ಮಸ್ಕತ್: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕ ಹಾಗೂ ಮಾನ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನದ ನೇತೃತ್ವದಲ್ಲಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಹಯೋಗದೊಂದಿಗೆ 10ನೇ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ‘ಜೀವಧಾರೆ’ ಅಕ್ಟೋಬರ್ 2, 2026ರ ಶುಕ್ರವಾರ ಮಸ್ಕತ್‌ನ ಘಾಲಾ ಹೆಲ್ತ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿರುವ ಶಿಬಿರದಲ್ಲಿ ಒಮಾನ್‌ನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಗಾಂಧಿ ಜಯಂತಿಯ ವಿಶೇಷ ದಿನದಂದು ನಡೆಯುತ್ತಿರುವ ಈ ಮಾನವೀಯ ಕಾರ್ಯಕ್ರಮದ ಮೂಲಕ ರಕ್ತದಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದರೊಂದಿಗೆ, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಜೀವದಾನ ನೀಡುವ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕಳೆದ ಸುಮಾರು ಒಂದು ದಶಕದಿಂದ ಮಸ್ಕತ್‌ನಲ್ಲಿ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ತಂಡವು, ಈ ಬಾರಿ 10ನೇ ವರ್ಷದ ಶಿಬಿರವನ್ನು ವಿಶೇಷವಾಗಿ ಆಯೋಜಿಸಿದೆ. ಈ ಸೇವಾ ಪಯಣದ ನೆನಪಿಗಾಗಿ ರಕ್ತದಾನದ ಮಹತ್ವ, ಇತಿಹಾಸ, ಆರೋಗ್ಯ ಜಾಗೃತಿ ಹಾಗೂ ಕಳೆದ ಹತ್ತು ವರ್ಷಗಳ ಸೇವಾ ಚಟುವಟಿಕೆಗಳನ್ನು ಒಳಗೊಂಡ ‘ಜೀವಧಾರೆ – The Ray of Life’ ವಿಶೇಷ ಮಾಹಿತಿ ಪುಸ್ತಕವನ್ನೂ ಹೊರತರಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕದ ಖ್ಯಾತ ರಕ್ತದಾನ ಪ್ರೇರಕರೂ ಸಮಾಜಸೇವಕರೂ ಆಗಿರುವ ಸತೀಶ್ ಸಾಲ್ಯಾನ್, ಉಡುಪಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸ್ವತಃ 53 ಬಾರಿ ರಕ್ತದಾನ ಮಾಡಿರುವ ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ತುರ್ತು ರಕ್ತದ ವ್ಯವಸ್ಥೆ, ರಕ್ತದಾನ ಶಿಬಿರಗಳು ಹಾಗೂ ರಕ್ತದಾನ ಜಾಗೃತಿ ಕಾರ್ಯಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒಮಾನ್‌ನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರುನಾಡಿನ ಹೆಮ್ಮೆಯ ವೈದ್ಯರು, ವಿವಿಧ ಕನ್ನಡ–ತುಳು ಸಂಘಟನೆಗಳ ಪ್ರತಿನಿಧಿಗಳು, ಸಮಾಜಸೇವಕರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
“ರಕ್ತದಾನವು ಕೇವಲ ದಾನವಲ್ಲ; ಇನ್ನೊಂದು ಜೀವಕ್ಕೆ ನೀಡುವ ಅಮೂಲ್ಯ ಭರವಸೆ” ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಈ ಬೃಹತ್ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ರಕ್ತದಾನಿಗಳು ಭಾಗವಹಿಸಿ ಮಾನವೀಯ ಕಾರ್ಯಕ್ಕೆ ಕೈಜೋಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

