ಯುಎಇಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ:...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ದುಬೈಯ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜೂನ್ 29 ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಯುಎಇಯ ಏಳು ಮಂದಿ ಸಾಧಕರಿಗೆ ಮತ್ತು ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಘಟನೆ ಕ್ಷೇತ್ರ: ಸರ್ವೋತ್ತಮ ಶೆಟ್ಟಿ-ಯುಎಇಯಲ್ಲಿ ತುಳು ಕನ್ನಡ ಸಂಘ ಸಂಸ್ಥೆಗಳ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡಂತಹ ಯುಎಇ ಬಂಟ್ಸ್ ನ ಗೌರವ ಅಧ್ಯಕ್ಷರು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿತನ.

ಕಲಾ ಪೋಷಕ: ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ– ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳಿಗೆ ಪೋಷಕರಾಗಿ ಹಾಗೂ ತಾಯ್ನಾಡಿನಲ್ಲಿಯು ಸಮಾಜ ಸೇವೆ ಮಾಡುತ್ತಿರುವ ಯುಎಇ ಬಂಟ್ಸ್ ನ ಅಧ್ಯಕ್ಷರು, ಎನ್.ಆರ್.ಐ.ಯ ಅಧ್ಯಕ್ಷರು.

ಉದ್ಯಮ ಕ್ಷೇತ್ರ: ಪುತ್ತಿಗೆ ವಾಸುದೇವ ಭಟ್– ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಹಲವಾರು ಮಂದಿಗೆ ಉದ್ಯೋಗವನ್ನು ನೀಡಿರುವ ಹಿರಿಯ ಉದ್ಯಮಿ.

ಸಮಾಜ ಸೇವಾ ಕ್ಷೇತ್ರ: ಬಾಲಕೃಷ್ಣ ಸಾಲಿಯಾನ್– ಯುಎಇಯಲ್ಲಿ ರಕ್ತದಾನ ಶಿಬಿರದ ಸಂಘಟನೆಗಳನ್ನು ಮಾಡಿ ಯುಎಇಯ ತುಳು ಕನ್ನಡಿಗರ ಪ್ರೀತಿಗೆ ಪಾತ್ರರಾದವರು.

ಮಾಧ್ಯಮ ಕ್ಷೇತ್ರ: ಬಿ.ಕೆ.ಗಣೇಶ ರೈ- ಯುಎಇಯ ಕಾರ್ಯಕ್ರಮ, ವೈವಿಧ್ಯ, ವಿಶೇಷ- ಸಾಧಕರ ಪರಿಚಯ, ಮಾಧ್ಯಮ ಪ್ರಚಾರಗಳ ಮೂಲಕ ಜನಾನುರಾಗಿ, ಸ್ವತಃ ಲೇಖಕ, ಶಿಲ್ಪಿ, ಭಾಷಣಗಾರ.

ನಾಟಕ: ಡೋನಿ ಕೊರೆಯಾ-ತುಳು ಕೊಂಕಣಿ ನಾಟಕಗಳ ಮೂಲಕ ಚಿರಪರಿಚಿತ ಕಲಾವಿದ ಸಿನಿ ಕಲಾವಿದ ಹಾಗೂ ಗಮ್ಮತ್ ಕಲಾವಿದೆರ್ ದುಬೈ ತಂಡದ ಪ್ರತಿಭಾವಂತ ಕಲಾವಿದ-ಗಾಯಕ.

ಭರತನಾಟ್ಯ: ರೂಪ ಕಿರಣ್-ಯುಎಇಯ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಕಿಯಾಗಿ ಭರತನಾಟ್ಯದ ಮೂಲಕ ಚಿರಪರಿಚಿತರಾದ ಖ್ಯಾತ ನೃತ್ಯ ಪಟು, ಗುರು, ನೃತ್ಯ ಶಕ್ತಿ ಭರತನಾಟ್ಯ ಕಲಿಕಾ ಕೇಂದ್ರದ ಸ್ಥಾಪಕಿ.

ಭಜನೆ: ಶ್ರೀ ರಾಜರಾಜೇಶ್ವರಿ ಭಜನಾ ತಂಡ-ಕಳೆದ ಇಪ್ಪತ್ತು ವರ್ಷಗಳಿಂದ ಯುಎಇಯ ಎಲ್ಲಾ ಸಂಘಟನೆಗಳ ಹಾಗೂ ಮನೆಗಳಲ್ಲಿ ಪೂಜೆ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಭಜನೆ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಭಜನಾ ಸೇವಾ ಸಂಸ್ಥೆ.

ಸಂಸ್ಕೃತಿ: ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ-ಸಂಸ್ಕೃತಿ ಪಾಲನೆ-ಪ್ರಚಾರ, ಸೇವಾ ಕಾರ್ಯ ಮುಂತಾದ ಹತ್ತು ಹಲವು ಧ್ಯೇಯ ಧೋರಣೆಗಳನ್ನು ಇರಿಸಿಕೊಂಡು, ಹಲವಾರು ವರ್ಷಗಳಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಮಾಡಿಕೊಂಡು ಬರುತ್ತಿರುವ ಸೇವಾ ಸಂಸ್ಥೆ.

