ಫ್ಲೋರಿಡಾ: ಜಾಗತಿಕ ತುಳು ಸಂಘದ ಒಕ್ಕೂಟವಾದ Global Alliance of Tulu Association (GATA) ತನ್ನ ತುಳು ಲಿಪಿ ಕೋರ್ಸ್ ‘Gelmeda Les’ ನ ಸಮಾರೋಪವನ್ನು ಇತ್ತೀಚೆಗೆ ಆಚರಿಸಿತು.
ಈ ಸಮಾರಂಭದಲ್ಲಿ ಟ್ಟೆ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷರಾದ ಮತ್ತು ಮಾಜಿ ಉಪಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿಯವರು GATA ಅಧಿಕೃತ ವೆಬ್‌ಸೈಟ್ www.globaltuluva.com ಉದ್ಘಾಟನೆ ಮಾಡಿದರು. ಈ ವೆಬ್‌ಸೈಟ್, ತುಳು ಲಿಪ್ಯಾಂತರ, ಸಾಂಸ್ಕೃತಿಕ ಸಂಪನ್ಮೂಲಗಳು, ನಿಘಂಟುಗಳು ಮತ್ತು ಜಾಗತಿಕ ತುಳು ಸಮುದಾಯದ ವೇದಿಕೆಯನ್ನು ಒದಗಿಸುತ್ತದೆ.
ಶ್ರೀವಲ್ಲಿ ರೈ ಮಾರ್ಟೆಲ್ ರವರು ಸ್ಥಾಪಿಸಿದ Global Alliance of Tulu Association (GATA) ಜಾಗತಿಕವಾಗಿ ತುಳು ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಮುಂದಿನ ಪೀಳಿಗೆಯವರಿಗೆ ತಲುಪಿಸಲು ಕಾರ್ಯನಿರ್ವಹಿಸುತ್ತಿದ್ದು, ತುಳುವನ್ನು ಕರ್ನಾಟಕದ ದ್ವಿತೀಯ ಭಾಷೆ ಎಂದು ಮಾನ್ಯತೆ ಪಡೆಯಲು ಮತ್ತು ಭಾರತದ 8ನೇ ಅನುಸೂಚಿಯಲ್ಲಿ ಸೇರಿಸುವಂತೆ ಪ್ರಯತ್ನಿಸುತ್ತಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷರಾದ ಮತ್ತು ಮಾಜಿ ಉಪಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ ಮತ್ತು ಆಲ್ ಅಮೇರಿಕ ತುಳು ಅಸೋಸಿಯೇಷನ್ AATA ದ ಸ್ಥಾಪಕ ಅಧ್ಯಕ್ಷರಾದ ಭಾಸ್ಕರ್ ಶೇರಿಗಾರ್ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಗಟದ ಸ್ಥಾಪಕಿ ಹಾಗು ಆಲ್ ಅಮೇರಿಕ ತುಳು ಅಸೋಸಿಯೇಷನ್ AATA ದ ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ವಹಿಸಿದ್ದರು.
ಮುಖ್ಯ ಅಥಿತಿಗಳಾದ GATA ದ ತುಳು ಲಿಪಿ ತರಗತಿಯ ವಿದ್ಯಾರ್ಥಿಯೂ ಆಗಿರುವ ಡಾ. ಭಂಡಾರಿಯವರು ತುಳು ಭಾಷೆಯ ದೈವಿಕ ಸ್ವಭಾವ, ಐತಿಹಾಸಿಕ ಶಿಲಾಲೇಖನಗಳು ಮತ್ತು ಲಿಪಿಯನ್ನು ಪುನರುಜ್ಜೀವನಗೊಳಿಸುವ ಅಗತ್ಯದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ಇನ್ನೋರ್ವ ಅಥಿತಿ ಭಾಸ್ಕರ್ ಶೇರಿಗಾರ್ ರವರು ತುಳುವಿನ ಪ್ರಾಚೀನತೆಯನ್ನು ವಿವರಿಸಿ, ವಿದ್ಯಾರ್ಥಿಗಳ “ಕಂಗಣ” ಪ್ರಾಜೆಕ್ಟ್ ಪುಸ್ತಕವನ್ನು ಉದ್ಘಾಟಿಸಿದರು. ತಮ್ಮ ಹೃದಯಸ್ಪರ್ಶಿ ಅಧ್ಯಕ್ಷೀಯ ಪೂರ್ವಭಾಷಣದಲ್ಲಿ ಶ್ರೀವಲ್ಲಿ ರೈ ಮಾರ್ಟೆಲ್ ಹೊಸ ವೆಬ್‌ಸೈಟ್‌ನ ವೈಶಿಷ್ಟ್ಯಗಳನ್ನು ಪರಿಚಯಿಸಿ, ವಿದ್ಯಾರ್ಥಿಗಳ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ತುಳು ಲಿಪಿಯಲ್ಲಿ ಓದುತ್ತಾ ಬರೆಯುತ್ತಿರುವುದನ್ನು ಸಂಭ್ರಮಿಸಿದರು.
