ಒಮಾನ್ಒಮಾನ್‌; ಸಲಾಲದಲ್ಲಿ ಅನ್ನೂರ್ ಎಜುಕೇಶನ್ ಸೆಂಟರ್‌ನಿಂದ ಸಂಭ್ರಮದ ಕನ್ನಡ...

ಒಮಾನ್‌; ಸಲಾಲದಲ್ಲಿ ಅನ್ನೂರ್ ಎಜುಕೇಶನ್ ಸೆಂಟರ್‌ನಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ; ವಾರ್ಷಿಕೋತ್ಸವ ಅದ್ದೂರಿಯಾಗಿ ಆಚರಣೆ

ಸಲಾಲ: ಒಮಾನ್‌ನ ಸಲಾಲದಲ್ಲಿರುವ ಅನಿವಾಸಿ ಕನ್ನಡಿಗರು ತಮ್ಮ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶದಿಂದ ಆರಂಭಿಸಿರುವ ಅನ್ನೂರ್ ಎಜುಕೇಶನ್ ಸೆಂಟರ್‌ನ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು.

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ಸದುದ್ದೇಶದಿಂದ ಆರಂಭಗೊಂಡಿರುವ ಅನ್ನೂರ್ ಎಜುಕೇಶನ್ ಸೆಂಟರ್ ಒಂದು ಸಾರ್ಥಕ ವರ್ಷವನ್ನು ಪೂರೈಸಿದ್ದು, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಮತ್ತು ಅಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಸಲಾಲದ ಇತಿನ್ ವಿಲ್ಲಾದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಉಮರುಲ್ ಫಾರೂಖ್ ಕನ್ನಂಗಾರ್ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆಯ ಒಂದು ವರ್ಷದ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹವನ್ನು ಕೋರಿದರು.

ಸಂಸ್ಥೆಯ ಉಸ್ತಾದ್ ಅಶ್ರಫ್ ರಝಾ ಅಮ್ಜದಿ ಪಕ್ಷಿಕೆರೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ರಾಜ್ಯೋತ್ಸವದ ಮಹತ್ವ ಹಾಗೂ ಅನ್ನೂರ್ ಎಜುಕೇಶನ್ ಸೆಂಟರ್‌ನ ಕನ್ನಡ ಭಾಷಾ ಕಲಿಕಾ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಸಂಯೋಜಕ ಲತೀಫ್ ಕೌಡಿಚಾರು ವಾರ್ಷಿಕ ವರದಿ ವಾಚಿಸಿ, ಒಂದು ವರ್ಷದ ಕಾರ್ಯಚಟುವಟಿಕೆಗಳ ಸಿಂಹಾವಲೋಕನ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ನೂರುಲ್ ಹಸನ್ ಶೈಖ್, ಕರುನಾಡಿನ ಖ್ಯಾತ ಉದ್ಯಮಿ ಅಶ್ರಫ್ ಹಾಜಿ ಕಡಬ, ಇಂಡಿಯನ್ ಸೋಶಿಯಲ್ ಕ್ಲಬ್‌ನ ಕರ್ನಾಟಕ ವಿಂಗ್ ನಾಯಕ ಶಕೀಲ್ ಅಹ್ಮದ್ ಹಾಗೂ ರೀಗಲ್ ಮೆಡಿಕಲ್ ಸೆಂಟರ್‌ನ ಸದಕತುಲ್ಲಾ ಕಳಸ ಶುಭ ಹಾರೈಸಿದರು. ಬ್ಯಾರೀಸ್ ಕಲ್ಚರಲ್ ಫೋರಂ ಅಧ್ಯಕ್ಷ ಸಿದ್ದೀಕ್ ತೈಬಾ ಹಾಗೂ ಉದ್ಯಮಿ ಸಲಿಂ ಕಿಂಝ ಉಪಸ್ಥಿತರಿದ್ದರು.

ಮಕ್ಕಳಿಂದ ಕನ್ನಡದ ಸಾಂಸ್ಕೃತಿಕ ವೈಭವ
ಅನ್ನೂರ್ ಎಜುಕೇಶನ್ ಸೆಂಟರ್‌ನ ವಿದ್ಯಾರ್ಥಿಗಳು ಕನ್ನಡ ಭಾಷೆಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಹಾಡು, ಭಾಷಣ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳೊಂದಿಗೆ ಎಲ್ಲ ಮಕ್ಕಳು ಒಟ್ಟಾಗಿ ಹಾಡಿದ ಆಕರ್ಷಕ ನಾಡಗೀತೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ವಿಶೇಷವಾಗಿ, ಪುಣ್ಯಕೋಟಿಯ ಪ್ರಸಿದ್ಧ ಜಾನಪದ ಗೀತೆ ‘ಧರಣಿಮಂಡಲ ಮಧ್ಯದೊಳಗೆ’ಗೆ ಮಕ್ಕಳು ನೀಡಿದ ಮನಮೋಹಕ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಭೆ ಪ್ರದರ್ಶಿಸಿದ ಮಕ್ಕಳಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಲಾಯಿತು. ಮಕ್ಕಳಿಗೆ ವಿಶೇಷ ತರಬೇತಿ ನೀಡಿದ ಶಾಹಿಸ್ತಾ ಬಾನು, ಫರ್ಹೀನ್ ಫಾತಿಮಾ, ಹನಾನ್ ಆಸೀಫಾ, ಝರೀನಾ ಮುಹಮ್ಮದ್, ಮೈಮೂನಾ ಫಾರೂಖ್, ಅಝ್ಮಿಯಾ, ಝೈನಬಾ ಜಾಸ್ಮೀನ್ ಹಾಗೂ ನವೀದ್ ಮುನವ್ವರ್ ಅವರನ್ನು ಗೌರವಿಸಲಾಯಿತು.

ದಫ್ ಪ್ರದರ್ಶನ, ಆಟೋಟಗಳ ಸಂಭ್ರಮ
ನವೀದ್ ಕನ್ನಂಗಾರ್ ಅವರ ನೇತೃತ್ವದಲ್ಲಿ ಕರುನಾಡ ಯುವಕರ ಅಲ್ ಅಮೀನ್ ದಫ್ ತಂಡದಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು. ಪೈರೋಝ್ ಕಲ್ಲಡ್ಕ ಅವರ ನೇತೃತ್ವದಲ್ಲಿ ಪುರುಷರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಮನರಂಜನಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ವೇಳೆ ಸಂಸ್ಥೆಯ ಅಧ್ಯಕ್ಷ ಫಾರೂಖ್ ಕನ್ನಂಗಾರ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸ್ವಾಗತ್ ಫ್ರೆಂಡ್ಸ್ ತಂಡದ ವಿಶೇಷ ಉಪ್ಪು ಮಿಶ್ರಿತ ಸಾಂಪ್ರದಾಯಿಕ ಖಾದ್ಯಗಳ ಆತಿಥ್ಯವೂ ಎಲ್ಲರ ಗಮನ ಸೆಳೆಯಿತು. ಸಂಸ್ಥೆಯ ಪೋಷಕರು ಮಧ್ಯಾಹ್ನದ ಭೋಜನ ಹಾಗೂ ರಾತ್ರಿ ಉಪಾಹಾರದ ವ್ಯವಸ್ಥೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಹಕರಿಸಿದರು.

ಸಂಸ್ಥೆಯ ಹಣಕಾಸು ಕಾರ್ಯದರ್ಶಿ ತಬ್ರೀಝ್ ಸ್ವಾಗತಿಸಿದರು. ಕೌನ್ಸಿಲ್ ಸದಸ್ಯ ಶಂಶುದ್ದೀನ್ ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ನಾಸರ್ ನಂದಾವರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಛಾಯಾಚಿತ್ರ ನಿರ್ವಹಣೆಯನ್ನು ಇಕ್ಬಾಲ್ ನಾಟೆಕಲ್ ವಹಿಸಿದ್ದರು. ಸಂಸ್ಥೆಯ ಸದಸ್ಯ ಶರೀಫ್ ಕುತ್ತಾರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Hot this week

ಬೋಡೆನ್ಸೀ ಸರೋವರದ ದಡದಲ್ಲಿ ಕನ್ನಡದ ಕಂಪು; ಜರ್ಮನಿಯಲ್ಲಿ ಅನಿವಾಸಿ ಕನ್ನಡಿಗರ ಅದ್ದೂರಿ ರಾಜ್ಯೋತ್ಸವ ಆಚರಣೆ

ಬೋಡೆನ್ಸೀ (ಜರ್ಮನಿ): ನಾಡು ದೂರವಿದ್ದರೂ ನುಡಿಯ ಮೇಲಿನ ಪ್ರೀತಿ ಎಂದಿಗೂ ದೂರವಾಗದು...

ಬಹರೈನ್‌ನಲ್ಲಿ ಜನಮನ ಸೂರೆಗೊಂಡ ‘ಅಮರ ಮಧುರ ಗೀತೆ’; ಮಾಧುರ್ಯಭರಿತ ಅಮರ ಚಲನಚಿತ್ರಗೀತೆಗಳ ಲೋಕದಲ್ಲಿ ಸಂತೋಷದಿಂದ ತೇಲಾಡಿದ ದ್ವೀಪದ ಸಂಗೀತ ಪ್ರೇಮಿಗಳು

ಮನಾಮ(ಬಹರೈನ್): ಹಳೆಯ ಕನ್ನಡ ಚಿತ್ರಗೀತೆಗಳ ಸುಮಧುರ ಲೋಕದಲ್ಲಿ ಸಂಗೀತ ಪ್ರೇಮಿಗಳನ್ನು ತೋಯಿಸಿದ...

ಮುತ್ತುಗಳ ದ್ವೀಪದಲ್ಲಿ ಮೊಳಗಲಿದೆ ಕನ್ನಡದ ಕಹಳೆ; ನಾಳೆ ಬಹರೈನ್‌ನಲ್ಲಿ ‘ಕರುನಾಡ ವೈಭವ’ದ ಸಂಭ್ರಮ!

ಬಹರೈನ್: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕನ್ನಡಿಗರ ಅಭಿಮಾನವನ್ನು...

ಜಪಾನ್‌ನಲ್ಲಿ ‘ನಾವಿಕೋತ್ಸವ’ಕ್ಕೆ ಭರದ ಸಿದ್ಧತೆ: ಅಮೇರಿಕದಿಂದ ಹೊರಟ ಕನ್ನಡಿಗರು!

ಟೋಕಿಯೋ(ಜಪಾನ್): ಉದಯಿಸುವ ಸೂರ್ಯನ ನಾಡಾದ ಜಪಾನ್‌ನಲ್ಲಿ ಕನ್ನಡದ ಕಂಪು ಪಸರಿಸಲು ವೇದಿಕೆ...

Related Articles

Popular Categories