ಸಿಡ್ನಿ: ಸಿಬ್ಬಂದಿಗಳ ಮುಷ್ಕರದ ಕಾರಣದಿಂದಾಗಿ ಆಸ್ಟ್ರೇಲಿಯಾದ ನೂರಾರು ರೈಲು ಸಂಚಾರಗಳನ್ನು ಸ್ಥಗಿತಗೊಳಿಸಿದ್ದು, ಸಂಚಾರ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ಹೊಸ ವರ್ಷದ ಅವಧಿಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿರುವುದರ ಕುರಿತು ನ್ಯೂ ಸೌತ್ ವೇಲ್ಸ್ ನ ಸಾರಿಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು, ಹೊಸ ವರ್ಷದ ಅವಧಿಯಲ್ಲಿ ಮುಷ್ಕರ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
“ನಾವು ಈ ಹಿಂದೆಯೇ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಹಲವು ಬಾರಿ ಸೂಚನೆ ನೀಡಿದ್ದೇವೆ” ಎಂದು ರೈಲು, ಟ್ರಾಮ್ ಮತ್ತು ಬಸ್ ಯೂನಿಯನ್ (RTBU) ಹೇಳಿದೆ. ವೇತನ ಹೆಚ್ಚಳ ಮತ್ತು ಕೆಲಸದ ಪರಿಸ್ಥಿತಿಗಳಲ್ಲಿ ಸುಧಾರಣೆಗಾಗಿ ರೈಲು, ಟ್ರಾಮ್ ಮತ್ತು ಬಸ್ ಯೂನಿಯನ್ ಮುಷ್ಕರ ನಡೆಸುತ್ತಿದೆ.
ಸಾರಿಗೆ ಸಚಿವ ಜೋ ಹೇಲೆನ್ ಪ್ರಕಾರ, ಶನಿವಾರದಂದು ಸುಮಾರು 40% ರೈಲು ಸೇವೆಗಳು ರದ್ದುಗೊಳ್ಳುವ ಅಥವಾ ವಿಳಂಬವಾಗುವ ನಿರೀಕ್ಷೆಯಿದ್ದು, ಜನರು ಅನಿವಾರ್ಯವಲ್ಲದ ಪ್ರಯಾಣವನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಸಿಡ್ನಿ ರೈಲುಗಳ CEO, ಮ್ಯಾಥ್ಯೂ ಲಾಂಗ್‌ಲ್ಯಾಂಡ್, ದಿನವಿಡೀ 350 ಕ್ಕೂ ಹೆಚ್ಚು ರೈಲು ಸೇವೆಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ.
ರೈಲುಗಳಲ್ಲಿ ಪ್ರಯಾಣಿಸುವುದನ್ನು ಬಿಟ್ಟು ಬಸ್, ಟ್ರಾಮ್, ಲಘು ರೈಲು ಅಥವಾ ಮೆಟ್ರೋದಂತಹ ಇತರ ಸಾರಿಗೆ ವಿಧಾನಗಳ ಮೂಲಕ ಪ್ರಯಾಣ ಮಾಡುವಂತೆ ಅವರು ತಿಳಿಸಿದ್ದಾರೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾದಿನದಂದು ಅತ್ಯಂತ ಹೆಚ್ಚು ಅಡೆತಡೆಗಳಾಗುವ ಸಾಧ್ಯತೆಯಿದೆಯೆಂದು ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ರೈಲು ಮುಷ್ಕರದ ಕಾರಣದಿಂದಾಗಿ ಸಿಡ್ನಿಯಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ ಹೊಸ ವರ್ಷದ ಖ್ಯಾತ ಸಿಡಿಮದ್ದು ಪ್ರದರ್ಶನವನ್ನೂ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.