ರಚನಾ ವಿಶ್ವನಾಥ್ (ಸಿಡ್ನಿ), ರಶ್ಮಿ ಭಟ್ (ಸಿಂಗಾಪುರ), ಶೋಭಾ ಸುರೇಶ್ (ಮೂಡಬಿದ್ರಿ), ಸಬಿತಾ ಶೆಟ್ಟಿ (ಬೆಂಗಳೂರು), ಯಶೋಧಾ ಹೊಸಬೆಟ್ಟು(ಸಿಂಗಾಪುರ), ಭುಜಂಗ ದೇವಸ(ಸಿಂಗಾಪುರ), ಶಾಲಿನಿ ಆನಂದ್ ಶೆಟ್ಟಿ(ಬೆಂಗಳೂರು), ಉದಯ ಕುಮಾರ್ ಶೆಟ್ಟಿ(ಬೆಂಗಳೂರು), ಆಕಾಶ್ (ಮುಂಬಯಿ), ನೀಲ್ ಅರುಣ್ ಕುಮಾರ್ (ಯುನೈಟೆಡ್ ಕಿಂಗ್ಡಮ್) , ಸರಸ್ವತಿ ಶೆಟ್ಟಿ (ಮಂಗಳೂರು), ಶಾಂತಾರಾಮ್ ವಿ. ಶೆಟ್ಟಿ (ಬೆಂಗಳೂರು), ಸೇರಿದಂತೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಈ ಸಮಾರಂಭವನ್ನು ತುಳು ಲಿಪಿ ಶಿಕ್ಷಕರು ಮನೋಜ್ಞವಾಗಿ ಸಂಯೋಜಿಸಿದರು. ಬೆಂಗಳೂರಿನ ಶುಭಾಶ್ರೀ ಕೆ. ಎಂ ಪ್ರಾರ್ಥನೆ ಸಲ್ಲಿಸಿದರು. ಯುನೈಟೆಡ್ ಕಿಂಗ್ಡಮ್ ನ ಡಾ. ಸರಿತಾ ಅರುಣ ಸ್ವಾಗತ ಭಾಷಣ ಮಾಡಿದರು. ಅತಿಥಿಗಳನ್ನು ಮುಂಬಯಿಯ ಡಿ. ಕೆ. ಶೆಟ್ಟಿ, ಯುನೈಟೆಡ್ ಕಿಂಗ್ಡಮ್ ನ ಶೃತಾ ಶೆಟ್ಟಿ ಮತ್ತು ಬೋಸ್ಟನ್ನಿನ ಪ್ರಭಾಕರ್ ಭಟ್ ಪರಿಚಯಿಸಿದರು. ಓಮಾನ್‌ನ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು ಮತ್ತು ಸಿಡ್ನಿಯ ಸುರೇಶ್ ಪೂಂಜಾ ಮನಮೋಹಕವಾಗಿ ಕಾರ್ಯಕ್ರಮದನಿರೂಪಣೆ ಮಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಶಾಂತಾರಾಮ್ ವಿ. ಶೆಟ್ಟಿ ಯವರ ಹೃತ್ಪೂರ್ವಕ ವಂದನೆಗಳೊಂದಿಗೆ ಧನ್ಯವಾದ ಪ್ರಸ್ತುತ ಪಡಿಸುವುದರ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಂಡಿತು. ಐ ಲೇಸ ದ ಸೂರಿ ಮಾರ್ನಾಡ್ ಹಾಗು ಗೋಪಾಲ್ ಪಟ್ಟೆ ಯವರು ಸುಂದರವಾದ ವಿಡಿಯೋ ಹಾಗು ಫ್ಲೈಯರ್ ಗಳನ್ನು ಮಾಡುವುದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾದರು.


