ಯುಎಇದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ...

ದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ

ವಿಶೇಷ ಸಾಧಕರೊಂದಿಗೆ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ತಮ್ಮ ವೃತ್ತಿ, ಉದ್ಯೋಗ, ವ್ಯವಹಾರಗಳ ನಡುವೆಯೂ ಅವರು ಕನ್ನಡದ ಬೇರುಗಳನ್ನು ಮರೆಯದೆ, ಹೊಸ ತಲೆಮಾರಿಗೆ ಭಾಷೆಯ ಮಹತ್ವವನ್ನು ಬೋಧಿಸುತ್ತ ಬಂದಿರುವುದನ್ನು ನಾವು ಕಾಣಬಹುದಾಗಿದೆ. ಇಂಥ ಸನ್ನಿವೇಶದ ನಡುವೆ ದುಬೈಯಂತಹ ಬಹುಭಾಷಾ, ಬಹುಸಂಸ್ಕೃತಿಯ ನಗರದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದವರು ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿರುವ ಕೊಡಗಿನ ಬಿ. ಕೆ. ಗಣೇಶ್ ರೈ. ತಮ್ಮ ಕಲಾತ್ಮಕ ದೃಷ್ಟಿ, ಸಂಘಟನಾ ಕೌಶಲ್ಯ ಮತ್ತು ಭಾಷಾ ಪ್ರೀತಿ ಮೂಲಕ ಅವರು ವಿದೇಶ ನೆಲದಲ್ಲೂ ಕನ್ನಡದ ಧ್ವಜವನ್ನು ಎತ್ತಿಹಿಡಿದಿದ್ದಾರೆ.

ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ, ವಿಶ್ವ ದರ್ಜೆಯ ವಾಣಿಜ್ಯ ಕೇಂದ್ರ, ವಿಶ್ವದ ನಾನಾ ಕಡೆಗಳ 250ಕ್ಕೂ ಹೆಚ್ಚು ದೇಶವಾಸಿಗಳ ನಾಗರಿಕರು ಅನಿವಾಸಿ ಪ್ರಜೆಗಳಾಗಿ ಉದ್ಯೋಗಿಗಳಾಗಿ, ಉದ್ಯಮಿಗಳಾಗಿ ನೆಲೆಸಿರುವ ದುಬೈನಲ್ಲಿ, ಹಲವಾರು ವರ್ಷಗಳಿಂದ ಕನ್ನಡದ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬಿ. ಕೆ. ಗಣೇಶ್ ರೈ ಅವರು ಮಾಡಿಕೊಂಡು ಬಂದಿರುವ ಕೆಲಸ-ಕಾರ್ಯಗಳು ಅವರನ್ನೊರ್ವ ಸಾಧಕನ ಸ್ಥಾನದಲ್ಲಿ ತಂದು ನಿಲ್ಲಿಸಿದೆ.

ಮೂಲತಃ ಕೊಡಗಿನವರಾಗಿರುವ ಬಿ. ಕೆ. ಗಣೇಶ್ ರೈ, ಚಿತ್ರ ಶಿಲ್ಪ ಕಲಾವಿದ, ಕ್ರಿಯಾತ್ಮಕ ಕಲಾ ನಿರ್ದೇಶಕ, ಬರಹಗಾರ, ನಿರೂಪಕ, ರಕ್ತದಾನ ಶಿಬಿರದಂಥ ಮಾನವೀಯ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಯುಎಇಯಲ್ಲಿ ಕನ್ನಡ ಸೇವೆ ಮಾಡುತ್ತಾ, ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.

ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದೊಂದಿಗೆ, ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಶಾಲೆಯಲ್ಲಿ ಲಲಿತಕಲಾ ಡಿಪ್ಲೊಮಾ-(ಕಾವಾ), ಮೈಸೂರಿನ ಕಲಾನಿಕೇತನ ಚಿತ್ರಕಲಾ ಶಾಲೆಯಲ್ಲಿ ಮತ್ತು ಮಂಗಳೂರಿನ ಮಹಾಲಾಸ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ತರಬೇತಿ ಪಡೆದು, ಬಳಿಕ ವೀರಾಜಪೇಟೆ ಸಂತ ಅನ್ನಮ್ಮ ಸಂಯುಕ್ತ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅನಂತರ ಯುಎಇಗೆ ಆಗಮಿಸಿದ ಅವರು, 1996ರಿಂದ ಅಬುಧಾಬಿಯಲ್ಲಿ ಡಾ. ಬಿ. ಆರ್. ಶೆಟ್ಟಿಯವರ ಎನ್ಎಂಸಿ ಸಮೂಹ ಸಂಸ್ಥೆಯಲ್ಲಿರುವ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾನಿರ್ದೇಶಕನಾಗಿ ಕಾರ್ಯನಿರ್ವಹಣೆ ಮಾಡಿದ್ದು, ಕಳೆದ 3 ದಶಕಗಳಿಂದ ಅರಬರ ನಾಡಿನಲ್ಲಿ ಕನ್ನಡದ ಸೇವೆಯಲ್ಲಿ ತೊಡಗಿದ್ದಾರೆ.

ಹಲವಾರು ಕನ್ನಡಪರ, ತುಳು ಸಂಘಟನೆಗಳಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿರುವ ಬಿ. ಕೆ. ಗಣೇಶ್ ರೈ ಅವರ ಬಹುಮುಖ ಪ್ರತಿಭೆಯನ್ನು ಪುರಸ್ಕರಿಸಿ ದುಬೈ ಸರಕಾರ ಕಲ್ಚರಲ್ ಮಿನಿಸ್ಟ್ರಿ 2021ರಲ್ಲಿ ‘ಕಲ್ಚರಲ್ ಗೋಲ್ಡನ್’ 10 ವರ್ಷದ ವೀಸಾವನ್ನು ನೀಡಿ ಗೌರವಿಸಿದೆ. ಕಲ್ಚರಲ್ ಗೋಲ್ಡನ್ ವೀಸಾ ಪಡೆದಿರುವ ಪ್ರಮುಖ ಭಾರತಿಯರಲ್ಲಿ ಕನ್ನಡಿಗ ಗಣೇಶ್ ರೈ ಅವರು ಒಬ್ಬರು. ತಮ್ಮ ಧರ್ಮ ಪತ್ನಿ ಮಂಜುಳಾ ರೈ, ಪುತ್ರ ಮೋನೀಶ್ ರೈ- ವಿಜಿಶಾ ದಂಪತಿಗಳು, ಮಗಳು ಐಶ್ವರ್ಯ ರೈ-ವರುಣ್ ದಂಪತಿಗಳ ಜೊತೆಗೆ ದುಬೈಯಲ್ಲಿ ನೆಲೆಸಿದ್ದಾರೆ. ಡಾ. ಬಿ. ಆರ್. ಶೆಟ್ಟಿಯವರ ಗಲ್ಫ್ ಪಬ್ಲಿಕ್ ರಿಲೇಶನ್ಸ್ ಅಂಡ್ ಅಡ್ವರ್ಟೈಸಿಂಗ್ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ, ಮ್ಯಾನೆಜರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿದ್ದಾರೆ.

ಕಳೆದ ನಾಲ್ಕುವರೆ ದಶಕಗಳಿಂದ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ದಿನ ಪತ್ರಿಕೆ ವಾರಪತ್ರಿಕೆ, ವೆಬ್ ಅಂತರ್ ಜಾಲ ಮಾಧ್ಯಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವುದು, ಭಾರತದ ವೀರ ಸೇನಾನಿ ಫೀಲ್ಡ್ ಮಾರ್ಷಲ್. ಕೆ. ಎಂ. ಕಾರಿಯಪ್ಪ, ಜನರಲ್ ತಿಮ್ಮಯ್ಯ, ತಲಕಾವೇರಿ ತೀರ್ಥೊದ್ಭವ, ಎಷ್ಟೊಂದು ಸುಂದರ ಮಡಿಕೇರಿ ದಸರಾ, ಅಬ್ದುಲ್ ಕಲಾಂಗೊಂದು ಸಲಾಮ್, ವಿಶ್ವೇಶ್ವರಯ್ಯ, ಭೀಮ್ ಸೇನ್ ಜೋಷಿ, ವಾಜಪೇಯಿ ಇತ್ಯಾದಿ. ಪ್ರಸ್ತುತ ಮಂಗಳೂರಿನ ಅಮೃತ ಪ್ರಕಾಶ ಮಾಸಿಕದಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದು, ಉದಯವಾಣಿ ದೇಸಿಸ್ವರ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣಗಾರರಾಗಿ, ದುಬೈಯಲ್ಲಿರುವ ವಿಶೇಷ ವಾಸ್ತು ಶಿಲ್ಪ ಹಾಗೂ ಸಾಂಸ್ಕೃತಿಕ ವೈಭವಗಳ ಲೇಖನಗಳನ್ನು ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿದ್ದಾರೆ. ಅವರ ಕಲಾ ಸಾಧನೆ, ಜೀವನ ಪಯಣ ಹಾಗೂ ಕನ್ನಡಕ್ಕೆ ಅವರು ಕೊಟ್ಟ ಕೊಡುಗೆ ಬಗ್ಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ….

ಪ್ರಶ್ನೆ: ನಿಮ್ಮ ‘ಕಲಾ’ ಪ್ರಯಾಣ ಹೇಗೆ ಆರಂಭವಾಯಿತು? ಈ ಬಗ್ಗೆ ಸಣ್ಣ ವಿವರಣೆ ನೀಡಬಹುದೇ…?

ಬಿ. ಕೆ. ಗಣೇಶ್ ರೈ: 1960ರ ದಶಕದಿಂದ ಶಾಲೆಯಲ್ಲಿ ಸ್ಲೇಟ್ ಬಳಪದ ಕಡ್ಡಿ ಬಳಸಿ ಅಕ್ಷರ ಮತ್ತು ಚಿತ್ರ ರಚನೆ ಪ್ರಾರಂಭಿಸಿ ನಂತರ್ ಪೆನ್ಸಿಲ್ ಮತ್ತು ಕಲರ್ ಪೆನ್ಸಿಲ್ , ಪೆನ್, ಕಲರ್ ಸ್ಕೆಚ್ ಪೆನ್, ನಂತರ ಬಣ್ಣಗಳ ಜೊತೆಯಲ್ಲಿ ಕುಂಛ, ಪೆಯಿಂಟಿಗ್ ನೈಫ್, ಕೈಯಿಂದ ಮಣ್ಣಿನ ಮೂರ್ತಿ ನಿರ್ಮಾಣ, ನಂತರ ಮೋಲ್ಡಿಂಗ್ (ಅಚ್ಚು) ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರೀಸ್, ಸಿಮೆಂಟ್, ಶಿಲೆ, ಕಾಷ್ಠ, ಪೇಪರ್ ಪಲ್ಪ್ ಪ್ರಸ್ತುತಿ, ಪೈಬರ್ ಗ್ಲಾಸ್ ನಲ್ಲಿ ವಿಗ್ರಹ ನಿರ್ಮಾಣ, ಚಿತ್ರಕಲೆ, ಜಲವರ್ಣ, ತೈಲವರ್ಣ, ಪ್ರಸ್ತುತ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ವಿನ್ಯಾಸ, ಇವಾಗ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ಕಲಾಕೃತಿಗಳ ವಿನ್ಯಾಸ ಇತ್ಯಾದಿ ಆಯಾ ಕಾಲ ಘಟ್ಟದಲ್ಲಿ ಸಂದರ್ಭಕ್ಕೆ ಅನುಸಾರವಾಗಿ ಬೆಳೆದು ಬಂದಿರುವ ಚಿತ್ರ ಶಿಲ್ಪ ಕಲಾವಿದನಾಗಿದ್ದೇನೆ.

