ಯುಎಇದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ಡಾ. ಶಿವರಾಜ್ ಕುಮಾರ್, ರಮ್ಯಾ, ಡಾ. ರೊನಾಲ್ಡ್ ಕೊಲಾಸೋ, ಡಾ. ಆರತಿ ಕೃಷ್ಣರಿಗೆ ವಿಶೇಷ ಸನ್ಮಾನ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್ ಅವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ 2025 ಅನ್ನು ದುಬೈಯ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರನ್ನು “ಅಂತರರಾಷ್ಟ್ರೀಯ ಕನ್ನಡ ರತ್ನ 2025” ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಅವರ 40ಕ್ಕೂ ಹೆಚ್ಚು ವರ್ಷಗಳ ಚಲನಚಿತ್ರ ಸೇವೆ ಹಾಗೂ ಸಮಾಜಮುಖಿ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಿವಣ್ಣ, “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು!” ಎಂದು ಹೇಳಿದರು.

“ಗಲ್ಫ್‌ನಲ್ಲಿರುವ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಸಂಸ್ಕೃತಿಯನ್ನು ಕಲಿಸುತ್ತಿರುವುದು ಹೆಮ್ಮೆಯ ಸಂಗತಿ. ನಾನು ಎಲ್ಲ ಕನ್ನಡ ಕಾರ್ಯಕ್ರಮಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವಂತೆಯೇ ಭಾವಿಸುತ್ತೇನೆ,” ಎಂದು ಹೇಳಿದರು.

ಈ ಸಂದರ್ಭ ಡಾ. ಶಿವರಾಜ್ ಕುಮಾರ್ ಅವರ ಜೀವನಗಾಥೆಯನ್ನೊಳಗೊಂಡ ಜೀವಚರಿತ್ರೆ “ಶ್ರೀಮುತ್ತು: ಚಂದನವನದ ತಾರೆಯ ಜೀವನಗಾಥೆ” ಪುಸ್ತಕದ ಆಧಿಕೃತ ಬಿಡುಗಡೆ ನೆರವೇರಿತು. ಈ ಕೃತಿ ಅವರ ವೃತ್ತಿಪರ ಪಯಣ, ವ್ಯಕ್ತಿತ್ವ, ಸಾಧನೆಗಳು ಹಾಗೂ ಕನ್ನಡ ಸಿನೆಮಾ ಪರಂಪರೆಯ ಮೇಲಿನ ಅವರ ಪ್ರಭಾವವನ್ನು ಸಮಗ್ರವಾಗಿ ಚಿತ್ರಿಸಿದೆ. ಈ ಬಿಡುಗಡೆಗೆ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರಿಗೆ “ಕನ್ನಡದ ಕಣ್ಮಣಿ ಪ್ರಶಸ್ತಿ 2025” ನೀಡಿ ಗೌರವಿಸಲಾಯಿತು. ಭಾವಪೂರ್ಣ ಭಾಷಣದಲ್ಲಿ ಅವರು ಹೇಳಿದರು — “ಇಂದು ನಾನು ಈ ವೇದಿಕೆಯಲ್ಲಿ ನಿಂತಿರುವುದು ಡಾ. ರಾಜ್‌ಕುಮಾರ್ ಅವರ ಕುಟುಂಬದ ಆಶೀರ್ವಾದದಿಂದ. ನನ್ನ ಕೊನೆಯ ಸಿನಿಮಾ ‘ಆರ್ಯನ್’ ಶಿವಣ್ಣ ಜೊತೆ ಆಗಿತ್ತು; ಮರಳುವುದಾದರೆ ಮತ್ತೆ ಅವರ ಜೊತೆಯೇ ಇರಲಿ.” ಅವರ ಮಾತುಗಳಿಗೆ ಸಭಾಂಗಣದಿಂದ ಭಾರೀ ಚಪ್ಪಾಳೆ ಮೊಳಗಿತು.

ಉದ್ಯಮಿ ಡಾ. ರೊನಾಲ್ಡ್ ಕೊಲಾಸೋ ಅವರಿಗೆ “ಅಂತರರಾಷ್ಟ್ರೀಯ ಸೇವಾ ರತ್ನ – 2025” ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ನಾನು ಈ ಗೌರವಕ್ಕೆ ಯೋಗ್ಯನಲ್ಲವೆಂದು ಭಾವಿಸಿದ್ದೆ. ನಾನು ಮಾಡುತ್ತಿರುವುದು ಸಮಾಜಕ್ಕೆ ಹಿಂತಿರುಗಿಸುವ ನನ್ನ ಕರ್ತವ್ಯ ಮಾತ್ರ. ಜನರು ತಮ್ಮ ಆದಾಯದ ಕನಿಷ್ಠ 1%ವಾದರೂ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟರೆ ಈ ಲೋಕ ಉತ್ತಮವಾಗುತ್ತದೆ.” ಎಂದರು.

ಈ ಸಂದರ್ಭದಲ್ಲಿ ಅವರ ಜೀವನಚರಿತ್ರೆ “ವಿಶ್ವಭೂಷಣ ಡಾ. ರೊನಾಲ್ಡ್ ಕೊಲಾಸೋ” ಪುಸ್ತಕದ ಬಿಡುಗಡೆ ನೆರವೇರಿತು. ಈ ಕೃತಿ ಅವರ ಶಿಕ್ಷಣ, ಉದ್ಯಮ, ಸಾಮಾಜಿಕ ಸೇವೆ ಹಾಗೂ ಮಾನವೀಯ ಮೌಲ್ಯಗಳ ಬಿಂಬವಾಗಿದೆ.

ಕಾರ್ಯಕ್ರಮದಲ್ಲಿ NRI Forum of Karnataka ಉಪಾಧ್ಯಕ್ಷೆ (Cabinet Rank) ಡಾ. ಆರತಿ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಮಾತನಾಡಿದ ಅವರು, “ಬಹ್ರೈನ್‌ನಲ್ಲಿ ಇದ್ದಂತೆ ದುಬೈಗೂ ಕನ್ನಡ ಭವನ ಅಗತ್ಯ. ಸರ್ಕಾರದ ಎಲ್ಲ ಅನುಮತಿಗಳನ್ನು ಪಡೆದು ದುಬೈ ಕನ್ನಡ ಭವನದ ಕನಸನ್ನು ನನಸಾಗಿಸಲು ಸಹಕರಿಸುತ್ತೇನೆ,” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡಿಗರ ಕೂಟದ ಹಿರಿಯ ಪೋಷಕ ಮೊಹಮ್ಮದ್ ಮುಸ್ತಫಾ (M Square Engineering Consultants) ಅವರಿಗೆ “ಪುನೀತ್ ರಾಜ್‌ಕುಮಾರ್ ಪ್ರಶಸ್ತಿ” ಪ್ರದಾನಿಸಲಾಯಿತು. ಅವರು ಕಳೆದ ಎರಡು ದಶಕಗಳಿಂದ ಸಂಘದ ವಿವಿಧ ಕನ್ನಡ ಕಾರ್ಯಕ್ರಮಗಳಿಗೆ ನೀಡಿದ ನಿಸ್ವಾರ್ಥ ಸಹಕಾರಕ್ಕಾಗಿ ಗೌರವಿಸಲ್ಪಟ್ಟರು.

ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಬೆಂಗಳೂರಿನ ಕಲಾವಿದರು ನೀಡಿದ ನೃತ್ಯ, ಸಂಗೀತ, ನಾಟಕ ಪ್ರದರ್ಶನಗಳು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ನಾಡಿನ ನುಡಿಯ ಶ್ರೇಷ್ಠತೆಯನ್ನು ಮೆರೆದವು.

ಭರತನಾಟ್ಯದಿಂದ ಹಿಡಿದು ಜನಪದ ನೃತ್ಯವರೆಗೆ, ಮಕ್ಕಳಿಂದ ಮಹಿಳೆಯರ ವರೆಗೆ ಎಲ್ಲರೂ ಕನ್ನಡದ ಪರಿಮಳವನ್ನು ವೇದಿಕೆಯಲ್ಲಿ ಹರಿಸಿದರು.

ಪ್ರೇಕ್ಷಕರನ್ನು ನಗುವಿನ ಮಳೆಗೊಳಿಸಿದ ಗಿಚ್ಚಿ ಗಿಲಿಗಿಲಿ ತಂಡದ ಹಾಸ್ಯ ಪ್ರದರ್ಶನವೂ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಹರೀಶ್, ಹುಲಿ ಕಾರ್ತಿಕ್, ಸುಷ್ಮಿತಾ ಮತ್ತು ಜಗ್ಗಪ್ಪ ಅವರ ನಗುವಿನ ಪ್ರದರ್ಶನ ಪ್ರೇಕ್ಷಕರ ಮನಸ್ಸಿನಲ್ಲಿ ನಲಿವು ಮೂಡಿಸಿತು.

ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, “ದುಬೈ ಕನ್ನಡಿಗರ ಏಕತೆ, ಪ್ರೀತಿ ಮತ್ತು ಸಂಸ್ಕೃತಿ ಈ ರಾಜ್ಯೋತ್ಸವದ ನಿಜವಾದ ಶಕ್ತಿ. ಎಲ್ಲರ ಸಹಕಾರದಿಂದ ಈ ಹಬ್ಬ ಯಶಸ್ವಿಯಾಗಿದೆ.” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಣ್ಣನ್ ರವಿ ಬರಾಕ್ ಹೋಟೆಲ್ ನ ಮಾಲೀಕರು, ನಿರ್ಮಾಪಕರಾದ ಶ್ರೀಕಾಂತ್, ನಟರಾದ ಸ್ಯಾಂಡಿ, ಪ್ರವೀಣ್ ಶೆಟ್ಟಿ ಮಾಲೀಕರು ಫಾರ್ಚ್ಯೂನ್ ಗ್ರೂಪ್ ಒಫ್ ಹೋಟೆಲ್ಸ್ ಮತ್ತು ಕನ್ನಡಿಗರ ಕೂಟದ ಸಲಹೆಗಾರರಾದ ವೀರೇಂದ್ರಬಾಬು, ಉಮಾ ವಿದ್ಯಾಧರ್, ಇಬ್ರಾಹಿಂ ಖಲೀಲ್ ,ಅಶ್ರಫ್ ಶಾ ಮಂತೋರ್, ಛಾಯಾ ಕೃಷ್ಣಮೂರ್ತಿ ಅಲ್ಲದೇ ಸಂಘದ ಉಪಾಧ್ಯಕ್ಷರಾದ ವಿನೀತ್ ರಾಜ್, ಕಾರ್ಯದರ್ಶಿಗಳಾದ ಚೇತನ್ ಸುಬ್ರಮಣ್ಯ, ಸದಸ್ಯರಾದ ಶ್ರೀನಿವಾಸ್ ಅರಸ್, ಡಾ. ನಿರುಪಮಾ, ವೆಂಕಟರಮಣ ಕಾಮತ್, ವಿನಾಯಕ ಹೆಗಡೆ, ನಟರಾಜ್, ಅಭಿಜಿತ್ ಗಣೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕನ್ನಡಿಗರ ಕೂಟ ಮತ್ತು ಗಲ್ಫ್ ಕನ್ನಡ ಮೂವೀಸ್ ನ ಎಲ್ಲ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು. ರವಿ ಸಂತು ಅವರ ನಿರೂಪಣೆಯಲ್ಲಿ ನೆಡೆದ ಸುಂದರ ಹಬ್ಬದಲ್ಲಿ, ಗಲ್ಫ್ ಕನ್ನಡ ಮೂವೀಸ್ ನ ಮುಖ್ಯಸ್ಥರಾದ ದೀಪಕ್ ಸೋಮಶೇಖರ್ ಅವರು ಸರ್ವರನ್ನು ಸ್ವಾಗತಿಸಿದರು. ಕನ್ನಡಿಗರು ಕೂಟದ ಮುಖ್ಯ ಸಲಹೆಗಾರರಾದ ಸಾಧನ್ ದಾಸ್ ಪ್ರಾಸ್ತಾವಿಕ ಭಾಷಣ ಮಾಡಿದರೆ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಅಂಗಡಿಯವರ ವಂದನಾರ್ಪಣೆಯೊಂದಿಗೆ ಸಂಪನ್ನವಾಯಿತು. ಕಲಾ, ಸಂಸ್ಕೃತಿ, ಮಾನವೀಯತೆ, ಕನ್ನಡಾಭಿಮಾನ — ಇವೆಲ್ಲವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ದುಬೈ ಕನ್ನಡ ರಾಜ್ಯೋತ್ಸವ 2025, ಕೇವಲ ಒಂದು ಕಾರ್ಯಕ್ರಮವಲ್ಲ, ವಿಶ್ವದ ಕನ್ನಡಿಗರ ಹೆಮ್ಮೆಗೊಂಡ ಒಗ್ಗಟ್ಟಿನ ಉತ್ಸವವಾಗಿ ಇತಿಹಾಸ ನಿರ್ಮಿಸಿತು.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

Related Articles

Popular Categories