ಯುಎಇಅನಿವಾಸಿ ಕನ್ನಡಿಗರ ಸಚಿವಾಲಯ, ಸಚಿವರ ನೇಮಕಕ್ಕೆ ಆಗ್ರಹ; ಟ್ವಿಟ್ಟರ್...

ಅನಿವಾಸಿ ಕನ್ನಡಿಗರ ಸಚಿವಾಲಯ, ಸಚಿವರ ನೇಮಕಕ್ಕೆ ಆಗ್ರಹ; ಟ್ವಿಟ್ಟರ್ ಅಭಿಯಾನ ಭಾರತದಲ್ಲಿ ನಂ.1 ಟ್ರೆಂಡಿಂಗ್

ದುಬೈ: ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾಗಿರುವ ಎನ್‌ಆರ್‌ಐ ಸಚಿವಾಲಯವನ್ನು ಕೂಡಲೇ ಆರಂಭಿಸಿ, ಡಾ.ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ನೇಮಿಸುವಂತೆ ಒತ್ತಾಯಿಸಿ ಅನಿವಾಸಿ ಕನ್ನಡಿಗರು ಶುಕ್ರವಾರ ಸಂಜೆ ನಡೆಸಿದ ಜಾಗತಿಕ ಮಟ್ಟದ ಟ್ವಿಟರ್ (X) ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾರತದಲ್ಲಿ, ಗಲ್ಫ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿ ಎಲ್ಲರ ಗಮನ ಸೆಳೆದಿದೆ.

ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭಗೊಂಡ ಟ್ವಿಟರ್ (X) ಅಭಿಯಾನಕ್ಕೆ ಜಗತ್ತಿನಾದ್ಯಂತವಿರುವ ಅನಿವಾಸಿ ಕನ್ನಡಿಗರು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿ, ಟ್ವೀಟ್ ಮಾಡುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದಾರೆ.

ವಿಶ್ವದ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಂದೇ ಧ್ವನಿಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿದ್ದವು. ನಿರೀಕ್ಷೆಗೂ ಮೀರಿ ಸಾವಿರಾರು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.

ಈ ಕುರಿತು ಮಾತನಾಡಿದ ಅಂತಾರಾಷ್ಟ್ರೀಯ ಕನ್ನಡಿಗರ ಫೆಡರೇಷನ್ ನ ಪೋಷಕರಾದ ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ, “ನಾವು ಹಲವು ದಶಕಗಳಿಂದ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಆಗ್ರಹಿಸುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಘೋಷಣೆ ಮಾಡಿರುವುದು ಸಂತೋಷದ ಸಂಗತಿ. ಇದೀಗ ಅದನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತಂದು ಅನಿವಾಸಿ ಕನ್ನಡಿಗರ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ, ಅನಿವಾಸಿ ಸಚಿವಾಲಯಕ್ಕೆ ಡಾಕ್ಟರ್ ಆರತಿ ಕೃಷ್ಣ ಅವರ ಆಯ್ಕೆ ಸೂಕ್ತ, ಇದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗರ ಆಶಯ” ಎಂದು ಹೇಳಿದರು.

“ಇಂದಿನ ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಂಡ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅನಿವಾಸಿ ಕನ್ನಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಅಭಿಯಾನ ಭಾರತದಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿರುವುದು ನಮ್ಮ ಒಗ್ಗಟ್ಟು ಹಾಗೂ ನಮ್ಮ ಬೇಡಿಕೆಯ ಬಲವನ್ನು ತೋರಿಸಿದೆ. ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ವಿಶ್ವಾಸ ನಮ್ಮದಲ್ಲಿದೆ,” ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ಈ ಅಭಿಯಾನಕ್ಕೆ ಜಾಗತಿಕ ಮಟ್ಟದ ಕನ್ನಡ ಪರ ಸಂಘಗಳು-ಸಂಸ್ಥೆಗಳು ಕೈಜೋಡಿಸಿದ್ದು, ಕೇವಲ ಅರ್ಧ ಗಂಟೆಯ ಸಮಯದಲ್ಲಿ ‘NRI Ministry for karnataka’, ‘NRIMinistry’, ‘NRI ಸಚಿವಾಲಯ ಶೀಘ್ರದಲ್ಲೇ ಸ್ಥಾಪನೆಯಾಗಲಿ’, ‘ಆರತಿ ಕೃಷ್ಣ ಸಚಿವೆಯಾಗಲಿ’, ಮೊದಲಾದ ಟ್ರೆಂಡಿಂಗ್ ಆಗುವಂತಹ ಆಕರ್ಷಕ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಟ್ವೀಟ್ ಮಾಡಲಾಗಿದೆ.

ಈ ವಿಷಯವನ್ನು ಟ್ವೀಟ್ ಮೂಲಕ @dkshivakumar, @kharge, @hariprasadbk2 ಮತ್ತು @siddaramaiah ಅವರಿಗೆ ಟ್ಯಾಗ್ ಮಾಡಿ ಹಂಚಿಕೊಳ್ಳಲಾಗಿದೆ.

ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಮುಖಂಡ, ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಹಾಗು ಸಂಚಾಲಕ ಹಿದಾಯತ್ ಅಡ್ಡೂರು ಅವರ ನೇತೃತ್ವದಲ್ಲಿ ಈ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವಿಶ್ವದಾದ್ಯಂತ ನೆಲೆಸಿರುವ ಸಾವಿರಾರು ಅನಿವಾಸಿ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಧ್ವನಿಯನ್ನು ಟ್ವೀಟ್ ಮೂಲಕ ಸರಕಾರದ ಗಮನಕ್ಕೆ ತರಲು ಯತ್ನಿಸಿದ್ದಾರೆ.

ಎಕ್ಸ್ ಅಭಿಯಾನ ಯಶಸ್ವಿಯಾಗಿರುವುದಕ್ಕೆ ಡಾ. ರೊನಾಲ್ಡ್ ಕೊಲಾಸೊ, ಝಕರಿಯ ಜೋಕಟ್ಟೆ, ಹಿದಾಯತ್ ಅಡ್ಡೂರು, ಮನ್ಸೂರ್ ಬಹರೈನ್, ಕನ್ನಡಿಗರ ಕೂಟ ದುಬೈ ಅಧ್ಯಕ್ಷರಾದ ಅರುಣ್ ಕುಮಾರ್ MK, ಭಾರ್ಗವ ಶರ್ಮಾ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

Hot this week

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

ಯುರೋಪಿನಾದ್ಯಂತ ಭಾರತೀಯ ಕಲಾಪ್ರಕಾರಗಳಿಗೆ ಆಸರೆಯಾಗಿರುವ ‘ಬೆಲ್ಜಿಯಂ ಕಲಾ ವೇದಿಕೆ’

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ದೂರದ ಯುರೋಪಿನ ನೆಲದಲ್ಲಿ ಭಾರತೀಯ ಕಲಾಪ್ರಕಾರಗಳನ್ನು,...

55th International Cultural Fest and Cultural Exchange Programme concludes in Dubai

Dubai, July 26: The 55th International Cultural Fest and...

ಖತರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಖತರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ...

Related Articles

Popular Categories