ಕುವೈತ್: ಕೇರಳದ 1,425 ನರ್ಸ್ ಗಳು ಕುವೈತ್ ನಲ್ಲಿ ಗಲ್ಫ್ ಬ್ಯಾಂಕ್ ನಿಂದ 700 ಕೋಟಿ ರೂ. ಸಾಲ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ 10 ಮಂದಿಯ ವಿರುದ್ಧ ಗಲ್ಫ್ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಕುವೈತ್ ಪ್ರಜೆ ಮುಹಮ್ಮದ್ ಅಬ್ದುಲ್ ವಾಸ್ಸಿ ನೀಡಿರುವ ದೂರಿನಂತೆ ಕೇರಳದಲ್ಲಿ ಪ್ರಕರಣ ದಾಖಲಾಗಿದೆ.
ಗಲ್ಫ್ ಬ್ಯಾಂಕ್‌ನಿಂದ ದೊಡ್ಡ ಮೊತ್ತದ ಸಾಲ ಪಡೆದಿರುವ 1,425 ನರ್ಸ್ ಗಳು ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದೇ ಇದೀಗ ಕುವೈತ್ ತೊರೆದು ಕೆನಡಾ, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಕೇರಳದಲ್ಲಿ ಕುವೈತ್ ನ ಗಲ್ಫ್ ಬ್ಯಾಂಕ್ ಅನ್ನು ಪ್ರತಿನಿಧಿಸುವ ವಕೀಲ ಥಾಮಸ್ ಜೆ. ಅನಕ್ಕಲ್ಲುಮ್ಕಲ್ ಹೇಳಿರುವುದಾಗಿ The New Indian Express ವರದಿ ಮಾಡಿದೆ.
“ಈ ನರ್ಸ್ ಗಳು ಮೊದಲು ಗಲ್ಫ್ ಬ್ಯಾಂಕ್ ನಿಂದ ಸಾಲವನ್ನು ಪಡೆದು ತ್ವರಿತವಾಗಿ ಅದನ್ನು ಮರುಪಾವತಿಸಿ ವಿಶ್ವಾಸಾರ್ಹತೆ ಗಳಿಸಿದ್ದರು. ಆ ಬಳಿಕ 60 ಲಕ್ಷ ರೂ. ನಿಂದ ಒಂದೂವರೆ ಕೋಟಿ ರೂ. ವರೆಗೆ ದೊಡ್ಡ ಮೊತ್ತದ ಸಾಲ ಪಡೆದು ಮರುಪಾವತಿಸಲಿಲ್ಲ. ಈ ರೀತಿಯ ವಂಚನೆಯಲ್ಲಿ ಭಾಗಿಯಾಗಿರುವ ಕೇರಳದ 1,425 ನರ್ಸ್‌ಗಳನ್ನು ಬ್ಯಾಂಕ್ ಗುರುತಿಸಿದೆ. ಆದರೆ ಅವರು ಕುವೈತ್ ತೊರೆದಿರುವ ಕಾರಣ ಸಾಲ ವಸೂಲಿ ಕಠಿಣವಾಗಿ ಪರಿಣಮಿಸಿದೆ ಎಂದು ವಕೀಲ ಥಾಮಸ್ ಜೆ. ತಿಳಿಸಿದ್ದಾರೆ,
ಈ ವಂಚನೆ ಬಗ್ಗೆ ಗಲ್ಫ್ ಬ್ಯಾಂಕಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಮುಹಮ್ಮದ್ ಅಬ್ದುಲ್ ವಾಸ್ಸಿ ನವೆಂಬರ್ ನಲ್ಲಿ ಕೇರಳಕ್ಕೆ ಆಗಮಿಸಿ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿ ಗಮನಸೆಳೆದಿದ್ದರು.
ಈ ಮಧ್ಯೆ ಸಾಲ ಮರುಪಾವತಿಸದೆ ಕೇರಳಕ್ಕೆ ವಾಪಸ್ಸಾಗಿರುವ 10 ನರ್ಸ್ ಗಳನ್ನು ಗಲ್ಫ್ ಬ್ಯಾಂಕ್ ಗುರುತಿಸಿದ್ದು, ಅವರ ವಿರುದ್ಧ ದೂರು ನೀಡಿದ್ದು, ಕೇರಳ ಪೊಲೀಸರು ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ. ಉಳಿದ ನರ್ಸ್ ಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದೆ. ಇನ್ನೂ ಹಲವರು ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ವಕೀಲ ಥಾಮಸ್ ಹೇಳಿದ್ದಾರೆ.
ಗಲ್ಫ್ ಬ್ಯಾಂಕಿಗೆ ವಂಚಿಸಿರುವ ಬಗ್ಗೆ ಕೇರಳದ ಕಲಮಸ್ಸೆರಿ, ನ್ಜಾರಕಲ್, ವರಪೌಳ, ಕಾಲಡೆ, ಮುವಾಟ್ಟುಪುಝ, ಒನ್ನುಕಲ್, ಕೊಡನಾಡ್ ಮತ್ತು ಕುಮರಕೊಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧದ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.