ಪ್ರಶ್ನೆ: ನಿಮ್ಮ ಕಲಾನೈಪುಣ್ಯತೆ ಬಗ್ಗೆ ಸಣ್ಣ ವಿವರ ನೀಡಬಹುದಾ….?

ಬಿ. ಕೆ. ಗಣೇಶ್ ರೈ: ತೈಲವರ್ಣ, ಜಲವರ್ಣ ಚಿತ್ರ ರಚನೆ, ಡ್ರಾಮ ಸೀನರಿಗಳ ರಚನೆ, ಸ್ಮರಣ ಸಂಚಿಕೆಗೆ ಮುಖಪುಟ ಚಿತ್ರ ರಚನೆ, ಲಾಂಛನ ರಚನೆ, ಚಿತ್ರ-ಶಿಲ್ಪ ಕಲಾವಿದ, ಕಲಾ ನಿರ್ದೇಶಕ, ಗ್ರಾಫಿಕ್ ಡಿಸೈನರ್, ಏರ್ ಬ್ರಶ್ ಪೆಯಿಂಟಿಂಗ್, ಮಿನಿಎಚರ್ ನಿಂದ ಬೃಹತ್ ಗಾತ್ರದವರೆಗೆ ವಿಗ್ರಹ ನಿರ್ಮಾಣ – ಪ್ಲಾಸ್ಟರ್ ಆಫ್ ಪ್ಯಾರಿಸ್, ಸಿಮೆಂಟ್, ಆರಗು, ಮರದ ಕೆತ್ತನೆ, ಥರ್ಮಾಕೋಲ್, ಲೆಕ್ ಕಲರ್, ಏನಾಮಲ್ ಕಲರ್, ಸ್ತಬ್ದ ಚಿತ್ರ – ತೇರು, ಮಂಟಪ, ಕಲ್ಯಾಣ ಮಂಟಪ, ಪೇಪರ್ ಮೋಲ್ಡ್ ಸೆಟ್ಟಿಂಗ್ಸ್ ….ಇವೆಲ್ಲದರಲ್ಲೂ ನಾನು ನಿಪುಣತೆ ಹೊಂದಿದ್ದೇನೆ.

ಪ್ರಶ್ನೆ: ಯುಎಇಯಲ್ಲಿರುವಂಥ ಕನ್ನಡ ಸಂಘಟನೆಗಳೊಂದಿಗೆ ನಿಮ್ಮ ಸಂಪರ್ಕ ಹೇಗಿದೆ?

ಬಿ. ಕೆ. ಗಣೇಶ್ ರೈ: ಯುಎಇಯಲ್ಲಿ ಕರ್ನಾಟಕ ಪರ 150ಕ್ಕೂ ಜಾತಿ, ಸಮುದಾಯ ಮತ್ತು ಭಾಷಾ ಸಂಘಟನೆಗಳು ಕಾರ್ಯೋನ್ಮುಖವಾಗಿವೆ. ಅವುಗಳಲ್ಲಿ ಮೂವತ್ತಕಿಂತಲೂ ಹೆಚ್ಚು ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕವಿದ್ದು, ಕ್ರಿಯಾತ್ಮಕ ಕಲಾ ನಿರ್ದೇಶಕನಾಗಿ ನನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿತ್ತಿದ್ದೇನೆ. ಹೆಚ್ಚಿನ ಎಲ್ಲಾ ಸಂಘಟನೆಗಳಿಗೆ ಕನ್ನಡ ಮತ್ತು ಅಂಗ್ಲಭಾಷೆಗಳಲ್ಲಿ ಲಾಂಛನ ವಿನ್ಯಾಸ, ಆಮಂತ್ರಣ ಪತ್ರ, ವೇದಿಕೆಯ ಹಿಂಬದಿಯಲ್ಲಿ ಕಲಾತ್ಮಕ ವಿನ್ಯಾಸದ ಚಿತ್ರಪಟ (ಬ್ಯಾನರ್) ಸನ್ಮಾನ ಪತ್ರ, ಸಾಹಿತ್ಯ ಮತ್ತು ವಿನ್ಯಾಸ, ಕನ್ನಡ ಮತ್ತು ತುಳುಭಾಷೆಯಲ್ಲಿ ಕಾರ್ಯಕ್ರಮ ನಿರೂಪಣೆ, ಕಾರ್ಯಕ್ರಮದ ಮೊದಲು, ನಂತರ ವೆಬ್ ಮಾಧ್ಯಮಗಳಲ್ಲಿ, ಮುದ್ರಣ ಮಾಧ್ಯಮಗಳಲ್ಲಿ ಸವಿಸ್ತಾರವಾದ ಲೇಖನ ಬರವಣಿಗೆ ಮತ್ತು ಪ್ರಕಟಣೆ ಮಾಡುತ್ತಿದ್ದೇನೆ.

ಪ್ರಶ್ನೆ: ಯುವ ಕಲಾವಿದರಿಗೆ ನೀವು ನೀಡುವ ಸಂದೇಶವೇನು…?

