ಸಲಾಲ: ಭಾರತೀಯ ನೌಕಾಪಡೆಯ ನೌಕಾಯಾನ ತರಬೇತಿ ಹಡಗು ಐಎನ್ಎಸ್ ಸುದರ್ಶಿನಿ, ಒಮಾನ್ ನ ಸಲಾಲ ಬಂದರಿಗೆ ಭೇಟಿ ಕೊಟ್ಟಿತ್ತು. ಈ ವೇಳೆ ಸಾರ್ವಜನಿಕರಿಗಾಗಿ ಮಧ್ಯಾಹ್ನ 1ರಿಂದ ಸಂಜೆ 5 ಗಂಟೆಯವರೆಗೆ ಆಸಕ್ತ ಸಂದರ್ಶಕರಿಗೆ ಐಎನ್ಎಸ್ ಸುದರ್ಶಿನಿ ವೀಕ್ಷಿಸುವ ಅವಕಾಶ ಒದಗಿಸಲಾಯಿತು. ಈ ಮೂಲಕ ಭಾರತದ ಶ್ರೀಮಂತ ಸಮುದ್ರಯಾನ ಪರಂಪರೆಯ ಸಂಕೇತವಾದ ಈ ಹೆಮ್ಮೆಯ ಹಡಗನ್ನು ಹತ್ತಿ ವೀಕ್ಷಿಸುವು ಅಪರೂಪದ ಅವಕಾಶ ಇಲ್ಲಿನ ಭಾರತೀಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ದೊರೆಯಿತು. ಈ ವೇಳೆ ಒಮಾನ್ ನ ಸಲಾಲದಲ್ಲಿರುವ ಭಾರತೀಯರ ತಂಡವು ಈ ಹಡಗಿಗೆ ಭೇಟಿ ಕೊಟ್ಟಿತು.

‘ಲೋಕಾಯನ್ 26’ ಎಂಬ 10 ತಿಂಗಳ ಜಾಗತಿಕ ನೌಕಾಯಾನ ಸಿದ್ಧತೆಯ ಭಾಗವಾಗಿ ಈ ಭೇಟಿ ಕಾರ್ಯಕ್ರಮವು ನಡೆದಿದ್ದು, ಈ ನೌಕಾಯಾನದಲ್ಲಿ ಐಎನ್ಎಸ್ ಸುದರ್ಶಿನಿ ಸುಮಾರು 13 ದೇಶಗಳ 18 ಬಂದರುಗಳನ್ನು ಹಾದು, 22,000 ನಾಟಿಕಲ್ ಮೈಲಿ ದೂರವನ್ನು ಕ್ರಮಿಸಲಿದೆ.

ಈ ಸಂದರ್ಭದಲ್ಲಿ ನಡೆದ ಸಂವಾದದ ವೇಳೆ ನೌಕಾಪಡೆಯ ಅಧಿಕಾರಿಗಳು ಹಡಗಿನ ಇತಿಹಾಸ, ತರಬೇತಿ ಉದ್ದೇಶಗಳು ಮತ್ತು ಫ್ರಾನ್ಸ್ ನ ‘ಎ ಸ್ಕೇಲ್ ಎ ಸೆಟೆ’ ಹಾಗೂ ನ್ಯೂಯಾರ್ಕ್ ನ ‘ಸೇಲ್ 250’ ನಲ್ಲಿ ಪಾಲ್ಗೊಳ್ಳುವ ಕುರಿತು ಸಂದರ್ಶಕರಿಗೆ ಮಾಹಿತಿ ನೀಡಿದರು.
ಈ ಯೋಜನೆಯು ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ 200ಕ್ಕೂ ಹೆಚ್ಚು ಕೆಡೆಟ್ ಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ನೌಕಾ ಪರಂಪರೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ನಡೆದ ಔಪಚಾರಿಕ ಮಾತುಕತೆ ಕಾರ್ಯಕ್ರಮದಲ್ಲಿ, ಸಲಾಲ ಭಾರತೀಯ ಸೋಷಿಯಲ್ ಕ್ಲಬ್ ನ ಅಧ್ಯಕ್ಷರಾದ ಡಾ.ರಾಕೇಶ್ ಝಾ ಮತ್ತು ಕರ್ನಾಟಕ ವಿಭಾಗದ ಸಂಚಾಲಕರಾದ ರಾಮದಾಸ್ ಕಾಮತ್ ಅವರು ಹಡಗಿನ ಕ್ಯಾಪ್ಟನ್ ಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇದಕ್ಕೆ ಪ್ರತಿಯಾಗಿ ಕ್ಯಾಪ್ಟನ್ ಅವರು ಹಡಗಿಗೆ ಸಂಬಂಧಿಸಿದ ಸ್ಮರಣಿಕೆಗಳನ್ನು ನೀಡಿದರು.