ಕನ್ನಡ ನಾಡು-ನುಡಿ-ಭಾಷೆ: ಕನ್ನಡ ಪಾಠ ಶಾಲೆ, ದುಬಾಯಿ-ದುಬೈಯ ಕನ್ನಡ ವಿದ್ಯಾರ್ಥಿಗಳಿಗೆ ನಮ್ಮ ಮಾತೃ ಬಾಷೆಯ ಕಲಿಕಾ ತರಗತಿ ಮೂಲಕ, ನಮ್ಮ ಮಕ್ಕಳು ತಾಯ್ನಾಡಿನ ಸಂಸ್ಕೃತಿ -ಆಚಾರ-ವಿಚಾರಗಳೊಂದಿಗೆ ಬೆಸೆಯುವ ಕಾಯಕ ಮಾಡುತ್ತಿರುವ ಸಂಸ್ಥೆ.

ಯಕ್ಷ ಗುರು ಶೇಖರ್ ಡಿ. ಶೆಟ್ಟಿಗಾರ್ ಮಾತನಾಡಿ, ಬೆಳಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗುತ್ತದೆ. ಮೊದಲಿಗೆ ಹತ್ತು ಮಂದಿ ಚೆಂಡೆವಾದಕರು, ಮೂರು ಮಂದಿ ಮದ್ದಳೆ, ಮೂರು ಮಂದಿ ಚಕ್ರತಾಳ, ಇಬ್ಬರು ತಾಳದವರನ್ನೊಳಗೊಂಡ ಒಟ್ಟು ಹದಿನೆಂಟು ಮಂದಿಗಳ ಅಬ್ಬರ ತಾಳದಿಂದ (ಇದರಲ್ಲಿ ನಮ್ಮ ಹಿಮ್ಮೇಳದ ಕಲಿಕಾ ವಿದ್ಯಾರ್ಥಿಗಳು ಇದ್ದಾರೆ) ಚಾಲನೆಗೊಳ್ಳುವ ಕಾರ್ಯಕ್ರಮ ಮುಂದೆ ಚೌಕಿ‌ ಪೂಜೆ, ಪುಟ್ಟ ಪುಟಾಣಿಗಳ-ಪೂರ್ವ ರಂಗ ಮತ್ತು ಊರಿನ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ ಮತ್ತು ಕಾವ್ಯಶ್ರೀ ಅಜೇರುಯವರಿಂದ ಇದೇ ಮೊದಲ ಬಾರಿಗೆ ಯುಎಇಯಲ್ಲಿ ಗಾನ ವೈಭವ ನಡೆಯಲಿದೆ. ನಂತರ ಗಣ್ಯಾತಿಗಣ್ಯರ ಮೂಲಕ ಭವ್ಯ ಶೋಭಯಾತ್ರೆಯಲ್ಲಿ ಕೇಂದ್ರದ ಅಭಿಮಾನಿಗಳು ಮತ್ತು ಶ್ರೀ ದೇವಿ ಭಕ್ತವೃಂದದವರ ಸೇವಾರ್ಥ- ಸಮರ್ಪಿಸಿದ ಶ್ರೀದೇವಿಯ ಬೆಳ್ಳಿಯ ಕಿರೀಟ, ತುರಾಯಿ, ಶಂಖ-ಚಕ್ರಗಳನ್ನು ವೇದಿಕೆಗೆ ತರಲಾಗುವುದು. ಅದೇ ಸಭಾವೇದಿಕೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಾಸರಗೋಡು ಸುಬ್ರಯ ಹೊಳ್ಳರವರಿಗೆ ‘ಯಕ್ಷ ಶ್ರೀ ರಕ್ಷಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ನಂತರ ಊರಿನ ಪ್ರಸಿದ್ದ ಕಲಾವಿದರಾದ ಅರುಣ್ ಕೋಟ್ಯಾನ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು ಹಾಗು ಕೇಂದ್ರದ ಕಲಾವಿದರ ಕೂಡುವಿಕೆಯಿಂದ ‘ಶಿವಾನಿ-ಸಿಂಹವಾಹಿನಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಶೆಟ್ಟಿ ಕೊಟ್ಟಿಂಜ, ವಸಂತ ಶೆಟ್ಟಿ, ವಿಕ್ಕಿ ಶೆಟ್ಟಿ, ಪ್ರಕಾಶ ಪಕ್ಕಳ, ರಾಜೇಶ್ ಕುತ್ತಾರ್, ರಮಾನಂದ, ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Hot this week

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ದುಬೈಯ ಕರಾನಿ ಇಂಟೀರಿಯರ್’ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈ: ದುಬೈಯ ಭಾರತೀಯ ರಾಯಭಾರಿ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ...

ಯಕ್ಷಕಿರೀಟ ಸುಬ್ರಾಯ ಹೊಳ್ಳರಿಗೆ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ವತಿಯಿಂದ ‘ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ-2025’

ದುಬೈ: ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU) ವರ್ಷಂ...

Related Articles

Popular Categories