ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ ಅದ್ಧೂರಿಯಾಗಿ ಜನಪದ ವೈಭವವನ್ನು ಸಂಭ್ರಮಿಸಲಾಯಿತು. ಹತ್ತು ವರ್ಷಗಳ ಪಯಣದಲ್ಲಿ ಜನಪದ ಮಣ್ಣಿನ ಸುವಾಸನೆ, ನಮ್ಮ ಕಲೆ, ಹಿರಿಯರ ಜ್ಞಾನ, ಜೀವನ ಮೌಲ್ಯಗಳು, ಹಳ್ಳಿಯ ನೆನಪು, ಬದುಕು ಎಲ್ಲವನ್ನೂ ಮತ್ತೊಮ್ಮೆ ಜೀವಂತಗೊಳಿಸುವ ಸಣ್ಣ ಪ್ರಯತ್ನ ಯಶಸ್ವಿಯಾಗಿ ನೆರವೇರಿತು.


ಮೊದಲಿಗೆ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು ಮೆರವಣಿಗೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಬಾಲಾನಾಗರಾಜ್ ಅವರ ತಂಡದ ಮಕ್ಕಳಿಂದ ಹಾಡಿದ ಶರಣು ಶರಣುವಯ್ಯ ಗಣನಾಯಕ ಪ್ರಾರ್ಥನೆ ನೆರೆದವರು ಹೊಯ್ ಎನ್ನುವಂತಿತ್ತು. ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲು ಕರ್ನಾಟಕದಿಂದ ಬಂದ ಆರಂಭ ಟ್ರಸ್ಟ್ ನ ತಮಟೆ ನಾಗರಾಜ್ ಹಾಗೂ ರೈನ್ ಮೈನ್ ಕನ್ನಡ ಸಂಘದ ಎಲ್ಲ ಪದಾಧಿಕಾರಿಗಳು ದೀಪವನ್ನು ಬೆಳಗಿ ಕಾರ್ಯಕ್ರಮಕ್ಕೆ ಬೆಳಕಿನ ಮೂಲಕ ಚಾಲನೆ ನೀಡಿದರು.
ಶ್ವೇತಾ ವಿಜಯರವರ ತಂಡದಿಂದ ಮೂಷಿಕವಾಹನನಿಗೆ ನೃತ್ಯದ ಮೂಲಕ ವಂದನೆಗಳನ್ನು ಸಲ್ಲಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆಯುವಂತೆ ಪ್ರಾರ್ಥಿಸಲಾಯಿತು.





ರೈನ್ ಮೈನ್ ಕನ್ನಡ ಸಂಘದ ಪುಟ್ಟ ಪುಟಾಣಿಗಳು ಬಳೆಗಾರ, ಹೂವಾಡಗಿತ್ತಿ, ಕೊರವಂಜಿ, ಕಂಸಾಳೆ, ಹುಲಿವೇಷ, ಡೊಳ್ಳು ಕುಣಿತ, ಕೋಲಾಟ ಹೀಗೆ ಹಲವಾರು ವೇಷತೊಟ್ಟು ಫ್ಯಾಷನ್ ಶೋವನ್ನು ತುಂಬಾ ಸುಂದರವಾಗಿ ನಡೆಸಿದರು. ಜನಪದರ ವೇಷಭೂಷಣ, ಸೊಗಡು, ಕಾಯಕ, ಭಾವನೆಗಳನ್ನು ಅರಿಯುವ ಪುಟ್ಟ ಪ್ರಯತ್ನದಲ್ಲಿ ನಮ್ಮ ಮಕ್ಕಳು ತೊಡಗಿಸಿಕೊಂಡರು. ದೊಡ್ಡವರು ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಮಾಡಿದ ಫ್ಯಾಷನ್ ಶೋ ಕೂಡ ನೆರೆದವರ ಚಪ್ಪಾಳೆ ಗಿಟ್ಟಿಸಿತು.



