ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ ಸಂಘಟನೆಗಳಲ್ಲೊಂದಾದ ಕರ್ನಾಟಕ ಸಂಘ ಖತರ್‌ನ 2026–2028ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಇತ್ತೀಚೆಗೆ ಐಸಿಸಿ ಸಭಾಂಗಣದಲ್ಲಿ ನಡೆದ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಂಘದ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಭೆಯಲ್ಲಿ ಉಪಸ್ಥಿತರಿದ್ದ ಅಪಾರ ಸಂಖ್ಯೆಯ ಸದಸ್ಯರು ಅವರ ನಾಯಕತ್ವದ ಮೇಲೆ ಅಪಾರ ವಿಶ್ವಾಸ ಮತ್ತು ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ ಮೂಲದ ಕುಂದಾಪುರ ತಾಲೂಕಿನ ಬೈಂದೂರಿನವರಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ಭಾರತೀಯ ಸಮುದಾಯದಲ್ಲಿ ಸಾಮಾಜಿಕ ಮತ್ತು ಸಮುದಾಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಹಲವು ವರ್ಷಗಳಿಂದ ಮಾನವೀಯ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ
ಸುಬ್ರಮಣ್ಯ ಹೆಬ್ಬಾಗಿಲು ಅವರು ಈ ಹಿಂದೆ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಉಪಾಧ್ಯಕ್ಷರಾಗಿ, ಭಾರತೀಯ ಕ್ರೀಡಾ ಕೇಂದ್ರದ (ISC) ಸಲಹಾ ಮಂಡಳಿ ಸದಸ್ಯರಾಗಿ ಹಾಗೂ ಭಾರತೀಯ ಸಮುದಾಯ ಹಿತಚಿಂತಕ ವೇದಿಕೆಯ (ICBF) ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಎಲ್ಲಾ ಸಂಸ್ಥೆಗಳು ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿವೆ.


ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸುಬ್ರಮಣ್ಯ ಹೆಬ್ಬಾಗಿಲು, ತಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ಸಂಘ ಖತರ್ ಎಂಬ ಪ್ರತಿಷ್ಠಿತ ಸಮುದಾಯ ಸಂಘಟನೆಯ ಹೊಣೆಗಾರಿಕೆಯನ್ನು ನೀಡಿರುವುದಕ್ಕೆ ಧನ್ಯವಾದ ತಿಳಿಸಿ, ಕರ್ನಾಟಕದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಖತರ್‌ನ ಕನ್ನಡಿಗರ ಏಕತೆ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ಸಂಘದ ನೂತನ ಆಡಳಿತ ಸಮಿತಿಯಲ್ಲಿ ಅನಿಲ ಭಾಸಗಿ ಉಪಾಧ್ಯಕ್ಷರಾಗಿ, ಸುಜೀತ್ ಕುಮಾರ್ ಹೊಸದುರ್ಗ ಪ್ರಧಾನ ಕಾರ್ಯದರ್ಶಿಯಾಗಿ, ಮಂಜೋತ ಸುರೇಶ್ ಖಜಾಂಚಿಯಾಗಿ, ಭಾವನಾ ನವೀನ್ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಶಶಿಧರ್ ಹೆಚ್.ಬಿ. ಜಂಟಿ ಸಾಂಸ್ಕೃತಿಕ ಹಾಗೂ ಕನ್ನಡ ಚಟುವಟಿಕೆಗಳ ಕಾರ್ಯದರ್ಶಿಯಾಗಿ, ಎಲ್.