ಯುಎಇದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಅವರ ಪರಂಪರೆಯನ್ನು ಉಳಿಸಿ, ಬೆಳೆಸುವ ಹಾಗೂ ಗಮಕ ಕಲೆಯನ್ನು ಕಡಲಾಚೆಗೂ ಪಸರಿಸುವ ಉದ್ದೇಶದಿಂದ ಅವರ ಶಿಷ್ಯೆ ವಿದುಷಿ ರೇವತಿ ಚಿದಂಬರ ಅವರು ಆರಂಭಿಸಿದ ಗಂಧರ್ವ ಗಮಕ ಶಾಲೆ ದುಬೈ, ತನ್ನ ಪ್ರಥಮ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಶನಿವಾರ ಸಂಜೆ ದುಬೈಯ ಮುಹೈಸಿನಾದಲ್ಲಿ ವಿಶೇಷವಾಗಿ ಆಚರಿಸಿತು.

ಗುರುವಂದನಾ ಕಾರ್ಯಕ್ರಮ
ಪ್ರಿಯಾಂಕಾ ಮೆಹಂದಳೆ ಅವರ ಪ್ರಾರ್ಥನೆ ಹಾಗೂ ಜ್ಯೋತಿ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಾಹಿತ್ಯ, ಆಧ್ಯಾತ್ಮ ಹಾಗೂ ವೇದ ಶಾಸ್ತ್ರದಲ್ಲಿ ಪರಿಣತರಾದ ರವಿಶಂಕರ ಲೋಹಿತ್ ಕೋಣನೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ತಮ್ಮ ಭಾಷಣದಲ್ಲಿ ರವಿಶಂಕರ ಲೋಹಿತ್ ಅವರು, ಗುರುವಿನ ಮಹತ್ವ ಮತ್ತು ಅಗತ್ಯತೆ, ಗುರುಪೂರ್ಣಿಮೆಯ ವಿಶೇಷತೆ, ಗಮಕ ಕಲೆಯ ಇತಿಹಾಸ ಮತ್ತು ಪರಂಪರೆ ಹಾಗೂ ಜ್ಞಾನಾಭಿವೃದ್ಧಿಯಲ್ಲಿ ಗಮಕದ ಕೊಡುಗೆ ಕುರಿತು ವಿವರವಾಗಿ ಮಾತನಾಡಿದರು. ಜೊತೆಗೆ ದುಬೈಯ ಗಂಧರ್ವ ಗಮಕ ಶಾಲೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.

ಗಂಧರ್ವ ಗಮಕ ಶಾಲೆಯ ಸಂಚಾಲಕಿ ಹಾಗೂ ಶಿಕ್ಷಕಿ ವಿದುಷಿ ರೇವತಿ ಚಿದಂಬರ ಅವರು ತಮ್ಮ ಗುರು ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ಅವರ ಸರಳತೆ, ಪರಿಶ್ರಮ, ಶಿಷ್ಯರೊಂದಿಗೆ ಅವರ ಆತ್ಮೀಯ ನಡೆ, ಗಮಕದ ಕುರಿತಾದ ಅಪಾರ ಜ್ಞಾನ ಹಾಗೂ ಅವರು ಗಮಕ ಗಂಧರ್ವರಾಗಿ ಬೆಳೆದ ಹಾದಿಯನ್ನು ಸ್ಮರಿಸಿದರು. ಗಮಕ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಹಾಗೂ ರಾಷ್ಟ್ರದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಸಂದರ್ಭವನ್ನು ನೆನಪಿಸಿಕೊಂಡರು.

ಅನಂತರ ಗಂಧರ್ವ ಗಮಕ ಶಾಲೆಯ ವಾಚನ ವಿದ್ಯಾರ್ಥಿಗಳು ಶಾಸ್ತ್ರೀಯವಾಗಿ ಗಮಕ ವಾಚನವನ್ನು ಪ್ರಸ್ತುತಪಡಿಸಿ ತಮ್ಮ ಗುರುವಿಗೆ ಗೌರವ ಸಮರ್ಪಿಸಿದರು.
ವಿಶ್ವೇಶ್ವರ ಅಡಿಗ ಅವರ ಸ್ವಾಗತದೊಂದಿಗೆ ಆರಂಭವಾದ ಗುರುವಂದನಾ ಕಾರ್ಯಕ್ರಮವು ಅಕ್ಷತಾ ರವಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಲಕ್ಷ್ಮಿ ನಟರಾಜ್ ಮತ್ತು ಓಂಕಾರ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

‘ಭೀಷ್ಮ ಪ್ರತಿಜ್ಞೆ’ ಗಮಕ ವಾಚನ–ವ್ಯಾಖ್ಯಾನ
ಗುರುಪೂರ್ಣಿಮೆಯ ಅಂಗವಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ‘ಭೀಷ್ಮ ಪ್ರತಿಜ್ಞೆ’ ಗಮಕ ವಾಚನ–ವ್ಯಾಖ್ಯಾನ ಕಾರ್ಯಕ್ರಮವು ಪ್ರೇಕ್ಷಕರ ಗಮನ ಸೆಳೆಯಿತು.
ವಿದುಷಿ ರೇವತಿ ಚಿದಂಬರ ಅವರು ತಮ್ಮ ಸುಶ್ರಾವ್ಯ ಗಮಕ ವಾಚನದ ಮೂಲಕ ಭೀಷ್ಮ ಪ್ರತಿಜ್ಞೆಯ ಪ್ರಸಂಗವನ್ನು ಮನೋಜ್ಞವಾಗಿ ಕಟ್ಟಿಕೊಟ್ಟರೆ, ವಸುಧಾ ಕೌಶಿಕ್ ಅವರು ಅರ್ಥಗರ್ಭಿತವಾದ ವ್ಯಾಖ್ಯಾನದ ಮೂಲಕ ಪ್ರಸಂಗದ ಆಶಯವನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ವಿವರಿಸಿದರು. ವಾಚನ–ವ್ಯಾಖ್ಯಾನದ ಈ ಸುಂದರ ಜೋಡಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಈ ಸಂದರ್ಭದಲ್ಲಿ ಗಂಧರ್ವ ಗಮಕ ಶಾಲೆಯ ಅಧ್ಯಕ್ಷರಾದ ಸುಬ್ರಮಣ್ಯ, ಖಜಾಂಚಿ ರವಿ ಹಿರಿಸಾವೆ ಹಾಗೂ ಶಾಲೆಯ ಸದಸ್ಯರು ಉಪಸ್ಥಿತರಿದ್ದರು. ಗುರುವಿನ ಪರಂಪರೆಗೆ ಗೌರವ ಸಲ್ಲಿಸುವುದರ ಜೊತೆಗೆ, ಗಮಕ ಕಲೆಯ ಸೊಗಡನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾರ್ಥಕ ಪ್ರಯತ್ನವಾಗಿ ಗಂಧರ್ವ ಗಮಕ ಶಾಲೆಯ ಈ ಪ್ರಥಮ ಗುರುಪೂರ್ಣಿಮಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

Hot this week

ಅಕ್ಟೋಬರ್ 2; ಮಸ್ಕತ್‌ನಲ್ಲಿ ‘ಜೀವಧಾರೆ’ ಬೃಹತ್ ರಕ್ತದಾನ ಶಿಬಿರ

ಮಸ್ಕತ್: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕ ಹಾಗೂ ಮಾನ್ಯ ಸಾಂಸ್ಕೃತಿಕ...

ಅಕ್ಟೋಬರ್ 4ರಂದು ದುಬೈಯಲ್ಲಿ ‘ವಿಖಾಯ ಡೇ’ ಬೃಹತ್ ರಕ್ತದಾನ ಶಿಬಿರ

ದುಬೈ: ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ವಿಖಾಯ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿದ್ದ...

ಅಭಿಯಂತರರ ದಿನಾಚರಣೆ ಆಚರಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ...

Aim India Forum raises concerns of Indian workers with senior MEA officials in UAE

Dubai, UAE, September 2026: Aim India Forum (AIF) held...

ಕರ್ನಾಟಕ ಸಂಘ ಖತರ್‌ನಿಂದ ಉಪ ರಾಯಭಾರ ಮುಖ್ಯಸ್ಥ ಸಂದೀಪ್ ಕುಮಾರ್‌ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಕರ್ನಾಟಕ ಸಂಘ ಖತರ್‌ (KSQ) ನಿಯೋಗವು ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು...

Related Articles

Popular Categories