ಯುಎಇಅಬುಧಾಬಿ ಕರ್ನಾಟಕ ಸಂಘದಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ; ಸವಿತಾ...

ಅಬುಧಾಬಿ ಕರ್ನಾಟಕ ಸಂಘದಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ; ಸವಿತಾ ನಾಯಕ್​ರಿಗೆ ‘ದ.ರಾ.ಬೇಂದ್ರೆ ಪ್ರಶಸ್ತಿ’ ಪ್ರದಾನ

ಅಬುಧಾಬಿ: ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಅಬುಧಾಬಿಯ ಗ್ಲೋಬಲ್ ಇಂಡಿಯನ್ ಸ್ಕೂಲ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಬಹಳ ವಿಜೃಂಭಣೆಯಿಂದ ಜರುಗಿತು.

ಅತಿಥಿ ಗಣ್ಯರ ಮತ್ತು ಅಬುಧಾಬಿ ಕರ್ನಾಟಕ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

‘ದ.ರಾ.ಬೇಂದ್ರೆ ಪ್ರಶಸ್ತಿ’ ಪ್ರದಾನ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರ ಸಮ್ಮುಖದಲ್ಲಿ ಯುಎಇಯಲ್ಲಿ ಕನ್ನಡಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ ಸಾಧಕರಿಗೆ, ಅಬುಧಾಬಿ ಕರ್ನಾಟಕದ ಸಂಘದಿಂದ ಪ್ರತಿ ವರ್ಷ ನೀಡುವ ಹೆಮ್ಮೆಯ ‘ದ.ರಾ.ಬೇಂದ್ರೆ ಪ್ರಶಸ್ತಿ’ಯನ್ನು ಕನ್ನಡ ಸಂಘ ಅಲ್ ಐನ್ ನ ಸವಿತಾ ನಾಯಕ್​ರಿಗೆ ನೀಡಿ ಗೌರವಿಸಲಾಯಿತು.

ಅಬುಧಾಬಿ ಕರ್ನಾಟಕ ಸಂಘದ ಹಿರಿಯ ಪದಾಧಿಕಾರಿ, ಲೇಖಕರಾಗಿರುವ ಮನೋಹರ್ ತೋನ್ಸೆಯವರು ಸನ್ಮಾನಿತರ ಪರಿಚಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ತಮ್ಮ ಅದ್ಭುತ ಜಾದೂ ಮೂಲಕ ನೆರೆದ ಜನರನ್ನು ಮನರಂಜಿಸಿದರು. ಈ ವೇಳೆ ಕುದ್ರೋಳಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಕರ್ನಾಟಕ ಸಂಘ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಾ, ಕನ್ನಡ ನುಡಿಗೆ ಸೇವೆಗೈದವರನ್ನು ನೆನಪಿಸಿಕೊಳ್ಳುತ್ತಾ ಅತಿಥಿಗಳನ್ನು ಸ್ವಾಗತಿಸಿದರು.

ಇತ್ತೀಚಿಗೆ ಅಗಲಿದ ಯುಎಇಯಲ್ಲಿ ನಾಟಕ ಮತ್ತು ಕನ್ನಡಕ್ಕೆ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪಯ್ಯಾರ್, ಸಾಲು ಮರದ ತಿಮಕ್ಕ, ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಅವರನ್ನು ನೆನಪಿಸಿಕೊಂಡು, ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

ಡಾ.ಬಿ.ಆರ್.ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ದುಬೈ, ಅಲ್ ಐನ್, ರಸ್ ಅಲ್ ಕೈಮಾ, ಹೀಗೆ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಿದರು. ಕನ್ನಡ ಭಾಷೆ ಅನಿವಾಸಿ ಮಕ್ಕಳಿಗೆ ತಲುಪಬೇಕೆನ್ನುವ ಆಶಯದೊಂದಿಗೆ ಅಬುಧಾಬಿಯಲ್ಲಿ ಉಚಿತ ಕನ್ನಡ ಕಲಿಕೆ ಮಾಡುವ ಜಯಲಕ್ಷ್ಮಿ ಭಟ್ ಅವರ ಕನ್ನಡ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಶೆಟ್ಟಿಯವರ ಅಮೃತ ಹಸ್ತದಿಂದ ಗೌರವ ಪ್ರಮಾಣ ಪತ್ರ ನೀಡಲಾಯಿತು. ಸರ್ವೋತ್ತಮ ಶೆಟ್ಟಿಯವರು, ಮಾತೃ ಭಾಷೆಯ ಕಲಿಕೆ ಎಲ್ಲ ಮಕ್ಕಳ ಹಕ್ಕು, ಕನ್ನಡ ಕಲಿಕೆ ಇನ್ನಷ್ಟು ಹೆಚ್ಚಲಿ ಎನ್ನುತ್ತಾ ಅಬುಧಾಬಿಯಲ್ಲಿ ಕನ್ನಡ ಕಲಿಸುವ ಸುರೇಶ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಗಳನ್ನು ಅಭಿನಂದಿಸಿದರು.

ಹತ್ತನೆಯ ಮತ್ತು ಹನ್ನೆರಡನೆಯ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪದಾಧಿಕಾರಿಗಳಾದ ಲೋಯಲ ಪಿಂಟೋ ಮತ್ತು ಅಲ್ತಾಫ್ ಅವರು ಮಕ್ಕಳ ಹೆಸರುಗಳನ್ನು ಓದಿ, ಮಕ್ಕಳನ್ನು ವೇದಿಕೆಗೆ ಕರೆ ತಂದರು.

ಅಬುಧಾಬಿಯ ಕನ್ನಡ ಕಲಿಕೆಯ ಮಕ್ಕಳೆಲ್ಲ ಸಮೂಹ ಗಾನ ಹಾಡಿ, ಸಭಿಕರಲ್ಲಿ ಕನ್ನಡದ ಕಿಚ್ಚನ್ನು ಹೆಚ್ಚಿಸಿದರು. ಅನಂತರ ರುಚಿಕರ ಮಧ್ಯಾಹ್ನದ ಭೋಜನ ನಡೆಯಿತು.

ಭೋಜನ ವಿರಾಮದ ನಂತರ, ಮಕ್ಕಳ ಸಮೂಹ ಗಾನ ನಡೆಯಿತು. ಅನಂತರ ರಾಜ್ಯೋತ್ಸವದ ಆಚರಣೆಯ ಮುಖ್ಯ ಆಕರ್ಷಣೆಯಾದ ಜಾನಪದ ನೃತ್ಯ ಸ್ಪರ್ಧೆ ಜರುಗಿತು. ಶ್ರುತಿ ಭಟ್ ಅವರು ಜಾನಪದ ನೃತ್ಯ ಸ್ಪರ್ಧೆಯ ನಿರೂಪಣೆ ಮಾಡಿ, ಸ್ಪರ್ಧೆಯ ವಿವರ ನೀಡಿದರು. ಯುಎಇಯ ಒಟ್ಟು ಎಂಟು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ಸ್ಥಳೀಯ ಪ್ರತಿಭೆಗಳ ಕಲಾವೈಭವದ ಅನಾವರಣವಾಯಿತು. ಒಂದು ತಂಡಕ್ಕಿಂತ ಇನ್ನೊಂದು ತಂಡ, ಬಹಳ ಅದ್ಭುತವಾಗಿ ನೃತ್ಯ ಮಾಡಿ, ಜನ ಮನ್ನಣೆಗೆ ಕಾರಣವಾಯಿತು.

ಸ್ವಸ್ತಿಕಾ ಮತ್ತು ತಂಡ ಅದ್ಭುತವಾದ ಜಾನಪದ ಸಮೂಹ ಗಾಯನ ಮಾಡಿದರು. ನಂತರ ಶೃತಿಕೀರ್ತಿ ತಂಡದವರಿಂದ ಸಮೂಹ ಗಾಯನ ನಡೆಯಿತು. ಬಳಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ಕೊನೆಯಲ್ಲಿ ಸರ್ವೋತ್ತಮ ಶೆಟ್ಟಿಯವರು ಕಾರ್ಯಕ್ರಮದ ರೂವಾರಿಗಳಾದ ಕರ್ನಾಟಕ ಸಂಘದ ಪದಾಧಿಕಾರಿಗಳಾದ ಮನೋಹರ್ ತೋನ್ಸೆ, ಸುಧೀರ್ ಶೆಟ್ಟಿ , ವಿಜಯ್ ರಾವ್, ಶ್ರೀಕೃಷ್ಣ ಕುಳಾಯಿ , ಲೋಯಲ ಪಿಂಟೋ , ಅಲ್ತಾಫ್ ಎಂ ಎಸ್ , ಶ್ರೀನಿವಾಸ ಅರಸ್, ಕೃಷ್ಣರಾಜ ರಾವ್, ಚೇತನ್ ಗೋಪಾಲ್ , ಸಂದೀಪ್ ರಾವ್ , ಯತಿರಾಜ್ ಶೆಟ್ಟಿ , ಉಣಕಲ್ ಈಶ್ವರ್ , ಚಂದ್ರು ಪೂಜಾರಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಭವಾನಿ ಶರ್ಮ ತಂದವರಿಂದ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ , ಅನಿವಾಸಿ ಕನ್ನಡಿಗರ ಸಮೂಹಗಾನದೊಂದಿಗೆ ಸಂಭ್ರಮ ರಂಗೇರಿತು. ವೀಣಾ ಮಲ್ಯ ಮತ್ತು ತಂಡದವರ ‘ಸುಂದರಿಯ ಮದುವೆ’ ಎಂಬ ಹಾಸ್ಯ ನಾಟಕ ಸಭಿಕರನ್ನು ನಗೆ ಕಡಲಿನಲ್ಲಿ ತೇಲಿಸಿತು. ಕರ್ನಾಟಕ ಸಂಘದ ಶ್ರೀಕೃಷ್ಣ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಶ್ರೀಕೃಷ್ಣ ಕುಳಾಯಿ

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories