ಬಹರೈನ್ಕನ್ನಡ ಸಂಘ ಬಹರೈನ್ ವತಿಯಿಂದ ಯಶಸ್ವಿಯಾಗಿ ಮೂಡಿಬಂದ 'KSB...

ಕನ್ನಡ ಸಂಘ ಬಹರೈನ್ ವತಿಯಿಂದ ಯಶಸ್ವಿಯಾಗಿ ಮೂಡಿಬಂದ ‘KSB ಐಕ್ಯತಾ ಪಾದಯಾತ್ರೆ ಹಾಗೂ ನಿಷ್ಠಾ ಪ್ರತಿಜ್ಞೆ ಸಹಿ’ ಕಾರ್ಯಕ್ರಮ

ಮನಾಮ(ಬಹರೈನ್): ಕನ್ನಡ ಸಂಘ ಬಹರೈನ್ ವತಿಯಿಂದ ವಾಟರ್ ಗಾರ್ಡನ್, ಗುಫೂಲ್ ನಲ್ಲಿ ಆಯೋಜಿಸಲಾದ “KSB ಐಕ್ಯತಾ ಪಾದಯಾತ್ರೆ ಹಾಗೂ ನಿಷ್ಠಾ ಪ್ರತಿಜ್ಞೆ ಸಹಿ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ನೂರಾರು ಸದಸ್ಯರು ಹಾಗೂ ಅವರ ಕುಟುಂಬದವರು ಉತ್ಸಾಹದಿಂದ ಭಾಗವಹಿಸಿ, ಬಹರೈನ್‌ನ ಘನವೆತ್ತ ಕಿಂಗ್ ಹಮದ್ ಬಿನ್ ಈಸಾ ಬಿನ್ ಸಲ್ಮಾನ್ ಅಲ್ ಖಲೀಫಾ, ರಾಜಮನೆತನ ಹಾಗೂ ಬಹರೈನ್ ದೇಶದ ಜನತೆಗೆ ತಮ್ಮ ಕೃತಜ್ಞತೆ ಮತ್ತು ಅಚಲ ನಿಷ್ಠೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಕನ್ನಡ ಸಂಘ ಬಹರೈನ್‌ನ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಅವರು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಕನ್ನಡ ಸಂಘ ಬಹರೈನ್ ಅಧ್ಯಕ್ಷ ಅಜಿತ್ ಬಂಗೇರ ಅವರು ಉದ್ಘಾಟಿಸಿ ಮಾತನಾಡಿ, ಬಹರೈನ್ ದೇಶವು ಭಾರತೀಯರಿಗೆ, ವಿಶೇಷವಾಗಿ ಕನ್ನಡಿಗರಿಗೆ ನೀಡುತ್ತಿರುವ ಆಶ್ರಯ, ಅವಕಾಶ ಹಾಗೂ ಸಹಕಾರವನ್ನು ಸ್ಮರಿಸಿದರು. ಸಂಘದ ವತಿಯಿಂದ ಇಂತಹ ದೇಶಭಕ್ತಿ ಹಾಗೂ ಸಮುದಾಯದ ಐಕ್ಯತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಅಮರನಾಥ ರೈ, ಹಿರಿಯ ಸದಸ್ಯ ಸುಭಾಷ್‌ಚಂದ್ರ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಖ್ಯಾತ ಅಂಕಣಕಾರ ಕಿರಣ್ ಉಪಾಧ್ಯಾಯ ಮಾತನಾಡಿ, ಬಹರೈನ್ ಮತ್ತು ಭಾರತೀಯ ಸಮುದಾಯದ ನಡುವಿನ ಸ್ನೇಹ, ವಿಶ್ವಾಸ ಹಾಗೂ ಪರಸ್ಪರ ಗೌರವವನ್ನು ಶ್ಲಾಘಿಸಿದರು. ಕನ್ನಡ ಸಂಘ ಬಹರೈನ್ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಬಹರೈನ್ ಬಿಲ್ಲವಾಸ್ ಅಧ್ಯಕ್ಷ ರಾಜ್ ಸುವರ್ಣ, ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷ ಸತೀಶ್ ಉಳ್ಳಾಲ್, ಸಂಘದ ಉಪಾಧ್ಯಕ್ಷ ನಿತಿನ್ ಶೆಟ್ಟಿ ಹಾಗೂ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ನಿಷ್ಠಾ ಪ್ರತಿಜ್ಞೆ ಸಹಿ ಸಮಾರಂಭ ಹಾಗೂ ಬಹರೈನ್‌ನ ಅತಿ ಉದ್ದದ ರಾಷ್ಟ್ರಧ್ವಜ ಅನಾವರಣ ಎಲ್ಲರ ಗಮನ ಸೆಳೆಯಿತು. ಬಳಿಕ ನಡೆದ 2 ಕಿ.ಮೀ. ಐಕ್ಯತಾ ಪಾದಯಾತ್ರೆ ಯಲ್ಲಿ ನೂರಾರು ಸದಸ್ಯರು ಹಾಗೂ ಕುಟುಂಬಸ್ಥರು ಭಾಗವಹಿಸಿ, ಐಕ್ಯತೆ, ದೇಶಭಕ್ತಿ ಮತ್ತು ಆರೋಗ್ಯಕರ ಜೀವನಶೈಲಿಯ ಸಂದೇಶವನ್ನು ಸಾರಿದರು.

ಕಾರ್ಯಕ್ರಮವನ್ನು ಕನ್ನಡ ಸಂಘದ ಮಾಜಿ ಕ್ರೀಡಾ ಕಾರ್ಯದರ್ಶಿ ಜಾನ್ ದೀಪಕ್ ಡೇಸಾ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಅವರು ವಂದನಾರ್ಪಣೆ ಸಲ್ಲಿಸಿ, ಗಣ್ಯ ಅತಿಥಿಗಳು, ಸದಸ್ಯರು, ಸ್ವಯಂಸೇವಕರು, ಸಹಯೋಗಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ರೇಡಿಯೋ ಪಾಲುದಾರ My FM 107.2, ವಿಶೇಷವಾಗಿ ಆರ್‌ಜೆ ಕಮಲ್, ನೀಡಿದ ಪ್ರಚಾರ ಮತ್ತು ಸಹಕಾರವನ್ನು ಕನ್ನಡ ಸಂಘ ಬಹರೈನ್ ಕೃತಜ್ಞತೆಯಿಂದ ಸ್ಮರಿಸಿತು.

ಅದೇ ರೀತಿ ಅಲ್ ಹಿಲಾಲ್ ಆಸ್ಪತ್ರೆ ಹಾಗೂ ಅವ್ವಲ್ ಜ್ಯೂಸ್ ಸಂಸ್ಥೆಗಳು ಕಾರ್ಯಕ್ರಮಕ್ಕೆ ನೀಡಿದ ಅಮೂಲ್ಯ ಸಹಕಾರವನ್ನು ಸಂಘವು ಅಭಿನಂದಿಸಿತು.

“ಒಗ್ಗಟ್ಟಿನಲ್ಲಿ ನಾವು – ಬಹರೈನ್‌ಗಾಗಿ ನಾವು” ಎಂಬ ಸಂದೇಶದೊಂದಿಗೆ ಸಮಾರೋಪಗೊಂಡ ಈ ಕಾರ್ಯಕ್ರಮವು ಬಹರೈನ್‌ನಲ್ಲಿರುವ ಕನ್ನಡಿಗರ ದೇಶಪ್ರೇಮ, ಸಾಮಾಜಿಕ ಬದ್ಧತೆ ಮತ್ತು ಐಕ್ಯತೆಯ ಪ್ರತೀಕವಾಗಿ ಯಶಸ್ವಿಯಾಗಿ ಮೂಡಿಬಂತು.

Hot this week

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories