಂತ ಪ್ರಭಾವೀ ನಾಯಕರಾಗಿ ಬೆಳೆದವರು ಖಲೀಲ್ ಸಾಹೇಬರು.

ಅಂಜುಮನ್ ಅಧ್ಯಕ್ಷರಾಗಿ ಆ ಸಂಸ್ಥೆಯ ಅಧೀನದ ಎಲ್ಲ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಖಲೀಲ್ ಸಾಹೇಬರು ಭಟ್ಕಳ ಹಾಗು ಸುತ್ತಮುತ್ತಲ ಪ್ರದೇಶದ ಹಲವಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಟ್ಟವರು. ಭಟ್ಕಳದ ಉರ್ದು ಹಾಗು ಇಂಗ್ಲೀಷ್ ಮಾಧ್ಯಮ ಸಂಸ್ಥೆ ಸಾಹಿಲ್ ಆನ್ ಲೈನ್ ನ ಅಧ್ಯಕ್ಷರಾಗಿದ್ದು, ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್ ನ ಅಧ್ಯಕ್ಷರಾಗಿದ್ದರು.

ಉದ್ಯಮ ಹಾಗು ಆಡಳಿತ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದ ಖಲೀಲ್ ಸಾಹೇಬರಿಗೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು, ಗೌರವಗಳು ಸಂದಿವೆ. ಗಲ್ಫ್ ರಾಷ್ಟ್ರಗಳ ಪ್ರತಿಷ್ಠಿತ ಉದ್ಯಮ ಮ್ಯಾಗಝಿನ್ ಗಳ ಟಾಪ್ ಪ್ರಭಾವಿಗಳ ಪಟ್ಟಿಯಲ್ಲೂ ಖಲೀಲ್ ಸಾಹೇಬರು ಸ್ಥಾನ ಪಡೆದಿದ್ದರು. ಕರ್ನಾಟಕ ಸರಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಭಟ್ಕಳ್ ಮುಸ್ಲಿಂ ಖಲೀಜ್ ಕೌನ್ಸಿಲ್ ದುಬೈಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಖಲೀಲ್ ಸಾಹೇಬರನ್ನು ಸನ್ಮಾನಿಸಿ ‘ಇಫ್ತಿಕಾರ್ ಎ ಕೌಮ್’ ಎಂಬ ಬಿರುದು ನೀಡಿ ಗೌರವಿಸಿತ್ತು. ಅದೇ ಸಂದರ್ಭದಲ್ಲಿ ಖಲೀಲ್ ಸಾಹೇಬರ ಬದುಕು ಹಾಗು ಸಾಧನೆಗಳ ಕುರಿತ ವಿಶೇಷ ಸಾಕ್ಷ್ಯ ಚಿತ್ರವನ್ನೂ ಪ್ರದರ್ಶಿಸಲಾಗಿತ್ತು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories