ದುಬೈ: ಅಬುಧಾಬಿ, ದುಬೈ, ಶಾರ್ಜಾ ಸೇರಿದಂತೆ ಯುಎಇಯಲ್ಲಿ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. 2024ಕ್ಕೆ ವಿದಾಯ ಹೇಳಿ 2025ಕ್ಕೆ ಹಲೋ ಎನ್ನುವ ಮೂಲಕ ಯುಎಇಯಲ್ಲಿ ಜನರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಯುಎಇಯ ಎಲ್ಲಾ 7 ಎಮಿರೇಟ್‌ಗಳಾದ್ಯಂತ ಮಂಗಳವಾರ ರಾತ್ರಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಲವು ನಿಮಿಷಗಳ ಸಿಡಿಮದ್ದು ಪ್ರದರ್ಶನ, 10 ಸಾವಿರಕ್ಕೂ ಹೆಚ್ಚು ಲೇಸರ್, ಡ್ರೋನ್ ಪ್ರದರ್ಶನ ಹಾಗು ನೂರಾರು ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ಜರಗುವ ಮೂಲಕ ವಿಶ್ವ ದಾಖಲೆಯತ್ತ ಮುಖ ಮಾಡಿತು. ಈ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳಲು ಜನ ಮುಗಿಬಿದ್ದು ಹೊಸ ವರ್ಷವನ್ನು ಆಚರಿಸಿಕೊಂಡರು.

ಅಬುಧಾಬಿಯಲ್ಲಿ ನಡೆದ ತಡೆರಹಿತ 53 ನಿಮಿಷಗಳ ಸಿಡಿಮದ್ದು ಪ್ರದರ್ಶನ ಕಂಡು ಜನ ಮೂಕವಿಸ್ಮಿತರಾದರು. ದುಬೈಯ 45 ನಿಮಿಷಗಳ ವರ್ಣರಂಜಿತ ಬಾಣಬಿರುಸು ಪ್ರದರ್ಶನ, ರಾಸ್ ಅಲ್ ಖೈಮಾದ ಸುದೀರ್ಘ ಲೇಸರ್ ಡ್ರೋನ್ ಶೋ ಬಾನಂಗಳದಲ್ಲಿ ಚಿತ್ತಾರವನ್ನು ಮೂಡಿಸಿತು. ಇದು ಯುಎಇಯಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.
ಝಗಮಗಿಸಿದ ‘ಬುರ್ಜ್ ಖಲೀಫಾ’; ರೋಮಾಂಚನಗೊಂಡ ಜನ
ಒಂದಲ್ಲ ಒಂದು ದಾಖಲೆಯನ್ನು ಮಾಡುತ್ತಲೇ ಬರುತ್ತಿರುವ ‘ಬುರ್ಜ್ ಖಲೀಫಾ’, ಈ ಬಾರಿಯ ಹೊಸ ವರ್ಷದ ಕೇಂದ್ರಬಿಂದುವಾಗಿತ್ತು. ವಿಶ್ವದ ನಾನಾ ಮೂಲೆಗಳಿಂದ ಪ್ರವಾಸಿಗರು, ಯುಎಇಯ ಜನರು ಹೊಸ ವರ್ಷವನ್ನು ಆಚರಿಸುವುದಕ್ಕಾಗಿಯೇ ‘ಬುರ್ಜ್ ಖಲೀಫಾ’ ಬಳಿ ಮಂಗಳವಾರ ಬೆಳಗ್ಗಿನಿಂದಲೇ ಜಮಾಯಿಸಿದ್ದರು.

