ಬಹರೈನ್ಮುತ್ತುಗಳ ದ್ವೀಪದಲ್ಲಿ ಮೊಳಗಲಿದೆ ಕನ್ನಡದ ಕಹಳೆ; ನಾಳೆ ಬಹರೈನ್‌ನಲ್ಲಿ...

ಮುತ್ತುಗಳ ದ್ವೀಪದಲ್ಲಿ ಮೊಳಗಲಿದೆ ಕನ್ನಡದ ಕಹಳೆ; ನಾಳೆ ಬಹರೈನ್‌ನಲ್ಲಿ ‘ಕರುನಾಡ ವೈಭವ’ದ ಸಂಭ್ರಮ!

ಕನ್ನಡ ಸಂಘದ ವತಿಯಿಂದ ಅದ್ದೂರಿ ಸಾಂಸ್ಕೃತಿಕ ಹಬ್ಬ; ಗಣ್ಯರ ಉಪಸ್ಥಿತಿ, ಕಲಾ ವೈವಿಧ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆ

ಬಹರೈನ್: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕನ್ನಡಿಗರ ಅಭಿಮಾನವನ್ನು ವಿದೇಶಿ ನೆಲದಲ್ಲೂ ವೈಭವದಿಂದ ಅನಾವರಣಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಂಘ ಬಹರೈನ್ ವತಿಯಿಂದ ‘ಕನ್ನಡ ವೈಭವ 2026’ ಕಾರ್ಯಕ್ರಮವನ್ನು ನವೆಂಬರ್ 20, ಶುಕ್ರವಾರದಂದು ಕನ್ನಡ ಭವನದ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕನ್ನಡದ ಕಂಪು, ಸಂಸ್ಕೃತಿಯ ಸೊಗಡು ಹಾಗೂ ಕಲೆಯ ವೈವಿಧ್ಯ ಒಂದೇ ವೇದಿಕೆಯಲ್ಲಿ ಮೇಳೈಸಲಿರುವ ಈ ಸಂಭ್ರಮ ಸಂಜೆ 5 ಗಂಟೆಗೆ ಚೆಂಡೆ ಮೇಳದ ಭವ್ಯ ಸ್ವಾಗತದೊಂದಿಗೆ ಆರಂಭವಾಗಲಿದ್ದು, ಕನ್ನಡಿಗರಿಗೆ ಮನರಂಜನೆಯ ಜೊತೆಗೆ ಹೆಮ್ಮೆಯ ಕ್ಷಣಗಳನ್ನು ನೀಡಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಹರೈನ್‌ನ ಭಾರತದ ರಾಯಭಾರಿ ಡಾ. ಪ್ರದೀಪ್ ಸಿಂಗ್ ರಾಜಪುರೋಹಿತ್ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಟಿ. ಎ. ಶರವಣ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿರಲಿದ್ದಾರೆ. ವಿಶೇಷ ಅತಿಥಿಗಳಾಗಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಮಾಜಸೇವಕ, ಪ್ರವಾಸಿ ಭಾರತೀಯ ಸಮ್ಮಾನ್ ಪುರಸ್ಕೃತ ಮತ್ತು ಬಹರೈನ್‌ನ ಹಿರಿಯ ಉದ್ಯಮಿ ಕೆ. ಜಿ. ಬಾಬುರಾಜನ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿ ಕನ್ನಡ ಸಂಘದ ಸಮಗ್ರ ಚಿತ್ರಣವನ್ನು ಒಳಗೊಂಡ ಕನ್ನಡ ಸಂಘದ ವಾರ್ಷಿಕ ಸ್ಮರಣ ಸಂಚಿಕೆ ‘ಕಾವೇರಿ 2026’ ಬಿಡುಗಡೆಗೊಳ್ಳಲಿದ್ದು, ಇದೇ ವೇದಿಕೆಯಲ್ಲಿ ಡಿಜಿಟಲ್ ಸದಸ್ಯತ್ವ ಗುರುತಿನ ಚೀಟಿಯನ್ನೂ ಅನಾವರಣಗೊಳಿಸಲಾಗುವುದು.

ಕನ್ನಡ ವೈಭವದ ವೇದಿಕೆ ಕೇವಲ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸೀಮಿತವಾಗದೆ, ಪ್ರತಿಭೆ, ಜ್ಞಾನ ಮತ್ತು ಕಲಾತ್ಮಕ ಅಭಿವ್ಯಕ್ತಿಗಳ ಸಂಗಮವಾಗಲಿದೆ. ‘ಹ್ಯೂಮನ್ ಕಂಪ್ಯೂಟರ್’ ಖ್ಯಾತಿಯ ಬಸವರಾಜ್ ಉಮ್ರಾಣಿ ಅವರ ಗಣಿತ ಪ್ರೇರಣಾ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಿದ್ದರೆ, ಹೇಮಾ ವಿನಾಯಕ ಪಾಟೀಲ್ ಅವರ ಲೈವ್ ಥ್ರೆಡ್ ಪೇಂಟಿಂಗ್ ಕಲಾ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ.

ಸಂಗೀತದ ರಸದೌತಣಕ್ಕೆ ಖ್ಯಾತ ಗಾಯಕರಾದ ವಿದ್ವಾನ್ ಯಶವಂತ್ ಎಂ.ಜಿ. ಹಾಗು ಕೆ .ಜಿ .ಎಫ್ ಖ್ಯಾತಿಯ ಐರಾ ಉಡುಪಿ ಹಾಗೂ ಜಿ ಕನ್ನಡ ಸರಿಗಮ ಖ್ಯಾತಿಯ ಅಖಿಲ ಪಜಿಮಣ್ಣು ತಮ್ಮ ಗಾಯನದ ಮೂಲಕ ಮಧುರ ಸಂಜೆ ರೂಪಿಸಲಿದ್ದರೆ, ಸಂಘದ ಪ್ರತಿಭಾವಂತ ಕಲಾವಿದರುಗಳು ವೈವಿಧ್ಯಮಯ ನ್ರತ್ಯಪ್ರದರ್ಶನದ ಮೂಲಕ ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ.

1977ರಲ್ಲಿ ಸ್ಥಾಪನೆಯಾದ ಕನ್ನಡ ಸಂಘ ಬಹರೈನ್, ನಾಲ್ಕು ದಶಕಗಳಿಗೂ ಮೀರಿದ ತನ್ನ ಸುದೀರ್ಘ ಪಯಣದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕನ್ನಡಿಗರ ಒಗ್ಗಟ್ಟಿನ ಸಂರಕ್ಷಣೆ ಮತ್ತು ಬೆಳವಣಿಗೆಗೆ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದೆ. ಅನಿವಾಸಿ ಕನ್ನಡಿಗರ ನಡುವೆ ಕನ್ನಡದ ನೆಲ, ನುಡಿ, ಸಂಸ್ಕೃತಿಯ ಬಂಧವನ್ನು ಗಟ್ಟಿಗೊಳಿಸುವಲ್ಲಿ ಸಂಘದ ಪಾತ್ರ ಮಹತ್ವದ್ದಾಗಿದೆ.
ಕನ್ನಡದ ಕಲೆ, ಸಂಸ್ಕೃತಿ, ಪ್ರತಿಭೆ ಹಾಗೂ ಒಗ್ಗಟ್ಟಿನ ಸಂಭ್ರಮವನ್ನು ಸಾರಲಿರುವ ‘ಕನ್ನಡ ವೈಭವ 2026’ ಕಾರ್ಯಕ್ರಮದಲ್ಲಿ ಬಹರೈನ್‌ನ ಸಮಸ್ತ ಕನ್ನಡಿಗರು ಕುಟುಂಬ ಸಮೇತರಾಗಿ ಭಾಗವಹಿಸಿ, ಕನ್ನಡದ ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಕಾರ್ಯಕಾರಿ ಸಮಿತಿಯು ದ್ವೀಪದ ಕನ್ನಡಿಗರಿಗೆ ಮನವಿ ಮಾಡಿದೆ.

ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಅವರನ್ನು ದೂರವಾಣಿ ಸಂಖ್ಯೆ 36721660 ಅಥವಾ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಅವರನ್ನು ದೂರವಾಣಿ ಸಂಖ್ಯೆ 33946655 ಮೂಲಕ ಸಂಪರ್ಕಿಸಬಹುದು.

ವರದಿ-ಕಮಲಾಕ್ಷ ಅಮೀನ್

Hot this week

ಜಪಾನ್‌ನಲ್ಲಿ ‘ನಾವಿಕೋತ್ಸವ’ಕ್ಕೆ ಭರದ ಸಿದ್ಧತೆ: ಅಮೇರಿಕದಿಂದ ಹೊರಟ ಕನ್ನಡಿಗರು!

ಟೋಕಿಯೋ(ಜಪಾನ್): ಉದಯಿಸುವ ಸೂರ್ಯನ ನಾಡಾದ ಜಪಾನ್‌ನಲ್ಲಿ ಕನ್ನಡದ ಕಂಪು ಪಸರಿಸಲು ವೇದಿಕೆ...

ಬೆಲ್ಜಿಯಂನಲ್ಲಿ ‘ಕರ್ನಾಟಕ ಕಲಾ ಉತ್ಸವ 2026’

ಕೊರ್ಟೆನ್‌ಬರ್ಗ್(ಬೆಲ್ಜಿಯಂ): ಕರ್ನಾಟಕದ ಶ್ರೀಮಂತ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವು ಇತ್ತೀಚೆಗೆ...

ದುಬೈ: ಅಲ್ ಖಮರ್ ಟ್ರಸ್ಟ್ ಮೂಳೂರು ವತಿಯಿಂದ ಯಶಸ್ವಿ ರಕ್ತದಾನ ಶಿಬಿರ; 80ಕ್ಕೂ ಅಧಿಕ ಮಂದಿಯಿಂದ ರಕ್ತದಾನ

ದುಬೈ: ಅಲ್ ಖಮರ್ ಟ್ರಸ್ಟ್ ಮೂಳೂರು ವತಿಯಿಂದ ದುಬೈ ಆರೋಗ್ಯ ಪ್ರಾಧಿಕಾರದ...

ದೋಹಾ; ಕೇಂದ್ರ ಸಚಿವ ಡಾ.ಚಂದ್ರಶೇಖರ್ ಪೆಮ್ಮಸಾನಿಯನ್ನು ಭೇಟಿಯಾದ ಕರ್ನಾಟಕ ಸಂಘ ಖತರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು

ದೋಹಾ: ಕರ್ನಾಟಕ ಸಂಘ ಖತರ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಭಾರತ...

Related Articles

Popular Categories