ಉಡುಪಿ, ಡಿ.17: ಕರ್ನಾಟಕ ಸರಕಾರದ ಅನಿವಾಸಿ ಘಟಕ (ಎನ್‌ಆರ್‌ಐ ಸೆಲ್)ನಲ್ಲಿ ನೋದಾಯಿತ ಹೊಸದಾಗಿ ಸ್ಥಾಪಿಸಲಾದ ಎನ್‌ಆರ್‌ಐ ಫೋರಂ ಕರ್ನಾಟಕ- ಬಹರೈನ್ ಮುಂದಿನ ವರ್ಷದ ಜ.10ರಂದು ಉದ್ಘಾಟನೆಗೊಳ್ಳಲಿದೆ ಎಂದು ಫೋರಂನ ಅಧ್ಯಕ್ಷ ರಾಜಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಜ.10ರಂದು ಎನ್‌ಆರ್‌ಐ ಫೋರಂನ ಹೊಸ ಸಮಿತಿಯ ಪದಗ್ರಹಣ ಹಾಗೂ ಕರ್ನಾಟಕ ಮತ್ತು ಬಹರೈನ್ ಗೆ ಗಣ್ಯರು ಭಾಗವಹಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಬಹರೈನ್ ನಲ್ಲಿರುವ ಸುಮಾರು 25,000 ಕನ್ನಡಿಗರ ಹಿತರಕ್ಷಣೆ, ಕರ್ನಾಟಕದ ಜನರ ನಡುವೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಬಂಧಗಳನ್ನು ಬೆಳೆಸಲು ಈ ಹೊಸ ವೇದಿಕೆ ಬದ್ಧವಾಗಿದೆ ಎಂದ ರಾಜಕುಮಾರ್, ಬಹರೈನ್ ನಲ್ಲಿರುವ ಕನ್ನಡಿಗರಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಾಗೂ ಪರಸ್ಪರ ಸಂಪರ್ಕಕ್ಕೆ ಅರ್ಥಪೂರ್ಣ ವೇದಿಕೆಯನ್ನು ಇದು ಕಲ್ಪಿಸುತ್ತದೆ ಎಂದರು.
ನಾವು ವಿವಿಧ ಚಟುವಟಿಕೆಗಳ ಮೂಲಕ ದೇಶದಲ್ಲಿರುವ 25,000 ಕನ್ನಡಿಗರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇವೆ. ಹಾಗೂ ಇಲ್ಲಿನ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲು ಕರ್ನಾಟಕ ಸರಕಾರ, ಭಾರತೀಯ ರಾಯಭಾರ ಕಚೇರಿ ಹಾಗೂ ಇತರ ಸಂಸ್ಥೆಗಳೊಂದಿಗೆ ಸಂಬಂಧ, ಸಂಪರ್ಕವನ್ನು ಹೊಂದಿದ್ದೇವೆ ಎಂದು ರಾಜಕುಮಾರ್ ತಿಳಿಸಿದರು.
ಎನ್‌ಆರ್‌ಐ ಫೋರಂ ಕರ್ನಾಟಕ- ಬಹರೈನ್ ನ ಉದ್ಘಾಟನಾ ಕಾರ್ಯ ಕ್ರಮ ಜ.10ರಂದು ಸಂಜೆ 5:30ಕ್ಕೆ ಬಹರೈನ್‌ನ ಇಂಡಿಯನ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ರಾಜ್ಯ ಸಾಂಸ್ಕೃತಿಕ ಸಚಿವ ಶಿವರಾಜ್ ತಂಗಡಗಿ ಭಾಗವಹಿಸುವುದು ಖಚಿತವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರ ಪಾಲ್ಗೊಳ್ಳುವಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.
ಅಲ್ಲದೇ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ, ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ರಾಜೇಂದ್ರಕುಮಾರ್, ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ, ಪ್ರಶಾಂತ್ ಪೂಜಾರಿ ಸೇರಿದಂತೆ ಸಿನಿಮಾ ನಟ-ನಟಿಯರು, ಗಣ್ಯರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರೋಶನ್ ಲೂವಿಸ್, ಸದಸ್ಯರಾದ ಉದಯ ಶೆಟ್ಟಿ, ಜಯಂತ ಶೆಟ್ಟಿ, ಉದ್ಯಮಿ ದಿವಾಕರ್ ಸನಿಲ್ ಉಪಸ್ಥಿತರಿದ್ದರು.

ಎನ್‌ಆರ್‌ಐ ಫೋರಂ ಕರ್ನಾಟಕ-ಬಹರೈನ್ ಅಸ್ತಿತ್ವಕ್ಕೆ: ಜ.10ರಂದು ಬಹರೈನ್ ನಲ್ಲಿ ಉದ್ಘಾಟನೆ
Popular Categories