ದುಬೈ: ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU) ವರ್ಷಂ ಪ್ರತಿ, ದುಬೈ ಅಥವಾ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ನೀಡುತ್ತಾ ಬಂದಿರುವಂತೆ, 2024-2025 ನೇ ಸಾಲಿನ ‘ಯಕ್ಷ ಶ್ರೀರಕ್ಷಾ ಗೌರವ ಪ್ರಶಸ್ತಿ’ಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಕೆ.ಎನ್.ಸುಬ್ರಾಯ ಹೊಳ್ಳರಿಗೆ ನೀಡಲು ನಿರ್ಧರಿಸಿದೆ.
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಜೂ.29 ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ನಡೆಯಲಿರುವ ದುಬೈಯ ‘ಯಕ್ಷೋತ್ಸವ 2025’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ, ಅಸಾಧಾರಣ ಕಲಾಗುಣ ಸೌಂದರ್ಯ ಮಾಧುರ್ಯಗಳಿಂದ ಜನ ಸಾಮಾನ್ಯರೂ ಅರ್ಥವಿಸಿಕೊಳ್ಳುವ ಮಾಧ್ಯಮವಾದ ಯಕ್ಷಗಾನವನ್ನು ಒಪ್ಪಿ ಅಪ್ಪಿಕೊಂಡು ನಿರಂತರ 42 ವರ್ಷಗಳ ಕಾಲ ಯಕ್ಷಗಾನದ ಸೇವೆಯನ್ನು ಮಾಡುತ್ತ ಬಂದಿರುವ ಕೆ.ಎನ್.ಸುಬ್ರಾಯ ಹೊಳ್ಳ ಕಾಸರಗೋಡುರವರಿಗೆ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇವರ ವಾರ್ಷಿಕ ಪ್ರಶಸ್ತಿ “ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ-2025″ಯನ್ನು ನೀಡಿ ಗೌರವಿಸಲಾಗುವುದು.
ಹೊಳ್ಳರ ಕಿರುಪರಿಚಯ
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಹುಟ್ಟಿದ ಜಿಲ್ಲೆಯಲ್ಲಿ ಕೆ.ಎಸ್ ನಾರಾಯಣ ಹೊಳ್ಳ ಮತ್ತು ಪದ್ಮಾವತಿ ಅಮ್ಮನವರ ಮಗನಾಗಿ 17-12-1965ರಲ್ಲಿ, ಭುವಿಯ ಬೆಳಕನು ಕಂಡವರು ಕೆ.ಎನ್ ಸುಬ್ರಾಯ ಹೊಳ್ಳರು. ಕಾಸರಗೋಡಿನಲ್ಲೇ 8ನೇ ತರಗತಿ ತನಕ ವ್ಯಾಸಂಗ ಮಾಡಿ ಮುಂದೆ ಯಕ್ಷಗಾನವೇ ಬದುಕಿಗೆ ಬೆಳಕಾಯಿತು. ಗುರುಗಳಾದ ಕೂಡ್ಲು ಆನಂದರು ಹಾಗೂ ಕೂಡ್ಲು ನಾರಾಯಣ ಬಲ್ಯಾಯರ ಶಿಷ್ಯತ್ವವನ್ನು ಸ್ವೀಕರಿಸಿ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಹೊಳ್ಳರು, ಬಳಿಕ 1984ನೇ ಇಸವಿಯಲ್ಲಿ ಕಟೀಲು ಮೇಳಕ್ಕೆ ಪಾದಾರ್ಪಣೆ ಮಾಡಿದರು.
ನಂತರ ಪುತ್ತೂರು, ಕದ್ರಿ, ಕರ್ನಾಟಕ, ಮಧೂರು, ಬಪ್ಪನಾಡು, ಮರಳಿ ಕಟೀಲು, ಹೊಸನಗರ, ಎಡನೀರು, ಹನುಮಗಿರಿ, ಧರ್ಮಸ್ಥಳ ಇಂತಹ ತೆಂಕುತಿಟ್ಟಿನ ಮೇಳಗಳಲ್ಲಿ ತಿರುಗಾಟ ಮಾಡಿದ ಹೊಳ್ಳರು ಸದ್ಯಕ್ಕೆ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದಲ್ಲಿ ತಿರುಗಾಟ ಮಾಡುತಿದ್ದಾರೆ. ಪ್ರಧಾನ ಕಿರೀಟ ವೇಷಗಳ ಜೊತೆ ನಾಟಕೀಯವೇಷಗಳಲ್ಲಿ ಹೆಚ್ಚಿನ ಸಿದ್ಧಿ. ಅಗತ್ಯಕ್ಕೆ ಸ್ತ್ರೀವೇಷ -ಬಣ್ಣದ ವೇಷಗಳನ್ನೂ ಮಾಡಿದವರು. ಶಾರದರನ್ನು ವರಿಸಿದ ಹೊಳ್ಳರು ಹರಿನಾರಾಯಣ ಮತ್ತು ಪದ್ಮಶ್ರೀ ಎಂಬ ಇಬ್ಬರು ಮಕ್ಕಳೊಂದಿಗೆ ಬಂಟ್ವಾಳ ಗ್ರಾಮದಲ್ಲಿ ಸಂತೃಪ್ತ ಜೀವನ ಸಾಗಿಸುತಿದ್ದಾರೆ.
