ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಆಶ್ರಯದಲ್ಲಿ ಫೆಬ್ರವರಿ 9ರ ರವಿವಾರದಂದು ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ‘ಬ್ಯಾರಿ ಮೇಳ-2025’ಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಈ ಬಗ್ಗೆ ‘ಬ್ಯಾರಿ ಮೇಳ-2025’ರ ಸಂಚಾಲಕ, ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶ್ರಫ್ ಷಾ ಮಂತೂರ್ ಹಾಗು ಸಹ ಸಂಚಾಲಕ ಮುಶ್ತಾಕ್ ಕದ್ರಿ(ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ) ‘globalkannadiga.com’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಗಲ್ಫಿನಲ್ಲಿ ಈವರಗೆ ನಡೆಯದಂಥ ಕಾರ್ಯಕ್ರಮಕ್ಕೆ ನಾವು ಕೈಹಾಕಿದ್ದೇವೆ. ಈ ಬ್ಯಾರಿ ಮೇಳಕ್ಕೆ ಈಗಾಗಲೇ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ ನಾವು ನಿರೀಕ್ಷಿದ್ದಕ್ಕಿಂತಲೂ ಮಿಗಿಲಾದ ಯಶಸ್ಸು ಕಾಣುವ ಸಾಧ್ಯತೆ ಇದೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಬ್ಯಾರಿ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು, ಹತ್ತಲವು ಸ್ವಯಂಸೇವಕರ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಈ ಕಾರ್ಯಕ್ರಮ ನಡೆಯುವ ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಮ್ಮ ಕಾರ್ಯಕರ್ತರ ತಂಡ ಹಗಲಿರುಳು ಎನ್ನದೆ ಶ್ರಮಿಸುತ್ತಿದೆ ಎಂದು ಅಶ್ರಫ್ ಷಾ ಮಂತೂರ್-ಮುಶ್ತಾಕ್ ಕದ್ರಿ ಹೇಳಿದರು.
ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿದೆ…
ಫೆಬ್ರವರಿ 9ರಂದು ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಲಿರುವ ಕಾರ್ಯಕ್ರಮ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಮಹಿಳೆಯರ ಅಡುಗೆ ಸ್ಪರ್ಧೆ, ಉದ್ಯೋಗ ಮೇಳ, ಬ್ಯುಸಿನೆಸ್ ಸೆಮಿನಾರ್, ಬ್ಯುಸಿನೆಸ್ ಅವಾರ್ಡ್, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಜಾನಪದ ಕಲೆಗಳಾದ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್, ಅರೆಬಿಕ್ ಸಾಂಸ್ಕೃತಿಕ ನೃತ್ಯ, ‘ಪೋಕರಾಕ BA -LLB’ ಹಾಸ್ಯಮಯ ನಾಟಕ, ಕಾಮಿಡಿ ಕಾರ್ಯಕ್ರಮ, ಮಕ್ಕಳ ಮನೋರಂಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮಧ್ಯೆ ‘ಬ್ಯಾರಿ ಸಂದಲ್(ಮೆರವಣಿಗೆ)’ ನಡೆಯಲಿದ್ದು, ಇದು ಎಲ್ಲರ ಗಮನ ಸೆಳೆಯಲಿದೆ. ಅತ್ಯಂತ ಆಕರ್ಷಣೆಯ ಬ್ಯಾರಿ ಫುಡ್ ಫೆಸ್ಟ್ ಇದೆ. ನಮ್ಮ ಕರಾವಳಿಯ ಎಲ್ಲಾ ವಿಶೇಷ ತಿಂಡಿ ತಿನಿಸುಗಳ ಮಳಿಗೆ, ಇನ್ನಿತರ ವಸ್ತುಗಳ ಮಳಿಗೆ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಮಳಿಗೆಗಳು ಈ ಮೇಳದಲ್ಲಿ ಇರಲಿದೆ ಎಂದವರು ಮಾಹಿತಿ ನೀಡಿದರು.
ಯಾರೆಲ್ಲ ಗಣ್ಯರು ಭಾಗವಹಿಸಲಿದ್ದಾರೆ ನೋಡಿ…
ಗಲ್ಫ್ ದೇಶ (GCC Country) ಹಾಗು ಭಾರತದ ಸುಮಾರು 130 ಗಣ್ಯರು ಬ್ಯಾರಿ ಮೇಳದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ, ಬೆಂಗಳೂರು ಶಾಂತಿ ನಗರ ಶಾಸಕ N.A ಹಾರಿಸ್, ಮಂಜೇಶ್ವರ ಶಾಸಕ AKM ಅಶ್ರಫ್, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಎಂಎಲ್ಸಿ ರಾಜೇಂದ್ರ ರಾಜಣ್ಣ, ಸರ್ಕಾರದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೂಝ್ ಖಾನ್, ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್, ಕರ್ನಾಟಕ ರಾಜ್ಯ ಆಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೋ, ಕೆಎಸ್ಎ ಅಲ್ ಜುಬೈಲ್‌ನ ಎಕ್ಸ್ಪಟೈಸ್ ಗ್ರೂಪ್’ನ ಆಸಿಫ್ ಕರ್ನಿರೆ, ಅಲ್ ಮುಝೈನ್’ನ ಝಕರಿಯ ಜೋಕಟ್ಟೆ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ ಎಂದು ಅಶ್ರಫ್ ಷಾ ಮಂತೂರ್-ಮುಶ್ತಾಕ್ ಕದ್ರಿ ತಿಳಿಸಿದರು.
