ಯುಎಸ್‌ಎತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ...

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ಅಮೇರಿಕದ ತುಳುವರಲ್ಲಿ ಸಂಭ್ರಮ!

ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ-ಕೃತಜ್ಞತೆ ಸಲ್ಲಿಸಿದ ಆಲ್ ಅಮೇರಿಕ ತುಳು ಅಸೋಸಿಯೇಷನ್


ಅಮೇರಿಕ: ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನ್ವಯವಾಗುವಂತೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರವು ತುಳು ಭಾಷೆಯ ಅಸ್ಮಿತೆ, ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಗೆ ದೊರೆತ ಮಹತ್ವದ ಗೌರವವಾಗಿದೆ ಎಂದು ಆಲ್ ಅಮೇರಿಕ ತುಳು ಅಸೋಸಿಯೇಷನ್ ಸಂತಸ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆ ಮತ್ತು ಕೃತಜ್ಞತೆಯನ್ನು ಆಲ್ ಅಮೇರಿಕ ತುಳು ಅಸೋಸಿಯೇಷನ್ (All America Tulu Association – AATA) ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ಸಲ್ಲಿಸಿದ್ದಾರೆ.

ತುಳು ಭಾಷೆಯ ಅಧಿಕೃತ ಮಾನ್ಯತೆಯ ಬೇಡಿಕೆಯನ್ನು ನಿರಂತರವಾಗಿ ಪ್ರಸ್ತಾಪಿಸಿದ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಸಚಿವರಾದ ಯು.ಟಿ. ಖಾದರ್, ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ಈ ಕಾರ್ಯಕ್ಕೆ ಬೆಂಬಲ ನೀಡಿದ ಎಲ್ಲ ಜನಪ್ರತಿನಿಧಿಗಳ ಕೊಡುಗೆಯನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಿದೆ.

ಬೋಸ್ಟನ್‌ನಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ AATA ಸಲ್ಲಿಸಿದ್ದ ಮನವಿ: ಹೆಮ್ಮೆಯ ನೆನಪು
ಈ ಸಂಭ್ರಮದ ಸಂದರ್ಭದಲ್ಲಿ ಆಲ್ ಅಮೇರಿಕ ತುಳು ಅಸೋಸಿಯೇಷನ್ ವತಿಯಿಂದ 2025ರ ಆಗಸ್ಟ್ 5ರಂದು ಅಮೇರಿಕದ ಬೋಸ್ಟನ್‌ನಲ್ಲಿ ಕೈಗೊಂಡ ಮಹತ್ವದ ಪ್ರಯತ್ನವನ್ನು ಹೆಮ್ಮೆಯಿಂದ ಸ್ಮರಿಸಿದೆ.

23 ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ಮತ್ತು ಉತ್ತರ ಪ್ರದೇಶದ ಇಬ್ಬರು ಶಾಸಕರು ಕರ್ನಾಟಕದಿಂದ ಬೋಸ್ಟನ್‌ಗೆ ಆಗಮಿಸಿದ್ದ ಸಂದರ್ಭದಲ್ಲಿ AATA ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್, ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ಪೂಜಾ ಶೆಟ್ಟಿ, ಜಂಟಿ ಕಾರ್ಯದರ್ಶಿ ರಂಜನಿ ಅಸೈಗೋಳಿ, ನಿರ್ದೇಶಕ ಫ್ರೆಡ್ರಿಕ್ ಫೆರ್ನಾಂಡಿಸ್ ಹಾಗೂ AATA ರಾಯಭಾರಿ ಮತ್ತು ನ್ಯೂ ಇಂಗ್ಲೆಂಡ್ ತುಳು ಕೂಟದ ಅಧ್ಯಕ್ಷ ಮೊಹೈರ್ ಶೆಟ್ಟಿ ಅವರನ್ನೊಳಗೊಂಡ ನಿಯೋಗವು ಕರ್ನಾಟಕದ ಜನಪ್ರತಿನಿಧಿಗಳಿಗೆ ಮನವಿಪತ್ರ ಸಲ್ಲಿಸಿತ್ತು.

ಅಂದಿನ ವಿಧಾನಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಮೂಲಕ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವುದು, ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಎಂದು ಮರುನಾಮಕರಣ ಮಾಡುವಂತೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿತ್ತು. ಈ ಮನವಿಗೆ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್ (Global Tuluvas), ಟೀಮ್ ಇಲೇಸ ಸೇರಿದಂತೆ ವಿವಿಧ ತುಳುಪರ ಸಂಘಟನೆಗಳ ಬೆಂಬಲವೂ ದೊರೆತಿತ್ತು.

ಇಂದು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ನಿರ್ಧಾರ ಹೊರಬಿದ್ದಿರುವ ಸಂದರ್ಭದಲ್ಲಿ ಅಂದು ಬೋಸ್ಟನ್‌ನಲ್ಲಿ ನಡೆದ ಆ ಸಭೆ ಮತ್ತು ಸಲ್ಲಿಸಿದ ಮನವಿಪತ್ರ ನಮ್ಮೆಲ್ಲರ ನೆನಪಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಮಹತ್ತರ ಸಾಧನೆಯ ಹಿಂದೆ ಅನೇಕ ದಶಕಗಳ ಸಾಮೂಹಿಕ ಹೋರಾಟವಿದೆ. ಆ ಹೋರಾಟದಲ್ಲಿ ಉತ್ತರ ಅಮೇರಿಕದ ತುಳುವರ ಧ್ವನಿಯನ್ನು ಕರ್ನಾಟಕದ ಜನಪ್ರತಿನಿಧಿಗಳ ಮುಂದೆ ತಲುಪಿಸುವ ಅವಕಾಶ AATAಗೆ ದೊರೆತಿರುವುದು ನಮಗೆ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀವಲ್ಲಿ ರೈ ಮಾರ್ಟೆಲ್ ಹೇಳಿದ್ದಾರೆ.

ತಳಮಟ್ಟದ ಹೋರಾಟಗಾರರಿಗೆ ಗೌರವಪೂರ್ವಕ ನಮನ
ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ದಶಕಗಳಿಂದ ಶ್ರಮಿಸಿದ ಸಾಹಿತಿಗಳು, ಸಂಶೋಧಕರು, ಭಾಷಾ ಹೋರಾಟಗಾರರು, ಕಲಾವಿದರು, ಶಿಕ್ಷಕರು ಹಾಗೂ ವಿವಿಧ ತುಳುಪರ ಸಂಘಟನೆಗಳ ಸೇವೆಯನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ AATA ಸ್ಮರಿಸಿದೆ.

ವಿಶೇಷವಾಗಿ ತುಳು ಭಾಷೆ ಮತ್ತು ತುಳು ಲಿಪಿಯ ಅಭಿವೃದ್ಧಿಗಾಗಿ ತಳಮಟ್ಟದಲ್ಲಿ ಶ್ರಮಿಸಿರುವ ಜಿ.ವಿ.ಎಸ್. ಉಳ್ಳಾಲ್ ಅವರ ಕೊಡುಗೆಯನ್ನು ಗೌರವಪೂರ್ವಕವಾಗಿ ನೆನಪಿಸಿಕೊಳ್ಳುತ್ತೇವೆ. ಅದೇ ರೀತಿ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್, ಟೀಮ್ ಇಲೇಸ, ಗ್ಲೋಬಲ್ ತುಳುವಾಸ್ ಹಾಗೂ ದೇಶವಿದೇಶಗಳ ವಿವಿಧ ತುಳು ಸಂಘಟನೆಗಳ ಪರಿಶ್ರಮವನ್ನು ಅಭಿನಂದಿಸುತ್ತೇವೆ. ಇದು ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಸಾಧನೆಯಲ್ಲ. ಹಲವು ತಲೆಮಾರುಗಳ ತುಳುವರ ನಿರಂತರ ಪರಿಶ್ರಮ, ಒಗ್ಗಟ್ಟು ಮತ್ತು ಮಾತೃಭಾಷೆಯ ಮೇಲಿನ ಪ್ರೀತಿಯ ಫಲವಾಗಿದೆ. ಅದೇ ರೀತಿ, ಸೆಪ್ಟೆಂಬರ್ 18ನ್ನು ವಿಶ್ವ ತುಳು ದಿನ (World Tulu Day) ಎಂದು ಘೋಷಿಸಿ, ಪ್ರತಿವರ್ಷ ತುಳು ಭಾಷೆ, ಸಾಹಿತ್ಯ, ಲಿಪಿ ಮತ್ತು ಸಂಸ್ಕೃತಿಯ ಸಂಭ್ರಮಾಚರಣೆಗೆ ಮೀಸಲಿಡಬೇಕೆಂದು ಕರ್ನಾಟಕ ಸರ್ಕಾರವನ್ನು AATA ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ವಿನಂತಿಸಿದ್ದಾರೆ.

Hot this week

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ...

ದುಬೈಯಲ್ಲಿ ಪದ್ಮಶಾಲಿ ಸಮುದಾಯದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ಭಕ್ತಿ,ಸಂಸ್ಕೃತಿ ಹಾಗೂ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾದ ಕಾರ್ಯಕ್ರಮ

ದುಬೈ, : ದುಬೈ ಪದ್ಮಶಾಲಿ ಸಮುದಾಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಭಕ್ತಿ,...

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

Related Articles

Popular Categories