ಬೆಂಗಳೂರು: “ಬೆಂಗಳೂರಿನಲ್ಲಿ ಹಲವು ದೇಶಗಳ ರಾಯಭಾರ ಕಚೇರಿಯಿದ್ದು, ಆದರೆ ಅಮೆರಿಕದ ರಾಯಭಾರ ಕಚೇರಿಯನ್ನು ಇನ್ನೂ ತೆರೆಯಲಾಗಿಲ್ಲ ಎನ್ನುವುದು ನಾವೆಲ್ಲರೂ ಗಮನಿಸಬೇಕಾದ ಪ್ರಮುಖ ವಿಚಾರ” ಎಂದು ಅಮೇರಿಕದ ಭಾರತೀಯ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಅವರು ಗುರುವಾರ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ಆಯೋಜಿಸಿದ್ದ ಸಂವಾದಾತ್ಮಕ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.
ಈ ಹಿಂದೆ ಬೆಂಗಳೂರು ಮತ್ತು ಗುಜರಾತ್ ನ ಅಹ್ಮದಾಬಾದ್ ನಲ್ಲಿ ರಾಯಭಾರ ಕಚೇರಿಯನ್ನು ತೆರೆಯುವ ಕುರಿತು ಘೋಷಣೆ ಮಾಡಲಾಗಿತ್ತು. ಇದರ ಪ್ರಗತಿಯ ಕುರಿತು ಆಶಾವಾದ ವ್ಯಕ್ತಪಡಿಸಿದ ಅವರು, “ಬೆಂಗಳೂರಿನಲ್ಲಿ ಕಾನ್ಸುಲೇಟ್ ತೆರೆಯಲು ನಾವು ಬದ್ಧರಾಗಿದ್ದೇವೆ ಮತ್ತು ಶೀಘ್ರದಲ್ಲೇ ಘೋಷಣೆ ಮಾಡುವ ಭರವಸೆ ಇದೆ” ಎಂದು ಹೇಳಿದರು.
ಯುಎಸ್ ಈಗಾಗಲೇ ಬೆಂಗಳೂರಿನಲ್ಲಿ ವಿದೇಶಿ ವಾಣಿಜ್ಯ ಸೇವಾ ಕಚೇರಿಯನ್ನು ಹೊಂದಿದ್ದು, ಎರಡು ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಬಾಂಧವ್ಯವನ್ನು ಅದು ಬಲಪಡಿಸುತ್ತದೆ ಎಂದು ಹೇಳಿದರು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಕ್ಕೆ ಭೇಟಿ ನೀಡಿದ್ದ ವೇಳೆ ಭಾರತದಲ್ಲಿ ಎರಡು ಹೊಸ ರಾಯಭಾರಿ ಕಚೇರಿಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದ್ದರು.
ಈ ವಿಚಾರದ ಕುರಿತು ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, “ಬೆಂಗಳೂರಿನ ಜನರಿಗೆ ಅಮೆರಿಕಾ ಸಂಬಂಧಿತ ಕೆಲಸಕ್ಕಾಗಿ ಅಥವಾ ವಿಸಾ ಪಡೆಯುವ ಸಲುವಾಗಿ ಚೆನ್ನೈ, ಹೈದರಾಬಾದ್ ಅಥವಾ ದಿಲ್ಲಿಗೆ ಹೋಗಬೇಕಿತ್ತು. ಕೇವಲ ಈ ಪ್ರಯಾಣಕ್ಕಾಗಿಯೇ 30,000ರೂ.ಯಷ್ಟು ಹಣ ಖರ್ಚಾಗುತ್ತಿತ್ತು. ಇದೀಗ ಶ್ವೇತಭವನದ ಘೋಷಣೆಯ ಬಗ್ಗೆ ನಮಗೆ ಸಂತೋಷವಾಗಿದೆ ಮತ್ತು ಇದನ್ನು ಸಾಧ್ಯವಾಗಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಹೇಳಿದ್ದಾರೆ.