ಮೇಳದಲ್ಲಿ ಉದ್ಯಮ, ಉದ್ಯಮಿಗಳಿಗೆ ಹೆಚ್ಚಿನ ಒತ್ತು: ಬಿಸಿಸಿ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್
ಬ್ಯಾರಿ ಯುವ ಉದಯೋನ್ಮುಖ ಉದ್ಯಮಿಗಳಿಗೆ “ಬ್ಯಾರಿ ಶಾರ್ಕ್ ಥಿಂಕ್” ಮೂಲಕ ಹೂಡಿಕೆದಾರರನ್ನು ನೇರವಾಗಿ ಒದಗಿಸುವ ವೇದಿಕೆಯನ್ನು ಬ್ಯಾರಿಯು ಮೇಳ ಸಜ್ಜುಗೊಳಿಸಿದೆ ಎಂದು ಬಿಸಿಸಿ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್ ತಿಳಿಸಿದರು.
“ಬ್ಯಾರಿ ಶಾರ್ಕ್ ಥಿಂಕ್” ವಿಷಯದಲ್ಲಿ ಈಗಾಗಲೇ 8 ಮಂದಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅವರು ಈ ಮೇಳದಲ್ಲಿ ಹೊಸ ಉದ್ಯಮದ ಬಗೆಗಿನ ತಮ್ಮ ಪ್ಲಾನ್’ನ್ನು ಮುಂದಿಡಲಿದ್ದಾರೆ. ಇದನ್ನು ಅಲ್ಲಿರುವ ತೀರ್ಪುಗಾರರು ತೀರ್ಮಾನಿಸಿ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಮುಂದೆ ಅದಕ್ಕೆ ಹೂಡಿಕೆದಾರರು ಕೈಜೋಡಿಸಲಿದ್ದಾರೆ. ‘ಬ್ಯಾರಿ ಶಾರ್ಕ್ ಥಿಂಕ್’ನಲ್ಲಿ ಐಟಿ, ಮಾರುಕಟ್ಟೆ ಸೇರಿದಂತೆ ವಿವಿಧ ಕ್ಷೇತಗಳ ಉದ್ಯಮಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಬಶೀರ್ ಕಿನ್ನಿಂಗಾರ್ ಹೇಳಿದರು.
ಬಿಸಿನೆಸ್ ಸೆಮಿನಾರ್’ನಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿರುವ ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರು, ವ್ಯಾಪಾರ ನಾವೀನ್ಯತೆ, ಬೆಳವಣಿಗೆ ಮತ್ತು ಸುಸ್ಥಿರತೆ(Business Innovation Growth & Sustainability) ಬಗ್ಗೆ ಮಾತನಾಡಲಿದ್ದಾರೆ.
ನೌಫಾಲ್ ಎಂ. & ಕಂಪನಿಯ ಆಡಳಿತ ಪಾಲುದಾರ ಸಿಎ ನೌಫಾಲ್ ಮೊಹಮ್ಮದ್ ಅವರು ‘NRI ತೆರಿಗೆ – ಅಪಾಯ ಮತ್ತು ಪ್ರತಿಫಲಗಳು'(NRI taxation-risk & rewards) ಎಂಬ ವಿಷಯದ ಕುರಿತು ಸವಿವರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ.
ಟೆಕ್ ಪ್ರೊಕ್ಸಿಮ ಸ್ಥಾಪಕ ಹಾಗು ಸಿಇಒ ಶೇಖ್ ಸಲೀಂ ಅವರು ವ್ಯವಹಾರ ನಾಯಕತ್ವದ ಒಳನೋಟಗಳು(Harnessing generative AI; insights For business leaders) ಕುರಿತು ಮಾತನಾಡಲಿದ್ದಾರೆ. ಜೊತೆಗೆ ದುಬೈಯ ರಿಯಲ್ ಎಸ್ಟೇಟ್ ಬಗ್ಗೆ ನಡೆಯುವ ಪ್ಯಾನೆಲ್ ಚರ್ಚೆಯಲ್ಲಿ ಹಲವು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರ ನೀಡಿದರು.