ಹೊಳ್ಳರವರಿಗೆ ಸಂದ ಪ್ರಶಸ್ತಿ, ಗೌರವಗಳು
2002 ಮಾರ್ಚ್ 17ರಂದು ಕಾಸರಗೋಡು ಪುರಸಭೆಯ ನೇತೃತ್ವದಲ್ಲಿ ಶೇಣಿಯವರ ಅಧ್ಯಕ್ಷತೆಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ “ಗೌರವ ಸನ್ಮಾನ”, 2007 ಸಪ್ಟೆಂಬರ್ 3ರಂದು ಮೈಸೂರಿನಲ್ಲಿ ನಡೆದ ಚೆಂಡೆ ಮೇಳ ಕಲಾ ಸಂಘದ ಕಾರ್ಯಕ್ರಮದಲ್ಲಿ ಫಲಿಮಾರು ಶ್ರೀಗಳಿಂದ “ಯಕ್ಷ ಸಿರಿ” ಬಿರುದು ಪ್ರದಾನ, 2008 ಜುಲೈ 4ರಂದು ಬಹರೈನ್ ಕನ್ನಡ ಸಂಘದಿಂದ ಸನ್ಮಾನ, 2010 ಸಪ್ಟೆಂಬರ್ 5ರಂದು ಪದ್ಮನಾಭ ಕಟೀಲು ದುಬೈ ಸಂಯೋಜನೆಯ ಕಟೀಲು ದಿ.ಗೋಪಾಲಕೃಷ್ಣ ಅಸ್ರಣ್ಣ ಸಂಸ್ಕರಣಾ ಕಾರ್ಯಕ್ರಮ ಮುಂಬಯಿಯಲ್ಲಿ “ಅಸ್ರಣ್ಣ ಪ್ರಶಸ್ತಿ” ಪ್ರದಾನ, 2012 ಅಕ್ಟೋಬರ್ 16ರಂದು ಹೈದರಾಬಾದ್ ನಲ್ಲಕುಂಟದ ಶಂಕರಭವನದಲ್ಲಿ “ಯಕ್ಷ ಕಿರೀಟಿ” ಪ್ರಶಸ್ತಿ ಪ್ರದಾನ, 2012 ಅಕ್ಟೋಬರ್ 24ರಂದು ಕಟೀಲು ಮೇಳದ ಆಯ್ದ ಕಲಾವಿದರಿಂದ ಸಿಂಗಾಪುರದಲ್ಲಿ ಯಕ್ಷಗಾನದಲ್ಲಿ ಭಾಗವಹಿಸುವಿಕೆ, 2013 ಜನವರಿ 14 ರಂದು ಕಾಸರಗೋಡು ರಾಧಾಕೃಷ್ಣ ಅಡಿಗರ ನೂತನ ಗೃಹ ಪ್ರವೇಶದ ಕಾರ್ಯಕ್ರಮದಲ್ಲಿ “ರಜತ ಕಿರೀಟ” ಸಮರ್ಪಣೆ, 2016 ಮೇ 7ರಂದು ಅಮೃತಧಾರ ಶ್ರೀ ಕೇಶವಾನಂದ ಭಾರತೀ ಆರೋಗ್ಯ ಸಂಸ್ಥೆ ಎರುಗಲ್ಲು ಅಡ್ಯನಡ್ಕದಲ್ಲಿ “ಯಕ್ಷ ಕಲಾ ರತ್ನ” ಬಿರುದು ಪ್ರದಾನ, 2016 ಸಪ್ಟೆಂಬರ್ 3ರಂದು ಮಂಗಳೂರಿನ ಡಾನ್ ಬಾಸ್ಕೊ ಹಾಲ್ ನಲ್ಲಿ ಲಯನ್ಸ್ ಕ್ಲಬ್ – ಯಕ್ಷ ವೈಭವ ಕಾರ್ಯಕ್ರಮದಲ್ಲಿ ಸನ್ಮಾನ, 2016 ಅಕ್ಟೋಬರ್ 15ರಂದು ಯಕ್ಷ ಅಭಿಮಾನಿ ಸುರತ್ಕಲ್ ವತಿಯಿಂದ ಸನ್ಮಾನ-ನಿಧಿ ಸಮರ್ಪಣೆ, 2017 ಅಕ್ಟೋಬರ್ 12ರಂದು ರೋಟರಿ ಕ್ಲಬ್ ಉಡುಪಿ ಉದ್ಯಾವರ ಇದರ ಆಶ್ರಯದಲ್ಲಿ ತ್ರಿಕ್ಕಣ್ಣೇಶ್ವರೀ ಪತ್ರಿಕೆ ಕೊಡಮಾಡುವ “ತ್ರಿಕ್ಕಣ್ಣೇಶ್ವರೀ ಪ್ರಶಸ್ತಿ” ಪ್ರದಾನ, 2020 ಅಕ್ಟೋಬರ್ 17ರಂದು ಪೊಳಲಿ ಯಕ್ಷೋತ್ಸವ ರಜತ ಸಂಭ್ರಮದಲ್ಲಿ ಸನ್ಮಾನ, 2025 ಫೆಬ್ರವರಿ 16ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2024 ನೇ ಸಾಲಿನ “ಗೌರವ ಪ್ರಶಸ್ತಿ”ಗೆ ಆಯ್ಕೆಯಾದ ಸುಬ್ರಾಯ ಹೊಳ್ಳರಿಗೆ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಈಗ ‘ಯಕ್ಷ ಶ್ರೀರಕ್ಷಾ ಗೌರವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಮುಂದಾಗಿದೆ.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)