ಒಮಾನ್ಗಲ್ಫ್ ಸಂಘರ್ಷದ ನಡುವೆಯೂ ಪ್ರಯಾಣಿಕರಿಗೆ 'ಓಯಸಿಸ್' ಆಗಿರುವ ಒಮಾನ್!

ಗಲ್ಫ್ ಸಂಘರ್ಷದ ನಡುವೆಯೂ ಪ್ರಯಾಣಿಕರಿಗೆ ‘ಓಯಸಿಸ್’ ಆಗಿರುವ ಒಮಾನ್!

ಮಸ್ಕತ್: ಇರಾನ್–ಅಮೇರಿಕ ಸಂಘರ್ಷದ ಪರಿಣಾಮವಾಗಿ ಮಧ್ಯಪ್ರಾಚ್ಯದ ವಾಯುಪ್ರದೇಶದಲ್ಲಿ ಅನಿಶ್ಚಿತತೆ ಉಂಟಾದ ಹಿನ್ನೆಲೆಯಲ್ಲಿ ಕೆಲವು ಗಲ್ಫ್ ರಾಷ್ಟ್ರಗಳ ವಿಮಾನಯಾನ ಸೇವೆಗಳು ಅಡಚಣೆಯನ್ನು ಎದುರಿಸುತ್ತಿವೆ. ಈ ಸಂದರ್ಭದಲ್ಲಿ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವ ಅನೇಕ ಪ್ರಯಾಣಿಕರಿಗೆ ಒಮಾನ್ ದೇಶವು ಸುರಕ್ಷಿತ ಪ್ರಯಾಣದ “ಓಯಸಿಸ್” ಆಗಿ ಪರಿಣಮಿಸಿದೆ.

ವಾಯುಪ್ರದೇಶದ ನಿರ್ಬಂಧಗಳು ಹಾಗೂ ಭದ್ರತಾ ಕಾರಣಗಳಿಂದ ಕೆಲವು ರಾಷ್ಟ್ರಗಳ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಹಾರಾಟದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿಕೊಂಡಿರುವ ಸಂದರ್ಭದಲ್ಲೇ, ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಸಂಚಾರ ಕೇಂದ್ರವಾಗಿ ಬೆಳೆಯುತ್ತಿದೆ. ಅನೇಕ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಹಾರಾಟಗಳನ್ನು ಮಸ್ಕತ್ ಮೂಲಕ ಮುಂದುವರಿಸುತ್ತಿವೆ.
ಲಂಡನ್ ಹೀಥ್ರೂ ಸೇರಿದಂತೆ ಯುರೋಪಿನ ಪ್ರಮುಖ ನಗರಗಳಿಗೆ ವಿಶೇಷ ವಿಮಾನ ಸೇವೆಗಳು ಮಸ್ಕತ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಬ್ರಿಟಿಷ್ ಏರ್‌ವೇಸ್, ಖತರ್ ಏರ್‌ವೇಸ್ ಸೇರಿದಂತೆ ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳು ತಮ್ಮ ಕೆಲವು ಹಾರಾಟಗಳನ್ನು ಮಸ್ಕತ್ ಮೂಲಕ ನಡೆಸುತ್ತಿರುವುದು ಗಮನಾರ್ಹ.

ಒ ಮಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಒಮಾನ್ ಏರ್ ಕೂಡ ತನ್ನ ಸೇವೆಗಳನ್ನು ವಿಸ್ತರಿಸಿದ್ದು, ಮಸ್ಕತ್‌ನಲ್ಲಿರುವ ತನ್ನ ಕೇಂದ್ರದಿಂದ ಲಂಡನ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಪ್ರಮುಖ ನಗರಗಳಿಗೆ ಹೆಚ್ಚುವರಿ ವಿಮಾನಗಳನ್ನು ನಿಯೋಜಿಸಿದೆ. ಪ್ರಯಾಣಿಕರ ಹೆಚ್ಚಿದ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಮಸ್ಕತ್ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಮಾರಾಟಕ್ಕಾಗಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿದೆ ಹಾಗೂ ನಿರ್ಗಮನ ವ್ಯವಸ್ಥೆಯನ್ನೂ ಸುಗಮಗೊಳಿಸಲಾಗಿದೆ.

ಒಮಾನ್ ಅಬ್ಸರ್ವರ್ ಪತ್ರಿಕೆಯ ವರದಿ ಪ್ರಕಾರ, ಮಾರ್ಚ್ 9ರ ವರೆಗೆ ಮಸ್ಕತ್ ವಿಮಾನ ನಿಲ್ದಾಣದಿಂದ ಸುಮಾರು 80 ಹೆಚ್ಚುವರಿ ವಿಮಾನ ಹಾರಾಟಗಳು ನಡೆದಿದ್ದು, ಸುಮಾರು 97 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಸುಗಮ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾಮಾನ್ಯವಾಗಿ ಗಲ್ಫ್ ಒಳನಾಡು ಮಾರ್ಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆಲವು ವಿಮಾನಗಳು ಹಾಗೂ ಸಿಬ್ಬಂದಿಯನ್ನು ಈಗ ಅಂತಾರಾಷ್ಟ್ರೀಯ ಹಾರಾಟಗಳಿಗೆ ಮರುನಿಯೋಜಿಸಲಾಗಿದೆ ಎಂದು ಒಮಾನ್ ಏರ್ ತಿಳಿಸಿದೆ.

ಇದೇ ವೇಳೆ ಏರ್ ಇಂಡಿಯಾ ಕೂಡ ಹೆಚ್ಚುವರಿ ವಿಮಾನ ಸೇವೆಗಳನ್ನು ಒದಗಿಸುತ್ತಿದ್ದು, ಮಾರ್ಚ್ 10ರಿಂದ 18ರವರೆಗೆ 9 ಮಾರ್ಗಗಳಲ್ಲಿ ಸುಮಾರು 78 ಹೆಚ್ಚುವರಿ ವಿಮಾನಗಳನ್ನು ಕಾರ್ಯನಿರ್ವಹಿಸಲಿದೆ. ಮಂಗಳೂರು–ಮಸ್ಕತ್ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೆಚ್ಚಿಸಲಾಗಿದೆ.
ಇನ್ನೊಂದೆಡೆ, ಯುಎಇಯ ವಿವಿಧ ನಗರಗಳಿಂದ ಪ್ರಯಾಣಿಸಲು ಬುಕ್ ಮಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಭಾರತಕ್ಕೆ ಪ್ರಯಾಣಿಸಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರುಬುಕಿಂಗ್ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಲಾಗಿದೆ.

ದುಬೈ, ಸೌದಿ ಅರೇಬಿಯಾ ಹಾಗೂ ಇತರ ಗಲ್ಫ್ ರಾಷ್ಟ್ರಗಳಿಂದ ಅನೇಕ ಪ್ರಯಾಣಿಕರು ಮಸ್ಕತ್ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ. ಕೆಲ ಕನ್ನಡಿಗ ಪ್ರಯಾಣಿಕರು ಹಂಚಿಕೊಂಡ ಮಾಹಿತಿಯ ಪ್ರಕಾರ, ಮಸ್ಕತ್ ಇದೀಗ ಗಲ್ಫ್ ಪ್ರದೇಶದಲ್ಲಿ ಪ್ರಮುಖ ಟ್ರಾನ್ಸಿಟ್ ಕೇಂದ್ರವಾಗಿ ಪರಿಣಮಿಸಿದೆ. ಮಂಗಳೂರು, ಕೇರಳ ಮೂಲಕ ಮಸ್ಕತ್ ಪ್ರಯಾಣಿಸಿದ ದುಬೈ ಪ್ರಯಾಣಿಕರು ಒಮಾನ್ ಟ್ಯಾಕ್ಸಿ ಮಾಲಕರು ದುಬೈ… ದುಬೈ ಎಂದು ಕೂಗಿ ಕರೆಯವ ಸನ್ನಿವೇಶ ಮಸ್ಕತ್ ಏರ್ ಪೋರ್ಟ್ ನಲ್ಲಿ ಕಾಣಬಹುದಾಗಿದೆ.

ಪ್ರಯಾಣಿಕರಿಗೆ ಅನುಕೂಲವಾಗುವಂತೆ ದುಬೈ ಸರಕಾರವು ವೀಸಾ ಹಾಗೂ ಗಡಿಪ್ರದೇಶದ ಪ್ರಯಾಣ ವ್ಯವಸ್ಥೆಯನ್ನು ಸುಗಮಗೊಳಿಸಿದೆ. ಮಸ್ಕತ್ ಗಡಿಯಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸ್ಥಳೀಯ ಟ್ಯಾಕ್ಸಿಗಳು ಹಾಗೂ ಪ್ರವಾಸಿ ಬಸ್ಸುಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಒಮಾನ್ ಸರಕಾರದ ವಿದೇಶಾಂಗ ಸಚಿವರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಸಹಾಯ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ‌ ನಡುವೆ ಒಮಾನ್ ನಲ್ಲಿ ‌2200 ಕ್ಕೂ ಹೆಚ್ಚು ಸಿಬಿಎಸ್‌ಇ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ಹಾಗೂ ಮುಂದಿನ ವ್ಯಾಸಂಗಕ್ಕೆ ಜನ್ಮಭೂಮಿ ಪ್ರಯಾಣಿಸುವ ಚಿಂತನೆ‌ಯಲ್ಲಿ‌ ಇದ್ದರೆ. ವಿದ್ಯಾರ್ಥಿಗಳ ಸುರಕ್ಷತಾ ದ್ರಷ್ಟಿಯಿಂದ ನಿಗದಿತ ಪರೀಕ್ಷೆಯನ್ನು ಸಿಬಿ‌ಎಸ್ಇ‌ ಮುಂದೂಡುವ ನಿರ್ಧಾರವನ್ನು ಮಾಡಲಾಗಿದೆ ಎಂದು ಭಾರತೀಯ ಶಾಲೆಗಳ ನಿರ್ದೆಶಕರ ಮಂಡಳಿಯ ಅಧ್ಯಕ್ಷ ಸೈಯದ್‌ ಸಲ್ಮಾನ್ ಹೇಳಿದ್ದಾರೆ.

ಒಟ್ಟಾರೆ, ಒಂದೆಡೆ ಯುದ್ಧದ ಆತಂಕ, ಇನ್ನೊಂದೆಡೆ ತಮ್ಮೂರಿಗೆ ತಲುಪಬೇಕೆಂಬ ತವಕ—ಈ ಎರಡು ಭಾವನೆಗಳ ನಡುವೆ ಪ್ರಯಾಣಿಕರು ಸಾಗುತ್ತಿರುವ ಸಂದರ್ಭದಲ್ಲಿ, ಒಮಾನ್ ದೇಶವು ಮಾನವೀಯತೆ ಮತ್ತು ಶಾಂತಿಯ ಸಂಕೇತವಾಗಿ ಹೊರಹೊಮ್ಮುತ್ತಿದೆ. ಈ ಬೆಳವಣಿಗೆಗಳು ಒಮಾನ್ ದೇಶದ ಶಾಂತಿಯುತ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ನಿಲುವಿಗೆ ಮತ್ತೊಮ್ಮೆ ವಿಶ್ವದ ಗಮನ ಸೆಳೆಯುವಂತಾಗಿವೆ. ಗಲ್ಫ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಒಮಾನ್ ನೀಡುತ್ತಿರುವ ಪಾತ್ರವನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಶಿವಾನಂದ ಕೋಟ್ಯನ್, ಮಸ್ಕತ್

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories