ಯುಎಇನಾಸಿರ್ ಸಯ್ಯದ್ - ಸೂಪರ್ ಬೈಕ್ ರೇಸಿಂಗ್ ಚಾಂಪಿಯನ್...

ನಾಸಿರ್ ಸಯ್ಯದ್ – ಸೂಪರ್ ಬೈಕ್ ರೇಸಿಂಗ್ ಚಾಂಪಿಯನ್ ಶಿಪ್ ಅನ್ನು ಯುರೋಪ್ ನಿಂದ ದುಬೈಗೆ ತಂದ ಸೂಪರ್ ಸ್ಟಾರ್ ಕನ್ನಡಿಗ

ಯಶಸ್ವಿ ಉದ್ಯಮಿ, ರೇಸಿಂಗ್ ಚಾಂಪಿಯನ್, ಸಮಾಜ ಸೇವಕ 

ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲೇ ಕಳೆದು ಹೋಗಲು ಬಯಸದೆ ಸ್ವಂತ ಉದ್ಯಮ ಕಟ್ಟಿ ಬೆಳೆಸುವ ಭಾರೀ ಸವಾಲನ್ನು ದಿಟ್ಟವಾಗಿ ಎದುರಿಸಿ ಭರ್ಜರಿಯಾಗಿ ಗೆದ್ದವರು ನಾಸಿರ್ ಸಯ್ಯದ್. ಈ ಶತಮಾನದ ಆರಂಭದಲ್ಲೇ ಸ್ವಂತ ಉದ್ಯಮ ಸ್ಥಾಪಿಸಲು ಇರುವ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಸ್ಕಫೋಲ್ಡಿಂಗ್ ಕ್ಷೇತ್ರದಲ್ಲಿ ತನ್ನದೇ ಕಂಪೆನಿಯನ್ನು ಪ್ರಾರಂಭಿಸಿದವರು ನಾಸಿರ್. ಕಠಿಣ ಪರಿಶ್ರಮ, ಅತ್ಯುತ್ತಮ ಗ್ರಾಹಕ ಸೇವೆ, ವಿನೂತನ ಶೈಲಿ ಹಾಗೂ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂಬ ಅವರ ನೀತಿಯಿಂದಾಗಿ ಬಹಳ ಬೇಗ  ೨೦೦೫ ರಲ್ಲಿ ಅವರ ಉದ್ಯಮಕ್ಕೆ ಪ್ರಮುಖ ತಿರುವು ಸಿಕ್ಕಿತು. ದೊಡ್ಡ ಗ್ರಾಹಕರನ್ನು ಸೆಳೆಯುವಲ್ಲಿ ಅವರ ಕಂಪೆನಿ ಯಶಸ್ವಿಯಾಯಿತು. ಅಲ್ಲಿಂದ ನಾಸಿರ್ ಸಯ್ಯದ್ ಹಿಂದಿರುಗಿ ನೋಡಲೇ ಇಲ್ಲ. ಒಂದೊಂದೇ ಹೆಜ್ಜೆ ಮುಂದಿಡುತ್ತಾ ಬೆಳೆಯುತ್ತಲೇ ಹೋದರು. ಒಬ್ಬರೇ ಪ್ರಾರಂಭಿಸಿದ ಅವರ ಕಂಪೆನಿಯ ಸಮೂಹ ಇಂದು ಇನ್ನೂರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿದೆ ಎಂದರೆ ಅವರ ಸಾಧನೆ ಅದೆಷ್ಟು ದೊಡ್ಡದು ಎಂಬ ಅರಿವಾಗುತ್ತದೆ.

ಇಂದು ಸ್ಕಫೋಲ್ಡಿಂಗ್ ಹಾಗೂ ಫಾರ್ಮ್ ವರ್ಕ್ ಕ್ಷೇತ್ರದಲ್ಲಿ ಇಡೀ ಯುಎಇಯಲ್ಲೇ ಮುಂಚೂಣಿ ಕಂಪೆನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾದ ಸಿ.ಎಚ್.ಎಸ್. ಕ್ರಿಯೇಟಿವ್ ಹೌಸ್ (CHS Creative House), ಕೈಗಾರಿಕಾ ವಾಲ್ವ್ ಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ವಿ.ಎಂ.ಇ. ವಾಲ್ವ್ಸ್ ಫ್ಯಾಕ್ಟರಿ ಎಲ್.ಎಲ್.ಸಿ. (VME Valves Factory LLC), ವಿಶ್ವದರ್ಜೆಯ ಇವೆಂಟ್ ಗಳನ್ನು ನಡೆಸುವ ಕ್ರಿಯೇಟಿವ್ ಹೌಸ್ ಇವೆಂಟ್ಸ್ (Creative House Events) ಹಾಗೂ ಅಂತರ್ ರಾಷ್ಟ್ರೀಯ ರೇಸಿಂಗ್ ಸ್ಪರ್ಧೆ ಆಯೋಜಿಸುವ ಪ್ರತಿಷ್ಠಿತ ಡಿ.ಎಸ್.ಬಿ.ಕೆ. ಸೂಪರ್ ಬೈಕ್ ರೇಸಿಂಗ್ ಕಂಪೆನಿ (DSBK – D SUPER BIKE RACING)ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ನಾಸಿರ್ ಸಯ್ಯದ್.

ಶಾಲಾ-ಕಾಲೇಜು ದಿನಗಳಲ್ಲೇ ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್ ಆಡುತ್ತಿದ್ದ ನಾಸಿರ್ ಸಯ್ಯದ್ ಕ್ರಮೇಣ ಬೈಕ್ ರೇಸಿಂಗ್ ನತ್ತ ಆಕರ್ಷಿತರಾದರು. ಅತ್ಯಂತ ದುಬಾರಿ ಹಾಗೂ ಅಷ್ಟೇ ಅಪಾಯಕಾರಿಯೂ ಆಗಿರುವ ಮೈನವಿರೇಳಿಸುವ ರೋಮಾಂಚಕಾರಿ ಸೂಪರ್ ಬೈಕ್ ರೇಸಿಂಗ್ ಅನ್ನು ದೂರದಿಂದ ನೋಡಿ ಆನಂದಿಸುವವರೇ ಹೆಚ್ಚು. ದುಬೈಯಲ್ಲಿ ನೆಲೆಸಿದ ಮೇಲೆ ಸೂಪರ್ ಬೈಕ್ ರೇಸಿಂಗ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಅವರು ಆ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲೂ ಅಂತರ್ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಒಂದಾದ ಮೇಲೊಂದರಂತೆ 38 ಪ್ರೊ ಬೈಕ್ ರೇಸಿಂಗ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಆದರು. ಯುಎಇ ರಾಷ್ಟ್ರೀಯ ಚಾಂಪಿಯನ್ ಶಿಪ್ ಹಾಗೂ ಬಹರೈನ್ ಸೂಪರ್ ಬೈಕ್ ಚಾಂಪಿಯನ್ ಶಿಪ್ ಗಳಲ್ಲೂ ಅವರು ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

ಈವರೆಗೆ ಹೆಚ್ಚಾಗಿ ಯುರೋಪ್ ನಲ್ಲಿ ಮಾತ್ರ ನಡೆಯುತ್ತಿದ್ದ ಸೂಪರ್ ಬೈಕ್ ರೇಸಿಂಗ್ ಅನ್ನು ದುಬೈ ಹಾಗೂ ಭಾರತಕ್ಕೆ ತರುವ ಸಾಹಸಕ್ಕೆ ನಾಸಿರ್ ಸಯ್ಯದ್ ಕೈ ಹಾಕಿದ್ದಾರೆ. ದುಬೈಯಲ್ಲಿ ಸೂಪರ್ ಬೈಕ್ ರೇಸಿಂಗ್ ಆಯೋಜಿಸುವ ಹೊಸ ಕಂಪೆನಿಯನ್ನೇ ಸ್ಥಾಪಿಸಿದ್ದಾರೆ. DSBK – D SUPER BIKE RACING ಹೆಸರಿನ ಕಂಪೆನಿ ಈಗಾಗಲೇ ರೇಸಿಂಗ್ ಸ್ಪರ್ಧೆಗಳನ್ನು  ನಡೆಸಿ ಯಶಸ್ವಿಯಾಗಿದೆ. ಸೂಪರ್ ಬೈಕ್ ರೇಸರ್ ಗಳು, ಅದರ ಅಭಿಮಾನಿಗಳು ಹಾಗೂ ಪ್ರತಿಷ್ಠಿತ ಬ್ರ್ಯಾಂಡ್ ಗಳನ್ನು ಒಂದೇ ವೇದಿಕೆಗೆ ತರುವ ವಿನೂತನ ಹಾಗೂ ಸಾಹಸಿ ಪ್ರಯತ್ನ ಈ ಡಿ.ಎಸ್.ಬಿ.ಕೆ. 

ನಾಸಿರ್ ಅವರ ಪತ್ನಿ ಅನಿಲ ನಾಸಿರ್ ಪತಿಯ ಉದ್ಯಮ ಹಾಗೂ ಕ್ರೀಡಾ ಸಾಹಸಗಳಲ್ಲಿ ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಪುತ್ರ ಅಬ್ದುಲ್ ಸಮಿ ಈಗಾಗಲೇ ಉದಯೋನ್ಮುಖ ಸೂಪರ್ ಬೈಕ್ ರೇಸರ್ ಆಗಿ ಹೆಸರು ಗಳಿಸಿದ್ದಾರೆ. ಇನ್ನೋರ್ವ ಪುತ್ರ ಯಹ್ಯಾ ನಾಸಿರ್, ಪುತ್ರಿಯರಾದ ಹನ ನಾಸಿರ್ ಹಾಗೂ ರಿದ ನಾಸಿರ್ ಅವರ ತುಂಬು ಕುಟುಂಬ ಅವರದ್ದು.

ಯಶಸ್ವೀ ಉದ್ಯಮಿ ಹಾಗೂ ಚಾಂಪಿಯನ್ ಸೂಪರ್ ಬೈಕ್ ರೇಸರ್ ನಾಸಿರ್ ಸಯ್ಯದ್ ಅವರು ಊರಿನಲ್ಲಿ ಹಲವು ಜನೋಪಯೋಗಿ ಸಾಮಾಜಿಕ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದಾರೆ. ಶಿಕ್ಷಣ, ಅರೋಗ್ಯ ಸಹಿತ ಹಲವು ರಂಗಗಳಲ್ಲಿ ಅರ್ಹರಿಗೆ ನೆರವು ತಲುಪಿಸುತ್ತಿದ್ದಾರೆ.

ಭಾರತದಲ್ಲೂ DSBK ಚಾಂಪಿಯನ್ ಶಿಪ್ !

ನಾಸಿರ್ ಸಯ್ಯದ್ ಅವರ ಮಹತ್ವಾಕಾಂಕ್ಷಿ DSBK – D SUPER BIKE RACING ಮುಂದಿನ(2025) ವರ್ಷ ಭಾರತದಲ್ಲಿ ಚಾಂಪಿಯನ್ ಶಿಪ್ ಆಯೋಜಿಸಲಿದೆ. ಈ ಬಗ್ಗೆ ನವೆಂಬರ್ 4ಕ್ಕೆ ಮುಂಬೈಯಲ್ಲಿ ನಾಸಿರ್ ಸಯ್ಯದ್ ಸುದ್ದಿಗೋಷ್ಠಿ ನಡೆಸಿ ಘೋಷಿಸಲಿದ್ದಾರೆ. Instagramನಲ್ಲಿ DSBKracing ಪೇಜ್ ನಲ್ಲಿ ಈ ಕುರಿತ ಎಲ್ಲ ಮಾಹಿತಿಗಳೂ ಲಭ್ಯ.

ನಾಸಿರ್ ಸೈಯದ್ ಗೆ ಐಕನ್ಸ್ ಆಫ್ ಯುಎಇ ಅವಾರ್ಡ್

ದುಬೈನ ದಿ ಪಾಮ್ ನಲ್ಲಿರುವ ತಾಜ್ ಎಕ್ಸೋಟಿಕಾ ಹೋಟೆಲ್ ನಲ್ಲಿ ಅಕ್ಟೊಬರ್  202 ರಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಸಮಾರಂಭವೊಂದರಲ್ಲಿ ಅನಿವಾಸಿ ಭಾರತೀಯ ಉದ್ಯಮಿ ನಾಸಿರ್ ಸೈಯದ್ ಅವರಿಗೆ ಎನ್ ಕೆಎನ್ ಮಾಧ್ಯಮ ಸಂಸ್ಥೆಯ ವತಿಯಿಂದ ‘ಐಕನ್ಸ್ ಆಫ್ ಯುಎಇ’ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಈ ಸಮಾರಂಭದಲ್ಲಿ  ಡೆನ್ಯೂಬ್ ಗ್ರೂಪ್ ನ ಅಧ್ಯಕ್ಷ ರಿಝ್ವಾನ್ ಸಾಜನ್, ಪೆಟ್ರೋಕೆಮ್ ಮಿಡ್ಲ್ ಈಸ್ಟ್ ನ ಸಿಇಒ ಯೋಗೇಶ್ ಮೆಹ್ತಾ, ತುಂಬೆ ಗ್ರೂಪ್ ನ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ವೆಸ್ಟ್ ಝೋನ್ ಗ್ರೂಪ್ ನ ನರೇಶ್ ಕುಮಾರ್ ಭವ್ನಾನಿ ಸಹಿತ ವಿವಿಧ ಉದ್ಯಮ ವಲಯಗಳ 16 ಪ್ರಖ್ಯಾತ ಉದ್ಯಮ ನಾಯಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೇಂದ್ರದ ವಿದೇಶಾಂಗ ವ್ಯವಹಾರಗಳ ಮಾಜಿ ರಾಜ್ಯ ಸಚಿವ, ಸಂಸದ ಹಾಗೂ ಖ್ಯಾತ ಲೇಖಕ ಶಶಿ ತರೂರ್ ಉಪಸ್ಥಿತರಿದ್ದು, ನಾಸಿರ್ ಸೈಯದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮೂಲತಃ ಮೂಡುಬಿದಿರೆಯವರಾದ, ಸೈಯದ್ ಮೊಹಿದಿನ್ ಹಾಗೂ ಖುರ್ಷಿದ್ ಬೇಗಮ್  ಅವರ ಪುತ್ರರಾದ ನಾಸಿರ್ ಸೈಯದ್, ಯುಎಇಯಲ್ಲಿ ಪ್ರಖ್ಯಾತ ಉದ್ಯಮಿ ಹಾಗೂ ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸರ್ ಆಗಿ ಖ್ಯಾತಿ ಗಳಿಸಿದ್ದಾರೆ. ಅವರು ದುಬೈಯಲ್ಲಿ ಕ್ರಿಯೇಟಿವ್ ಹೌಸ್ ಸ್ಕಫೋಲ್ಡಿಂಗ್ ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಈ ಪ್ರತಿಷ್ಠಿತ ಸಮಾರಂಭವನ್ನು ಭಾರತದ ಮುಂಚೂಣಿ ಮಾಧ್ಯಮ ಸಂಸ್ಥೆಯಾದ ‘ಇಂಡಿಯಾ ಟುಡೇ’ ಸಮೂಹದ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ‘ಇಂಡಿಯಾ ಟುಡೇ’ಹಾಗೂ ‘ಆಜ್ ತಕ್’ ಚಾನಲ್ ಗಳು ಕಾರ್ಯಕ್ರಮವನ್ನು ತಮ್ಮ ಚಾನಲ್ ಗಳಲ್ಲಿ ಪ್ರಸಾರ ಮಾಡಿದ್ದವು. ದೂರದೃಷ್ಟಿಯ ನಾಯಕರು ಯುಎಇ ಉದ್ಯಮ ವಲಯ ಹಾಗೂ ಸಮಯದಾಯದ ಮೇಲೆ ಬೀರಿರುವ ಧನಾತ್ಮಕ ಪರಿಣಾಮಗಳನ್ನು ಗುರುತಿಸುವ ಉದ್ದೇಶ ಈ ಪ್ರಶಸ್ತಿಗಿದೆ.

ವಿವೇಕ್ ಒಬೆರಾಯ್ ಹಾಗೂ ಸಲ್ಮಾನ್ ಯೂಸುಫ್ ಖಾನ್ ಸೇರಿದಂತೆ ಖ್ಯಾತ ನಟರು ಹಾಗೂ ಪ್ರಭಾವಿ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದರು. ಭಾರತದ ಖ್ಯಾತ ಪತ್ರಕರ್ತ ಹಾಗೂ ಸುದ್ದಿ ನಿರೂಪಕ ರಾಜದೀಪ್ ಸರ್ದೇಸಾಯಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಮಾರಂಭವು ಈ ಉದ್ಯಮ ನಾಯಕರ ಸ್ಫೂರ್ತಿದಾಯಕ ಪಯಣಗಳು ಹಾಗೂ ತಮ್ಮ ಕನಸನ್ನು ನನಸು ಮಾಡಿಕೊಂಡ ಹಾದಿಯ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯಾಯಿತು. ಈ ಪ್ರಭಾವಿಗಳ ಅನುಭವಗಳು ಹಾಗೂ ಸಾಧನೆಗಳ ಕುರಿತು ವೀಕ್ಷಕರಿಗೆ ಬೆಳಕು ಚೆಲ್ಲುವ ತಲಾ 30 ನಿಮಿಷಗಳ ಅವಧಿಯ ಸಂಚಿಕೆಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಲಿವೆ.

