ಸೌದಿಯಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ ಬಹುದೊಡ್ಡ ಆಸರೆಯಾಗಿರುವವರು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಾಮಾಜಿಕ ಮುಂದಾಳು ಹಾಗು ಕೊಡುಗೈ ದಾನಿ ಬಿ. ಝಕರಿಯಾ ಜೋಕಟ್ಟೆಯವರು. ಸೌದಿಗೆ ಹೋಗುವ ಯುವಜನರಿಗೆ ಉದ್ಯೋಗ ಪಡೆಯುವ ವಿಷಯವಾಗಿರಬಹುದು, ಅಲ್ಲಿರುವ ಅನಿವಾಸಿಗಳಿಗೆ ಯಾವುದೇ ಸಂಕಟ ಎದುರಾದಾಗ ಸಹಾಯಕ್ಕೆ ಧಾವಿಸುವುದು ಆಗಿರಬಹುದು ಅಥವಾ ಸೌದಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ, ಕೆಲಸವಿರಬಹುದು – ಮೊದಲು ನೆನಪಾಗುವ ಹೆಸರು ಝಕರಿಯಾ ಜೋಕಟ್ಟೆ.
ಕಡು ಬಡತನದ ಕುಟುಂಬದಿಂದ ಬಂದು ತನ್ನ ಅವಿರತ ಪರಿಶ್ರಮದ ಮೂಲಕ ಸಾಧನೆಯ ಸಾಮ್ರಾಜ್ಯ ಕಟ್ಟಿದ ಯಶಸ್ವಿ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ. ಸಾವಿರಾರು ಕನ್ನಡಿಗರಿಗೆ ಉದ್ಯೋಗ, ಕರ್ನಾಟಕ ಮತ್ತು ಸೌದಿ ಅರೇಬಿಯಾದಲ್ಲಿ ಸಮಾಜ ಸೇವೆ, ಅನಿವಾಸಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸುವ ಮೂಲಕ ಝಕರಿಯಾ ಜೋಕಟ್ಟೆ ಇಂದು ಕರ್ನಾಟಕ ಮತ್ತು ಮಧ್ಯಪ್ರಾಚ್ಯದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ.
1958 ಮೇ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಜೋಕಟ್ಟೆಯ ತೋಕೂರಿನಲ್ಲಿ ಜನಿಸಿದ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಜೋಕಟ್ಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಕಳವಾರು ಪೇಜಾವರ ಪ್ರೌಢ ಶಾಲೆಯಲ್ಲಿ ಮಾಡಿದ್ದರು. ತಂದೆ ಹಾಜಿ ಬಿ. ಶೇಕು0ಞಿ, ತಾಯಿ ಖತೀಜಮ್ಮ.
ಗೇಣಿಗುತ್ತು ಮನೆತನದ ದಿ.ಝಕರಿಯಾ ಹಾಜಿ ಇವರ ಅಜ್ಜ. ಪ್ರತಿಷ್ಠಿತ ಜಮೀನ್ದಾರ ಕುಟುಂಬದಿಂದ ಬಂದವರಾದರೂ ಝಕರಿಯಾ ಅವರ ಬಾಲ್ಯದಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತನ್ನ ಹೆತ್ತವರು ಸಹೋದರ-ಸಹೋದರಿಯರ ಜವಾಬ್ದಾರಿಯೂ ಝಕರಿಯಾ ಅವರ ಮೇಲಿತ್ತು.
ಬಾಲ್ಯದಲ್ಲಿ ಬೆಲ್ಲ ಮಾರುತ್ತಿದ್ದ ತನ್ನ ನೆರೆ ಮನೆಯ ವ್ಯಕ್ತಿಯೋರ್ವರನ್ನು ಭೇಟಿಯಾದ ಝಕರಿಯಾ ಅವರಿಗೆ ಬೆಲ್ಲ ಮಾರಾಟ ವ್ಯಾಪಾರದಲ್ಲಿ ಆಸಕ್ತಿ ಮೂಡಿತು. ಒಂದು ಬುಟ್ಟಿ ಮತ್ತು ಕಲ್ಲಿನಲ್ಲಿ ತೂಗುವ ತಕ್ಕಡಿ ಖರೀದಿಸಿದ ಝಕರಿಯಾ ಬುಟ್ಟಿಯಲ್ಲಿ ಬೆಲ್ಲ ತುಂಬಿ ತೋಕೂರಿನಲ್ಲಿ ಬೆಲ್ಲ ಮಾರಾಟ ಆರಂಭಿಸಿದ್ದರು. ಸುಮಾರು 50 ಕೆ.ಜಿ.ಯಷ್ಟು ಬೆಲ್ಲವನ್ನು ತನ್ನ ತಲೆಯ ಮೇಲೆ ಹೊತ್ತು ಮನೆ-ಮನೆಗೆ ತೆರಳಿ ಅವರು ಬೆಲ್ಲ ಮಾರಾಟ ಮಾಡುತ್ತಿದ್ದರು.
ತನ್ನ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಇಚ್ಚಾಶಕ್ತಿಯಿಂದಾಗಿ ಝಕರಿಯಾ ಅಲ್ಲಿನ ಜನರ ಪ್ರೀತಿಗೆ ಪಾತ್ರರಾದರು.
ಅತಿಸಣ್ಣ ಅವಧಿಯಲ್ಲೇ ಅವರು ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು.
ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದರಿಂದ ಬೆಲ್ಲ ಮಾರಾಟ ಅಲ್ಲದೇ ಜೀವನ ನಿರ್ವಹಣೆಗೆ ಅವರು ಇತರ ಅದೆಷ್ಟೋ ಕೆಲಸಗಳನ್ನೂ ಮಾಡಿದ್ದರು. 1971ರಲ್ಲಿ ಮಂಗಳೂರಿನ ಹಾರ್ಬರ್ನಲ್ಲಿ 4 ರೂ ವೇತನಕ್ಕೆ ವೆಲ್ಡಿಂಗ್ ಸಹಾಯಕರಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲದೇ, ಅಲ್ಲಿಯೇ ಕಂಪೆನಿಯೊಂದರಲ್ಲಿ ಆಫೀಸ್ ಬಾಯ್ ಆಗಿಯೂ ಅವರು ಕೆಲಸ ನಿರ್ವಹಿಸಿದ್ದರು. ಕೆಲವು ತಿಂಗಳುಗಳ ಕಾಲ ಮುಂಬೈಯಲ್ಲೂ ಕೆಲಸ ಮಾಡಿದ್ದರು.
70-80ರ ದಶಕದಲ್ಲಿ ಮಂಗಳೂರಿನ ಜನ ಆರ್ಥಿಕ ಸದೃಢತೆಯನ್ನು ಕಾಣಲು ಕೊಲ್ಲಿ ರಾಷ್ಟ್ರಗಳಿಗೆ ಕೆಲಸಕ್ಕೆ ತೆರಳುತ್ತಿದ್ದರು. ಇದೇ ರೀತಿ ಕೊಲ್ಲಿ ರಾಷ್ಟ್ರಕ್ಕೆ ತೆರಳಬೇಕೆಂಬ ಕನಸು ಝಕರಿಯಾ ಅವರಲ್ಲಿಯೂ ಇತ್ತು. ಈ ನಡುವೆ ತಮ್ಮ ಪರಿಚಯದವರ ಮೂಲಕ ಸೌದಿ ಅರೇಬಿಯಾಕೆ ವಿಸಾ ಪಡೆಯುವಲ್ಲಿ ಅವರು ಯಶಸ್ವಿಯಾದರು. ಹಾಗೆಯೇ ತಮ್ಮ ಮಿತ್ರನೊಂದಿಗೆ 1978ರಲ್ಲಿ ಸೌದಿ ಅರೇಬಿಯಾge ಕೆಲಸ ಹುಡುಕಿ ಹೊರಟರು.

ಯಾವ ಕನಸುಗಳನ್ನು ಹೊತ್ತು ಅವರು ಸೌದಿ ಅರೇಬಿಯಾಕೆ ತೆರಳಿದ್ದರೋ, ಆ ಕನಸು ನನಸು ಮಾಡಲು ಅವರು ಸೌದಿಯಲ್ಲಿ ಹಗಲಿರುಳು ಶ್ರಮಪಟ್ಟರು. ಮುಳ್ಳಿನ ಹಾದಿಯಲ್ಲಿ ಸಾಗುವ ಅನಿವಾರ್ಯತೆ ಅಲ್ಲಿತು. ಮೊದಲ ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು. ಭಾರದ ಸಿಮೆಂಟ್ ಮೂಟೆಗಳನ್ನು ಹೊತ್ತುಕೊಂಡು 20ಕ್ಕೂ ಹೆಚ್ಚಿನ ಅಂತಸ್ತಿನ ಮೇಲೆ ನಡೆಯಬೇಕಾಗಿತ್ತು. ಮನೆಯಲ್ಲಿನ ಆರ್ಥಿಕ ಸಂಕಷ್ಟ ಇವೆಲ್ಲಾ ಕಷ್ಟಗಳನ್ನು ನುಂಗುವಂತೆ ಮಾಡಿತ್ತು. ಸೌದಿಯಲ್ಲಿ ಒಂದಿಷ್ಟೂ ಹಿಂಜರಿಯದೆ ತನಗೆ ಅವಕಾಶ ಸಿಕ್ಕಿದ ಅದೆಷ್ಟೋ ಕೆಲಸಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದರು ಝಕರಿಯ. ಸ್ವಚ್ಛತಾ ಕೆಲಸ, ನಿರ್ಮಾಣ ಹಂತದ ಕಾಮಗಾರಿ ಮೊದಲಾದ ಅದೆಷ್ಟೋ ಕಷ್ಟದ ಕೆಲಸಗಳನ್ನು ಮಾಡುತ್ತಾ ಬಂದಿದ್ದರು.
ಆ ಬಳಿಕ ತಾನು ಹಾರ್ಬರ್ನಲ್ಲಿ ಕೆಲಸಕ್ಕಿದ್ದ ಕಂಪೆನಿಯ ಮಾಲಕರೇ ಅಲ್ಲಿ ಮತ್ತೆ ಡ್ರಜ್ಜಿಂಗ್ ಕಾಮಗಾರಿಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದರು. ಸುಮಾರು 2 ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಿದ ಝಕರಿಯಾ ಅವರ ಬದುಕಿನಲ್ಲಿ ಆಗಲೇ ಹೊಸ ತಿರುವು ಸೃಷ್ಟಿಯಾಗಿತ್ತು. ಇಂಗ್ಲಿಷ್ ಭಾಷೆ ಮಾತನಾಡಲು ಮತ್ತಿತರ ಆಡಳಿತ ಕೆಲಸಗಳಲ್ಲಿ ಅವರು ಅಲ್ಲಿ ಹೆಚ್ಚಿನ ಅನುಭವ ಪಡೆದುಕೊಂಡರು.
ಆ ಬಳಿಕ ಮೌರಿಕ್ ಇಂಟರ್ನ್ಯಾಷನಲ್ ಕಂಪೆನಿಗೆ ಸೇರಿಕೊಂಡರು. ಅಲ್ಲಿ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯ ಹಿನ್ನೆಲೆಯಲ್ಲಿ ಸಣ್ಣ ಅವಧಿಯಲ್ಲಿ ಹಲವು ಬಾರಿ ಭಡ್ತಿ ಪಡೆದರು. ಈ ನಡುವೆ ಅವರು ಡಿಪ್ಲೋಮ ವ್ಯಾಸಂಗ ಮಾಡಿ ಪದವಿಯನ್ನು ಪಡೆದುಕೊಂಡರು.ಅನ್ಹಬೀಬ್ ಕಂಪನಿಯಲ್ಲಿ 30 ವರ್ಷಗಳ ಕರ್ತವ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ಕಂಪೆನಿಯ ಉನ್ನತಿಗೆ ಬಹಳಷ್ಟು ಶ್ರಮ ವಹಿಸಿದರು.
ಹೀಗೆ ಹಲವು ಕಡೆ ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವ, ಪ್ರತಿಷ್ಠಿತಿ ಕಂಪೆನಿಗಳಲ್ಲಿನ ದೀರ್ಘ ಕಾಲದ ಸೇವೆಯ ಅನುಭವದ ಹಿನ್ನೆಲೆಯಲ್ಲಿ ಝಕರಿಯಾ ಅವರು ತನ್ನದೇ ಒಂದು ಸಂಸ್ಥೆ ಆರಂಭಿಸುವ ಯೋಚನೆ ಹೊಂದಿದ್ದರು.
1996ರಲ್ಲಿ ಅಲ್ ಮುಝೈನ್ ಹೆಸರಿನಲ್ಲಿ ಮಾನವ ಸಂಪನ್ಮೂಲ (ಮ್ಯಾನ್ ಪವರ್) ಸಂಸ್ಥೆಯನ್ನು ಆರಂಭಿಸಿದ ಅವರು, ಬಳಿಕ ತನ್ನ ಮಗನ ಜೊತೆಗೂಡಿ ಸಂಸ್ಥೆಯನ್ನು ಕಟ್ಟಿಬೆಳೆಸಿದರು. ಇವತ್ತು ಇಷ್ಟು ದೊಡ್ಡ ಉದ್ಯಮಿಯಾದ ಮೇಲೂ ಅವರು ಅಷ್ಟೇ ಕಠಿಣ ಪರಿಶ್ರಮಿಯಾಗಿದ್ದಾರೆ. ಇವತ್ತಿಗೂ ತಮ್ಮ ಸಂಸ್ಥೆಯ ಸಮವಸ್ತ್ರ ಧರಿಸಿ ಸಂಸ್ಥೆಯ ಉದ್ಯೋಗಿಗಳ ಜೊತೆ ಸೇರಿ ಕೆಲಸ ಮಾಡುತ್ತಾರೆ. ಸಂಸ್ಥೆಯ ಉದ್ಯೋಗಿಗಳನ್ನು ತನ್ನದೇ ಕುಟುಂಬದ ಭಾಗ ಎಂಬಂತೆ ನೋಡಿಕೊಂಡು ಬಂದವರು ಝಕರಿಯಾ ಜೋಕಟ್ಟೆ
ಸಾವಿರಾರು ಉದ್ಯೋಗಿಗಳು ಇರುವ ಈ ಕಂಪೆನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೇ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ತನ್ನ ಪರಿಚಯದ ಹಲವು ಕಂಪೆನಿಗಳಲ್ಲಿ ನೂರಾರು ಕನ್ನಡಿಗರಿಗೆ ಝಕರಿಯಾ ಅವರು ಉದ್ಯೋಗ ಮಾಡಿಸಿಕೊಟ್ಟಿದ್ದಾರೆ.
ತನ್ನ ಕಾರ್ಯಕ್ಷಮತೆ, ಸೇವೆಯ ಮೂಲಕ ಎತ್ತರಕ್ಕೆ ಬೆಳದೆ ಝಕರಿಯಾ ಎಂದಿಗೂ ತನ್ನ ತಾಯ್ನಾಡನ್ನು ಮರೆತವರಲ್ಲ. ವಿದೇಶದಲ್ಲಿರುವ ಕನ್ನಡಿಗರಿಗೆ ಉದ್ಯೋಗ ಕೊಡಿಸುವುದರೊಂದಿಗೆ ಅಗತ್ಯ ಇರುವವರಿಗೆ ಆರ್ಥಿಕ ನೆರವು, ಸಮಸ್ಯೆಗಳಿಗೆ ಸಿಲುಕಿದ ಅನಿವಾಸಿ ಕನ್ನಡಿಗರಿಗೆ ಪರಿಹಾರಗಳನ್ನೂ ಒದಗಿಸಿಕೊಟ್ಟಿದ್ದಾರೆ.

ಅಲ್ಲದೇ ಸಂಘ ಸಂಸ್ಥೆಗಳ ಮೂಲಕ ತಾಯ್ನಾಡಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗು ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಝರಾ ಚಾರಿಟೇಬಲ್ ಫೌಂಡೇಶನ್ ಮೂಲಕ ಅದೆಷ್ಟೋ ಬಡವರಿಗೆ ನೆರವಾಗಿದ್ದಾರೆ. ಅಲ್ಲದೇ ಎಂಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷರಾಗಿ, ಅಲ್ಖಾದಿಸ, ಹಿದಾಯ ಟ್ರಸ್ಟ್ ಮೊದಲಾದ ಸೇವಾ ಸಂಘಗಳ ಮೂಲಕವೂ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ಹತ್ತಾರು ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಿಗೆ ಪೋಷಕರಾಗಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಸೌದಿಯ ದಮಾಮ್ ನಲ್ಲಿ ನಡೆದ ಬೃಹತ್ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸಮ್ಮೇಳನ ಯಶಸ್ವಿಯಾಗಿ ನಡೆಯುವಂತೆ ನಿರ್ಣಾಯಕ ಪಾತ್ರ ವಹಿಸಿದ್ದರು.
ವಿಶ್ವಮಾನ್ಯ ಕನ್ನಡಿಗ, ಸ್ಟಾರ್ ಆಫ್ ಬ್ಯಾರಿ ಪ್ರಶಸ್ತಿ ಮತ್ತಿತರ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಬಂದಿವೆ.