ಕರ್ನಾಟಕ ಏಕೀಕರಣವಾಗಿದೆ. ಅದೇ ರೀತಿ ಇಡೀ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಏಕೀಕರಣವಾಗಬೇಕು ಎನ್ನುವುದು ನಮ್ಮೆಲ್ಲರ ಕನಸು. ಈ ಕನಸಿಗೆ ಮೊದಲ ಮೆಟ್ಟಿಲು ಎನ್ನುವಂತೆ ವಸ್ತುನಿಷ್ಠ, ಜನಪರ ಪತ್ರಿಕೋದ್ಯಮದ ಮೂಲಕ ಮನೆಮಾತಾಗಿರುವ ವಾರ್ತಾಭಾರತಿಯು globalkannadiga.com ವೆಬ್ ಸೈಟ್ ಅನ್ನು ಅನಿವಾಸಿ ಕನ್ನಡಿಗರಿಗಾಗಿ ರೂಪಿಸಿರುವುದು ಹೆಮ್ಮೆಯ ಸಂಗತಿ.
ನೀ ಮೆಟ್ಟುವ ನೆಲ ಅದೆ ಕರ್ನಾಟಕ;
ನೀನೇರುವ ಮಲೆ ಸಹ್ಯಾದ್ರಿ.
ನೀ ಮುಟ್ಟುವ ಮರ ಶ್ರೀಗಂಧದ ಮರ;
ನೀ ಕುಡಿಯುವ ನೀರು ಕಾವೇರಿ.
ಎಂದು ವಿಶ್ವಮಾನವ ಕವಿ ಕುವೆಂಪು ಅವರು ಹೇಳಿದ್ದಾರೆ.
ಅಮೆರಿಕ, ಅರಬ್ ದೇಶಗಳು, ಯುರೋಪ್ ಸೇರಿದಂತೆ ಒಂದಷ್ಟು ದೇಶಗಳಲ್ಲಿ ಮಾತ್ರ ಕನ್ನಡಿಗರು ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಇವುಗಳನ್ನು ಹೊರತುಪಡಿಸಿ ಇತರೇ ದೇಶಗಳಲ್ಲಿ ಇರುವ ಲಕ್ಷಾಂತರ ಕನ್ನಡಿಗರನ್ನು ಒಂದೇ ವೇದಿಕೆಗೆ ತರಬೇಕು ಎಂದು ಶ್ರಮಿಸುತ್ತಿರುವ ವಾರ್ತಾಭಾರತಿಯ ಈ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.
ಎಲ್ಲಾದರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರುವ ಎನ್ನುವ ಮಾತು ಕನ್ನಡಿಗರಿಗೆ ಹೊಸತೇನಲ್ಲ. ತಾಯಿ ನೆಲದಿಂದ ಎಷ್ಟೇ ದೂರವಿದ್ದರೂ ಈ ನೆಲದ ಮೇಲೆ ಕನ್ನಡಿಗರ ಪ್ರೀತಿ ಅಪಾರವಾದುದು. ತಾವು ನೆಲೆಸಿದ ಕಡೆಯಲ್ಲಿ ಹೆಗ್ಗುರುತುಗಳನ್ನು, ಆಯಾ ದೇಶಗಳ ಪ್ರಗತಿಗೆ ಅಪಾರ ಕೊಡುಗೆಯನ್ನು ಕನ್ನಡಿಗರು ನೀಡುತ್ತಿದ್ದಾರೆ. ಒಂದಷ್ಟು ದೇಶಗಳಲ್ಲಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿದ್ದಾರೆ. ಈ ಎಲ್ಲಾ ಸಂಗತಿಗಳು ದೇಶದ ಜನರಿಗೆ ತಿಳಿಯಬೇಕಾಗಿರುವುದು, ತಿಳಿಸಬೇಕಾಗಿರುವುದು ಮಾಧ್ಯಮಗಳ ಕರ್ತವ್ಯ. ಈ ನಿಟ್ಟಿನಲ್ಲಿ ವಾರ್ತಾ ಭಾರತಿಯಿಟ್ಟಿರುವ ಹೆಜ್ಜೆ ಶ್ಲಾಘನೀಯ.
ವಾರ್ತಾಭಾರತಿ ದಿನಪತ್ರಿಕೆ ದಶಕಗಳಿಂದ ಅನಿವಾಸಿ ಕನ್ನಡಿಗರ ಪರಿಶ್ರಮ, ಪ್ರತಿಭೆ, ಪಡಿಪಾಟಲುಗಳ ಬಗ್ಗೆ ಗಮನಸೆಳೆಯುತ್ತಾ ಬಂದಿದೆ. ಈ ನೂತನವಾದ globalkannadiga.com ಎಂಬ ವೆಬ್ ಸೈಟ್ ಮೂಲಕ ಅನಿವಾಸಿ ಕನ್ನಡಿಗರ ಬಗ್ಗೆ ಹೆಚ್ಚು ತಿಳಿಸಿ, ತಿಳಿಯುವಂತಾಗಲಿ, ಇನ್ನೂ ತೀಕ್ಷ್ಣ ವಾಗಿ ಕನ್ನಡಪರ ಚಿಂತನೆ ರೂಪುಗೊಳ್ಳಲಿ. ಈ ಸದಾಶಯ ಹೊಂದಿರುವ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿ. ಕನ್ನಡಿಗರ ಜಾಗತೀಕರಣಕ್ಕೆ ವಾರ್ತಾಭಾರತಿಯ ಈ ಪ್ರಯತ್ನ ಮೈಲಿಗಲ್ಲಾಗಲಿ. ಈ ವೆಬ್ ಸೈಟ್ ವಿಶ್ವದೆಲ್ಲೆಡೆಯ ಕನ್ನಡಬಂಧುಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಜಯಯೇ ಕರ್ನಾಟಕ ಮಾತೆ
ಡಿ.ಕೆ.ಶಿವಕುಮಾರ್
ಉಪಮುಖ್ಯಮಂತ್ರಿ