ಬೆಂಕಿ ಬಸಣ್ಣ, ನ್ಯೂಯಾರ್ಕ್
ಫ್ಲೋರಿಡಾ: ಅಮೆರಿಕದ ಫ್ಲೋರಿಡಾ ರಾಜ್ಯದ ರಾಜಧಾನಿ ಟಲ್ಲಾಹಾಸ್ಸಿಯಲ್ಲಿ ಸರಕಾರದ ಮಟ್ಟದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.


ಟಲ್ಲಾಹಾಸ್ಸಿಯಲ್ಲಿರುವ ರಾಜ್ಯ ವಿಧಾನಸಭಾ ಭವನದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ದೀಪಾವಳಿ ಆಚರಣೆಯಲ್ಲಿ ಶಿಕ್ಷಣ ವಿಭಾಗದ ಕೌನ್ಸಲ್ ಹಾಗೂ ದೂತಾವಾಸದ ಆಡಳಿತ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು.


ರಾಜ್ಯದಲ್ಲಿ ಆಯ್ಕೆಯಾದ ಶಾಸಕರು, ಅಧಿಕಾರಿಗಳು, ಗಣ್ಯರು ಹಾಗೂ ಭಾರತೀಯ ವಲಸಿಗ ಸಮುದಾಯದ ಪ್ರಮುಖ ಸದಸ್ಯರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.



ಫ್ಲೋರಿಡಾ ರಾಜ್ಯ ಸೆನೇಟರ್ ಫೆಂಟ್ರಿಸ್ ಡ್ರಿಸ್ಕೆಲ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ದೀಪಾವಳಿ ಆಚರಣೆಯಲ್ಲಿ ಟಾಂಪ ಶ್ರಿಗಂಧ ಕನ್ನಡ ಕೂಟದ ಚೇರ್ಮ್ಯಾನ್, ಪದಾಧಿಕಾರಿಗಳು, ಸದಸ್ಯರು ಕನ್ನಡ ಸಮುದಾಯದ ಪರವಾಗಿ ಭಾಗವಹಿಸಿ, ಬೆಳಕಿನ ಹಬ್ಬದ ದೀಪ ಬೆಳಗಿಸುವ ಮೂಲಕ ಸಂಭ್ರಮಿಸಿದರು. ಚೇರ್ಮ್ಯಾನ್ ಪದ್ಮನಾಭ ಬೇಡರಹಳ್ಳಿ, ಟ್ರಸ್ಟಿ ಗಂಗಾಧರ ಗಂಗಾ, ಉಪಾಧ್ಯಕ್ಷ ಹರ್ಷಿತ್ ಗೌಡ, ವೀಣಾ ಗೌಡ, ರೂಪಾ ಗಂಗಾಧರ, ನವನೀತಾ ಗೌಡ ಪಾಲ್ಗೊಂಡಿದ್ದರು.
ಫ್ಲೋರಿಡಾ ರಾಜಧಾನಿಯ ಉನ್ನತ ಸಾಂಸ್ಥಿಕ ಕೇಂದ್ರದಲ್ಲಿ ಆಯೋಜಿಸಲಾಗದ ದೀಪಾವಳಿ ಆಚರಣೆಯು ದಶಕಗಳ ಹಿಂದಿನಿಂದ ಅಮೇರಿಕದಲ್ಲಿ ಬೆಳೆದು ಬಂದ ಭಾರತೀಯ ಸಮುದಾಯದ ದುಡಿಮೆ, ಕೊಡುಗೆ ಮತ್ತು ನಿಷ್ಠೆಗೆ ನೀಡಲಾದ ಗೌರವವಾಗಿದ್ದು, ನಮ್ಮ ಅಸ್ತಿತ್ವಕ್ಕೆ ದೊರೆತ ಘನತೆಯ ಸಂಕೇತವಾಗಿದೆ ಎಂದು ಅನಿವಾಸಿ ಕನ್ನಡಿಗರು ಈ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.