ಜಿ. ಪಾಟೀಲ್ ಕ್ರೀಡಾ ಕಾರ್ಯದರ್ಶಿಯಾಗಿ, ಪ್ರಶಾಂತ್ ಹಿರೇಮಠ ಮಾಧ್ಯಮ, ಸಾರ್ವಜನಿಕ ಸಂಪರ್ಕ ಹಾಗೂ ಹಿತಚಿಂತಕ ಕಾರ್ಯದರ್ಶಿಯಾಗಿ, ಪ್ರಭುರಾಜು ಜಗಲೂರು ಇವೆಂಟ್ ಮತ್ತು ಲಾಜಿಸ್ಟಿಕ್ಸ್ ಕಾರ್ಯದರ್ಶಿಯಾಗಿ, ಶುಭಾ ಆರ್. ರಾವ್ ಮಹಿಳಾ ಮತ್ತು ಮಕ್ಕಳ ಚಟುವಟಿಕೆಗಳ ಕಾರ್ಯದರ್ಶಿಯಾಗಿ, ದಾಕ್ಷಾಯಿಣಿ ಜಿ. ಜಂಟಿ ಕ್ರೀಡಾ ಕಾರ್ಯದರ್ಶಿಯಾಗಿ, ಗುರು ಪ್ರಸಾದ್ ಬಿ.ಕೆ. ಪರಿಸರ ಮತ್ತು ಸದಸ್ಯತ್ವ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿಕಟ ಪೂರ್ವಾಧ್ಯಕ್ಷರಾದ ಎಂ. ರವಿ ಶೆಟ್ಟಿಯವರು ಸಲಹಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ನೂತನ ಸಮಿತಿಯು ಈಗಾಗಲೇ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಕಾರ್ಮಿಕರ ದಿನಾಚರಣೆ, ತಾಯಂದಿರ ದಿನಾಚರಣೆ, ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ, ರಕ್ತದಾನ ಶಿಬಿರ, ಪರಿಸರ ದಿನಾಚರಣೆ, ಸಂಭ್ರಮ 2026, ಕನ್ನಡ ರಾಜ್ಯೋತ್ಸವ, ವಿವಿಧ ಕ್ರೀಡಾಕೂಟಗಳು, ಸಾಂಪ್ರದಾಯಿಕ ಹಬ್ಬಗಳ ಆಚರಣೆ, ಸಾಂಸ್ಕೃತಿಕ ಸಮ್ಮೇಳನ, ಮಹಿಳೆಯರು ಹಾಗೂ ಮಕ್ಕಳಿಗಾಗಿ ವೈದ್ಯಕೀಯ ಶಿಬಿರಗಳು, ಕವಿಗೋಷ್ಠಿ ಮತ್ತು ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ಸುಕದಲ್ಲಿದೆ.
ನಿರ್ಗಮಿತ ಅಧ್ಯಕ್ಷರಾದ ಎಂ. ರವಿ ಶೆಟ್ಟಿ ಅವರು 2024–2025ರ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಕಳೆದ ಅವಧಿಯಲ್ಲಿ ಸಂಘದ ಯಶಸ್ವಿ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಮಹತ್ತರವಾಗಿತ್ತು ಎಂದು ಪ್ರಶಂಸಿಸಿ, ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದ ನೂತನ ಸಮಿತಿಗೆ ಮುಂದೆಯೂ ತಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದು ತಿಳಿಸಿದರು.
ಸಲಹಾ ಸಮಿತಿ ಸದಸ್ಯರಾದ ಅರುಣ್ ಕುಮಾರ್, ವಿ.ಎಸ್. ಮನ್ನಂಗಿ, ದೀಪಕೆ ಶೆಟ್ಟಿ, ಡಾ. ಸಂಜಯ ಕುದರಿ, ಮಹೇಶ ಗೌಡ ಹಾಗೂ ಐಸಿಸಿ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಅವರು ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿ, ಯಶಸ್ವಿ ಹಾಗೂ ಪರಿಣಾಮಕಾರಿ ಅವಧಿಗೆ ಶುಭ ಹಾರೈಸಿದರು. ಖತರ್‌ನ ಕರ್ನಾಟಕ ಮೂಲದ ಇತರ ಭ್ರಾತೃ ಸಂಘಟನೆಗಳ ಪ್ರತಿನಿಧಿಗಳೂ ನೂತನ ಆಡಳಿತ ಮಂಡಳಿಗೆ ಶುಭಾಶಯ ಹಾಗೂ ಸಹಕಾರದ ಭರವಸೆ ವ್ಯಕ್ತಪಡಿಸಿದರು.

