ನ್ಯೂಯಾರ್ಕ್: ಆರು ವಾರಗಳ ಹಿಂದೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಇದೀಗ ಮೊದಲ ಬಾರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, “ಹಿಂದಿನ ಅವಧಿಯಲ್ಲಿ ನನ್ನೊಂದಿಗೆ ಜಗಳವಾಡುತ್ತಿದ್ದವರು ಈಗ ನನ್ನ ಸ್ನೇಹಿತರಾಗಲು ಬಯಸುತ್ತಿದ್ದಾರೆ” ಎಂದು ಹೇಳಿದರು.
ಮೊದಲ ಪತ್ರಿಕಾಗೋಷ್ಠಿಯಲ್ಲಿ, ಉಕ್ರೇನ್ ಯುದ್ಧ, ನ್ಯೂಜೆರ್ಸಿಯ ಮೇಲೆ ಹಾರಾಡಿದ್ದ ನಿಗೂಢ ಡ್ರೋನ್ ಗಳು, ಟಿಕ್ ಟಾಕ್ ನ ಮುಂದಿನ ಭವಿಷ್ಯ ಸೇರಿದಂತೆ ಮಾಧ್ಯಮಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಪ್ರಶ್ನೆಗಳನ್ನು ಒಳಗೊಂಡಿತ್ತು.
ಅವರು ಉಕ್ರೇನ್ ಮತ್ತು ಇಸ್ರೇಲ್ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದರು, ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದೀರಾ ಅಥವಾ ಇರಾನ್ ಮೇಲೆ ಮಿಲಿಟರಿ ದಾಳಿಗಳನ್ನು ಬೆಂಬಲಿಸುತ್ತಾರೆಯೇ ಎಂದು ಹೇಳಲು ನಿರಾಕರಿಸಿದರು.
“ಮೊದಲ ಅವಧಿಯಲ್ಲಿ ಎಲ್ಲರೂ ನನ್ನ ವಿರುದ್ಧ ಹೋರಾಡುತ್ತಿದ್ದರು” ಎಂದು ಅವರು ಹೇಳಿದರು. “ಈ ಅವಧಿಯಲ್ಲಿ, ಪ್ರತಿಯೊಬ್ಬರೂ ನನ್ನ ಸ್ನೇಹಿತರಾಗಲು ಬಯಸುತ್ತಾರೆ. ನನಗೆ ಗೊತ್ತಿಲ್ಲ – ನನ್ನ ವ್ಯಕ್ತಿತ್ವ ಬದಲಾಗಿದೆಯೋ ಏನೋ ಎಂದು ಅವರು ಕಿಚಾಯಿಸಿದರು.
ನ.5ರಂದು ಜಯಗಳಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಯಾವುದೇ ಪ್ರಮುಖ ರ್ಯಾಲಿಗಳನ್ನು ನಡೆಸಿಲ್ಲ ಮತ್ತು ವರದಿಗಾರರೊಂದಿಗೆ ಸುದೀರ್ಘವಾಗಿ ಮಾತನಾಡುವ ಯಾವುದೇ ಪತ್ರಿಕಾಗೋಷ್ಠಿಗಳನ್ನೂ ನಡೆಸಿಲ್ಲ. ಬದಲಿಗೆ ಸಾಮಾಜಿಕ ತಾಣಗಳ ಮೂಲಕ ಮತ್ತು ಸಾಂದರ್ಭಿಕ ಭಾಷಣಗಳ ಮೂಲಕ ಸಂವಹನ ನಡೆಸುತ್ತಿದ್ದಾರೆ.