ದುಬೈ: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (BCCI) ಯುಎಇ ನೇತೃತ್ವದಲ್ಲಿ 2025ರ ಫೆಬ್ರವರಿ 9ರಂದು ದುಬೈಯ ಇತಿಸಲಾತ್ ಅಕಾಡಮಿ ಮೈದಾನದಲ್ಲಿ ‘ಬ್ಯಾರಿ ಮೇಳ’ ಜರುಗಲಿದೆ.
ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಬ್ಯಾರಿ ಮೇಳದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಅಜ್ಮಾನ್ ನ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಂಬೆ ಗ್ರೂಪ್ ಸ್ಥಾಪಕ, ಅನಿವಾಸಿ ಉದ್ಯಮಿ ಡಾ.ತುಂಬೆ ಮೊಯ್ದಿನ್ ಅವರು ಪೋಸ್ಟರ್ ಬಿಡುಗಡೆ ಮಾಡಿ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತ ಚಾಲನೆ ನೀಡಿದರು.

ಬಿಸಿಸಿಐ ಯುಎಇ ಅಧ್ಯಕ್ಷ ಹಿದಾಯತ್ ಅಡ್ಡೂರ್ ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರದ ಇತಿಹಾಸದ ಬಗ್ಗೆ ಮಾತನಾಡಿ, ಬಿಸಿಸಿಐನ ಗುರಿ ಹಾಗೂ ಬ್ಯಾರಿ ಮೇಳದ ಉದ್ದೇಶದ ಬಗ್ಗೆ ವಿವರಿಸಿದರು.
ಬ್ಯಾರಿ ಮೇಳದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ, ಭಾಗವಹಿಸುವ ಅತಿಥಿಗಳ ಬಗ್ಗೆ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಹಂಝ ಅಬ್ದುಲ್ ಖಾದರ್, ಮುಹಮ್ಮದ್ ಅಲಿ ಉಚ್ಚಿಲ್, ಇಮ್ರಾನ್ ಎರ್ಮಾಳ್ ವಿವರಿಸಿದರು.

ಅಂದು ನಡೆಯಲಿರುವ ಉದ್ಯೋಗ ಮೇಳ, ದೊರಕಲಿರುವ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಮಹಮ್ಮದ್ ಮುಶ್ತಾಕ್ ಮಾಹಿತಿ ನೀಡಿದರು.
ಬ್ಯಾರಿ ಮೇಳದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಯಶಸ್ವಿ ಉದ್ಯಮಿಗಳನ್ನು, ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು, ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು, ವಿವಿಧ ಉದ್ಯಮ ಕ್ಷೇತ್ರದ 60ಕ್ಕೂ ಹೆಚ್ಚಿನ ಮಳಿಗೆಗಳು ಇರಲಿವೆ.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಯುಎಇಯ ಪ್ರಮುಖ ಬ್ಯಾರಿ ಸಂಘಟನೆಗಳಾದ ಬಿಸಿಎಫ್, ಬಿ.ಡಬ್ಲ್ಯು.ಎಫ್., ಕೆಸಿಎಫ್., ಕೆಐಸಿ, ದಾರುಲ್ ಇರ್ಷಾದ್, ಡಿಕೆಎಸ್ ಸಿ, ಕೆಎಂಎಎಸ್, ಹಿದಾಯ ಫೌಂಡೇಶನ್, ಕೆಡಿಸಿ, ಅಲ್ ಖಮರ್, ಎಸ್ ಯುಎಸಿ, ಪ್ರವಾಸಿ ಕೂಟ ವಿಟ್ಲ, ಟಿಓಡಿ, ಕೆಎಎಫ್, ಕೆಎಂಎಜೆ, ಎಂಎಫ್ ಡಿ, ಎಸ್ಕೆಎಸ್ಸೆಸ್ಸೆಫ್ ಯುಎಇ, ದಾರುನ್ನೂರು, ದಾರುಸ್ಸಲಾಂ, ಶಂಸುಲ್ ಉಲಮಾ ಸೆಂಟರ್, ದಾರುಲ್ ಹಸನಿಯ್ಯ ಎಜುಕೇಶನ್ ಸೆಂಟರ್, ಅಲ್ ಇಸ್ಲಾಮೀಯ ವೆಲ್ಫೇರ್, ಮೂಳೂರು ವೆಲ್ಫೇರ್, ಅಲ್ ಹುದಾ, ಅಲ್ ಇಬಾದ್ ಇಂಡಿಯನ್ ಸ್ಕೂಲ್, ನೂರ್ ಫ್ರೆಂಡ್ಸ್, ಸಾದಿಯ ಬೆಂಗಳೂರು, ಕೊಡಗು ವೆಲ್ಫೇರ್, ಮಸ್ದರ್ ಕೊಪ್ಪಳ, ಅಲ್ ಮದೀನಾ ಮಂಜನಾಡಿ, ಮುಹಿನ್ನುಸುನ್ನ ದಾವಣಗೆರೆ, ಮರ್ಕಝ್ ಉಲ್ ಹುದಾ ಕುಂಬ್ರ, ದಾರುಲ್ ಹುದಾ ಬೆಳ್ಳಾರೆ ಸಂಘಟನೆ ಮುಖಂಡರು, ಉದ್ಯಮಿಗಳು ಭಾಗವಹಿಸಿದ್ದರು.
ಬ್ಯಾರಿ ಮೇಳ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ರಫ್ ಷಾ ಮಂತೂರ್ ವಂದಿಸಿದರು. ಬಿಸಿಸಿಐ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.