ಸಾಮಾನ್ಯ ಉದ್ಯೋಗಿಯಾಗಿ ಅಬುಧಾಬಿಗೆ ಹೋಗಿ ಕಠಿಣ ಪರಿಶ್ರಮ,ನಿಷ್ಠೆ, ಸತತ ಪ್ರಯತ್ನಗಳ ಮೂಲಕ ಈಗ ದುಬೈಯಲ್ಲಿ ಬೃಹತ್ ಉದ್ಯಮ ಸಾಮ್ರಾಜ್ಯವನ್ನೇ ಸ್ಥಾಪಿಸಿದವರು ಕಾರ್ಕಳದ ಕೆ ಎಸ್ ನಿಸಾರ್ ಅಹ್ಮದ್ ಅವರು. ಈಗ ಅಸಾಮಾನ್ಯ ಯಶಸ್ಸು ಗಳಿಸಿರುವ ಉದ್ಯಮಿಯಾಗಿ ಮಾತ್ರವಲ್ಲ ಹತ್ತಾರು ಸಮಾಜ ಸೇವಾ ಚಟುವಟಿಕೆಗಳ ಪೋಷಕರಾಗಿ,ಪ್ರೋತ್ಸಾಹಕರಾಗಿ, ಪ್ರಾಯೋಜಕರಾಗಿ ಆಸರೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದ ನಿಸಾರ್ ಅಹ್ಮದ್ ಅವರ ತಂದೆ ಕೆ. ಶಾಬು ಸಾಹೇಬ್ ಬ್ರಿಟಿಷರ ಕಾಲದಲ್ಲಿ ಕಂದಾಯ ಅಧಿಕಾರಿಯಾಗಿದ್ದವರು. ಇವರ 9 ಮಕ್ಕಳ ಪೈಕಿ ನಾಲ್ಕನೆಯವರು ನಿಸಾರ್ ಅಹ್ಮದ್. ಕಾರ್ಕಳದ ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪಡೆದ ನಿಸಾರ್ ಅಹ್ಮದ್ ಅವರದ್ದು ಅನುಕೂಲಸ್ಥ ಕುಟುಂಬವಾಗಿದ್ದರೂ ಶ್ರಮಪಟ್ಟು ದುಡಿದವರು, ಊರಲ್ಲಿ ಬೇರೆ ಬೇರೆ ಕೆಲಸ ಮಾಡಿದರು. 1975ರಲ್ಲಿ ಅಬುಧಾಬಿಗೆ ಹೋದ ನಂತರ ಅವರ ಬದುಕು ಬದಲಾಯಿತು. ಆರಂಭದಲ್ಲಿ ಹಾರ್ಡ್‌ವೇರ್ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.


ನಂತರ ನಾಲ್ಕು ಮಂದಿ ನೌಕರರ ಜೊತೆ ಆರಂಭಿಸಿದ ಸಣ್ಣ ಉದ್ಯಮ, ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಬಹಳ ದೊಡ್ಡದಾಗಿ ಬೆಳೆಯಿತು. ಸದ್ಯ ದುಬೈಯ ‘ನ್ಯಾಶ್ ಇಂಜಿನಿಯರಿಂಗ್’, ಅಬುಧಾಬಿಯ ’ಸೂಪರ್ ಇಂಜಿನಿಯರಿಂಗ್ ಇಂಡಸ್ಟ್ರಿ’ ಮತ್ತು ’ಸೂಪರ್ ಇಂಜಿನಿಯರಿಂಗ್ ಸರ್ವಿಸ್’ ಎಂಬ ಬೃಹತ್ ಕಂಪೆನಿಗಳು ನಿಸಾರ್ ಅಹ್ಮದ್ ಅವರದ್ದು.
ಸ್ಟೀಲ್ ಉತ್ಪನ್ನಗಳ ಇವರ ಕಂಪೆನಿಗಳು, ಆಯಿಲ್ ಮತ್ತು ಗ್ಯಾಸ್ ಇಂಡಸ್ಟಿ, ಕನ್ ಸ್ಟ್ರಕ್ಷನ್ ಕಂಪೆನಿ, ಪವರ್ ಪ್ಲಾಂಟ್, ಸ್ಟೀಲ್ ಮಿಲ್ ಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡ್ತಾ ಇವೆ.





ಸೌದಿ ಅರೇಬಿಯಾ, ಯುಎಇ, ಬ್ರೆಝಿಲ್, ಅಲ್ಜೀರಿಯಾ, ರಶ್ಯಾ, ಇರಾಕ್, ಭಾರತ, ಕಝಕಿಸ್ತಾನ, ಕುವೈತ್, ಅಮೇರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ಈ ಕಂಪೆನಿಗಳ ಪ್ರಾಜೆಕ್ಟ್ ಗಳಿವೆ. ಈ ಕಂಪೆನಿಗಳಲ್ಲಿ 1000ಕ್ಕೂ ಹೆಚ್ಚು ಕಾರ್ಮಿಕರಿದ್ದು, ಡಝನ್ ಗಟ್ಟಲೆ ಇಂಜಿನಿಯರ್ ಗಳಿದ್ದಾರೆ.




ಯಶಸ್ವಿ ಉದ್ಯಮಿ ಎಂಬ ಗುರುತಿನ ಜೊತೆಗೆ ಅವರ ಮತ್ತೊಂದು ಸಾಧನೆ ಸಮಾಜಸೇವೆ. ತನ್ನೂರ ಬಡ ಮಕ್ಕಳು ಶಿಕ್ಷಣ ಪಡೆಯಲು 41 ವರ್ಷಗಳ ಹಿಂದೆ ನಿಸಾರ್ ಅಹ್ಮದ್ ಕಂಡ ಕನಸಿನ ಪ್ರತಿಫಲವಾಗಿ ಕಾರ್ಕಳದಲ್ಲಿ ಕೆಎಂಇಎಸ್ ಶಿಕ್ಷಣ ಸಂಸ್ಥೆ ತಲೆ ಎತ್ತಿ ನಿಂತಿದೆ. ಎಲ್ ಕೆಜಿಯಿಂದ ದ್ವಿತೀಯ ಪಿಯುಸಿವರೆಗಿರುವ ಈ ಶಾಲೆ ಹಾಗು ಕಾಲೇಜಿನಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.
ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಹಲವು ಮಕ್ಕಳು ಇಂಜಿನಿಯರ್ ಗಳು, ವೈದ್ಯರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ತನ್ನದೇ ಸಂಸ್ಥೆಯಲ್ಲಿ ಉದ್ಯೋಗವನ್ನೂ ನೀಡಿದ್ದಾರೆ. ಇದರ ಜೊತೆಗೆ ಪ್ರತಿ ವರ್ಷ ಈ ಶಿಕ್ಷಣ ಸಂಸ್ಥೆಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ನಿಸಾರ್ ಅಹ್ಮದ್ ಅವರ ಕಿರಿಯ ಸಹೋದರ ಕೆ ಎಸ್ ಇಮ್ತಿಯಾಜ್ ಅಹ್ಮದ್ ಅವರು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ.
ಹಲವು ಕಡೆಗಳಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ನೆರವು ನೀಡಿದ್ದಾರೆ. ಹಲವಾರು ಆಂಬುಲೆನ್ಸ್ ಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದು, ಮಹಿಳೆಯರಿಗಾಗಿಯೇ ಮಂಗಳೂರಿನ ಕುದ್ರೋಳಿಯಲ್ಲಿ ಸುಸಜ್ಜಿತ ವೃದ್ಧಾಶ್ರಮವೊಂದನ್ನು ಕಟ್ಟಿಸಿದ್ದಾರೆ.
ತಮ್ಮ ತಂದೆಯ ಹೆಸರಿನಲ್ಲಿ ಸ್ಥಾಪಿಸಿರುವ ಹಾಜಿ ಕಾರ್ಕಳ ಶೇಖ್ ಶಾಬು ಸಾಹೇಬ್ ಟ್ರಸ್ಟ್ ಮೂಲಕ ಪ್ರತಿ ವರ್ಷ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸುತ್ತಾರೆ. ಅದೇ ಟ್ರಸ್ಟ್ ಮೂಲಕ ಬಡ ಕುಟುಂಬಗಳಿಗೆ ರೇಷನ್, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತಿತರ ಸಹಾಯವನ್ನೂ ಮಾಡುತ್ತಿದ್ದಾರೆ.
ನಿಸಾರ್ ಅಹ್ಮದ್ ಅವರ ಹಿರಿಯಣ್ಣ, ಹಿರಿಯ ಸಾಮಾಜಿಕ, ರಾಜಕೀಯ ಮುಂದಾಳು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜನಾಬ್ ಕೆಎಸ್ ಮೊಹಮ್ಮದ್ ಮಸೂದ್ ಅವರು ಹಾಜಿ ಕಾರ್ಕಳ ಶಾಬು ಸಾಹೇಬ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.

ಇವರ ಸೇವಾ ಕೈಂಕರ್ಯವನ್ನು ಗೌರವಿಸಿ ಇತ್ತೀಚಿಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಯೋಜಿಸಿದ್ದ ಬೃಹತ್ ಸರ್ವಧರ್ಮೀಯ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ‘ಸೇವಾ ರತ್ನ’ ಪ್ರಶಸ್ತಿ ನೀಡಿತ್ತು. ಸಾಮಾನ್ಯವಾಗಿ ಯಾವುದೇ ಪ್ರಶಸ್ತಿ,ಪುರಸ್ಕಾರ, ಸನ್ಮಾನಗಳನ್ನು ಇಷ್ಟಪಡದ ನಿಸಾರ್ ಅಹ್ಮದ್ ಸಾಹೇಬರು ತವರು ಜಿಲ್ಲೆಯ ಸಾಮುದಾಯಿಕ ಒಕ್ಕೂಟ ಪ್ರೀತಿಯಿಂದ ನೀಡಿದ ಗೌರವವನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದರು.