ದುಬೈ: 2034 ರ ಫಿಫಾ ವಿಶ್ವಕಪ್‌ಗೆ ಆತಿಥೇಯ ರಾಷ್ಟ್ರ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ರವರು ಸೌದಿ ಅರೇಬಿಯಾವನ್ನು ಅಭಿನಂದಿಸಿದ್ದಾರೆ. ಫುಟ್‌ಬಾಲ್‌ನ ಅಂತರಾಷ್ಟ್ರೀಯ ಆಡಳಿತ ಮಂಡಳಿ, ಫಿಫಾ ಬುಧವಾರ ಸೌದಿ ಅರೇಬಿಯಾ ವಿಶ್ವಕಪ್ ಆಯೋಜಿಸಲಿದೆ ಎನ್ನುವ ಸುದ್ದಿಯನ್ನು ಖಚಿತಪಡಿಸಿತ್ತು.
ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಫಿಪಾ ಇತ್ತೀಚೆಗೆ ಗಮನಾರ್ಹ ಬದಲಾವಣೆಗಳನ್ನು ತಂದಿದ್ದು, ಒಟ್ಟು 48 ರಾಷ್ಟ್ರಗಳು ವಿಶ್ವಕಪ್ ನಲ್ಲಿ ಭಾಗವಹಿಸಲಿದೆ. ಈ ಮೂಲಕ ಸೌದಿ ಅರೇಬಿಯಾವು ಅತೀದೊಡ್ಡ ಫುಟ್ಬಾಲ್ ವಿಶ್ವಕಪ್ ಅನ್ನು ಆಯೋಜಿಸುವ ಮೊದಲ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಸಭೆಯೊಂದರಲ್ಲಿ ಭಾಗವಹಿಸಿದ ಬಳಿಕ ಫಿಫಾದ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಈ ನಿರ್ಧಾರವನ್ನು ಪ್ರಕಟಿಸಿದರು.
2030 ಮತ್ತು 2034 ವಿಶ್ವಕಪ್‌ಗಳು ಪ್ರತಿಯೊಂದೂ ಒಂದೇ ಬಿಡ್ ಅನ್ನು ಹೊಂದಿದ್ದವು ಎಂದು ತಿಳಿದು ಬಂದಿದೆ. ಆದ್ದರಿಂದ ಒಕ್ಕೊರಳಿನಿಂದ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಯುಎಇಯ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಂ ಅವರು ಸೌದಿ ಅರೇಬಿಯಾದ ಮಹಾನ್ ಮಹತ್ವಾಕಾಂಕ್ಷೆಯನ್ನು ಹೊಗಳಿದರು.
ತಮ್ಮ ಟ್ವೀಟ್ ನಲ್ಲಿ ಶೈಖ್ ಮುಹಮ್ಮದ್ ರವರು, “ಈ ಮಹತ್ವದ ಸಾಧನೆಗಾಗಿ ನನ್ನ ಸಹೋದರ, ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ರನ್ನು ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರನ್ನು ಹಾಗೂ ಎಲ್ಲಾ ಸೌದಿ ನಾಗರಿಕರನ್ನು ನಾನು ಅಭಿನಂದಿಸುತ್ತೇನೆ. ಇದು ಇಡೀ ಅರಬ್ ಜಗತ್ತು, ಗಲ್ಫ್ ಮತ್ತು ವಿಶಾಲವಾದ ಇಸ್ಲಾಮಿಕ್ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
2030ರ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಸ್ಪೇನ್ ಮತ್ತು ಪೋರ್ಚುಗಲ್ ಜೊತೆಗೆ ಮೊರಾಕೊದ ರಾಜ ಮೊಹಮ್ಮದ್ VI ಕೂಡಾ ಸಜ್ಜಾಗಿದ್ದು, ಅವರನ್ನೂ ಅಭಿನಂದಿಸಿದರು. ಮೊರಾಕೊ, ಸ್ಪೇನ್ ಮತ್ತು ಪೋರ್ಚುಗಲ್‌ನ ಸಂಯೋಜಿತ ಪ್ರಸ್ತಾವನೆಯು 2030 ರ ವಿಶ್ವಕಪ್ ಮೂರು ಖಂಡಗಳು ಮತ್ತು ಆರು ರಾಷ್ಟ್ರಗಳಲ್ಲಿ ನಡೆಯುತ್ತದೆ.