ಫ್ಲೋರಿಡಾ: ಆಲ್ ಅಮೇರಿಕ ತುಳು ಅಸೋಸಿಯೇಶನ್ (AATA) ಹಾಗೂ ಬಂಟ್ಸ್ ಅಸೋಸಿಯೇಶನ್ ಆಫ್ ನಾರ್ತ್ ಅಮೇರಿಕ (BANA) ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ‘ಬಲೆ ತುಳು ಪಾತೆರ್ಗ’ ತರಗತಿ–2025’ರ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ zoom ವೇದಿಕೆಯಲ್ಲಿ ಆಯೋಜಿಸಲಾಯಿತು.
ಇಟಲಿಯಲ್ಲಿ ನೆಲೆಸಿರುವ ಖ್ಯಾತ ತುಳು ಪಂಡಿತ ಕೌಡೂರ್ ನಾರಾಯಣ ಶೆಟ್ಟಿ ಹಾಗೂ ಉತ್ತರ ಕರೋಲೈನಾದ AATA ಜತೆ ಕಾರ್ಯದರ್ಶಿ ರಂಜನಿ ಅಸೈಗೋಳಿ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭವನ್ನು ಸಂಪನ್ನಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು AATA ಅಧ್ಯಕ್ಷೆ ಶ್ರೀವಳ್ಳಿ ರೈ ಮಾರ್ಟೆಲ್ ವಹಿಸಿದ್ದರು. ಈ ಸಂದರ್ಭದಲ್ಲಿ 25 ವಿದ್ಯಾರ್ಥಿಗಳು ಬಲೆ ತುಳು ಪಾತೆರ್ಗ ತರಗತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.
ಮುಖ್ಯ ಭಾಷಣದಲ್ಲಿ ಕೌಡೂರ್ ನಾರಾಯಣ ಶೆಟ್ಟಿ ಅವರು ತುಳು ಭಾಷೆಯ ಸಮೃದ್ಧಿ, ಇತಿಹಾಸ ಹಾಗೂ ವೈಶಿಷ್ಟ್ಯತೆಯನ್ನು ಆಳವಾಗಿ ವಿವರಿಸಿ, ನಮ್ಮ ಭಾಷಾ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯತೆಯನ್ನು ಮನದಟ್ಟಾಗಿ ವಿವರಿಸಿದರು. ರಂಜನಿ ಅಸೈಗೋಳಿ ಅವರು ವಿದ್ಯಾರ್ಥಿಗಳು ಯಾವುದೇ ಸಂಕೋಚವಿಲ್ಲದೆ ತುಳು ಮಾತನಾಡಬೇಕು ಎಂದು ಪ್ರೇರಣಾದಾಯಕವಾಗಿ ಕರೆ ನೀಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶ್ರೀವಲ್ಲಿ ರೈ ಮಾರ್ಟೆಲ್ ಅವರು ಪದವಿ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸಿದರು. ತುಳು ಭಾಷೆಯ ಉಳಿವು ಮನೆಮಾತಿನಿಂದಲೇ ಸಾಧ್ಯವೆಂದು ಹೇಳಿ, ಎಲ್ಲರೂ ತಮ್ಮ ಮನೆಗಳಲ್ಲಿ ತುಳುವನ್ನು ಮಾತನಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಸಾಂಸ್ಕೃತಿಕ ವಿಭಾಗವು ಅತ್ಯಂತ ಮನಮೋಹಕವಾಗಿತ್ತು. ವಿದ್ಯಾರ್ಥಿನಿ ನಿರ್ಮಲ್ ಕುಮಾರಿ ಅವರು ಸುಂದರವಾದ ಕೀರ್ತನೆಯನ್ನು ಪ್ರಸ್ತುತಪಡಿಸಿ ತರಗತಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಿಯಾ ಮತ್ತು ಶೋನಿತ್ ಅವರು ಸಂಸ್ಕೃತ ಶ್ಲೋಕಗಳನ್ನು ಪಠಿಸಿ ತಮ್ಮ ಕಲಿಕಾ ಅನುಭವದ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾತಿ ಶೆಟ್ಟಿ, ವಿವಾನ್ ಶೆಟ್ಟಿ, ಪೃಥ್ವಿ ಶೆಟ್ಟಿ ಮತ್ತು ಅನಿಲ್ ಶೆಟ್ಟಿ ಅವರು ಕೂಡ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಜೂಹಿ ಹೆಗಡೆ ಅವರು ಭಕ್ತಿಭರಿತ ಪ್ರಾರ್ಥನೆಯನ್ನು ಸಲ್ಲಿಸಿ, ಬಲೆ ತುಳು ಪಾತೆರ್ಗ ತರಗತಿಯ ವಿದ್ಯಾರ್ಥಿನಿಯಾಗಿ ತಮ್ಮ ಅನುಭವವನ್ನು ವಿವರಿಸಿದರು.
ಕಾರ್ಯಕ್ರಮದ ನಿರೂಪಕರಾಗಿಯೂ ಕಾರ್ಯನಿರ್ವಹಿಸಿದ ಹೃದಾನ್ ಗೌತಮ್ ಶೆಟ್ಟಿ ಅವರು, ಈ ಸಮೃದ್ಧ ಕಲಿಕಾ ಪಯಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ BANA ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದ ಎಲ್ಲರ ತಂಡಭಾವನೆ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು.
ಶರತ್ ಕುಮಾರ್ (ಬಾಸ್ಟನ್), ಮೋಹನ್ ಚಂದ್ರ ಕೆ.ಪಿ. (ಕ್ಯಾಲಿಫೋರ್ನಿಯಾ), ರಿತೇಶ್ ಶೆಟ್ಟಿ (ಇಂಡಿಯಾನಾಪೊಲಿಸ್), ಸುಧರ್ಶನ ಶೆಟ್ಟಿ (ಕೆನಡಾ), ಡಾ. ರತ್ನಾಕರ ಶೇರಿಗಾರ್ (ವರ್ಜೀನಿಯಾ), ಪೂಜಾ ಶೆಟ್ಟಿ (ಬಾಸ್ಟನ್), ಅಟ್ಲಾಂಟಾ ದ ಸಂತೋಷ್ ಶೆಟ್ಟಿ , ಶಿರಿಶ್ ಶೆಟ್ಟಿ, ಸುದೀಪ್ ಶೆಟ್ಟಿ ಐಲೇಶಾ ಶಾಂತರಾಮ ಶೆಟ್ಟಿ, ಚಂದ್ರಹಾಸ ಶೆಟ್ಟಿ (ಒಮಾನ್) ಹಾಗೂ ಮಯಿರ್ ಸಲಿಯನ್ನಾಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, AATA ಸಂಸ್ಥೆಯ ಪ್ರಯತ್ನಗಳು ಮತ್ತು ಮುಂದಾಳತ್ವಗಳನ್ನು ಪ್ರಶಂಸಿಸಿದರು.
ಶಿಕ್ಷಕರಾದ ಪ್ರಸನ್ನ ಲಕ್ಷ್ಮಣ್, ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿ ಅತಿಥಿಗಳ ಪರಿಚಯವನ್ನು ನೀಡಿದರು. ಪ್ರಭಾಕರ್ ಭಟ್ ಮತ್ತು ಸಂಧ್ಯಾ ಚಿದಾನಂದ ಅವರು ತರಗತಿಯ ಯಶಸ್ಸಿನ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಡಾ. ಜಗದೀಶ್ ಅವರು ಸಭಿಕರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ಪರಿಣಾಮದ ಕುರಿತು ಮಾತನಾಡಿದರು. ಶಿಕ್ಷಕರಾದ ರೇಶ್ಮಾ ಚೆಟ್ಟಿಯಾರ್ ಮತ್ತು ಧ್ಯಾನ ಚೆಟ್ಟಿಯಾರ್ ಅವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಲೆ ತುಳು ಪಾತೆರ್ಗ ತರಗತಿಯ ಮುಖ್ಯ ಸಂಯೋಜಕರಾದ, AATA ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, AATA, BANA, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ಬೆಂಬಲಿಗರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