ಸರಿಗಮಪ ಖ್ಯಾತಿಯ ಕಂಬದ ರಂಗಯ್ಯನವರ ಹಾಡುಗಳು ನೆರೆದವರಿಗೆ ರೋಮಾಂಚನಗೊಳಿಸಿತು. ಪುಷ್ಪ ಆರಾಧ್ಯರವರ ಕನ್ನಡ ನಾಡುನುಡಿಯ ಹಾಡುಗಳು, ರಮೇಶ್ ಅವರ ತತ್ವಪದ ಸಾಹಿತ್ಯ-ಸಂಸ್ಕೃತಿಯ ಗೀತೆಗಳಿಗೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಶ್ವೇತ ಮತ್ತು ತಂಡದವರ ಸಮೂಹ ನೃತ್ಯಗಳು ಮಳೆಯೊಂದಿಗೆ ಬರುವ ತಂಪಿನಂತೆ ಎಲ್ಲರನ್ನೂ ಆಹ್ಲಾದಗೊಳಿಸಿದವು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಸೂತ್ರದ ಗೊಂಬೆಯಾಟ ಕರ್ನಾಟಕದ ಗತವೈಭವದ ಪರಿಕಲ್ಪನೆಯನ್ನು ಬಹಳ ಸ್ವಾರಸ್ಯಭರಿತವಾಗಿ ಪ್ರದರ್ಶಿಸಿ ಮುಖ್ಯವಾಗಿ ಮುದ್ದುಮಕ್ಕಳ ಮನಸ್ಸನ್ನು ಮುಟ್ಟಿತು. ವಿಶ್ವ ಸಂಸ್ಕೃತಿ ಫೌಂಡೇಶನ್ನ ಸಿದ್ದು ಬಿರಾದಾರ ಮತ್ತು ತಂಡದವರು ನಡೆಸಿದ ಗೊಂಬೆಯಾಟ ಕದಂಬ ಸಾಮ್ರಾಜ್ಯದಿಂದ ಪ್ರಾರಂಭಿಸಿ ಕನಕ, ಪುರಂದರ ದಾಸವರೇಣ್ಯರ ಕಾಲದಲ್ಲಿ ಶ್ರೀಮಂತಗೊಂಡ ಕನ್ನಡ ಸಾಹಿತ್ಯ ಹಾಗೂ ಮದಕರಿನಾಯಕ, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಎಲ್ಲ ಪಾತ್ರಗಳು ಮತ್ತೊಮ್ಮೆ ಜೀವಂತವಾದಂತಿತ್ತು. ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಗೊಂಬೆಗಳ ಮೂಲಕ ವಿಜೃಂಭಿಸಿತು.




ಆರಂಭ ಟ್ರಸ್ಟ್ ನವರಾದ ತಮಟೆ ನಾಗರಾಜ್ ಅವರು ಮಾತನಾಡಿ, ಜನಪದ ಜನಸಾಮಾನ್ಯರ ಜೀವನಾಡಿ, ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳನ್ನು ವಿಶ್ವದಾದ್ಯಂತ ಪಸರಿಸುವ ಶಕ್ತಿ ಜನಪದಕ್ಕಿದೆ. ರೈನ್ ಮೈನ್ ಕನ್ನಡ ಸಂಘ ಇಂದು ಫ್ರಾಂಕ್ಫರ್ಟ್ ನಲ್ಲಿ ಜನಪದ ವೈಭವವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ ಇದನ್ನು ಪ್ರೀತಿಯಿಂದ ನಡೆಸಿಕೊಟ್ಟ ರೈನ್ ಮೈನ್ ಕನ್ನಡ ಸಂಘದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷರಾದ ಲೋಕನಾಥ್ ಅವರು ಮಾತನಾಡಿ, ನಮ್ಮ ಮಣ್ಣಿನ ಸೊಗಡಿರುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಮ್ಮ ಸಂಘದಿಂದ ಹೊರಬರುವಂತಾಗಲಿ ಎಂದು ಆಶಿಸಿದರು.
ಉಪಾಧ್ಯಕ್ಷರಾದ ಗುರುರಾಜ್ ಚಂದ್ರಶೇಖರ್, ಕಾರ್ಯದರ್ಶಿ ಮಂಜುನಾಥ್ ಷಡಕ್ಷರಯ್ಯ, ಜಂಟಿ ಕಾರ್ಯದರ್ಶಿ ವಿಜಯ್ ಹುಗ್ಗಿ, ಖಜಾಂಚಿ ಭರತ್ ಗಿರಿಯಾಪುರ, ಮಂಡಳಿಯ ಸದಸ್ಯ ಗುಂಡೂರಾವ್ ಸೇರಿದಂತೆ ಸಹ ಕಾರ್ಯಕಾರಿ ಸಮಿತಿಯವರಾದ ಸುಹಾಸ್, ರಮ್ಯಾ, ಅಂಕಿತ, ಲಕ್ಷ್ಮಿ, ಸುನೀಲ್ ಪಾಟೀಲ್ ರವರು ಕಾರ್ಯಕ್ರಮದ ಹೊಣೆಗಾರಿಕೆಯನ್ನು ಸಮಾನವಾಗಿ ನಿಭಾಹಿಸಿದರು.
ಹಲವಾರು ಸಹೃದಯಿ ಸದಸ್ಯರು ಸ್ವಯಂಸೇವಕರಾಗಿ ಪ್ರತೀ ಹಂತದಲ್ಲೂ ತಮ್ಮ ಸಹಾಯ ಹಸ್ತ ನೀಡಿ ಯಶಸ್ಸಿನ ಪಾಲುದಾರರಾದರು. ಸುಹಾಸ್ ಮತ್ತು ರಮ್ಯರವರು ಉತ್ತಮವಾಗಿ ನಿರೂಪಿಸಿದರು. ಬಂದ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನೆರೆದವರ ಚಪ್ಪಾಳೆ ನಡೆದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
-ಶೋಭಾ ಚೌಹಾನ್(ಫ್ರಾಂಕ್ಫರ್ಟ್, ಜರ್ಮನಿ)

