ಯುಎಇದುಬೈನಲ್ಲಿ 'ಗಂಧರ್ವ ಗಮಕ ಶಾಲೆ' ಉದ್ಘಾಟನೆ

ದುಬೈನಲ್ಲಿ ‘ಗಂಧರ್ವ ಗಮಕ ಶಾಲೆ’ ಉದ್ಘಾಟನೆ

ದುಬೈ: ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ಅವರ ಶಿಷ್ಯ ಪರಂಪರೆಯನ್ನು ಮುಂದುವರಿಸುವ ಮಹತ್ವದ ಹೆಜ್ಜೆಯಾಗಿ ದುಬೈಯಲ್ಲಿ’ಗಂಧರ್ವ ಗಮಕ ಶಾಲೆ’ಯನ್ನು ರವಿವಾರ ಸಂಜೆ ಅತ್ಯಂತ ಭವ್ಯತೆ ಹಾಗೂ ಸಾಂಸ್ಕೃತಿಕ ಘನತೆಯೊಂದಿಗೆ ದುಬೈಯ ಅಲ್ ಖಿಸೆಸ್ಸ್ ನಲ್ಲಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಆರಂಭವನ್ನು ಗಂಧರ್ವ ಗಮಕ ಶಾಲೆಯ ಶಿಷ್ಯವೃಂದದ ಮಂಗಲಾಚರಣೆಯೊಂದಿಗೆ ನೆರವೇರಿಸಲಾಯಿತು. ನಂತರ ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಮಹಾಕವಿ ಕುಮಾರವ್ಯಾಸ ಮತ್ತು ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗಣ್ಯ ಅತಿಥಿಗಳು ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಂಧರ್ವ ಗಮಕ ಶಾಲೆ ದುಬೈಯ ಶಿಕ್ಷಕಿ ಹಾಗೂ ನಿರ್ದೇಶಕಿ ರೇವತಿ ಚಿದಂಬರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪದ್ಮಶ್ರೀ ಕೇಶವಮೂರ್ತಿ ಅವರ ಕನಸಿನ ಗಮಕ ಶಾಲೆ ಈಗಾಗಲೇ ಕರ್ನಾಟಕದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಶಾಖೆಯನ್ನು ವಿದೇಶದಲ್ಲಿಯೂ ಆರಂಭಿಸಿರುವುದು ಅಪಾರ ಸಂತಸದ ಸಂಗತಿ ಎಂದರು.

ಪುರಾತನ ಹಾಗೂ ಅಪೂರ್ವವಾದ ಗಮಕ ಕಲೆಯ ಮಹತ್ವ, ಅದರ ಮೂಲಕ ದೊರೆಯುವ ಜ್ಞಾನ ಮತ್ತು ವಿವೇಕ ಅನಿವಾಸಿ ಕನ್ನಡಿಗರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದಲೇ ಈ ಶಾಲೆಯನ್ನು ಆರಂಭಿಸಲಾಗಿದೆ. ದೇಶ–ಭಾಷೆಯ ಮಿತಿಗಳನ್ನು ಮೀರಿ ಗಮಕ ಕಲೆಯ ಪರಿಚಯ ಎಲ್ಲ ಆಸಕ್ತರಿಗೂ ದೊರಕಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಗಂಧರ್ವ ಗಮಕ ಶಾಲೆ ದುಬೈಯನ್ನು ಸಾಮಾಜಿಕ ಕಾರ್ಯಕರ್ತ ಮೋಹನ್ ನರಸಿಂಹಮೂರ್ತಿ ಲೋಕಾರ್ಪಣೆಗೊಳಿಸಿ, ಶಾಲೆಯ ಯಶಸ್ಸಿಗಾಗಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ದುಬೈಯ ಖ್ಯಾತ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಂಘಟಕ ಡಾ.ವಿಜಯ್ ಗುಜ್ಜರ್ ಅವರು ಮಾತನಾಡಿ, ವಿದೇಶದಲ್ಲಿಯೂ ಕನ್ನಡದ ಕಲೆ ಮತ್ತು ಸಂಸ್ಕೃತಿ ಅರಳುತ್ತಿರುವುದು ಹೆಮ್ಮೆಯ ವಿಷಯ. ಅದರಲ್ಲೂ ಪ್ರಾಚೀನ ಹಾಗೂ ವಿಶಿಷ್ಟ ಕಲೆಯಾದ ಗಮಕವನ್ನು ಕಲಿಸುವ ಶಾಲೆ ಆರಂಭವಾಗಿರುವುದು ಅಪಾರ ಸಂತೋಷವನ್ನುಂಟುಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸಂಘ ದುಬೈ ಹಾಗೂ ಕನ್ನಡ ಪಾಠಶಾಲೆ ದುಬೈಯ ಅಧ್ಯಕ್ಷರಾದ ಶಶಿಧರ ನಾಗರಾಜಪ್ಪ ಮಾತನಾಡಿ, ಮಾತೃಭಾಷೆ, ಸಂಸ್ಕೃತಿ ಮತ್ತು ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪೋಷಕರ ಮಹತ್ವದ ಕರ್ತವ್ಯ. ಕೇವಲ ಶಾಲಾ ಶಿಕ್ಷಣದಿಂದ ಸಾಕ್ಷರತೆ ಮಾತ್ರ ಸಾಕಾಗುವುದಿಲ್ಲ, ಮಕ್ಕಳನ್ನು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ದುಬೈ ಕನ್ನಡಿಗರಿಗೆ ತಮ್ಮ ಮಕ್ಕಳಿಗೆ ಉತ್ತಮ ಸಾಂಸ್ಕೃತಿಕ ಅವಕಾಶಗಳು ದೊರೆಯುತ್ತಿರುವುದು ಸಂತಸದ ಸಂಗತಿ. ಕನ್ನಡ ಪಾಠಶಾಲೆಯ ಮೂಲಕ ಗಮಕ ಕಲಿಕೆ ಮತ್ತು ಪ್ರದರ್ಶನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಕರ್ನಾಟಕದಿಂದ ಆಗಮಿಸಿದ ಖ್ಯಾತ ಗಮಕಿ ಪ್ರಸಾದ್ ಭಾರಧ್ವಾಜ್ ಅವರು ಇತ್ತೀಚೆಗೆ 24 ಗಂಟೆಗಳ ಕಾಲ ಅವಿರತ ಗಮಕ ಗಾಯನ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿರುವ ಅನನ್ಯ ಸಾಧನೆಗಾಗಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಿಕ್ಷಣ ತಜ್ಞರು, ಬಹುಭಾಷಾ ಪಾಂಡಿತ್ಯ ಹೊಂದಿದ ಹಾಗೂ ಹೆಸರಾಂತ ಗಮಕ ವ್ಯಾಖ್ಯಾನಕಾರರಾದ ಎಂ.ಸಿ. ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಾಸ್ತ್ರೀಯ ಸಂಗೀತಗಾರ್ತಿ ವಿದುಷಿ ಸುಮಾ ನಾರಾಯಣ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಮಕ ಪರಂಪರೆ, ಕನ್ನಡದಲ್ಲಿ ಪ್ರಚಲಿತಗೊಂಡ ಚಂಪೂ ಕಾವ್ಯ ಮತ್ತು ಅದನ್ನು ರಾಗ–ಭಾವಬದ್ಧವಾಗಿ ಪ್ರಸ್ತುತಪಡಿಸುವ ವೈಶಿಷ್ಟ್ಯವನ್ನು ವಿಶ್ಲೇಷಿಸಿದರು.

ಈ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಖ್ಯಾತಿಗೊಳಿಸಿದ ದಿವಂಗತ ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ಅವರ ಅಪಾರ ಸಾಧನೆ, ಪರಿಶ್ರಮ ಹಾಗೂ ಪಾಂಡಿತ್ಯವನ್ನು ಸ್ಮರಿಸಿ ಮಾತನಾಡಿದರು.

ರೇವತಿ ಚಿದಂಬರ ಹಾಗೂ ಪ್ರಸಾದ್ ಭಾರಧ್ವಾಜ್ ಅವರು ಸುಶ್ರಾವ್ಯವಾಗಿ ಗಮಕ ವಾಚನ ಮಾಡಿದರೆ, ಅದನ್ನು ಎಂ.ಸಿ. ಪ್ರಕಾಶ್ ಅವರು ರಸವತ್ತಾಗಿ, ಕಣ್ಣಿಗೆ ಕಟ್ಟುವಂತೆ ವ್ಯಾಖ್ಯಾನಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮವನ್ನು ಆರತಿ ಅಡಿಗ ಅವರು ನಿರೂಪಿಸಿದರು. ಸುಬ್ರಮಣ್ಯ, ರವಿ ಹಿರಿಸಾವೆ, ಅಕ್ಷತಾ, ಜಗನ್ನಾಥ್ ಬೀರೂರು ಹಾಗೂ ಗಂಧರ್ವ ಗಮಕ ಶಾಲೆಯ ತಂಡದವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಲಕ್ಷ್ಮಿ ನಟರಾಜ್ ವಂದಿಸಿದರು.

Hot this week

ಯುರೋಪಿನಾದ್ಯಂತ ಭಾರತೀಯ ಕಲಾಪ್ರಕಾರಗಳಿಗೆ ಆಸರೆಯಾಗಿರುವ ‘ಬೆಲ್ಜಿಯಂ ಕಲಾ ವೇದಿಕೆ’

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ದೂರದ ಯುರೋಪಿನ ನೆಲದಲ್ಲಿ ಭಾರತೀಯ ಕಲಾಪ್ರಕಾರಗಳನ್ನು,...

55th International Cultural Fest and Cultural Exchange Programme concludes in Dubai

Dubai, July 26: The 55th International Cultural Fest and...

ಖತರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಖತರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ...

ಯಕ್ಷಗಾನ ಕಲಾವಿದ ವಾಸು ಬಾಯರುಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ...

Related Articles

Popular Categories