ವ್ಯಾಟಿಕನ್ ಸಿಟಿ: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದಾಗಿ ಒಂದೇ ಕುಟುಂಬದ ಏಳು ಮಕ್ಕಳು ಮರಣ ಹೊಂದಿದ್ದಾರೆ ಎಂದು ಗಾಝಾದ ರಕ್ಷಣಾ ಸಂಸ್ಥೆಯೊಂದು ಹೇಳಿಕೆ ನೀಡಿದ ಒಂದು ದಿನದ ಬಳಿಕ ಈ ದಾಳಿಯನ್ನು ಕ್ರೈಸ್ತರ ಪರಮೋಚ್ಛ ನಾಯಕ ಪೋಪ್ ಫ್ರಾನ್ಸಿಸ್ ಕಟುವಾಗಿ ಖಂಡಿಸಿದ್ದಾರೆ. ಇದೊಂದು ಕ್ರೌರ್ಯವಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲಿ ವೈಮಾನಿಕ ದಾಳಿಯು ಶುಕ್ರವಾರ ಗಾಝಾದ ಉತ್ತರ ಭಾಗದಲ್ಲಿ ಏಳು ಮಕ್ಕಳು ಸೇರಿದಂತೆ ಒಂದು ಕುಟುಂಬದ 10 ಸದಸ್ಯರನ್ನು ಕೊಂದಿದೆ ಎಂದು ಗಾಝಾ ನಾಗರಿಕ ರಕ್ಷಣಾ ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.
“ನಿನ್ನೆ ಅವರು ಈ ಹಿಂದೆ ವಾಗ್ದಾನ ಮಾಡಿದಂತೆ ಜನರನ್ನು ಗಾಝಾಕ್ಕೆ ಅನುಮತಿಸಲಿಲ್ಲ ಮಾತ್ರವಲ್ಲದೇ ಅವರು ಮಕ್ಕಳ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಇದು ಯುದ್ಧವಲ್ಲ ಕ್ರೌರ್ಯ” ಎಂದು ಹೇಳಿದ ಪೋಪ್ ಫ್ರಾನ್ಸಿಸ್, “ಇದು ನನ್ನ ಹೃದಯವನ್ನು ಚುಚ್ಚುತ್ತದೆ, ಆದ್ದರಿಂದ ಈ ಮಾತನ್ನು ನಾನು ಹೇಳುತ್ತಿದ್ದೇನೆ” ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇಸ್ರೇಲ್ ಸೈನ್ಯ ಮತ್ತು ಫ್ಯಾಲೆಸ್ತೀನ್ ನ ಹಮಾಸ್ ನಡುವೆ ಕದನ ವಿರಾಮ ತರುವ ಕುರಿತಾದಂತೆ ಹಲವು ಅಂತಾರಾಷ್ಟ್ರೀಯ ಮಧ್ಯವರ್ತಿಗಳು ಮಾತುಕತೆಗಳನ್ನು ನಡೆಸುತ್ತಿರುವ ಮಧ್ಯೆಯೇ ಈ ಬಾಂಬ್ ದಾಳಿ ನಡೆದಿದೆ.