ದುಬೈ: ಯುಎಇಯ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ ಕಾರ್ಯಕ್ರಮವು 2025 ಜೂನ್ ತಿಂಗಳಲ್ಲಿ ನಡೆಯಲಿದ್ದು, ಇದರ “ದುಬೈ ಯಕ್ಷೋತ್ಸವ -2025” ಕಾರ್ಯಕ್ರಮದ ಪೂರ್ವ ತಯಾರಿ ಶುಭಾರಂಭ ಪ್ರಯುಕ್ತ ಮುಹೂರ್ತ ಪೂಜಾ ಸಮಾರಂಭವು ಇತ್ತೀಚೆಗೆ ದುಬೈಯ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.



ಲಕ್ಷ್ಮಿಕಾಂತ್ ಭಟ್ ಮತ್ತು ಸಂತೋಷ್ ರಾವ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ವಿವಿಧ ವೈದಿಕ ಮತ್ತು ಸಭಾ ಕಾರ್ಯಕ್ರಮಗಳು ಜರುಗಿತು. ಬೆಳಗ್ಗೆ ಯಕ್ಷಗಾನ ಅಭ್ಯಾಸ ಕೇಂದ್ರದ ಸದಸ್ಯ ಸದಸ್ಯೆಯರಿಂದ ಭಜನೆ, ಮಹಿಳಾ ಭಾಗವತರಿಂದ ಗಣಪತಿ ಸ್ತುತಿ, ದೇವಿ ಸ್ತುತಿ ನಡೆಯಿತು.
ನಂತರ ಕೇಂದ್ರದ ಕಲಾವಿದರಿಂದ ಜೂನ್ ತಿಂಗಳಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಂಗದ ಮುಹೂರ್ತ ಹಾಗು ಕೇಂದ್ರದ ಹೊಸ ಬಾಲ ಕಲಾವಿದರ ಗೆಜ್ಜೆ ಸೇವೆ, ನಂತರ ದೇವರಿಗೆ ಮಹಾ ಪೂಜೆ ನಡೆಯಿತು.





ಸರಳ ರೀತಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಬ್ರಾಹ್ಮಣ ಸಮಾಜ ಯುಎಇಯ ಅಧ್ಯಕ್ಷ ಸುಧಾಕರ ರಾವ್ ಪೇಜಾವರ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿಗಳಾದ ಹರೀಶ್ ಬಂಗೇರ, ರಮಾನಂದ ಶೆಟ್ಟಿ, ದುಬೈ ಕರ್ನಾಟಕ ಸಂಘದ ಮನೋಹರ ಹೆಗ್ಡೆ, ಮೊಗವೀರ ಸಮಾಜದ ಬಾಲಕೃಷ್ಣ ಸಾಲಿಯಾನ್, ಸಂಘಟಕರಾದ ಪದ್ಮನಾಭ ಕಟೀಲು, ಪ್ರಭಾಕರ ಸುವರ್ಣ ಕರ್ನಿರೆ, ವಾಸು ಶೆಟ್ಟಿ, ವಿಶ್ವನಾಥ ಶೆಟ್ಟಿ, ಹರೀಶ್ ಕೋಡಿ, ತಂಡದ ಕಲಾವಿದರಾದ ಭವಾನಿ ಶಂಕರ ಶರ್ಮಾ, ವೆಂಕಟೇಶ್ ಶಾಸ್ತ್ರಿ ಪುತ್ತಿಗೆ, ತಂಡದ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್, ನೃತ್ಯ ಗುರು ಶರತ್ ಕುಡ್ಲ ಉಪಸ್ಥಿತರಿದ್ದು, ಜೂನ್ ತಿಂಗಳಲ್ಲಿ ನಡೆಯುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಯುಎಇಯ ತುಳು, ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಕೇಂದ್ರ ಹತ್ತು ವರ್ಷ ನಡೆದು ಬಂದ ದಾರಿಯನ್ನು ನೆನಪಿಸಿ, ಜೂನ್ 29 ರಂದು ನಗರದ ಕರಮಾದ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಕರಾವಳಿಯ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ದೇವಿ ಪ್ರಸಾದ್ ಆಳ್ವ ತಲಪಾಡಿ, ಕಾವ್ಯಶ್ರೀ ಅಜೇರು ಇವರಿಂದ “ಗಾನ ವೈಭವ”. ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ಒಂದುವರೆ ಗಂಟೆಗೆ ಕೇಂದ್ರದ ಕಲಾವಿದರಿಂದ ಹಾಗೂ ಊರಿನ ಪ್ರಸಿದ್ಧ ಕಲಾವಿದರಾದ ಕಾಸರಗೋಡು ಸುಬ್ಬಯ್ಯ ಹೊಳ್ಳ ಮತ್ತು ಅರುಣ್ ಕೋಟ್ಯಾನ್ ಅವರ ಕೂಡುವಿಕೆಯಿಂದ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಮತ್ತು ಛಂದೋಬ್ರಹ್ಮ ಎನ್ ನಾರಯಣ ಶೆಟ್ಟಿ ವಿರಚಿತ “ಶಿವಾನಿ ಸಿಂಹವಾಹಿನಿ” ಯಕ್ಷಗಾನ ಪ್ರದರ್ಶವಾಗಲಿದೆ ಎಂದು ತಿಳಿಸಿದರು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)