ಗಂಟೆ 12 ಬಾರಿಸುತ್ತಿದ್ದಂತೆ ‘ಬುರ್ಜ್ ಖಲೀಫಾ’ದಲ್ಲಿ ಝಗಮಗಿಸುವ ಲೇಸರ್ ಲೈಟ್‌ನ ಡ್ಯಾನ್ಸ್ ನೋಡುಗರನ್ನು ವಿಸ್ಮಯದಲ್ಲಿ ತೇಲಾಡಿಸಿತು. ‘ಬುರ್ಜ್ ಖಲೀಫಾ’ದ ನಾಲ್ಕು ಸುತ್ತುಗಳಿಂದ ಸಿಡಿಯುತ್ತಿದ್ದ ಸಿಡಿಮದ್ದು ಪ್ರದರ್ಶನ ಕಂಡ ಜನ ರೋಮಾಂಚನಗೊಂಡರು. ಈ ಸಿಡಿಮದ್ದು ಹಾಗು ಆಕರ್ಷಣೀಯ ಲೇಸರ್ ಶೋವನ್ನು 11 ವಿವಿಧ ರಾಷ್ಟ್ರಗಳ 110ಕ್ಕೂ ಹೆಚ್ಚು ವೃತ್ತಿಪರರು ಈ ಗಮನಾರ್ಹ ಪ್ರದರ್ಶನವನ್ನು ರಚಿಸುವಲ್ಲಿ ಸಹಕರಿಸಿದ್ದಾರೆ.
ಶೇಖ್ ಝಾಯಿದ್ ಉತ್ಸವದಲ್ಲಿ ಸಿಡಿಮದ್ದು ಪ್ರದರ್ಶನ- ಆಕರ್ಷಣೀಯ ಲೇಸರ್ ಶೋ
ಅಬುಧಾಬಿಯ ಅಲ್ ವತ್ಬಾದಲ್ಲಿ ನಡೆಯುತ್ತಿರುವ ಶೇಖ್ ಝಾಯಿದ್ ಉತ್ಸವದಲ್ಲಿ 50 ನಿಮಿಷಗಳ ಸಿಡಿಮದ್ದು ಪ್ರದರ್ಶನ ನೆರೆದ ಜನರನ್ನು ಅತ್ತಿತ್ತ ತೆರಳದಂತೆ ಮಾಡಿತು. ಜೊತೆಗೆ ಇದು ವಿಶ್ವದ ಅತಿದೊಡ್ಡ ಸಿಡಿಮದ್ದು ಪ್ರದರ್ಶನವೆಂಬ ಖ್ಯಾತಿಗೂ ಪಾತ್ರವಾಯಿತು. ಇದೇ ವೇಳೆ 6,000-ಡ್ರೋನ್’ಗಳನ್ನು ಬಳಸಿ 20 ನಿಮಿಷಗಳ ಕಾಲ ಆಕಾಶದಲ್ಲಿ ವೈಮಾನಿಕ ಚಿತ್ರಗಳನ್ನು ಮೂಡಿಸುವ ಲೇಸರ್ ಶೋ ಅತ್ಯದ್ಭುತವಾಗಿತ್ತು. ಇದು ನೆರೆದಿದ್ದ ಸಾವಿರಾರು ಜನರನ್ನು ಇನ್ನಷ್ಟು ಸಂಭ್ರಮಿಸುವಂತೆ ಮಾಡಿತು.




ದುಬೈಯ ಗ್ಲೋಬಲ್ ವಿಲೇಜ್, ದುಬೈ ಫ್ರೇಮ್, ಬುರ್ಜ್ ಅಲ್ ಅರಬ್, ದುಬೈ ಡಿಸೈನ್ ಡಿಸ್ಟ್ರಿಕ್ಟ್, ದುಬೈ ಫೆಸ್ಟಿವಲ್ ಸಿಟಿ, J1 ಬೀಚ್, ಅಟ್ಲಾಂಟಿಸ್ ದಿ ಪಾಮ್, ಅಲ್ ಸೀಫ್, ದುಬೈ ಮರೀನಾ ಬೀಚ್, ಬ್ಲೂವಾಟರ್ಸ್ ಐಲ್ಯಾಂಡ್’ನಲ್ಲಿಯೂ ಸಿಡಿಮದ್ದು ಪ್ರದರ್ಶನವನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು.
ಶಾರ್ಜಾದ ಅಲ್ ಮಜಾಝ್, ಖೋರ್ಫಕ್ಕನ್ ಬೀಚ್, ಅಜ್ಮಾನ್ ಕೊರ್ನಿಶ್, ಬೊಲೆ ವರ್ಡ್ ಎದುರಿನ ಅಲ್ ಜರ್ಫ್ ಪ್ರದೇಶದಲ್ಲಿ, ರಾಸ್ ಅಲ್ ಖೈಮಾ’ದ ಅಲ್ ಮರ್ಜಾನ್ ದ್ವೀಪ ಹಾಗು ಅಲ್ ಹಮ್ರಾ, ಉಮ್ಮುಲ್ ಖುವೈನ್, ಫುಜೈರಾದಲ್ಲಿ ಸುದೀರ್ಘ ಸಿಡಿಮದ್ದು ಪ್ರದರ್ಶನ ಆಕಾಶವನ್ನೇ ಬೆಳಗಿಸಿದವು.





ಯುಎಇಯಾದ್ಯಂತ ಹೂಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರವಾಸಿ ತಾಣಗಳು, ಹೋಟೆಲ್, ರೆಸಾರ್ಟ್, ರೆಸ್ಟೊರೆಂಟ್ ಗಳು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದ್ದು, ಸಹಸ್ರಾರು ಜನರಿಂದ ತುಂಬಿ ತುಳುಕುತ್ತಿತ್ತು.