ದುಬೈನಲ್ಲಿ  ಪ್ರಪ್ರಥಮ ಡಿ ಎಸ್ ಬಿ ಕೆ ಸೂಪರ್  ಬೈಕ್ ರೇಸಿಂಗ್ ‘ದಿ ಅಡ್ರೆನಲಿನ್ ಕಪ್’ ಯಶಸ್ವಿ

ನಾಸಿರ್ ಸಯ್ಯದ್ ನೇತೃತ್ವದಲ್ಲಿ  ಡಿ ಎಸ್ ಬಿ ಕೆ (DSBK) ಆಯೋಜಿಸಿದ್ದ ಬಹುನಿರೀಕ್ಷಿತ ಪ್ರಥಮ ವರ್ಷದ ಅಂತರ್ ರಾಷ್ಟ್ರೀಯ ಸೂಪರ್  ಬೈಕ್ ರೇಸಿಂಗ್ ( Superbike racing) ಸ್ಪರ್ಧಾಕೂಟ ‘ ದಿ ಅಡ್ರೆನಲಿನ್ ಕಪ್’ (‘The Adrenaline Cup’) ಇಲ್ಲಿನ ದುಬೈ ಆಟೋಡ್ರೋಮ್ ಸರ್ಕ್ಯೂಟ್ ನಲ್ಲಿ  ಯಶಸ್ವಿಯಾಗಿ ಅಕ್ಟೊಬರ್ 2022ರಲ್ಲಿ ನಡೆಯಿತು. ವಿಶ್ವದ ವಿವಿಧ ದೇಶಗಳಿಂದ ಬಂದಿದ್ದ ರೈಡರ್ ಗಳು ಸ್ಪರ್ಧಿಸಿದ್ದ ಈ ರೋಮಾಂಚನಕಾರಿ ಸ್ಪರ್ಧೆಯನ್ನು ಸಾವಿರಾರು ರೇಸಿಂಗ್ ಪ್ರಿಯರು ನೋಡಿ ಆನಂದಿಸಿದ್ದರು. 

ದುಬೈ ಬಿಸಿಲ ಬೇಗೆಯನ್ನು ಲೆಕ್ಕಿಸದ ರೇಸಿಂಗ್ ಅಭಿಮಾನಿಗಳು ರೈಡರ್ ಗಳು ಹುರಿದುಂಬಿಸುತ್ತಾ ತಾವು ರೇಸಿಂಗ್ ನ ಖುಷಿ ಅನುಭವಿಸಿದ್ದರು. ಅಂತಿಮವಾಗಿ  ಮೂವರು ವಿಜೇತರಾದರು. ಖತರ್ ನ ಸಈದ್ ಅಲ್ ಸುಲೈತಿ (Saeed Al Sulaiti) ಪ್ರಥಮ ಸ್ಥಾನ ಪಡೆದರೆ, ಇಟಲಿಯ ಸಾಸ್ಕ ಟೋಟರೋ (Saska Totaro) ಹಾಗೂ ಯುಎಇ ಪ್ರಜೆ  ಆರಿಫ್ ಅಲ್ ಮರ್ಝೂಕಿ (Aref Al Marzooqi)  ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗೆದ್ದರು. 

ರೇಸ್ ವೀಕ್ಷಿಸಲು ಬಂದಿದ್ದವರಿಗೆ ಸಂಗೀತ, ಅಕ್ರೋಬ್ಯಾಟಿಕ್ ಪ್ರದರ್ಶನ, ಫುಡ್ ಟ್ರಕ್ ಗಳು ಸಹಿತ ಹಲವು ಮನರಂಜನೆ ಇತ್ತು. ಜೊತೆಗೆ ಅಂತರ್ ರಾಷ್ಟ್ರೀಯ ರೇಸರ್ ಗಳನ್ನು ಭೇಟಿ ಮಾಡುವ ವಿಶೇಷ ಅವಕಾಶವೂ ಇತ್ತು.  

” ನಮ್ಮ ಕನಸು ನನಸಾಗಿ ಮೊದಲ ವರ್ಷದ ಸ್ಪರ್ಧೆ ಯಶಸ್ವಿಯಾಗಿ ನಡೆದಿರುವುದು ಅತ್ಯಂತ ಸಂತಸದ ಅನುಭವವಾಗಿದೆ. ನಮಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಡೀ ಯುಎಇಯಲ್ಲಿ ಸೂಪರ್ ಬೈಕ್ ರೇಸಿಂಗ್ ಕ್ಷೇತ್ರದಲ್ಲಿ ಇದು ಬಹಳ ದೊಡ್ಡ ಹೆಜ್ಜೆಯಾಗಲಿದೆ ಎಂಬ ಭರವಸೆ ನಮಗಿದೆ. ಮುಂದಿನ ವರ್ಷದಿಂದ ಇಡೀ ವಿಶ್ವದ ಗಮನ ಸೆಳೆಯುವ ರೋಮಾಂಚಕಾರಿ ರೇಸಿಂಗ್ ಸ್ಪರ್ಧೆಯಾಗಿ ಇದು ಮೂಡಿ ಬರಲಿದೆ. ಜೊತೆಗೆ ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೂ ಇದೊಂದು ದೊಡ್ಡ ವೇದಿಕೆಯಾಗಲಿದೆ” ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸ್ವತಃ ಖ್ಯಾತ ಅಂತರ್ ರಾಷ್ಟ್ರೀಯ ಬೈಕ್ ರೇಸರ್ ಕೂಡ ಆಗಿರುವ  ಡಿಎಸ್ ಬಿ ಕೆ ಸಹ ಸ್ಥಾಪಕ ನಾಸಿರ್ ಸಯ್ಯದ್ ಹೇಳಿದ್ದರು.  

” ಈ ಬಾರಿ ಸಿಕ್ಕಿರುವ ಪ್ರತಿಕ್ರಿಯೆ ನಮಗೆ ಬಹಳ ಖುಷಿ ನೀಡಿದೆ. ಇದು ಕ್ರೀಡೆಯ ಶಕ್ತಿ. ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಇದನ್ನು ನಡೆಸಲು ನಮಗೆ ಇದರಿಂದ ವಿಶ್ವಾಸ ಬಂದಿದೆ” ಎಂದು  ಡಿ ಎಸ್ ಬಿ ಕೆ ಸಹ ಸ್ಥಾಪಕ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಹೇಳಿದ್ದರು. 

ಮೊದಲ ಯಶಸ್ವಿ ರೇಸಿಂಗ್ ಇವೆಂಟ್ ಬಳಿಕ ಡಿಎಸ್ ಬಿಕೆ ಮತ್ತೆ  2023ರಲ್ಲಿ DSBK UAE NATIONAL CHAMPIONSHIP ಅನ್ನು ಯಶಸ್ವಿಯಾಗಿ ಆಯೋಜಿಸಿತು. 2024ರಲ್ಲಿ ಅದನ್ನು ಇನ್ನಷ್ಟು ವಿಸ್ತರಿಸಿ ಇಡೀ ಮಧ್ಯ ಪ್ರಾಚ್ಯ ಚಾಂಪಿಯನ್ ಶಿಪ್ ಆಗಿ ಆಯೋಜಿಸಿದೆ. ಅಕ್ಟೊಬರ್  2024ರಿಂದ ಎಪ್ರಿಲ್ 2025 ರವರೆಗೆ ಆರು ತಿಂಗಳು ನಡೆಯುವ ಈ ಚಾಂಪಿಯನ್ ಶಿಪ್ ನಲ್ಲಿ  ಅಮೇರಿಕ, ಯುಕೆ, ಇಟಲಿ, ಭಾರತ ಸಹಿತ ಜಗತ್ತಿನ ವಿವಿಧೆಡೆಯ 26 ರೇಸರ್ ಗಳು ಭಾಗವಹಿಸುತ್ತಿದ್ದಾರೆ.

Hot this week

Prakash Godwin Pinto elected president of KCWA for 2025-27

Kuwait: The Kuwait Canara Welfare Association (KCWA) elected its...

AATA organize Tulu Script learning workshop in America

The All America Tulu Association (AATA), a nonprofit organization...

ಯುಎಇ, ಸೌದಿ, ಬಹರೈನ್, ಖತರ್, ಕುವೈತ್’ನಲ್ಲಿ ಸಂಭ್ರಮದ ಈದ್‌ ಉಲ್‌ ಫಿತ್ರ್ ಆಚರಣೆ

ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್'ನಲ್ಲಿ...

ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರವಿವಾರ ಈದ್‌ ಉಲ್‌ ಫಿತರ್‌ ಆಚರಣೆ

ರಿಯಾದ್‌ : ಸೌದಿ ಅರೇಬಿಯಾದಲ್ಲಿ ಶನಿವಾರ ಸಂಜೆ ಶವ್ವಾಲ್‌ ಚಂದ್ರ ದರ್ಶನವಾದ...

Related Articles

Popular Categories