ಔಪಚಾರಿಕತೆಯ ಹೊರತಾಗಿ ಕೆಲವು ಭಾವುಕ ಕ್ಷಣಗಳಿಗೂ ಈ ಭೇಟಿ ಸಾಕ್ಷಿಯಾಯಿತು. ಹಡಗಿನ ಕ್ಯಾಪ್ಟನ್ ಅವರು, ಪುಟ್ಟ ಮಕ್ಕಳು ಸೇರಿದಂತೆ ಸಂದರ್ಶಕರೊಂದಿಗೆ ಆತ್ಮೀಯವಾಗಿ ಫೋಟೋ ತೆಗೆಸಿಕೊಂಡರು. ಮಾತುಕತೆಯ ವೇಳೆ, ಕ್ಯಾಪ್ಟನ್ ಅವರಿಗೆ 8 ತಿಂಗಳ ಅವಳಿ ಮಕ್ಕಳಿರುವುದು ಮತ್ತು ವೃತ್ತಿಜೀವನದ ಜವಾಬ್ದಾರಿಯಿಂದಾಗಿ ಅವರು ಕೇವಲ ವೀಡಿಯೋ ಕರೆಗಳ ಮೂಲಕ ಮಾತ್ರ ಮಕ್ಕಳನ್ನು ನೋಡುತ್ತಿದ್ದಾರೆ ಎಂಬ ಭಾವಪೂರ್ಣ ವಿಷಯ ತಿಳಿಯಿತು. ದೇಶ ಸೇವೆಗಾಗಿ ನೌಕಾ ಅಧಿಕಾರಿಗಳು ಮತ್ತು ಅವರ ಕುಟುಂಬಗಳು ಮಾಡುವ ವೈಯಕ್ತಿಕ ತ್ಯಾಗವನ್ನು ಅವರ ಮಾತುಗಳು ತೋರಿಸಿದವು.

ಅನೇಕ ಸಂದರ್ಶಕರಿಗೆ ಈ ಭೇಟಿಯು ಕೇವಲ ಪ್ರವಾಸವಾಗಿರದೆ, ಶಿಸ್ತು, ಪರಂಪರೆ ಮತ್ತು ಸಮವಸ್ತ್ರದ ಹಿಂದಿರುವ ತ್ಯಾಗದ ಕಥೆಗಳ ಮೇಲೆ ಬೆಳಕು ಚೆಲ್ಲುವ ಅವಿಸ್ಮರಣೀಯ ಕ್ಷಣಗಳಾಗಿ ಮೂಡಿಬಂತು. ಈ ಕಾರ್ಯಕ್ರಮವು ನೌಕಾಪಡೆಯ ಕಾರ್ಯಾಚರಣೆಗಳ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಒಮಾನ್ ನಲ್ಲಿರುವ ಭಾರತೀಯ ಸಮುದಾಯದ ನಡುವೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬಂಧಗಳನ್ನು ಬಲಪಡಿಸಿತು.
ಭಾರತೀಯ ನೌಕಾಪಡೆಯ ಕಾರ್ಯಕ್ಷಮತೆ ಮತ್ತು ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಸಿಬ್ಬಂದಿಗಳ ಮೌನ ತ್ಯಾಗವನ್ನು ಶ್ಲಾಘಿಸುವ ಮೂಲಕ ಹಾಗೂ ಹೆಮ್ಮೆ ಮತ್ತು ಕೃತಜ್ಞತೆಯ ಭಾವನೆಗಳೊಂದಿಗೆ ಈ ಭೇಟಿಯು ಮುಕ್ತಾಯಗೊಂಡಿತು.



