ಇತರೆಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಸಂಭ್ರಮದ ಕನ್ನಡ ಕಲಿ...

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಸಂಭ್ರಮದ ಕನ್ನಡ ಕಲಿ ದಿನಾಚರಣೆ; ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಜರ್ಮನಿ: ದಶಕದ ಸಂಭ್ರಮದಲ್ಲಿರುವ ಫ್ರಾಂಕ್ಫರ್ಟ್ ನ ರೈನ್ ಮೈನ್ ಕನ್ನಡ ಸಂಘ ತನ್ನ ಕನ್ನಡ ಕಲಿಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ರೈನ್ ಮೈನ್ ನದಿಯ ತೀರದಲ್ಲಿರುವ ಕನ್ನಡಿಗರ ಮಕ್ಕಳಿಗೆ ತಮ್ಮ ತಾಯ್ನುಡಿಯ ಅನುಭೂತಿಯನ್ನು ನೀಡುತ್ತಾ ಮುಂದಿನ ಪೀಳಿಗೆಯನ್ನು ತಮ್ಮ ಮೂಲ ಬೇರುಗಳೊಂದಿಗೆ ಬೆರೆಸುವಲ್ಲಿ ನಿರತವಾಗಿದೆ.

ಕಾವೇರಿ, ಕಬಿನಿ, ಕಪಿಲ, ತುಂಗ, ಭದ್ರಾ, ಗೋದಾವರಿ, ಘಟಪ್ರಭಾ ಎಂಬ 7 ಗುಂಪುಗಳನ್ನು 7 ಶಿಕ್ಷಕರು ಮುನ್ನಡೆಸಿಕೊಂಡು ಬರುತ್ತಿದ್ದು, ಕನ್ನಡ ಕಾವೇರಿ ಅಕ್ಷರಗಳಾಗಿ ರೈನ್ ಮೈನ್ ನಲ್ಲಿ ಹರಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಕನ್ನಡ ಅಕಾಡೆಮಿಯ ಸವಿಕನ್ನಡದ 8 ಹಂತಗಳನ್ನು ಪೂರೈಸಿದವರಿಗೆ ಪ್ರತಿಯೊಂದು ಹಂತಕ್ಕೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಕನ್ನಡ ಕಲಿಯ ಮೂಲಕ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ವೇದಿಕೆಯನ್ನು ಕಲ್ಪಿಸಿಕೊಡಲು ವಾರ್ಷಿಕೋತ್ಸವವನ್ನು ನಡೆಸಲಾಗುತ್ತದೆ.

ಇದೇ ನಿಟ್ಟಿನಲ್ಲಿ ಇತ್ತೀಚೆಗೆ ಸಾಲ್ಬೌ ನಿದ್ದಾನಲ್ಲಿ ಕನ್ನಡ ಕಲಿಯ 6ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಜೈ ಮಾ ಸರಸ್ವತಿ ಹಾಡಿನೊಂದಿಗೆ ಸರಸ್ವತಿ ಪೂಜೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಮಕ್ಕಳೇ ಕಾರ್ಯಕ್ರಮವನ್ನು ಮುನ್ನಡೆಸುವಂತೆ ಮಾರ್ಗದರ್ಶಿಸಿ ಆಶಿ ಮಂದಣ್ಣ ಹಾಗೂ ವಿಹಾನ್ ಗಣಪತಿ ಕಾರ್ಯಕ್ರಮದ ನಿರೂಪಕರಾಗಿ ನಡೆಸಿಕೊಟ್ಟರು.

ಪೂರ್ಣಿಮಾ ಸುಹಾಸ್ ಅವರ ಮಾರ್ಗದರ್ಶನದಲ್ಲಿ ನಾದ ತರಂಗ ತಂಡದ ಮಕ್ಕಳು ತಾಯಿ ಶಾರದೆ ಲೋಕ ಪೂಜಿತೆ ಹಾಡನ್ನು ಭಕ್ತಿ ಪೂರ್ವಕವಾಗಿ ಹಾಡಿದರು.
ವರಾಹ ರೂಪಂ ದೈವ ವರಿಷ್ಠಂ ಹಾಡಿಗೆ ಹೆಜ್ಜೆ ಹಾಕಿದ ಸಂಸ್ಕೃತಿ ಗಡ್ಗೆ ತನ್ನ ನೃತ್ಯಾಭಿನಯದಿಂದ ಎಲ್ಲರನ್ನೂ ಸೆಳೆದಳು. ಅಕ್ಷೋಭ್ಯ ಮತ್ತು ವೇದಾಂತ್ ಪುಟಾಣಿ ನೀಲಿ ಹಕ್ಕಿ ಹಾಡು, ಕೈರಾಳ ಎಲೆಗಳು ನೂರಾರು ಭಾವದ ಎಳೆಗಳು ನೂರಾರು, ತಾಶಿಯಿಂದ ನಾವು ಎಳೆಯರು ನಾವು ಗೆಳೆಯರು ಹಾಡಿನ ಸಾಲುಗಳು ಇದ್ದ ಎಲ್ಲ ಪುಟಾಣಿಗಳನ್ನು ಸಂತೋಷಗೊಳಿಸಿತು. ಅದಿತಿ ಕುಂಜತಾಯಳಿಂದ ಭರತನಾಟ್ಯ ಶೈಲಿ ಯಲ್ಲಿ ಕನ್ನಡ ಡಿಂಡಿಮ ಬಾರಿಸಿದರೆ, ಆನ್ವಿ ಲೋಹಿತ್ ಶ್ರೀ ವಿಘ್ನ ರಾಜಂ ಭಜೆ ಎಂದು ವಿನಾಯಕನ ಸ್ಮರಿಸುವಂತೆ ಮಾಡಿದಳು.

ಬೋಲೋ ನಾರಾಯಣ ಎನ್ನುತ್ತಾ ಮನಸ್ವಿ ಮತ್ತು ಮನ್ವಿತಾ ಮುದ್ದಾಗಿ ರಂಜಿಸಿದರು. ಶ್ರೀಮತಿ ಸ್ವಾತಿ ಯವರ ಮಾರ್ಗದರ್ಶನದಲ್ಲಿ ಸ್ವರ ತಂಡದ ಚಿಣ್ಣರು ದ. ರಾ. ಬೇಂದ್ರೆ ಯವರ ರಚನೆ ಚುಮು ಚುಮು ನಸುಕಿನಲಿ ಹಾಡನ್ನು ಇಂಪಾಗಿ ಹಾಡಿದರು. ಸೈಂಧವಿಯ ಒಂದು ದಿನ ಹುಚ್ಚನ ಹೆಂಡತಿ ಅಭಿನಯ ಗೀತೆ ನೆರೆದವರಿಗೆ ಕಚಗುಳಿ ಇಟ್ಟಿತು. ಅ ಆ ಇ ಈ ಅಕ್ಷರ ಮಾಲೆ ಕಲಿಯಲು ಅವಕಾಶ ನೀಡಿದ ಕನ್ನಡ ಕಲಿಯ ಸಂಭ್ರಮಕ್ಕೆ ಅದ್ವಿಕಾ, ಸಾನಿಕ ಸಾನ್ವಿ ಹೆಜ್ಜೆ ಹಾಕಿದರು. ಹಾಡು, ನೃತ್ಯ ಅಷ್ಟಕ್ಕೆ ಸೀಮಿತವಲ್ಲದೆ ಪ್ರದ್ಯುಮ್ನ ತನ್ನ ಗಿಟಾರ್ ನಿಂದ ನೀನೆ ರಾಜಕುಮಾರ ಎಂದು ತನ್ಮಯ ಗೊಳಿಸಿದರೆ, ಚಿರಾಗ್ ಡರ್ಬುಕ ವಾದ್ಯದಿಂದ ಎಲ್ಲರ ತಲೆದೂಗಿಸಿದನು.

ಎಲ್ಲ ಹಿರಿಯರ ಅಭಿಲಾಷೆ ತಮ್ಮ ಮಕ್ಕಳು ಎತ್ತರಕ್ಕೆ ಬೆಳೆದು ಉತ್ತಮ ಹೆಸರು ಗಳಿಸಲಿ ಎಂಬುದೇ ಆಗಿರುತ್ತದೆ. ನಾವು ನೆನೆಯುವ ಹಲವಾರು ಮಹಾತ್ಮರ ವೇಷವನ್ನು ತೊಟ್ಟು ವಿಶ್ವೇಶ್ವರಯ್ಯ ಆಗಿ ಶೌರ್ಯ, ಅಭಿಮಾನಿಗಳೇ ದೇವರು ಎಂದ ಡಾ. ರಾಜಕುಮಾರ ಆಗಿ ಶಮಂತ್, ಬಸವಣ್ಣನಾಗಿ ಮನ್ವಿತ್, ರೈತನಾಗಿ ನಿಶಾಲ್, ಬೇಡರ ಕಣ್ಣಪ್ಪನಾಗಿ ವೇದಾಂತ್ ಎಲ್ಲರ ಗಮನ ಸೆಳೆದರು.
ಇವಿಷ್ಟೇ ಅಲ್ಲದೆ ಅಜಿತ್ ಪ್ರಭುರವರ ಮಾರ್ಗದರ್ಶನದಲ್ಲಿ ವಿರಾಟ ಪರ್ವ ಕಿರುನಾಟಕವನ್ನು ಮಕ್ಕಳು ಅಭಿನಯಿಸಿದರು. ಉತ್ತರ ಕುಮಾರನಾಗಿ ಅಥರ್ವ ಗಮನ ಸೆಳೆದರೆ, ಬೃಹನ್ನಳೆಯಾಗಿ ಸ್ನಿಗ್ಧ, ಸಖಿಯರಾಗಿ ಪದ್ಮಾಸಿನಿ, ದಿಯಾ, ಉತ್ತರೆಯಾಗಿ ಅದಿತಿ, ಗೋಪಾಲಕನಾಗಿ ಪ್ರದ್ಯುಮ್ನ, ಸೈನಿಕನಾಗಿ ಸಾರ್ಥಕ್ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.

ಒಂದು ಸಾಧಾರಣ ದಿನವನ್ನು ನಮ್ಮ ಕನ್ನಡ ಕಲಿ ಮಕ್ಕಳು ತಮ್ಮ ಅಭ್ಯಾಸ ಮತ್ತು ಪರಿಶ್ರಮದಿಂದ ಸಂಪೂರ್ಣ ಯಶಸ್ವಿಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪೋಷಕರಿಗಾಗಿ ಹಲವು ಸಂಗೀತ, ಕ್ವಿಜ್ಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ಮತ್ತಷ್ಟು ಕ್ರಿಯಾತ್ಮಕವಾಗಿ ಯೋಜಿಸಲಾಗಿತ್ತು. ಮಕ್ಕಳಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಶ್ರಮವಹಿಸಿದ ಶಿಕ್ಷಕರಿಗೂ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷರಾದ ಲೋಕನಾಥ್ ಮತ್ತು ಸಹ ಕಾರ್ಯದರ್ಶಿಯಾದ ವಿಜಯ್ ಅವರು ಪ್ರಮಾಣ ಪತ್ರ ವಿತರಿಸಿದರು.

ಕಾರ್ಯಕ್ರಮ ದೊಡ್ಡದಿರಲಿ , ಚಿಕ್ಕದಿರಲಿ ಚೊಕ್ಕವಾಗಿ ನಡೆಯಲು ಸ್ವಯಂಸೇವಕರ ಪಾತ್ರ ಹಿರಿಯದು. ಶೋಭಾ, ಕೃತಿಕಾ ಮೂರ್ತಿ, ಅಂಬಿಕಾ ಗಡ್ಗೆ, ವರುಣ್, ಕಿರಣ್, ಸುಹಾಸ್, ಪವನ್, ಭವ್ಯ, ಭರತ್, ಬೃಂದ , ಹರ್ಷ, ರಾಜೇಶ್, ಅಶೋಕ್, ವಿನೋದ್, ಕುಮಾರ ಸ್ವಾಮಿ ಇನ್ನೂ ಹಲವಾರು ಮಂದಿ ಒಂದುಗೂಡಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಶ್ರಮಿಸಿದರು.

ಪ್ರಸ್ತುತ ಕನ್ನಡ ಕಲಿಯಲ್ಲಿ 51 ಮಕ್ಕಳಿದ್ದು ಕನ್ನಡ ಭಾಷೆಯೊಂದಿಗೆ, ನಮ್ಮ ಸಂಸ್ಕೃತಿ ಮತ್ತು ಅದರ ಮೌಲ್ಯ, ನಮ್ಮ ಇತಿಹಾಸ, ಪುರಾಣ, ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸುವುದು, ಮಕ್ಕಳನ್ನು ನಮ್ಮ ನೆಲದೊಟ್ಟಿಗೆ ಕೂಡಿಸುವುದೇ ನಮ್ಮ ಕನ್ನಡ ಕಲಿಯ ಮುಖ್ಯ ಉದ್ದೇಶ.

-ಶೋಭಾ ಚೌಹಾನ್
ಫ್ರಾಂಕ್ಫರ್ಟ್, ಜರ್ಮನಿ

Hot this week

ಶಾಲೆಯ ಕ್ರೀಡಾಂಗಣದಿಂದ ಮುಖ್ಯಮಂತ್ರಿ ಕಚೇರಿವರೆಗೆ; ತಮ್ಮ ವಿದ್ಯಾರ್ಥಿ ಡಿ.ಕೆ. ಶಿವಕುಮಾರ್ ಕುರಿತು ನಿವೃತ್ತ ಶಿಕ್ಷಕ ಪಾಂಡು ಅವರ ನೆನಪುಗಳು

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಇತಿಹಾಸವು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬ...

ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ...

ದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ

ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ...

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

Related Articles

Popular Categories