ಯುಎಇದುಬೈನ 'ಕನ್ನಡ ಪಾಠ ಶಾಲೆ'ಯನ್ನು ಶ್ಲಾಘಿಸಿದ ಮೋದಿ! 'ಮನ್...

ದುಬೈನ ‘ಕನ್ನಡ ಪಾಠ ಶಾಲೆ’ಯನ್ನು ಶ್ಲಾಘಿಸಿದ ಮೋದಿ! ‘ಮನ್ ಕಿ ಬಾತ್’ನಲ್ಲಿ ಕನ್ನಡಿಗರ ಮಾತೃ ಭಾಷಾ ಪ್ರೇಮವನ್ನು ಕೊಂಡಾಡಿದ ಪ್ರಧಾನಿ

ದುಬೈ: 2025ನೇ ಸಾಲಿನ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ದುಬೈನಲ್ಲಿ ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ‘ಕನ್ನಡ ಪಾಠ ಶಾಲೆ’ಯನ್ನು ಶ್ಲಾಘಿಸುವ ಮೂಲಕ ಕನ್ನಡಿಗರ ಮಾತೃ ಭಾಷಾ ಪ್ರೇಮವನ್ನು ಕೊಂಡಾಡಿದ್ದಾರೆ.

ನಮ್ಮ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆ ಎಂಬ ಉದ್ದೇಶದಿಂದ ಕನ್ನಡಿಗರೆಲ್ಲ ಸೇರಿ ಯುಎಇಯ ದುಬೈನಲ್ಲಿ ಕನ್ನಡ ಪಾಠ ಶಾಲೆಯನ್ನು ಆರಂಭಿಸಿದ್ದಾರೆ. ಕನ್ನಡಿಗರ ಈ ಭಾಷಾ ಪ್ರೇಮವನ್ನು ಪ್ರಧಾನಿ ಮೋದಿ ಅವರು ತಮ್ಮ 129 ನೇ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಶ್ಲಾಘಿಸಿದ್ದಾರೆ.

‘ಮನ್ ಕಿ ಬಾತ್’ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ಉದ್ಯೋಗದ ಹಿನ್ನೆಲೆಯಲ್ಲಿ ನೆಲೆಸಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡರು, ಅದೇನಂದರೆ ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಸರಿಯುತ್ತಿದ್ದಾರೆ ಅನ್ನೋ ಆತಂಕ ದುಬೈ ಕನ್ನಡಿಗರಲ್ಲಿತ್ತು. ಈ ಹಿನ್ನೆಲೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಅವರು ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ‌ ಮಾಡಿದರು ಎಂದು ತಿಳಿಸಿದ್ದಾರೆ.

ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ
ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರವಾಗಿರುವ ದುಬೈನ ‘ಕನ್ನಡ ಪಾಠ ಶಾಲೆ’ಯನ್ನು ಸುತ್ತೂರು ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ 2014ರಲ್ಲಿ ದುಬೈನ ಜೆ.ಎಸ್.ಎಸ್ ಶಾಲೆಯಲ್ಲಿ ಆರಂಭಿಸಲಾಯಿತು. ‘ಮಾತೃ ಭಾಷ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು’ ಎಂಬ ಘೋಷಣೆಯಡಿ ಆರಂಭವಾದ ಈ ಶಾಲೆ ಈಗ ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದೆ. ಜೊತೆಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮನ್ನಣೆಗೂ ಪಾತ್ರವಾಗಿದೆ.

ದುಬೈನಲ್ಲಿರುವ ಕನ್ನಡಿಗ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಸದುದ್ದೇಶದಿಂದ ಈ ಶಾಲೆಯನ್ನು ಆರಂಭಿಸಲಾಗಿದ್ದು, ವಾರಾಂತ್ಯಗಳಲ್ಲಿ ತರಗತಿಗಳು ನಡೆಯುತ್ತವೆ. 20 ಮಂದಿ ಸ್ವಯಂಸೇವಕ ಶಿಕ್ಷಕಿಯರು ಉಚಿತವಾಗಿ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿದ್ದು, ಈ ಶಾಲೆಯಲ್ಲಿ 6ರಿಂದ 16 ವರ್ಷದ ವರೆಗಿನ ಮಕ್ಕಳು ಉಚಿತವಾಗಿ ಕನ್ನಡವನ್ನು ಕಲಿಯಬಹುದಾಗಿದೆ. ಶಶಿಧರ್ ನಾಗರಾಜಪ್ಪ ಅವರ ನೇತೃತ್ವದಲ್ಲಿ ‘ಕನ್ನಡ ಮಿತ್ರರು’ ಎಂಬ ಸಂಘಟನೆ ಈ ಶಾಲೆಯನ್ನು ನಡೆಸಿಕೊಂಡು ಬರುತ್ತಿದೆ. ದುಬೈಯ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಶಶಿಧರ್ ನಾಗರಾಜಪ್ಪ, ‘ಕನ್ನಡ ಮಿತ್ರರು-ಯುಎಇ’ ಸಂಘಟನೆ ಅಧ್ಯಕ್ಷರೂ, ಈ ಶಾಲೆಯ ಸ್ಥಾಪಕ ಮುಖ್ಯ ಸಂಚಾಲಕರೂ ಆಗಿದ್ದಾರೆ.

ನಮ್ಮ ಶಿಕ್ಷಕರು ಮತ್ತು ಸ್ವಯಂಸೇವಕರಿಗೆ ಸಂದ ಗೌರವ: ಶಶಿಧರ್ ನಾಗರಾಜಪ್ಪ
ಯುಎಇ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅನಿವಾಸಿ ಭಾರತೀಯರಿಗೆ ಕನ್ನಡ ಭಾಷೆಯನ್ನು ಪೋಷಿಸಿ, ಪ್ರಚಾರ ಮಾಡುವಲ್ಲಿ ಕನ್ನಡ ಪಾಠಶಾಲೆ ದುಬೈ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚಿ, ಅಭಿನಂದಿಸಿರುವುದು ನಮ್ಮೆಲ್ಲರಿಗೂ ಅಪಾರ ಗೌರವ ಮತ್ತು ಹೆಮ್ಮೆ ತಂದಿದೆ ಎಂದು ದುಬೈ ಕನ್ನಡ ಪಾಠ ಶಾಲೆಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೌರವವು ಕನ್ನಡ ಪಾಠಶಾಲೆ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಅತ್ಯಂತ ಭಾವನಾತ್ಮಕ ಹಾಗೂ ಗರ್ವಭರಿತ ಕ್ಷಣ. ಕಳೆದ 12 ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೆ, ತ್ಯಾಗ, ಶ್ರದ್ಧೆ ಮತ್ತು ನಿಷ್ಠೆಯಿಂದ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಮ್ಮ ಗುರುತನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವ ನಮ್ಮ ಶಿಕ್ಷಕರು ಮತ್ತು ಸ್ವಯಂಸೇವಕರಿಗೆ ಸಲ್ಲುವ ಗೌರವವೇ ಇದು ಎಂದಿದ್ದಾರೆ.

ಈ ಸಾಧನೆ ಕೇವಲ ಸಂಸ್ಥೆಯದ್ದಲ್ಲ,ಇದು ಪ್ರತಿ ಶಿಕ್ಷಕ, ಸ್ವಯಂಸೇವಕ, ಪೋಷಕರು ಹಾಗೂ ಹಿತೈಷಿಗಳ ನಂಬಿಕೆ ಮತ್ತು ಸಹಕಾರದ ಫಲ. ನಿಮ್ಮ ಸಮರ್ಪಣೆಯಿಂದಲೇ ಮುಂದಿನ ತಲೆಮಾರಿಗೆ ಕನ್ನಡದ ಜೀವಂತ ಪರಂಪರೆ ತಲುಪುತ್ತಿದೆ ಎಂದು ಶಶಿಧರ್ ನಾಗರಾಜಪ್ಪ ಹೇಳಿದ್ದಾರೆ.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories