ಬಹರೈನ್ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಸಾರ್ಥಕೆತೆಯನ್ನು ಕಂಡ ಮಂಗಳೂರಿನ ಹೃದಯವಂತ...

ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಸಾರ್ಥಕೆತೆಯನ್ನು ಕಂಡ ಮಂಗಳೂರಿನ ಹೃದಯವಂತ ಅಮರನಾಥ್ ರೈ!

ಬಹರೈನ್‌: ಪ್ರಾಮಾಣಿಕತೆ ಮತ್ತು ದುಡಿಮೆ—ಈ ಎರಡು ಮೌಲ್ಯಗಳು ಒಬ್ಬನ ಬದುಕನ್ನು ಎಷ್ಟು ದೂರ ಕೊಂಡೊಯ್ಯಬಹುದು ಗೊತ್ತಾ? ದೇಶಗಳ ಗಡಿಗಳನ್ನೇ ದಾಟಿಸಿ, ಕನಸುಗಳನ್ನು ನಿಜಗೊಳಿಸುವ ಮಟ್ಟಕ್ಕೆ! ಅದಕ್ಕೆ ಒಂದು ಉತ್ತಮ ಉದಾಹರಣೆ ಬಹರೈನ್ ದ್ವೀಪ ರಾಷ್ಟ್ರದಲ್ಲಿ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಇಲ್ಲಿ ನೆಲೆಸಿರುವ ಮಂಗಳೂರಿನ ಅಮರನಾಥ್ ರೈ. ಪ್ರಾಮಾಣಿಕತೆ, ದುಡಿಮೆಯಿಂದ ಅದು ದೇಶ, ಭಾಷೆಗಳ ಗಡಿ ಮೀರಿ ಬದುಕು ಮತ್ತು ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾಗಿರುವವರು ಅಮರನಾಥ್ ರೈ.

ಮಂಗಳೂರಿನ ಮಣ್ಣಿನಿಂದ ಸುಮಾರು 30 ವರ್ಷಗಳ ಹಿಂದೆ ಸಾವಿರಾರು ಮೈಲು ದೂರದ ಬಹರೈನ್‌ ದೇಶಕ್ಕೆ ಬದುಕನ್ನು ಕಟ್ಟಿಕೊಳ್ಳಲು ಹೆಜ್ಜೆ ಇಟ್ಟವರು. ಹೊಸ ನೆಲ, ಹೊಸ ಪರಿಸರ, ಹೊಸ ಜನ… ಆದರೆ ಅವರಲ್ಲಿ ಅಚಲವಾಗಿದ್ದದ್ದು ಒಂದೇ ತಮ್ಮ ದುಡಿಮೆಯ ಮೇಲಿನ ನಂಬಿಕೆ.

‘ಜಾನ್ಸನ್ ಅಂಡ್ ಜಾನ್ಸನ್’ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಆರಂಭವಾದ ಅವರ ವೃತ್ತಿ ಜೀವನ, ನಿಧಾನವಾಗಿ ಆದರೆ ದೃಢವಾಗಿ ಏರಿತು. ಬದುಕು ಮತ್ತು ಉದ್ಯಮದ ಪ್ರತಿಯೊಂದು ಮೆಟ್ಟಿಲನ್ನೂ ಕಷ್ಟಪಟ್ಟು ಏರಿ, ಕೊನೆಗೆ ಅದೇ ಸಂಸ್ಥೆಯಲ್ಲಿ ಉನ್ನತ ಸ್ಥಾನ ಪಡೆದು ಕಂಟ್ರಿ ಹೆಡ್ ಆಗಿ ನೇಮಕಗೊಂಡದ್ದು ಮಾತ್ರವಲ್ಲದೆ ತನ್ನ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯಗಳಲ್ಲಿ ,ಇಲ್ಲಿನ ವಿವಿಧ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಪಕ್ಷ, ಜಾತಿ ಎಲ್ಲವನ್ನು ಮೀರಿ ಬೆಳೆದು ಇಂದು ಸಾವಿರಾರು ಜನರ ಪ್ರೀತಿಯನ್ನು ಗಳಿಸಿ ಇದೀಗ ಸಾರ್ಥಕತೆಯನ್ನು ಕಂಡಿದ್ದಾರೆ .

ಆದರೆ ಅವರ ಕಥೆ ಇಲ್ಲಿ ಮುಗಿಯುವುದಿಲ್ಲ…ಕೆಲಸದ ಜೊತೆಗೆ ಪರೋಪಕಾರಿಯಾಗಿಯೂ ಗುರುತಿಸಿಕೊಂಡವರು. ಸಮಾನ ಮನಸ್ಕರೊಂದಿಗೆ ಸೇರಿ ಧಾರ್ಮಿಕವಾಗಿ ಸಾಂಸ್ಕ್ರತಿವಾಗಿ, ಪಕ್ಷ-ಭೇದ, ಜಾತಿ, ಧರ್ಮ ಮೀರಿ ಸಾವಿರಾರು ಜನರ ಪ್ರೀತಿ ಗಳಿಸಿದವರು. ಇದು ಕೇವಲ ಸಾಧನೆ ಅಲ್ಲ—ಒಂದು ಸಾಹಸದ ಕಥೆ.

ಅವರ ಯಶಸ್ಸು ಕೇವಲ ಹುದ್ದೆಗಳಲ್ಲ…ಅದು ಅವರೊಳಗಿನ ನಾಯಕತ್ವ ಗುಣದಲ್ಲಿ ಇದೆ. ಮಾನವೀಯತೆಯಲ್ಲಿ ಇದೆ, ಸರಳತೆಯಲ್ಲಿ ಇದೆ, ಪ್ರಾಮಾಣಿಕತೆಯಲ್ಲಿ ಇದೆ. ಅವರು ಸಾಧಿಸಿದ ಪ್ರಗತಿ ಮತ್ತು ಏರಿದ ಎತ್ತರ—ನಿಜಕ್ಕೂ ಪ್ರೇರಣೆಯ ಮೂಲ.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು, ಸುಮಾರು ಏಳು ವರುಷಗಳ ಕಾಲ ಜೋನ್ಸನ್ ಆಂಡ್ ಜೋನ್ಸನ್ ನಲ್ಲಿ ದುಡಿದು ತಮ್ಮ ಸ್ನೇಹಿತ ವರ್ಗ ಹಾಗು ವೈದ್ಯ ಬಳಗದಲ್ಲಿ ಜೋನ್ಸನ್ ಅಮರ್ ಎಂದೇ ಜನಪ್ರಿಯರಾಗಿದ್ದು, ನಂತರ ಬದುಕು-ಭವಿಷ್ಯ ಕಟ್ಟಿಕೊಳ್ಳಲು ಬಹರೈನ್‌ಗೆ ತೆರಳಿದರು.

ಅವರೊಳಗಿನ ತಾಕತ್ತು, ಕಷ್ಟಸಹಿಷ್ಣುತೆ, ಪ್ರಾಮಾಣಿಕ ದುಡಿಮೆ ಮತ್ತು ಕ್ರಿಯಾಶೀಲತೆಗೆ ಸವಾಲಾಗಿ ಬಂದದ್ದು ಬಹರೈನ್ ನ ಜೋನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಉದ್ಯೋಗ. ಮಾರಾಟ ಪ್ರತಿನಿಧಿಯಾಗಿ ಆರಂಭವಾದ ಪ್ರಯಾಣ, ಕ್ರಮೇಣ ಉನ್ನತ ಹುದ್ದೆಗಳತ್ತ ಸಾಗಿತು.ಅಲ್ಲಿ ಅವರು ಬೆಳೆದಷ್ಟೇ ಅಲ್ಲ…ಹಲವರನ್ನು ಬೆಳೆಸಿದರು…ಕೆಲವರನ್ನು ತಿದ್ದಿದರು…ಸಂಸ್ಥೆಯ ಆಡಳಿತ ಮಂಡಳಿ ಅವರಲ್ಲಿನ ಶ್ರದ್ಧೆ, ಪ್ರಾಮಾಣಿಕತೆ ಮತ್ತು ತಾಕತ್ತನ್ನು ಗುರುತಿಸಿತು. ಅದಕ್ಕಾಗಿ ಸುಮಾರು 25 ವರ್ಷಗಳ ಕಾಲ ಸಂಸ್ಥೆಗೆ ಸೇವೆ ಸಲ್ಲಿಸಿದರು. ಕೊನೆಗೆ ಅದೇ ಸಂಸ್ಥೆಯ ಅತ್ಯುನ್ನತ ಹುದ್ದೆಯಿಂದ ನಿವೃತ್ತರಾದರು.ನಿವೃತ್ತಿಯ ನಂತರವೂ ಸಂಸ್ಥೆ ಅವರನ್ನು ಮಾರುಕಟ್ಟೆಯ ವಿಸ್ತರಣೆಗೆ ಬಳಸಿಕೊಂಡಿರುವುದು—ಅವರ ಪ್ರಾಮಾಣಿಕತೆಗೆ ಹಾಗು ಕಠಿಣ ಪರಿಶ್ರಮಕ್ಕೆ ದೊಡ್ಡ ಸಾಕ್ಷಿ.

ವೃತ್ತಿ ಜೀವನದಲ್ಲಿ ಭ್ರಷ್ಟರಾಗುವ, ನಿಕೃಷ್ಟರಾಗುವ ಅನೇಕ ಅವಕಾಶಗಳು ಬಂದಾಗಲೆಲ್ಲ ಅವುಗಳನ್ನು ಧೈರ್ಯವಾಗಿ ತಿರಸ್ಕರಿಸಿದರು. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಮೆಟ್ಟಿಲು ಜಾರದಂತೆ ಬದುಕನ್ನು ಕಟ್ಟಿಕೊಂಡವರು.ಒಂದು ಹಂತದ ಬಳಿಕ ಅವರಿಗೆ ಸ್ಪಷ್ಟವಾಯಿತು ದುಡ್ಡು, ಮನೆ, ಸ್ಥಾನಮಾನ, ಮಾತ್ರ ಜೀವನವಲ್ಲ…ಸಹಕಾರ, ಸಂಘಟನೆ, ಸಮಾಜಮುಖಿ ಚಟುವಟಿಕೆಗಳೂ ಅಷ್ಟೇ ಮುಖ್ಯ.ಅದಕ್ಕಾಗಿಯೇ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಬಹರೈನ್ ಕನ್ನಡ ಸಂಘದಲ್ಲಿ ಸಕ್ರಿಯರಾಗಿದ್ದಾಗ, ಕೊಂಕಣ್ ಸಿಂಗರ್ಸ್ , ಇಂಡಿಯನ್ ಕ್ಲಬ್ ಸೇರಿದಂತೆ ಅನೇಕ ಸಂಘಟನೆಗಳಲ್ಲಿ ತಮ್ಮ ಗುರುತು ಮೂಡಿಸಿದರು. ಬಂಟ್ಸ್ ಮಂಡಳಿಯ ಬಹರೈನ್ ಘಟಕದ ಸ್ಥಾಪಕ ಸದಸ್ಯರಾಗಿ, ತದನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.ಬಂಟ್ಸ್ ಬಹರೈನ್ ನ ಅಧ್ಯಕ್ಷರಾಗಿ ತಮ್ಮ ಸೇವಾ ಅವಧಿಯಲ್ಲಿ ಸಮುದಾಯದ ಸರ್ವೋತ್ತಮುಖ ಏಳಿಗೆಗಾಗಿ ದುಡಿದದಲ್ಲದೆ, ಬಂಟ ಸಮುದಾಯದ ಸಾಧಕರಾದ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಡಾಕ್ಟರ್ ಶಾಂತಾರಾಮ್ ಶೆಟ್ಟಿ , ಖ್ಯಾತ ಉದ್ಯಮಿ ಶಶಿಕಿರಣ್ ಶೆಟ್ಟಿ ಮುಂತಾದವರನ್ನು ದ್ವೀಪ ರಾಷ್ಟ್ರಕ್ಕೆ ಬರಮಾಡಿಕೊಂಡು ಬೃಹತ್ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಸ್ವತಃ ಒಬ್ಬ ಒಳ್ಳೆಯ ಗಾಯಕರಾಗಿರುವ ಇವರು ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ಲಲಿತಕಲೆ, ರಂಗಭೂಮಿ, ಸಾಮಾಜಿಕ ಜಾಗೃತಿ—ಹೀಗೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಅವರು ಇಲ್ಲಿನ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಹರೈನ್ ಕನ್ನಡಿಗರೊಂದಿಗೆ ಮಾತ್ರವಲ್ಲ, ಇತರ ಸಮುದಾಯಗಳ ಸಂಘ-ಸಂಸ್ಥೆಗಳು, ಉದ್ಯಮಿಗಳೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಇದು ಅವರ ವ್ಯಕ್ತಿತ್ವದ ದೊಡ್ಡ ಬಲ. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕವಿದ್ದರೂ ಅವರಲ್ಲಿ ಯಾವತ್ತೂ ಅಬ್ಬರವಿಲ್ಲ…ಆಡಂಬರವಿಲ್ಲ…ಅರಚಾಟವಿಲ್ಲ…ಹುದ್ದೆ, ಪದವಿ, ಅಧಿಕಾರಗಳ ಹಿಂದೆ ಎಂದಿಗೂ ಓಡಿದವರಲ್ಲ ಅವರು.

ಹಲವು ಪ್ರಥಮ ಸಾಧನೆಗಳ ಮೂಲಕ ಹೆಸರುವಾಸಿಯಾಗಿರುವ, ಸರಕಾರದ ಅನುದಾನದಿಂದ ವಿದೇಶದಲ್ಲಿ ನಿರ್ಮಾಣವಾದ ಮೊದಲ ಕನ್ನಡ ಭವನ ಎಂಬ ಹೆಗ್ಗಳಿಕೆ ಇರುವ ಇಲ್ಲಿನ ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಮರನಾಥ್ ರೈ, ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ದ್ವೀಪಕ್ಕೆ ಬರಮಾಡಿಕೊಂಡು ಗೌರವಿಸಿದ್ದಾರೆ

ನಟರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು—ಎಲ್ಲರಿಗೂ ವೇದಿಕೆ ಕಲ್ಪಿಸಿದರು.ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿದರು. ಸಂಘದ ಅಭಿವೃದ್ಧಿಗಾಗಿ ಸಂಪನ್ಮೂಲ ಸಂಗ್ರಹಿಸುವಲ್ಲಿ ಅಪಾರ ಪರಿಶ್ರಮಪಟ್ಟರು . ತಮ್ಮ ಅಮೂಲ್ಯ ಸಮಯವನ್ನೇ ಅದಕ್ಕಾಗಿ ಮೀಸಲಿಟ್ಟರು.

ಅವರ ವ್ಯಕ್ತಿತ್ವವೇ ಆಕರ್ಷಕ. ಒಳ್ಳೆಯ ಹಾಡುಗಾರ, ಮಾತುಗಾರ. ಆದರೆ ಅಗತ್ಯವಿದ್ದಾಗ ಮಾತ್ರ ಮಾತನಾಡುವ ಗುಣ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು—ಅದು ಅವರಿಗೆ ಚೆನ್ನಾಗಿ ಗೊತ್ತು.

ಅಮರ್‌ಗೆ ಒಬ್ಬ ಅಜಾತಶತ್ರು …ಸ್ನೇಹ ಜೀವಿ .ದೇಶ ವಿದೇಶಗಳಲ್ಲಿ ಅಪಾರ ಸ್ನೇಹಿತರ ಬಳಗವಿದೆ. ಬಹರೈನ್, ದುಬೈ, ಖತರ್, ಸೌದಿ ಅರೇಬಿಯಾ, ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ—ಎಲ್ಲೆಡೆ ಸ್ನೇಹದ ಬಂಧ. ಸ್ನೇಹ ಸಂಬಂಧಗಳನ್ನು ನಿಭಾಯಿಸುವುದು ,ಉಳಿಸ್ಕೊಳ್ಳುವುದು ಕೂಡ ಒಂದು ದೊಡ್ಡ ಕಲೆ. ಆ ಕಲೆ ಅಮರನಾಥ್ ರೈ ಯವರಿಗೆ ಸಿದ್ಧಿಸಿದೆ. ತಮ್ಮ ಬಾಲ್ಯದ ಗೆಳೆಯರಿಂದ ಹಿಡಿದು ಇತ್ತೀಚೆಗೆ ಪರಿಚಯವಾದ ಗೆಳೆಯರೊಂದಿಗೆ ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅವರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಆ ಸಂಬಂಧಗಳಿಗೆ ಬೆಲೆ ,ಗೌರವ ನೀಡಿ ಉಳಿಸಿಕೊಂಡು ಬಂದಿದ್ದಾರೆ.

ದುಡ್ಡಿನ ಹಿಂದೆ ಓಡದೇ “ಸಮಾಜಕ್ಕಾಗಿ ಏನಾದರೂ ಮಾಡಬೇಕು” ಎಂಬ ಉದ್ದೇಶದಿಂದ ಬದುಕಿದವರು. ಅದರ ಫಲವೇ ಸಾಧನೆ, ಗೆಲುವು, ಮೆಚ್ಚುಗೆ, ಸ್ನೇಹ—ಇವೆಲ್ಲವೂ ಅವರನ್ನು ಯಾವತ್ತೂ ಒಂಟಿಯಾಗಲು ಬಿಡಲಿಲ್ಲ. ಇಂದಿಗೂ ಅವರು ನಿನ್ನೆಯ ಸಂತೋಷ, ಇಂದಿನ ಸಮಾಧಾನ ಮತ್ತು ನಾಳೆಯ ನಿರೀಕ್ಷೆಯೊಂದಿಗೆ ಬದುಕುತ್ತಿದ್ದಾರೆ.
ಜಾನ್ಸನ್ ಕಂಪನಿಯಿಂದ ನಿವೃತ್ತಿಯಾದ ಬಳಿಕ ಅರ್ಜುನ್ ದೀಪ್ ಕ್ಲೀನಿಂಗ್ ಅಂಡ್ ಮೈಂಟೆನನ್ಸ್ ಕಾಂಟ್ರಾಕ್ಟಿಂಗ್ ಎಂಬ ಸ್ವಂತ ಉದ್ದಿಮೆಯನ್ನು ಆರಂಭಿಸಿದ್ದಾರೆ. ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದು,ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

ಇನ್ನು ಇವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಇವರ ಪತ್ನಿ ಸ್ನೇಹಲತಾ ಬಯೋ ವಿಜ್ಞಾನ ಸ್ನಾತಕೋತ್ತರ ಪದವೀಧರೆ, ಅವರ ಹಿಂದೆ ನಿಂತಿರುವ ಶಕ್ತಿ. ಮಗಳು ದೀಪಾಲಿ ರೈ ಎಂ ಬಿ ಎ ಪದವೀಧರೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತಿದ್ದಾಳೆ. ಅಳಿಯ ಹರ್ಷಿತ್ ರೈ ಪ್ರತಿಷ್ಠಿತ ಸೀಕೋ ಸಂಸ್ಥೆಯಲ್ಲಿ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗ ಅರ್ಜುನ್ ರೈ ಸ್ಯಾನ್ ಫ್ರಾನ್ಸಿಸ್ಕೊದ ಸ್ಯಾನ್ ಜೋಸ್ ಯುನಿವರ್ಸಿಟಿಯಲ್ಲಿ ಡೇಟಾ ಅನಾಲಿಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅಮರನಾಥ್ ರೈ ಅವರಿಗೀಗ ಅರವತ್ನಾಲ್ಕರ ಹರೆಯ …ಈ ಸಾರ್ಥಕ ಬದುಕಿನ ಹಾದಿಯಲ್ಲಿರುವ ಇವರ ಉತ್ಸಾಹ ಇಂದಿಗೂ ಯುವಕನಂತೆಯೇ.ಸುಖ ಸಂಸಾರ, ಗೆಳೆಯರು, ಸಾಧನೆ—ಇವೆಲ್ಲದರ ನಡುವೆ ಇನ್ನಷ್ಟು ಸಾಧಿಸಬೇಕು ಎಂಬ ಹಂಬಲವೇ ಅವರನ್ನು ವಿಭಿನ್ನರನ್ನಾಗಿ ಮಾಡಿದೆ.ಗೆಳೆಯರ ಪ್ರೀತಿಯ ಅಮರಣ್ಣ ಸದಾ ಉತ್ಸಾಹದ ಚಿಲುಮೆ ,ಸಂತಸದ ಬುಗ್ಗೆ .ಸಂಗೀತ, ಸ್ನೇಹ, ಸಂತೋಷ—ಇವೇ ಅವರ ಬದುಕಿನ ನಿಜವಾದ ರಾಗ.

ವರದಿ: ಕಮಲಾಕ್ಷ ಅಮೀನ್

Hot this week

KCWA holds General Body Meeting in Kuwait, announces major cultural event in December

Kuwait City: Kuwait Canara Welfare Association (KCWA) held its...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ...

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಸಂಭ್ರಮದ ಕನ್ನಡ ಕಲಿ ದಿನಾಚರಣೆ; ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಜರ್ಮನಿ: ದಶಕದ ಸಂಭ್ರಮದಲ್ಲಿರುವ ಫ್ರಾಂಕ್ಫರ್ಟ್ ನ ರೈನ್ ಮೈನ್ ಕನ್ನಡ ಸಂಘ...

ದೋಹಾದಲ್ಲಿ ಕರ್ನಾಟಕ ಸಂಘ ಖತರ್‌ನಿಂದ ಕಾರ್ಮಿಕ ದಿನ 2026 ಆಚರಣೆ

ದೋಹಾ(ಖತರ್): ಕರ್ನಾಟಕ ಸಂಘ ಖತರ್ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

Yakshagana staged in English for the first time in Europe, show held in Belgium

Brussels: Yakshagana, the traditional theatre form from coastal Karnataka,...

Related Articles

Popular Categories