ಬಿ. ಕೆ. ಗಣೇಶ್ ರೈ: ಪ್ರಸ್ತುತ ಅತ್ಯಾಧುನಿಕ ವೈಜ್ಞಾನಿಕ ಯುಗದಲ್ಲಿ ಬೆಳೆಯುತ್ತಿರುವ ಇಂದಿನ ಜನತೆಯ ಕೈಯಲ್ಲಿ ಮೊಬೈಲ್ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಬಳಕೆಯಲ್ಲಿ ಪೂರ್ತಿ ವಿಶ್ವವನ್ನು ವೀಕ್ಷಿಸುವುದರ ಜೊತೆಗೆ ಫೋಟೊ, ವೀಡಿಯೋ ಚಿತ್ರಿಕರಣ ವ್ಯವಸ್ಥೆ ಇರುವುದರಿಂದ ಪ್ರತಿಯೊಬ್ಬರಲ್ಲಿ ಸೌಂದರ್ಯ ಪ್ರಜ್ಞೆ, ಕಲಾತ್ಮಕ ದೃಷ್ಠಿ ಇರಬೇಕಾಗುತ್ತದೆ. ಕಲ್ಪನಾ ಶಕ್ತಿ, ವಿನ್ಯಾಸಗೊಳಿಸುವ ಚಾಕಚಕ್ಯತೆ ಇರಬೇಕಾಗುತ್ತದೆ. ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ತಾವೇ ಸ್ವತಹ ಆಮಂತ್ರಣ ಪತ್ರ, ಶುಭಾಶಯ ಪತ್ರ, ಶುಭ ಸಂದೇಶಗಳನ್ನು ವಿನ್ಯಾಸ ಮಾಡ ಬಹುದು. ಚಿತ್ರಕಲೆ, ವರ್ಣ ಸಂಯೋಜನಾ ಚಾಕಚಕ್ಯತೆ ಅಭ್ಯಾಸ ಮಾಡಿಕೊಂಡರೆ, ತಮ್ಮಲ್ಲಿರುವ ಬಹುಮುಖ ಪ್ರತಿಭೆಯನ್ನು ಪ್ರತಿಯೊಬ್ಬರು ಅನಾವರಣ ಗೊಳಿಸಬಹುದಾಗಿದೆ.

ಪ್ರಶ್ನೆ: ದುಬೈಯಲ್ಲಿ ಕನ್ನಡ ಭಾಷೆ ಮತ್ತು ಕಲೆಯ ಸಂಯೋಜನೆ ಬಗ್ಗೆ…

ಬಿ.ಕೆ.ಗಣೇಶ್ ರೈ: ನನ್ನ ಜನ್ಮಭೂಮಿ ಭಾರತದಲ್ಲಿ ಲೇಖನಗಳನ್ನು ಪ್ರಕಟಗೊಳಿಸುವುದರ ಜೊತೆಗೆ ಕಲಾಮಾಧ್ಯಮದ ಜಾಹಿರಾತು ವಿನ್ಯಾಸಗಳಲ್ಲಿ ಚಿತ್ರ ಸಹಿತ ಕನ್ನಡಭಾಷೆಯ ಅಕ್ಷರಗಳು, ಆಕರ್ಷಕ ಶೀರ್ಷಿಕೆಗಳ ಅಳವಡಿಕೆ ಮಾಡುತ್ತಿದ್ದೇನೆ. ದುಬೈಗೆ ಬಂದ ನಂತರ ಹಸ್ತಕೌಶಲ್ಯದಿಂದ ಕಂಪ್ಯೂಟರ್ ಗ್ರಾಫಿಕ್ಸ್ ಗೆ ತೊಡಗಿಸಿಕೊಂಡು, ದುಬೈಯಲ್ಲೆ ಹೊರಾಂಗಣ ಜಾಹಿರಾತು ವಿನ್ಯಾಸಗಳಲ್ಲಿ ದುಬೈಯ ವಾಸ್ತುಶಿಲ್ಪಗಳ ಅಳವಡಿಕೆಯನ್ನು ಹಾಗೂ ನಮ್ಮ ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಕರ್ನಾಟಕ ಹಾಗೂ ಭಾರತೀಯ ವಾಸ್ತು ಶಿಲ್ಪಗಳು, ಬೃಹತ್ ಕನ್ನಡ ಅಕ್ಷರಗಳೊಂದಿಗೆ ವಿನ್ಯಾಸಗೊಳಿಸುತ್ತಾ ಬಂದಿರುವುದರ ಜೊತೆಗೆ ಗಲ್ಫ್ ನಾಡಿನಲ್ಲಿ ಕನ್ನಡ ಭಾಷೆಯ ವೈಭವೀಕರಣದಲ್ಲಿ ನೀಡಿರುವ ಕೊಡುಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಪೂರ್ಣ ತೃಪ್ತಿ ನನಗಿದೆ.

ಪ್ರಶ್ನೆ: ವಿದೇಶದಲ್ಲಿ ನಿಮ್ಮ ಸಾಧನೆಗೆ ಸಿಕ್ಕ ಗೌರವ ಸನ್ಮಾನಗಳ ಬಗ್ಗೆ…

ಬಿ. ಕೆ. ಗಣೇಶ್ ರೈ: ಗಲ್ಫ್ ನಾಡಿನಲ್ಲಿ ಕಾರ್ಯೋನ್ಮುಖವಾಗಿರುವ ಹೆಚ್ಚಿನ ಸಂಘ ಸಂಸ್ಥೆಗಳು ನನಗೆ ಸನ್ಮಾನ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ, ಗೌರವಗಳನ್ನು ನೀಡಿ ಗೌರವಿಸಿದೆ. ನನ್ನಲಿರುವ ಬಹುಮುಖ ಪ್ರತಿಭೆ ಹಾಗೂ ಸಮಾಜ ಸೇವೆಯನ್ನು ದುಬೈ ಸರಕಾರ ಗುರುತಿಸಿ ದುಬೈ ಕಲ್ಚರಲ್ ಮಿನಿಸ್ಟ್ರಿ ವಿಶೇಷ ಪ್ರತಿಭೆಗಾಗಿ “ಕಲ್ಚರಲ್ ಗೋಲ್ಡನ್ ವೀಸಾ” ಗೌರವ ನೀಡಿದೆ.

ಕಳೆದ ಎರಡೂವರೆ ದಶಕಗಳಿಂದ ದುಬೈಯಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಚಿತ್ರಕಲೆ, ಶಿಲ್ಪಕಲೆ, ಲೇಖನ ಸಹಿತ, ಕಾರ್ಯಕ್ರಮ ನಿರೂಪಣೆ, ರಕ್ತದಾನ ಶಿಬಿರ, ಸಮಾಜ ಸೇವೆಗಾಗಿ ಹಲವಾರು ಪ್ರಶಸ್ತಿ ಸನ್ಮಾನಗಳು ಸಿಕ್ಕಿವೆ.

ಅದರಲ್ಲಿ ಪ್ರಮುಖವಾಗಿರುವ ಪ್ರಶಸ್ತಿಗಳು, ಮಂಗ್ಳೂರಿಯನ್ ಸ್ಟಾರ್, ಕರ್ನಾಟಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕಲಾ ಕಿರಣ, ಶಿಲ್ಪಕಲಾ ರತ್ನ, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯು.ಎ.ಇ.ಯಲ್ಲಿ ರಾಕ್ ಕರ್ನಾಟಕ ಸಂಘದ ಗಲ್ಫ್ ಕರ್ನಾಟಕ ಸೇವಾ ಸಾಧಕ ರತ್ನ ಅಂತಾರಾಷ್ಟ್ರೀಯ ಪ್ರಶಸ್ತಿ, ಅಬುಧಾಬಿ ಕರ್ನಾಟಕ ಸಂಘದ ಕುವೆಂಪು ವಿಶ್ವಮಾನ್ಯ ಅಂತಾರಾಷ್ಟ್ರೀಯ ಪ್ರಶಸ್ತಿ, ದ.ರಾ.ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಂಘ ಶಾರ್ಜಾ – ಮಯೂರ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ಹೃದಯವಾಹಿನಿ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ಶಿಲ್ಪಕಲಾ ರತ್ನ ಅಂತಾರಾಷ್ಟ್ರೀಯ ಪ್ರಶಸ್ತಿ, ಧ್ವನಿ ಪುರಸ್ಕಾರ ಅಂತಾರಾಷ್ಟ್ರೀಯ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಕನ್ನಡಿಗರ ಕನ್ನಡ ಕೂಟ ದುಬೈ ಸನ್ಮಾನ, ಬ್ರಾಹ್ಮಣರ ಸಂಘ ದುಬೈ ವಿಪ್ರ ಪೋಷಕ ಪ್ರಶಸ್ತಿ, ಯು.ಎ.ಇ ಬಂಟ್ಸ್ ಗಲ್ಫ್ ಬಂಟೋತ್ಸವ ಸನ್ಮಾನ, ಕರ್ನಾಟಕ ಸಂಘ ದುಬೈ ಸನ್ಮಾನ. ಇನ್ನೂ ಹತ್ತು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಪ್ರಶಸ್ತಿ ಗೌರವಗಳನ್ನು ಸಿಕ್ಕಿವೆ.

ಪ್ರಶ್ನೆ: ಯುಎಇಯಲ್ಲಿರುವ ಕನ್ನಡಪರ ಹಾಗು ಇನ್ನಿತರ ಸಂಘಟನೆಗಳಿಗೆ ತೆರೆಮರೆಯಲ್ಲಿ ನಿಂತು ಯಾವ ರೀತಿ ಸಹಾಯ, ಸಹಕಾರವನ್ನು ನೀಡುತ್ತಿದ್ದೀರಿ….?

ಬಿ.ಕೆ.ಗಣೇಶ್ ರೈ: ಯುಎಇಯಲ್ಲಿರುವ ಹೆಚ್ಚಿನ ಕರ್ನಾಟಕ ಪರ ಸಂಘಟನೆಗಳಿಗೆ ಕನ್ನಡ ಅಕ್ಷರಗಳ ಸಹಿತ ಲಾಂಛನಗಳನ್ನು ವಿನ್ಯಾಸ ಗೊಳಿಸಿದ್ದೇನೆ. ಅವುಗಳಲ್ಲಿ ಪ್ರಮುಖವಾದುದು ಅಬುಧಾಬಿ ಕರ್ನಾಟಕ ಸಂಘ, ದುಬೈ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡ ಸಂಘ ಅಲ್ ಐನ್, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ವಿಶ್ವಕರ್ಮ ಸೇವಾ ಸಮಿತಿ, ಬಿಲ್ಲವಾಸ್ ದುಬೈ, ಬ್ರಾಹ್ಮಣರ ಸಮಾಜ, ಬ್ಯಾರೀಸ್ ಕಲ್ಚರಲ್ ಫೋರಮ್ ದುಬೈ, ವಿಶ್ವ ತುಳು ಸಮ್ಮೇಳನ ದುಬೈ-2018, ದೈಜಿ ವರ್ಲ್ಡ್ ವೆಬ್ ಮೀಡಿಯಾ ಇತ್ಯಾದಿ. ವಿಶ್ವ ತುಳು ಸಮ್ಮೇಳನ ದುಬೈ ಹಾಗೂ ಹಲವಾರು ಸಂಘ ಸಂಸ್ಥೆಗಳ ಸ್ಮರಣ ಸಂಚಿಕೆಯನ್ನು ವಿನ್ಯಾಸಗೊಳಿಸಿದ್ದೇವೆ.

ಇವರಿಂದಾಗಿ ಹಲವಾರು ಸಮಾರಂಭದ ಆಹ್ವಾನ ಪತ್ರಿಕೆಗಳು ಕನ್ನಡದಲ್ಲಿ ಮುದ್ರಣವಾಗಿ, ವೇದಿಕೆಯ ಹಿಂಭಾಗದ ಚಿತ್ರಪಟ ಬ್ಯಾನರ್ ನಲ್ಲಿ ಕರ್ನಾಟಕದ ಶಿಲ್ಪಕಲಾ ವೈಭವದೊಂದಿಗೆ ಬೃಹತ್ ಕನ್ನಡ ಅಕ್ಷರಗಳು ರಾರಾಜಿಸಿವೆ. ಸಮಾರಂಭದಲ್ಲಿ ಗಣ್ಯಾತಿ ಗಣ್ಯರ ಸನ್ಮಾನ ಪತ್ರ, ಸಾಹಿತ್ಯ, ವಿನ್ಯಾಸ ಎಲ್ಲಾ ವಿನ್ಯಾಸಗಳು ಕಂಪ್ಯೂಟರ್ ಗ್ರಾಫಿಕ್ಸ್ ನಿಂದಲೆ ಮೂಡಿಸುವ ಮೂಲಕ ಸಹಾಯ, ಸಹಕಾರ ನೀಡುತ್ತಿದ್ದೇನೆ.

ಪ್ರಶ್ನೆ: ಪ್ರಕಟಣೆಗೊಂಡ ನಿಮ್ಮ ಪುಸ್ತಕದ ಬಗ್ಗೆ ಏನು ಹೇಳಲು ಇಚ್ಛಿಸುತ್ತೀರಿ…?

ಬಿ.ಕೆ.ಗಣೇಶ್ ರೈ: ದುಬೈಯ ಬಗ್ಗೆ ಪ್ರಕಟವಾಗಿದ್ದ 50 ಲೇಖನಗಳ ಸಂಗ್ರಹವನ್ನು ‘ಕಡಲಾಚೆಯ ರಮ್ಯ ನೋಟ ದುಬೈ’ ವರ್ಣ ರಂಜಿತ ಪುಸ್ತಕವನ್ನು ಮುದ್ರಿಸಿ ಬಿಡುಗಡೆ ಮಾಡಿದ್ದೇನೆ. ಕರ್ನಾಟಕದ ಹೆಚ್ಚಿನ ಎಲ್ಲಾ ಗ್ರಂಥಾಲಯಗಳಲ್ಲಿ ಓದುಗರಿಗೆ ಲಭ್ಯವಿದೆ ಹಾಗೂ ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಓದುಗರಿಗೆ ಲಭ್ಯವಿದೆ.

ಕೊಡಗಿನ ಕುಲ ದೇವತೆ ಕಾವೇರಿ ಮಾತೆಯ ಪುರಾಣ ಚಿತ್ರಕಥಾ ಪುಸ್ತಕ ಮತ್ತು ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ನಿರ್ಮಾಣದ ಐತಿಹಾಸಿಕ ಚಿತ್ರಕಥಾ ಪುಸ್ತಕವನ್ನು ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ವಿನ್ಯಾಸಗೊಳಿಸಿ, ಮುದ್ರಿಸಿ ಲೋಕಾರ್ಪಣೆ ಮಾಡಿದ್ದೇನೆ.

ಪ್ರಸ್ತುತ ಅವಧೂತ ಭಗವಾನ್ ನಿತ್ಯಾನಂದರ ಜೀವನ ವೃತ್ತಾಂತ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ವಿನ್ಯಾಸಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಕೊಡವರ ಕುಲದೇವರಾಗಿರುವ ಕೊಡಗಿನ ಕಕ್ಕಬೆ ಪಾಡಿ ಇಗ್ಗುತಪ್ಪ ದೇವಾಲಯದ ಐತಿಹಾಸಿಕ ಚಿತ್ರಕಥಾ ಪುಸ್ತಕವು ಸಹ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ವಿನ್ಯಾಸದ ಹಂತದಲ್ಲಿದೆ.

ಪ್ರಶ್ನೆ: ಮುಂದಿನ ದಿನಗಳಲ್ಲಿ ಕೈಗೊಳ್ಳಲು ಬಯಸುವ ವಿಶೇಷ ಯೋಜನೆಗಳೇನಾದರೂ ಇದೆಯಾ…?

ಬಿ.ಕೆ.ಗಣೇಶ್ ರೈ: ಈಗಾಗಲೆ ನಾನು ನನ್ನದೆ ಯೂಟ್ಯೂಬ್ ಚಾನೆಲ್ ‘ಗಣೇಶ್ ರೈ ಕೆಲಿಯಾಡೋ ಸ್ಕೋಪ್’ ಮಾಡಿದ್ದೇನೆ. ಇವುಗಳಲ್ಲಿ ನಮ್ಮ ಜನಭೂಮಿಯ ವಸ್ತು ಶಿಲ್ಪ, ಪ್ರವಾಸಿ ತಾಣಗಳು, ದೇವಾಲಯಗಳು, ವೈಜ್ಞಾನಿಕ ಕೇಂದ್ರಗಳು ಹಾಗೂ ಅರಬ್ ಸಂಯುಕ್ತ ಸಂಸ್ಥಾನಗಳಲ್ಲಿ ಗಿನ್ನೆಸ್ ದಾಖಲೆಗಳ ವಾಸ್ತು ವೈಭವಗಳು, ಐತಿಹಾಸಿಕ ಮತ್ತು ನವ್ಯ ವೈಜ್ಞಾನಿಕ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಆಚರಣೆಗಳ ವೀಡಿಯೊಗಳನ್ನು ಚಿತ್ರಿಕರಿಸಿ ಯೂಟ್ಯೂಬ್ ನಲ್ಲಿ ಅಪ್ಲೊಡ್ ಮಾಡಲಾಗಿದೆ. ಸಂಶೋಧಕರಿಗೆ ವಿವಿಧ ವಿಷಯಗಳಲ್ಲಿ ಸಂಶೋಧನೆ ಮಾಡುವಷ್ಟು ಸಂಪೂರ್ಣ ಮಾಹಿತಿಗಳು ಇಲ್ಲಿಯವರೆಗೆ ಅಪ್ಲೊಡ್ ಮಾಡಿರುವ 700ಕಿಂತಲೂ ಹೆಚ್ಚಿನ ವೀಡಿಯೊಗಳಲ್ಲಿ ಲಭ್ಯವಿದೆ.

ಮುಂದಿನ ಪೀಳಿಗೆಗಾಗಿ ವಿಶೇಷ ವಿಷಯಗಳನ್ನು ಆಧರಿಸಿ ಡಾಕ್ಯೂಮೆಂಟರಿ ವೀಡಿಯೋಗಳು ಮತ್ತು ಡಿಜಿಜಿಟಲ್ ಗ್ರಾಫಿಕ್ಸ್ ನಲ್ಲಿ ಹೆಚ್ಚಿನ ಚಿತ್ರಕಥಾ ಪುಸ್ತಕಗಳನ್ನು ವಿನ್ಯಾಸಗೊಳಿಸಿ ಲೋಕಾರ್ಪಣೆ ಮಾಡಿ ಮುಂದಿನ ಪೀಳಿಗೆಯವರು ವೀಕ್ಷಿಸುವಂತೆ ಮಾಡುವ ಯೋಚನೆ ಮತ್ತು ಯೋಜನೆ ಇದೆ.

ಈಗಾಗಲೆ ನನ್ನ ಹಲವಾರು ಲೇಖನಗಳನ್ನು ಹಾಗೂ ನನ್ನ ಸಾಧನೆಗಳ ಸಂದರ್ಶನವನ್ನು ವೆಬ್ ಮಾಧ್ಯಮಗಳ ಮೂಲಕ ಪ್ರಕಟಿಸಲಾಗಿದೆ. ಆ ದಾಖಲೆಗಳು ನನಗೆ ದುಬೈ ಗೋಲ್ಡನ್ ವೀಸಾ ನೀಡಿರುವುದಕ್ಕೆ ದಾಖಲೆಗಳಾಗಿ ದುಬೈ ಸರಕಾರಕ್ಕೆ ತಲುಪಿದೆ.

ಪ್ರಶ್ನೆ: ಕಲಾವಿದನಾಗಿ, ಸಂಘಟಕನಾಗಿ ನೀವು ಈವರಗೆ ಮಾಡಿರುವ ಕಾರ್ಯ ಸಾಧನೆಗಳ ಬಗ್ಗೆ ಹೇಳುತ್ತೀರಾ…?

ಬಿ.ಕೆ.ಗಣೇಶ್ ರೈ: ನನ್ನ ಹುಟ್ಟೂರು ಕೊಡಗಿನ ಮಡಿಕೇರಿ. ವಿದ್ಯಾರ್ಥಿಯಾಗಿರುವಾಗಲೆ ಚಿತ್ರಕಲೆ, ವಿಗ್ರಹ ನಿರ್ಮಾಣದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದೆ. ಪ್ರೌಡಶಾಲಾ ಹಂತದಲ್ಲಿ ನೇವಲ್ ವಿಂಗ್ ಎನ್.ಸಿ.ಸಿ.ಯಲ್ಲಿ ತಂಡದ ನಾಯಕನಾಗಿದ್ದೆ. ಪದವಿಪೂರ್ವ ಶಿಕ್ಷಣದ ನಂತರ ಮೈಸೂರಿನಲ್ಲಿ ಚಿತ್ರಕಲಾ ಮತ್ತು ಶಿಲ್ಪಕಲಾ ತರಭೇತಿಯನ್ನು ಪಡೆದು 1978ರಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಡ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವಿರಾಜಪೇಟೆ ತಾಲೂಕು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ.

ಮಡಿಕೇರಿ ದಸರಾ ಉತ್ಸವದಲ್ಲಿ ಹಲವಾರು ದೇವಾಲಯಗಳ ಮಂಟಪಗಳಿಗೆ ಬೃಹತ್ ಪೇಪರ್ ಪಲ್ಪ್ ನಲ್ಲಿ ವಿವಿಧ ಭಂಗಿಯ ದೇವತಾ ಮೂರ್ತಿಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಅವುಗಳಲ್ಲಿ ಪ್ರಮುಖವಾದುದ್ದು ಕಂಚಿಕಾಮಕ್ಷಿ ದೇವಾಲಯ, ಕೋಟೆ ಗಣಪತಿ, ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ, ದೇಚೂರು ಶ್ರೀ ರಾಮ ಮಂದಿರ, ಪೇಟೆ ಶ್ರೀ ರಾಮ ಮಂದಿರ, ಕುಂದುರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ. ಇತ್ಯಾದಿ ದಸರಾ ಮಂಟಪಗಳಿಗೆ ವಿಗ್ರಹ ನಿರ್ಮಿಸಿದ್ದೇನೆ.

ಮಡಿಕೇರಿ ಪುರಭವನದ ಎದುರಿನಲ್ಲಿ ನಿಲ್ಲಿಸಲಾಗಿರುವ, ಎದುರುಬದಿಯಲ್ಲಿ ಮತ್ತು ಹಿಂಬದಿಯಲ್ಲಿ ಪೂರ್ಣ ಅಕಾರದಲ್ಲಿ ಇರುವ ಕಾವೇರಿ ಮಾತೆಯ ವಿಗ್ರಹವನ್ನು ನಾನೇ ನಿರ್ಮಿಸಿದ್ದು. ಕೊಡಗಿನಲ್ಲಿ ಪ್ರಥಮ ಬಾರಿಗೆ ಅಫ್ ಸೆಟ್ ಮುದ್ರಣದಲ್ಲಿ ತಲಕಾವೇರಿ ಫ್ರೆಮಿಂಗ್ ಚಿತ್ರವನ್ನು ತಮಿಳುನಾಡಿನ ಶಿವಕಾಶಿಯಲ್ಲಿ ಮುದ್ರಿಸಿ ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರಿಂದ ಬಿಡುಗಡೆ ಮಾಡಿಸಿದ್ದೇನೆ. ಇವುಗಳಲ್ಲಿ ಪ್ರಮುಖವಾಗಿರುವುದು, ಕಾವೇರಿ ಮಾತೆಯ ಚಿತ್ರಪಟ, ತಲಕಾವೇರಿ ತ್ರೀವೇಣಿ ಸಂಗಮ, ಮಡಿಕೇರಿ ರಾಜಾ ಸೀಟ್, ಅಬ್ಬಿ ಫಾಲ್ಸ್ (Abbey Falls), ಗ್ರೀಟಿಂಗ್ಸ್ ಕಾರ್ಡ್ ಗಳು, ಕಾವೇರಿ ಮಾತೆಯ ಚಿತ್ರಕಥಾ ಪುಸ್ತಕ, ಕೊಡಗು ಪನೋರಮಾ ಟೂರಿಸ್ಟ್ ಬ್ರೋಶರ್ ಇತ್ಯಾದಿ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಲಾಂಚನ ವಿನ್ಯಾಸ, ಕೊಡಗು ಕೇಂದ್ರ ಸಹಕಾರ ಬ್ಯಾಂಕ್ ಮಡಿಕೇರಿ ಲಾಂಚನ ವಿನ್ಯಾಸ ಕೂಡ ನಾನೇ ಮಾಡಿದ್ದು.

ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಅವಧಿಯಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದೆ. ಕೊಡಗು ಕಲಾ ಪರಿಷತ್ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಚಿತ್ರಕಲಾ ಅಧ್ಯಾಪಕರ ಸಂಘ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ಈ ವೇಳೆ ಹಲವಾರು ಪ್ರಶಸ್ತಿ, ಗೌರವಗಳು ನನಗೆ ಸಿಕ್ಕಿವೆ.

2000ದಲ್ಲಿ ದುಬೈ ಕರ್ನಾಟಕ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಯುಎಇ ತುಳು ಕೂಟದ ಕಲಾ ನಿರ್ದೇಶಕರಾಗಿ, 2003ರಲ್ಲಿ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಉಪಾಧ್ಯಕ್ಷರಾಗಿ, ಯುಎಇ ಬಂಟ್ಸ್ ಆಡಳಿತ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವಾಗ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಸಂದರ್ಶನ ಮಾಡಿ ಸಂಪೂರ್ಣ ವಿವರಗಳೊಂದಿಗೆ ಸಾಧನೆ ಸಂಪುಟ ಕನ್ನಡ ಭಾಷೆಯಲ್ಲಿ ವಿನ್ಯಾಸ ಗೊಳಿಸಿ ದುಬೈಯಲ್ಲಿ ಪ್ರಥಮ ಬಾರಿಗೆ ಕನ್ನಡ ಸಂಪುಟವನ್ನು ಮುದ್ರಿಸಿ ಬಿಡುಗಡೆ ಮಾಡಿದ್ದೇನೆ. ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ತುಂಬೆ ಮೆಡಿಕಲ್ ಕಾಲೇಜು ಅಸ್ಪತ್ರೆ ಅಜ್ಮಾನ್ ಸಹಯೋಗದೊಂದಿಗೆ ಶಾರ್ಜಾ ಮಿನಿಸ್ಟ್ರಿ ಆಫ್ ಹೆಲ್ತ್ ಆಶ್ರಯದಲ್ಲಿ ಪ್ರಥಮ ಬಾರಿಗೆ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದು, ಪ್ರಸ್ತುತ ಇಂದಿಗೂ ಕರ್ನಾಟಕ ಪರ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.

Hot this week

ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ...

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

ಜರ್ಮನಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಜಾನಪದ ವೈಭವ; ಸಂಸ್ಕೃತಿಯ ಗತ ವೈಭವ ಸೃಷ್ಟಿ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ...

ಕನ್ನಡ ಸಂಘ ಬಹರೈನ್‌ನಿಂದ ಆರೋಗ್ಯ ದಿನ; ಉಚಿತ ವೈದ್ಯಕೀಯ ಶಿಬಿರ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಅಲ್ ಹಿಲಾಲ್ ಹೆಲ್ತ್ ಕೇರ್...

Related Articles

Popular Categories